ಕುಸುಮಾಕರ ದೇವರಗೆಣ್ಣೂರ ನಮನ : ಗಾಳಿಹೆಜ್ಜೆ ಹಿಡಿದ ಸುಗಂಧ…
ಅಂದು ವ್ಯಾನಿನಲ್ಲಿ ಬರುವಾಗ ಇದ್ದಕ್ಕಿದ್ದಂತೆ ‘ಕನ್ನಡ ಸಾಹಿತ್ಯದೊಳಗ ಪ್ರೇಮಕಾವ್ಯ ಅನ್ನೂದು ಇಲ್ಲೇ ಇಲ್ಲ. ಇರೂದೆಲ್ಲಾ ಬರೀ ‘Soliloques’ ಎಂದಿದ್ದರು. ಗಾಬರಿಯಾದ ನಾನು, ‘ಅದು ಹ್ಯಾಂಗ ಕಾಕಾ, ಕೆ.ಎಸ್.ನ. ಪ್ರೇಮಕವಿ ಎಂದೆಲ್ಲಾ ನಾನು ರಾಗ ಎಳೆದು ತಡಬಡಿಸಹತ್ತಿದಾಗ, ‘ಮತ್ತಿನ್ನೇನು ಬರೀ ಅವನ ಮಾತಾಡ್ತಾನ. ಅಕೀಗೆ ಏನನಸ್ತದ ಅನ್ನೂದನ್ನೂ ಅವನ ಮಾತಾಡ್ತಾನ. ಒಬ್ನ ಮಾತಾಡ್ತಾನ. ಹಂಗ್ ಅಂದ್ ಮ್ಯಾಲ ಅದು ಪ್ರೇಮ ಕಾವ್ಯ ಹೆಂಗಾತೂ?’ ಎಂದು ಛಾಪು ಒತ್ತಿದಂತೆ ಹೇಳಿದ್ದರು. ನನ್ನ ಸಾಹಿತ್ಯಕ ಗ್ರಹಿಕೆಯ ಪರಿಯನ್ನು ತಿದ್ದಿದ್ದರು.‘
ಅಪರೂಪದ ಕಾದಂಬರಿಕಾರ, ಚಿಂತಕ ಕುಸುಮಾಕರ ದೇವರಗೆಣ್ಣೂರ (ವಸಂತ ಅನಂತ ದಿವಾಣಜಿ) ಅವರು ತೀರಿಹೋಗಿ ಇಂದಿಗೆ ಒಂಬತ್ತು ವರ್ಷ. ಬರವಣಿಗೆ, ಪ್ರಕಾಶನ, ಪ್ರಚಾರಗಳ ಎಳ್ಳಷ್ಟೂ ಲಕ್ಷ್ಯ ಹೊಂದಿರದ ಅವರು ನಿಜಕ್ಕೂ ಸಾಹಿತ್ಯಸಂತನೇ. ಈ ನಿರ್ಲಕ್ಷ್ಯವನ್ನು ಬೆಂಬಲಿಸುವಂತೆ ಕೊನೆಗಾಲದಲ್ಲಿ ಅವರಿಗೆ Macular Degeneration ಎನ್ನುವ ದೃಷ್ಟಿದೋಷವೂ ಕಾಡಿತು. ಬರವಣಿಗೆ ನಿಂತೇ ಹೋಯಿತು. ಅವರ ತಮ್ಮ ಪ್ರಹ್ಲಾದ ದಿವಾಣಜಿಯವರು ಅಣ್ಣನನ್ನು ಕಾಡಿ, ಬೇಡಿ, ಪೀಡಿಸಿ, ಧಮ್ಕಿ ಹಾಕಿ ಬರೆಯಿಸಿಕೊಂಡ ಲೇಖನಗಳಿಗೆ ಅಂತೂ ಪುಸ್ತಕ ಸ್ವರೂಪ ಸದ್ಯದಲ್ಲೇ ದೊರೆಯಲಿದೆ. ಸ್ವಪ್ರಕಾಶದ ಬಗ್ಗೆ ಸ್ವಭಾವತಃ ಸಂಕೋಚ ಪ್ರವೃತ್ತಿಯವರಾದ ಅವರು ಹೆಚ್ಚು ಜನರ ಕಣ್ಣಿಗೆ ಬೀಳದೆಯೇ ಮರೆಯಾದರು. ಸದ್ಯದಲ್ಲಿಯೇ ಸಾಹಿತ್ಯ ಭಂಡಾರ ಪ್ರಕಾಶನ ಅವರ ಕೊನೆಯ ಕೃತಿಯಾದ ‘ಕ್ರಾಂತದರ್ಶನ’ವನ್ನು ಪ್ರಕಟಿಸುತ್ತಿದೆ. ಬೇಂದ್ರೆಯವರ ಒಡನಾಟದ ನೆನಪುಗಳ ದಾಖಲೆಯಾಗಿರುವ ಈ ಕೃತಿಯ ಕೊನೆಯ ಲೇಖನವೂ ಬೇಂದ್ರೆ ಕಾವ್ಯದ ಬಗ್ಗೆಯೇ ಇದೆ. ಅದು ಅವರ ಬದುಕಿನ ಕೊನೆಯ ಲೇಖನವೂ ಹೌದು. ಈಗಿಲ್ಲಿ ಕುಸುಮಾಕರ ಅವರೊಂದಿಗೆ ನಾನು ಒಡನಾಡಿದ ನೆನಪುಗಳನ್ನು ಮೆಲುಕು ಹಾಕುತ್ತಿದ್ದೇನೆ. ಗಿರಿಜಾ ಶಾಸ್ತ್ರೀ
‘ಗಟ್ಟಿಯಾಗಿ ನಾವು ನಮ್ಮ ಜೀವನದ ಆಳಕ್ಕೆ ಇಳಿಯುವುದೇ ಇಲ್ಲ’- ಸಾಂತಾಕ್ರೂಸಿನಿಂದ ದೊಂಬಿವಿಲಿಯೆಡೆಗೆ ಗಾಡಿ ಓಡುತ್ತಿತ್ತು. ಗುರುನಾರಾಯಣ ಪ್ರಶಸ್ತಿಯನ್ನು ಸ್ವೀಕರಿಸಿದ ವಸಂತ ದಿವಾಣಜಿಯವರ ಜೊತೆ ನಾವುಗಳೂ ಪ್ರಯಾಣ ಮಾಡುತ್ತಿದ್ದೆವು. ಅವರು ಮೆಲ್ಲಗೆ ಮಾತನಾಡುತ್ತಿದ್ದರು. ಅವರ ಬಳಿಯೇ ಕುಳಿತಿದ್ದ ನಾನು ಕತ್ತಲೆಯಲ್ಲಿಯೇ ಅವರು ಹೇಳಿದ್ದನ್ನು ನನ್ನ ನೋಟ್ಬುಕ್ಕಿನಲ್ಲಿ ಗುರುತು ಹಾಕಿಕೊಳ್ಳುತ್ತಿದ್ದೆ. ಗ್ಲೊರಿಯಾ ಸ್ಟೆನೆಮ್ ಎನ್ನುವ ಲೇಖಕರೊಬ್ಬರ ‘Inner revolution’ ಕೃತಿಯ ಕುರಿತಾಗಿ ಹೇಳುವಾಗ ಮೇಲಿನ ಮಾತನ್ನು ಉದ್ಧರಿಸಿರಬೇಕು, ಈಗ ಸ್ಪಷ್ಟವಾಗಿ ನೆನಪಿಲ್ಲ. ನನ್ನ ಫೆಮಿನಿಸಮ್ನ ಆಸಕ್ತಿಗೆ ಅನುಗುಣವಾಗಿ ಅವರ ಬಾಯಿಯಿಂದ ‘ಫ್ಯಾಮಿಲಿ ಗಾರ್ಡನ್’, ‘ರಿಕವರಿ ಆಫ್ ಫೇಥ್’, ‘ಸಿಂಬಲಿಸಮ್ ಇನ್ ರಿಲಿಜನ್’ – ಹೀಗೆ ಪುಂಖಾನು ಪುಂಖವಾಗಿ ಪುಸ್ತಕಗಳ ಹೆಸರುಗಳು ಜೊತೆಗೆ ಅವುಗಳ ಹೂರಣ ಹೊರಬೀಳುತ್ತಿತ್ತು. ಎಲ್ಲವೂ ನಾನು ಕೇಳರಿಯದ ಜಗತ್ತಿನ ಯಾವುದೋ ಮೂಲೆಯ ಗಂಭೀರ ಕೃತಿಗಳು. ಅವರ ಮಾತಿಗೆ ಕಿವಿತೆರೆದುಕೊಂಡು ಕೂತರೆ ಹಾಗೇ, ಅರಬ್ಬಿಯ ಕಡಲ ಮುಂದೆ ನಿಂತಂತೆ ಭಾಸವಾಗುತ್ತಿತ್ತು.
ಇಂತಹ ವಸಂತ ದಿವಾಣಜಿ ಈಗ ಇಲ್ಲ. ಎರಡು ವರ್ಷಗಳ ಕಾಲ ದೀರ್ಘ ಮೌನದ ಜೊತೆ ಮಲಗಿದ ವಸಂತ ಕಾಕಾ ಅಸ್ತಂಗತರಾಗಿ ಇಂದಿಗೆ ಒಂಬತ್ತು ವರ್ಷಗಳು. ಕನ್ನಡ ಸಾಹಿತ್ಯ ಕಂಡ ಈ ಅಪರೂಪದ ಸಂತನನ್ನು ಪ್ರೀತಿಯಿಂದ ಕಾಕಾ ಎಂದು ಕರೆಯಲು ಅನೇಕ ಬಾರಿ ಹಂಬಲಿಸಿ ಕೆಲವು ಬಾರಿಯಾದರೂ ಹಾಗೆ ಕರೆದು ನಾನು ಸಮಾಧಾನ ಪಟ್ಟುಕೊಂಡಿದ್ದುಂಟು. ಅವರನ್ನು ಕಾಕಾ ಎಂದು ಕರೆಯಲು ಅವರ ಬೊಚ್ಚು ಬಾಯಿ ಬೋಳು ತಲೆ ನನ್ನ ಅಪ್ಪನನ್ನು ಹೋಲುತ್ತಿದ್ದುದೂ ಕಾರಣವಿರಬೇಕು.
ಅಂದು ವ್ಯಾನಿನಲ್ಲಿ ಬರುವಾಗ ಇದ್ದಕ್ಕಿದ್ದಂತೆ ‘ಕನ್ನಡ ಸಾಹಿತ್ಯದೊಳಗ ಪ್ರೇಮಕಾವ್ಯ ಅನ್ನೂದು ಇಲ್ಲೇ ಇಲ್ಲ. ಇರೂದೆಲ್ಲಾ ಬರೀ ‘Soliloques’ ಎಂದಿದ್ದರು. ಗಾಬರಿಯಾದ ನಾನು, ಅದು ಹ್ಯಾಂಗ ಕಾಕಾ, ಕೆ.ಎಸ್.ನ. ಪ್ರೇಮಕವಿ ಎಂದೆಲ್ಲಾ ನಾನು ರಾಗ ಎಳೆದು ತಡಬಡಿಸಹತ್ತಿದಾಗ, ‘ಮತ್ತಿನ್ನೇನು ಬರೀ ಅವನ ಮಾತಾಡ್ತಾನ. ಅಕೀಗೆ ಏನನಸ್ತದ ಅನ್ನೂದನ್ನೂ ಅವನ ಮಾತಾಡ್ತಾನ. ಒಬ್ನ ಮಾತಾಡ್ತಾನ. ಹಂಗ್ ಅಂದ್ ಮ್ಯಾಲ ಅದು ಪ್ರೇಮ ಕಾವ್ಯ ಹೆಂಗಾತೂ?’ ಎಂದು ಛಾಪು ಒತ್ತಿದಂತೆ ಹೇಳಿದ್ದರು. ನನ್ನ ಸಾಹಿತ್ಯಕ ಗ್ರಹಿಕೆಯ ಪರಿಯನ್ನು ತಿದ್ದಿದ್ದರು. ‘ನಿಮ್ ಕವಿತಾ ಕಳಿಸ್ಕೊಡ್ರಿ ನೋಡ್ತೇನಿ’ ನನ್ನ ಕವಿತೆಗಳ ಎರಡನೆಯ ಸಂಕಲನ ತರುವುದರ ಬಗ್ಗೆ, ಅವುಗಳು ಕವಿತೆಗಳಾಗಿವೆಯೋ ಇಲ್ಲವೋ ಅನ್ನುವುದರ ಬಗ್ಗೆ ನನ್ನ ಅನುಮಾನವನ್ನು, ಹಿಂಜರಿಕೆಯನ್ನು ವ್ಯಕ್ತಪಡಿಸಿದಾಗ ನನ್ನನ್ನು ಮೇಲೆತ್ತಿದ್ದರು. ಅಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ಮನೆಯಲ್ಲಿ ಅವರನ್ನು ಭೇಟಿಮಾಡಿದ ಸಂದರ್ಭ ಇನ್ನೂ ಹಸಿಯಾಗಿಯೇ ಇರುವಾಗ ಅವರು ಮೌನಕ್ಕೆ ಶರಣಾಗಿ ಮಲಗಿಬಿಟ್ಟರು. ನನ್ನ ಕವಿತೆಗಳನ್ನು ಕಳುಹಿಸುವುದೆಲ್ಲಿಗೆ?
ವಸಂತ ಕಾಕಾನನ್ನು ನಾನು ಮೊದಲು ಭೇಟಿಯಾದದ್ದು ದೊಂಬಿವಲಿಯ ಅವರ ತಮ್ಮನ ಮನೆಯಲ್ಲಿ. ಮುಂಬಯಿ ವಿ.ವಿಯ ಕನ್ನಡ ವಿಭಾಗದ ಅಭಿನಂದನೆಯನ್ನು ಸ್ವೀಕರಿಸಲು ಸೊಲ್ಲಾಪುರದಿಂದ ಬಂದಿದ್ದರು. ಅದೇ ಕಾರ್ಯಕ್ರಮದಲ್ಲಿ ನನ್ನ ‘ಕಥಾಮಾನಸಿ’ ಯೆಂಬ ಸಂಶೋಧನ ಗ್ರಂಥದ ಬಿಡುಗಡೆಯೂ ಇದ್ದು ನನ್ನ ಸಂತೋಷಕ್ಕೆ ಒಂದಿಷ್ಟು ಕೋಡೂ ಮೂಡಿತ್ತು. ನಾವು ಒಂದಷ್ಟು ಸಾಹಿತ್ಯಾಸಕ್ತರು ಅವರ ಮನೆಯಲ್ಲಿ ಅವರೊಡನೆ ‘ಸಂವಾದ’ವೆಂಬ ಹೆಸರಿನಲ್ಲಿ ಘೇರಾಯಿಸಿದ್ದೆವು. ಅಲ್ಲಿ ಸಂವಾದವೇನು ಬಂತು? ಅವರ ಮುಂದೆ ತುಟಿಬಿಚ್ಚಲೂ ಸಾಧ್ಯವಾಗಲಿಲ್ಲ. ಅವರ ಅಗಾಧ ಪಾಂಡಿತ್ಯಕ್ಕೆ ಮಣಿದು ನನ್ನ ಕೆಲ ಗೆಳೆಯ ಗೆಳತಿಯರು ಅವರ ಕಾಲಿಗೆ ಬಿದ್ದರು. ನಾನು ಮಾತ್ರ ಹಾಗೆ ಮಾಡದೇ ಹೋದದ್ದಕ್ಕೆ ಆನಂತರ ಅಹಂಕಾರ ಹಾಗೂ ಗುಲಾಮತನದ ಬೌದ್ಧಿಕ ಕಸರತ್ತಿನಲ್ಲಿ ನರಳಿದ್ದುಂಟು. ಹೀಗೆ ಪರಿಚಯವಾದ ವಸಂತ ಕಾಕಾ ಕ್ರಮೇಣ ‘ನಿರಿಂದ್ರಿಯ, ಪರಿಘ, ಗಾಳಿ ಹೆಜ್ಜೆ ಹಿಡಿದ ಸುಗಂಧ, ನಾಲ್ಕನೆಯ ಆಯಾಮ, ಬಯಲು ಬಸಿರು, ಪ್ರಸಾದ ಯೋಗ’ ಎಂತೆಲ್ಲಾ ನಮ್ಮ ಮನೆ ಮನಸ್ಸುಗಳನ್ನು ಆವರಿಸಿಕೊಂಡುಬಿಟ್ಟರು.
ಕೆಲವು ವರ್ಷಗಳ ಹಿಂದೆ ನಮ್ಮ ಮುಂಬೆಳಕು ಕನ್ನಡ ಬಳಗದ ವತಿಯಿಂದ ಅವರನ್ನು ಸನ್ಮಾನಿಸಲು ಅವರಿದ್ದ ಸೊಲ್ಲಾಪುರಕ್ಕೇ ಹೋಗಿದ್ದೆವು. ಅಲ್ಲಿ ಅವರ ‘ಬಯಲು ಬಸಿರು’, ‘ನಿರಿಂದ್ರಿಯ’, ‘ಪರಿಘ’ ಮುಂತಾದ ಕೃತಿಗಳ ಬಗ್ಗೆ ಅನೇಕ ವಿದ್ವಾಂಸರಿಂದ ಪ್ರಬಂಧ ಮಂಡಿಸಲಾಯಿತು. ಆಗ ನಡೆದ ಕವಿಗೋಷ್ಠಿಯಲ್ಲಿ ವಾಚನ ಮಾಡಿದ ನನ್ನ ಕವಿತೆಯೊಂದನ್ನು ಮೆಚ್ಚಿಕೊಂಡಿದ್ದರು ಎಂಬುದನ್ನು ಈಗ ಬರೆಯುವಾಗ ವಿಷಾದ ಮತ್ತು ಸಂತೋಷ ಎರಡೂ ಒಟ್ಟಿಗೇ ಉಂಟಾಗುತ್ತಿದೆ. ಅವರ ಬಗ್ಗೆ ಅಭಿನಂದನ ಗ್ರಂಥ ‘ಅವಗಾಹ’ ಕ್ಕಾಗಿ ನಾನು ಅವರ ‘ನಿರಿಂದ್ರಿಯ’ ಕಾದಂಬರಿಯ ಕುರಿತು ನನ್ನ ಒಂದು ಲೇಖನವನ್ನು ಕಳುಹಿಸಿದ್ದೆ. ಅದನ್ನು ಓದಿದವರೇ ಬೆಂಗಳೂರಿನಿಂದ ಫೋನಿನ ಮೂಲಕ ನಾನು ತಡೆದುಕೊಳ್ಳಲಾರದಷ್ಟು ದೊಡ್ಡ ಮಾತುಗಳನ್ನಾಡಿದಾಗ ನಾನು ನಾಚಿಕೆಯ ಮುದ್ದೆಯಾಗಿದ್ದೆ. ನನ್ನಂತಹ ಕಿರಿಯರ ಬಗ್ಗೆಯೂ ಅವರಿಗೆ ಗೌರವಾದರಗಳು ಇದ್ದುದು ಅವರ ಸಜ್ಜನಿಕೆಯೇ ಸರಿ.
ವಸಂತ ದಿವಾಣಜಿಯವರು ಪುಸ್ತಕ ಬರೆಯುತ್ತಿದ್ದರಷ್ಟೇ, ಅದೂ ತಮ್ಮನ ಒತ್ತಾಯದ ಮೇರೆಗೆ. ಎಂದೂ ಅದರ ಪ್ರಕಾಶನ ವ್ಯವಹಾರದ ಗೋಜಿಗೇ ಹೋದವರಲ್ಲ. ಪ್ರಹ್ಲಾದ ದಿವಾಣಜಿಯಂತಹ ಲಕ್ಷ್ಮಣನಂತಹ ತಮ್ಮ ಇಲ್ಲದಿದ್ದರೆ ಅವರು ಬೆಳಕಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅಣ್ಣನ ಪುಸ್ತಕ ಪ್ರಕಾಶನದ ಬಗ್ಗೆ ಪಲ್ಲಣ್ಣ ತಮ್ಮ ತನು ಮನ ಧನ ಮುಡಿಪಾಗಿಟ್ಟಿದ್ದಾರೆ. ಅಂತಹವರನ್ನು ಸಹಿಸಿಕೊಳ್ಳುತ್ತಿರುವ ಶುಭಾ ವೈನಿಯವರ ಔದಾರ್ಯ, ಸಹನೆ ದೊಡ್ಡದು. ಸಾಹಿತ್ಯ ಭಂಡಾರವಾಗಲೀ, ಅಭಿನವ ಪ್ರಕಾಶನವಾಗಲೀ ಸಂಪರ್ಕಿಸುತ್ತಿದ್ದುದು ಪ್ರಹ್ಲಾದ್ ಅವರನ್ನೇ ಹೊರತು ವಸಂತ ದಿವಾಣಜಿಯವರನ್ನಲ್ಲ. ತಮ್ಮ ಬಗ್ಗೆ ತಮ್ಮ ಬರಹಗಳ ಪ್ರಕಟಣೆಯ ಬಗ್ಗೆ ಅಂತಹ ನಿರ್ಲಕ್ಷ್ಯ ಅವರಿಗೆ. ಅವರ ಬಳಿ ಒಂದು ಸಂಕಲನಕ್ಕಾಗುವಷ್ಟು ದೊಡ್ಡ ಸಾಹಿತಿಗಳ ಅನೇಕ ಪತ್ರಗಳು ಇದ್ದವು. ಅವುಗಳನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಸಾಹಿತಿಗಳ ಮಧ್ಯದಲ್ಲೇ, ಖಡಾಖಂಡಿತವಾಗಿ ಅದರ ಪ್ರಕಟಣೆಯನ್ನು ವಿರೋಧಿಸಿ ತಮ್ಮನಿಗೆ ತಾಕೀತುಮಾಡಿದ್ದು ಅವರ ಅಪರೂಪದ ವ್ಯಕ್ತಿತ್ವದ ಮೇಲೆ ಇನ್ನಷ್ಟು ಬೆಳಕು ಚೆಲ್ಲುತ್ತದೆ. ಅಷ್ಟೇ ಅಲ್ಲದೆ ರಂ.ಶ್ರೀ ಮುಗಳಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದ ತಮ್ಮ ಪಿಎಚ್.ಡಿ ಪ್ರಬಂಧ ‘ಪ್ರಸಾದ ಯೋಗ’ ವನ್ನು ಪುಣೆ ವಿ.ವಿ. ಗೆ ಸಲ್ಲಿಸಿ ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಕೈಚೆಲ್ಲಿ ಕುಳಿತುಬಿಟ್ಟಿದ್ದರು. ಹಲವಾರು ವರ್ಷ ಅದರ ಸೊಲ್ಲೇ ಇರದಾಗಲೂ ಅದರ ಬಗ್ಗೆ ಫಾಲೋ ಅಪ್ ಮಾಡಿದವರಲ್ಲ. ಪ್ರಹ್ಲಾದ ದಿವಾಣಜಿ ಹಾಗೂ ರಂಶ್ರೀ ಮುಗಳಿಯವರ ವೈಯಕ್ತಿಕ ಕಾಳಜಿಯಿಂದಾಗಿ ಹಲವಾರು ವರ್ಷಗಳ ಮೇಲೆ ಅವರಿಗೆ ಡಾಕ್ಟರೇಟ್ ಪದವಿ ದೊರೆತದ್ದು ಅವರ ಬಗೆಗಿನ ಈ ದಿವ್ಯನಿರ್ಲಕ್ಷ್ಯತೆಗೆ ಸಾಕ್ಷಿಯಾಗಿದೆ.
ಸುಮತೀಂದ್ರ ನಾಡಿಗರ, ಬೇಂದ್ರೆಯವರ ಬಗೆಗೆ ಮಹತ್ವದ ಒಳನೋಟವುಳ್ಳವರು ಇಲ್ಲವೇ ಇಲ್ಲ ಎನ್ನುವ ನಂಬಿಕೆ ಹುಸಿಯಾದದ್ದೇ ವಸಂತ ದಿವಾಣಜಿಯವರ ‘ಗಾಳಿ ಹೆಜ್ಜೆ ಹಿಡಿದ ಸುಗಂಧ’ ಕೃತಿಯನ್ನು ಓದಿ. ಆನಂತರ ಅವರಿಗೆ ವಾಸಣ್ಣ, ಪಲ್ಲಣ್ಣನೆಂದರೆ ಸ್ವಂತ ಸೋದದರಂತೆ ಆಗಿಬಿಟ್ಟರು. ವಸಂತ ಕಾಕಾ ತಮ್ಮ ಹದಿಹರೆಯದಲ್ಲಿಯೇ ಬೇಂದ್ರೆಯವರ ಹುಚ್ಚನ್ನು ಹತ್ತಿಸಿಕೊಂಡು ಸೊಲ್ಲಾಪುರದ ಅವರ ಮನೆಗೆ ಧೋತರದ ಜೊತೆಗೆ ಬಡತನವನ್ನೂ ಉಟ್ಟುಕೊಂಡು ಬೇಂದ್ರೆಯವರ ಮುಂದೆ ನಿಂತು ಇಡೀ ‘ಸಖೀಗೀತ’ ವನ್ನು ಬಾಯಿಪಾಠ ಮಾಡಿ ಶಹಬಾಸ್ಗಿರಿಯನ್ನು ಗಿಟ್ಟಿಸಿದ್ದನ್ನು ಪಲ್ಲಣ್ಣನ ಬಾಯಿಂದ ಕೇಳಬೇಕು. ಇಂದು ಬೇಂದ್ರೆಯವರ ಮಾನಸ ಪುತ್ರರೆಂದು ಅನೇಕರು ಬೀಗುವುದಿದೆ. ಆದರೆ ನಿಜವಾಗಿ ಬೇಂದ್ರೆಯವರ ದರ್ಶನವನ್ನು ಆತ್ಮಸಾತ್ ಮಾಡಿಕೊಂಡಿದ್ದವರು ವಸಂತ ದಿವಾಣಜಿಯವರೆಂದರೆ ಅತಿಶಯೋಕ್ತಿಯಲ್ಲ. ಬೇಂದ್ರೆಯವರ ಬಗ್ಗೆ ಅವರ ಗಂಟೆಗಟ್ಟಲೆ ಮಾತನಾಡಿದ ಧ್ವನಿ ಸುರಳಿಯನ್ನು ಪುಸ್ತಕದ ರೂಪದಲ್ಲಿ ತರುವ ಕನಸು ಪ್ರಹಲ್ಲಾದ ದಿವಾಣಜಿಯವರಿಗೆ ಇದೆ. ‘ಕ್ರಾಂತದರ್ಶನ’ ಎಂಬ ಹೆಸರಿನಲ್ಲಿ ಸದ್ಯದಲ್ಲಿಯೇ ಬೆಳಕು ಕಾಣಲಿದೆ.
ಸೊಲ್ಲಾಪುರದ ಅವರ ಮನೆಯಲ್ಲಿ ಸಿ.ಎನ್. ರಾಮಚಂದ್ರ, ಜಿ.ಬಿ ಜೋಶಿ, ಶಹಾಪುರ (ಸತ್ಯಕಾಮ) ಮುಂತಾದವರ ಜೊತೆ ಅವರು ನಡೆಸುತ್ತಿದ್ದ ಬಿಸಿ ಬಿಸಿ ಸಾಹಿತ್ಯಕ ಚರ್ಚೆಗಳು ದಿನಗಟ್ಟಲೆ ವಾರಗಟ್ಟಲೆ ನಡೆದು ಕೈಕೈ ಮಿಲಾಯಿಸುವ ಹಂತ ತಲಪುತ್ತಿದ್ದುದನ್ನು ಪ್ರಹ್ಲಾದ್ ಬಹಳ ಸ್ವಾರಸ್ಯಕರವಾಗಿ ಹೇಳುತ್ತಾರೆ. ಸತ್ಯಕಾಮರ ಜೊತೆಗಿನ ಒಡನಾಟವಂತೂ ವಿಶಿಷ್ಟವಾದುದು. ತಮ್ಮ ನಡುವಿನ ಸಾಹಿತ್ಯಕ ಚರ್ಚೆಗೆ ಅಡಚಣೆಯಾಗಬಾರದೆಂದು ಇಬ್ಬರೂ ಸ್ಮಶಾನದಲ್ಲಿ ಗಂಟೆಗಟ್ಟಲೆ ಕುಳಿತು ಮಾತನಾಡುತ್ತಿದ್ದರಂತೆ.
1965 ರಲ್ಲಿ ಅವರ ತಂದೆಯವರು ತೀರಿಕೊಂಡಾಗ ತಾಯಿಯವರು ಕೇಶಮುಂಡನ ಮಾಡಿಕೊಂಡು ‘ಮಡಿ’ಯಾಗಲಿಕ್ಕೆ ಹೊರಟಾಗ ಅವರ ಬಳಿ ಕುಳಿತು ಅಂತಹ ಆಚರಣೆಗಳಿಗೆ ಯಾವ ಶಾಸ್ತ್ರಗಳ ಆಧಾರವೂ ಇಲ್ಲವೆಂದೂ, ಮಠ ಮುಂತಾದ ಹೊರಗಿನ ಮಡಿವಂತರಿಂದ ಯಾವ ವಿರೋಧಗಳು ಬಂದರೂ ಅದನ್ನು ತಾವು ಎದುರಿಸುವುದಾಗಿ ಧೈರ್ಯ ಹೇಳಿದ್ದರಂತೆ. ಆದರೆ ಇವರ ಯಾವ ಅನುನಯದ ನುಡಿಗೂ ತಾಯಿ ಬಗ್ಗದೇ ಹೋದಾಗ ಅವರ ನಿಷ್ಠುರ ನಂಬಿಕೆಯನ್ನು ಅಪಮಾನಗೊಳಿಸಬಾರದೆಂದು ಸುಮ್ಮನಾದರಂತೆ.
ಅವರ ಮನೆಗೆ ಹೋದಾಗ ಒಮ್ಮೆ ಪ್ರೀತಿಯ ಎರಡು ಸಾಧ್ಯತೆಗಳ ಕುರಿತಾಗಿ (ಬಹುಷಃ ಅಕ್ಕಮಹಾದೇವಿ ಬಗೆಗೆ ಹೇಳುವಾಗ) ಹೇಳುತ್ತಾ, ಪ್ರೀತಿಗೆ ಎರಡು ರೀತಿಯ ವಿಲ್ ಗಳಿವೆ. ಒಂದು Free Will ಆದರೆ ಇನ್ನೊಂದು ಸಾಮಾಜಿಕ ಬಂಧನಕ್ಕೆ ಒಳಗಾದ Will, ಸಾಮಾಜಿಕ ವ್ಯವಸ್ಥೆಯಲ್ಲಿ ಬಂಧಿತರಾದವರಿಗೆ ಸಾಮಾಜಿಕ ಮನ್ನಣೆ ದೊರೆಯುತ್ತದೆ, Free Will ಗೆ ಬಂಧಿತರಾದವರಿಗೆ ಇದು ಇಲ್ಲ ಎಂದಿದ್ದರು. ವಸಂತ ಕಾಕಾ ಅವರದ್ದು Free Will ಗೆ ಒಳಗಾದ ಜೀವ. ಅವರದು Inner Revolution. ಆದುದರಿಂದಲೇ ಬಾಹ್ಯವಾದುದರೆಲ್ಲದರ ಬಗ್ಗೆ ಒಂದು ರೀತಿಯ ದೊಡ್ಡ ನಿರ್ಲಕ್ಷ್ಯವನ್ನು ಬೆಳೆಸಿಕೊಂಡಿದ್ದರು. ಕೇವಲ ಲಾಬಿ ರಾಜಕಾರಣಗಳೇ ಮೇಲುಗೈ ಆಗಿರುವ ಸದ್ಯದ ಸಾಹಿತ್ಯ ಸಂದರ್ಭದಲ್ಲಿ ಅವರನ್ನು ಕನ್ನಡ ಲೋಕದ ಸಂತನೆನ್ನದೇ ಇನ್ನಾವ ಹೆಸರಿನಿಂದ ಕರೆಯಲು ಸಾಧ್ಯ? ಇಂತಹ ರಾಜಕಾರಣಗಳಿಗೆ ತಾವು ವಿಶಿಷ್ಟವಾಗಿ ಬದುಕುವುದರ ಮೂಲಕವೇ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾ ಬಂದರು. ಕೊನೆಗೆ ತಮ್ಮ ಕಡೇ ಗಳಿಗೆಯಲ್ಲಿ ಮೌನವನ್ನು ಆವಾಹನೆ ಮಾಡಿಕೊಳ್ಳುವುದರ ಮೂಲಕ ತಮ್ಮ ಸಾವಿನಲ್ಲೂ ಈ ಪ್ರತಿರೋಧವನ್ನು ಸಾಧಿಸಿಬಿಟ್ಟರು.
ಅವರು ಮೌನಹೊತ್ತು ಹೀಗೆ ಮಲಗಿದ ದಿನಗಳಿಂದ ಪಲ್ಲಣ್ಣನವರಿಗೆ ಫೋನು ಮಾಡಿದಾಗೆಲ್ಲಾ ಕಾಕಾನ ಆರೋಗ್ಯದ ಬಗ್ಗೆ ಕೇಳುತ್ತಿದ್ದೆ, ಅವರು ಅಣ್ಣನ ನಿಶ್ಚಲ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲದ ವಿಷಾದ ವ್ಯಕ್ತಪಡಿಸುತ್ತಿದ್ದರು. ಅಂತಹ ಸಂತನನ್ನು ಕಾಲ ಯಾಕೆ ಹೀಗೆ ಪರೀಕ್ಷಿಸುತ್ತಿದೆ, ಪಕೃತಿ ಯಾಕೆ ಹೀಗೆ ಸತಾಯಿಸುತ್ತಿದೆ ಎಂಬ ದುಃಖವನ್ನು ಇಬ್ಬರೂ ತೋಡಿಕೊಳ್ಳುತ್ತಿದ್ದೆವು. ಕಾಲ ದಿವಾಣಜಿಯವರ ಭೌತಿಕ ಶರೀರವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಅವರ ಪ್ರಬುದ್ಧ ಜೀವನಾನುಭವದಿಂದ ಕಂಡುಕೊಂಡ ದರ್ಶನವನ್ನು ತಮ್ಮ ಕೃತಿಗಳಲ್ಲಿ ಕಟ್ಟಿಟ್ಟು ನಮಗೆ ಬಿಟ್ಟು ಹೋಗಿದ್ದಾರೆ. ಅವರು ‘ಹೆಚ್ಚು ಬರೆದವರಲ್ಲ, ನಿಚ್ಚ ಬರೆದವರಲ್ಲ, ಮೆಚ್ಚ ಬರೆದವರಲ್ಲ’, ಅವರು ಒಲಿದದ್ದನ್ನು ಮಾತ್ರ ಬರೆದವರು. ಅವುಗಳ ವ್ಯವಸ್ಥಿತವಾದ ಅಧ್ಯಯನ ಇನ್ನಾದರೂ ನಡೆಯಬೇಕಾಗಿದೆ.
* ಪರಿಚಯ : ಮುಂಬೈಯಲ್ಲಿ ವಾಸಿಸುತ್ತಿರುವ ಡಾ. ಗಿರಿಜಾ ಶಾಸ್ತ್ರೀ ಕನ್ನಡದಲ್ಲಿ ಪಿಎಚ್.ಡಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಎಂ.ಎ. ಪದವಿಗಳನ್ನು ಪಡೆದಿದ್ದಾರೆ. ಹೆಣ್ಣೊಬ್ಬಳ ದನಿ, ಕಥಾಮಾನಸಿ, ಕಥಾಸಾಹಿತ್ಯ ಒಂದು ಸ್ತ್ರೀವಾದಿ ಅಧ್ಯಯನ, ಪುಸ್ತಕ ಮತ್ತು ನವಿಲುಗರಿ, ಮಾನಸಿಯ ಲೋಕ, ತಾಯಮುಖ ಕಾಣದಲ್ಲಾ, ಸೆರಗ ಬಿಡೊ ಮರುಳೇ. ಸಂಜೀವನ- ಬೆಂಗಳೂರಿನ ಜೈವಿಕ ವನದ ನಿರ್ಮಾತೃ ಡಾ. ಲಲಿತಮ್ಮನವರ ಸಾಹಸ ಗಾಥೆ ಪುಸ್ತಕಗಳು ಪ್ರಕಟಗೊಂಡಿವೆ. ಸಾವಿತ್ರಿ: ಪುರುಷೋತ್ತಮ ರೇಗೆಯವರ ಮರಾಠಿ ಕಾದಂಬರಿ ಇವರ ಅನುವಾದ ಕೃತಿ. ಇವರು ಮುಂಬೆಳಕು ಕನ್ನಡ ಬಳಗ ಮತ್ತು ಸೃಜನಾ: ಮುಂಬೈ ಕನ್ನಡ ಲೇಖಕಿಯರ ಬಳಗದ ಸಂಘಟಕಿ ಕೂಡ.
ಇದನ್ನೂ ಓದಿ : ಅಚ್ಚಿಗೂ ಮೊದಲು ; ಒರೆಗಲ್ಲಿಗೆ ತಿಕ್ಕಿ ಚೊಕ್ಕವಾದರೆ ಚೊಕ್ಕಾಡಿ : ಸುಬ್ರಾಯರ ಅನುಭವಕಥನ ಬಿಡುಗಡೆ
Published On - 1:02 pm, Sat, 17 April 21