Neethu Shetty‘s Birthday : ನಮ್ಮನೆಯ ಗೇಟಿಗೆ ಜೀಕು ಹೊಡೆಯುತ್ತ ಆಕಾಶ ನೋಡುತ್ತ ಹಾಡುತ್ತಿದ್ದ ಹುಡುಗಿಯೇ ನಾನಿನ್ನೂ

Father : ‘ನನ್ನನ್ನು ಆತಂಕಕ್ಕೆ ದೂಡಿದ ಒಂದು ವಿಷಯವನ್ನು ನಿಮ್ಮೆಲ್ಲರ ಜೊತೆ ಈಗ ಹಂಚಿಕೊಳ್ಳುತ್ತಿದ್ದೇನೆ. 2012 ರಿಂದ ನನಗೆ ಒಬ್ಬಳೇ ಮಲಗಲು ಸಾಧ್ಯವೇ ಆಗುತ್ತಿರಲಿಲ್ಲ. ಯಾಕೆಂದರೆ  ನನ್ನ ಹತ್ತಿರ ಯಾವುದೋ ಒಂದು ಕಪ್ಪು ಬಣ್ಣದ ನೆರಳು ನಿದ್ದೆಯಲ್ಲಿ ಬಂದು ಹೋಗುತ್ತಿದೆ ಎನ್ನಿಸುತ್ತಿತ್ತು. ತುಂಬಾ ವಿಚಲಿತಳಾಗಿ ಭಯದಿಂದ ಎದ್ದುಬಿಡುತ್ತಿದ್ದೆ. ಕೊನೆಗೊಮ್ಮೆ ಕಾರಣವೂ ತಿಳಿಯಿತು; ನನ್ನ ತಂದೆಯ ಆಕಸ್ಮಿಕ ಸಾವಿನ ಹಿನ್ನೆಲೆಯಿತ್ತು ಅದಕ್ಕೆ.‘ ನೀತು ಶೆಟ್ಟಿ

Neethu Shetty‘s Birthday : ನಮ್ಮನೆಯ ಗೇಟಿಗೆ ಜೀಕು ಹೊಡೆಯುತ್ತ ಆಕಾಶ ನೋಡುತ್ತ ಹಾಡುತ್ತಿದ್ದ ಹುಡುಗಿಯೇ ನಾನಿನ್ನೂ
ಸಿನೆಮಾ ಕಲಾವಿದೆ, ಡ್ರೀಮ್ ಟ್ರ್ಯಾಕರ್ ನೀತು ಶೆಟ್ಟಿ.
Follow us
ಶ್ರೀದೇವಿ ಕಳಸದ
|

Updated on:Sep 02, 2021 | 8:46 AM

ಒಳಗಿರುವ ಜೀವಚೈತನ್ಯಕ್ಕೆ ಲಿಂಗಬೇಧವುಂಟೆ?; ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿ ಇದೀಗ ನಿಮ್ಮೆಲ್ಲರ ಆಪ್ತ ಒಳಗೊಳ್ಳುವಿಕೆಯಿಂದಾಗಿ ರೂಪಾಂತರದ ಹಂತಕ್ಕೆ ಬಂದು ನಿಂತಿದೆ. ನೂರಾರು ವರುಷಗಳಿಂದ ಸುತ್ತಿಕೊಂಡಿರುವ ಎಡರು ತೊಡರುಗಳನ್ನೆಲ್ಲ ಕಿತ್ತೊಗೆದರೇ ನನ್ನೊಳಗಿನ ನಾನು ಪೂರ್ತಿಯಾಗಿ ಅರಳುವುದು, ಹೆಜ್ಜೆ ಕಿತ್ತಿಟ್ಟರೆ ಮಾತ್ರ ಸಹಜ ಗತಿಯಲ್ಲಿ ಚಲಿಸಲು ಸಾಧ್ಯವಾಗುವುದು ಎನ್ನುತ್ತಿದ್ದಾರೆ ನಮ್ಮ ನಡುವಿನ ದಿಟ್ಟ ಮಹಿಳೆಯರು. ತಮ್ಮ ಧೀಶಕ್ತಿಯಿಂದ ಸಮಾಜಕ್ಕೆ ತಕ್ಕ ಉತ್ತರಗಳನ್ನು ಕೊಡುತ್ತ ಬಂದಿರುವ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತ ಸಾಗುತ್ತಿರುವ ಅವರವರ ಪರಿಯನ್ನು ನಿಮ್ಮ ಮುಂದೆ ಇಡುತ್ತಿದ್ದಾರೆ. ಸರಣಿಯಲ್ಲಿ ನೀವೂ ಒಳಗೊಳ್ಳಬೇಕೇ? ದಯವಿಟ್ಟು ಬರೆಯಿರಿ tv9kannadadigital@gmail.com

ಗಾಳಿಪಟ ಸಿನೆಮಾದಲ್ಲಿ ಚುರುಕಾದ ಅಭಿನಯದ ಮೂಲಕ ಪ್ರೇಕ್ಷಕರ ಮನಸೂರೆಗೊಂಡ ನೀತು ಶೆಟ್ಟಿ ಈಗೇನು ಮಾಡುತ್ತಿದ್ದಾರೆ? ಸಿನೆಮಾ ಅನ್ನುವುದು ಬದುಕಿನ ಒಂದು ಭಾಗವಷ್ಟೇ ಎನ್ನುವ ಅವರು ತಮ್ಮೊಳಗಿನ ಇನ್ನಿತರ ಸಾಧ್ಯತೆಗಳನ್ನು ಹುಡುಕಿಕೊಳ್ಳುವ ಸೂಕ್ಷ್ಮ ಮನೋಭಾವದವರು. ಇತ್ತೀಚಿನ ವರ್ಷಗಳಲ್ಲಿ ‘ಶಮನಿಸಂ’ ಅಭ್ಯಾಸ ಮಾಡುತ್ತಿರುವ ಇವರು ತಮ್ಮ ಅಸ್ತಿತ್ವಕ್ಕೆ ವೃತ್ತಿಪರ ಡ್ರೀಮ್ ಟ್ರ್ಯಾಕರ್ ಎಂಬ ಗರಿಯನ್ನೂ ಸಿಕ್ಕಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ತಮ್ಮ ಅಂತರಂಗವನ್ನು ನಿಮಗಾಗಿ ಬಿಚ್ಚಿಟ್ಟಿದ್ದಾರೆ.

*

ಮಂಗಳೂರಿನ ಅತ್ತಾವರದಲ್ಲಿ ನಮ್ಮ ಮನೆ. ಅದು ನಮ್ಮಮ್ಮ ಒಬ್ಬರೇ ಬ್ಯಾಂಕ್​ನಿಂದ ಸಾಲ ತೆಗೆದುಕೊಂಡು ಕಟ್ಟಿಸಿದ ಮನೆ. ನನಗಾಗ ಸುಮಾರು ಏಳರು ವರ್ಷ. ಅಜ್ಜಿ, ಅಮ್ಮ, ತಂಗಿ ಮತ್ತು ನಾನು ಒಟ್ಟಾಗಿ ಇರುತ್ತಿದ್ದೆವು.  ಒಂದು ರಾತ್ರಿ ನಮ್ಮ ಏರಿಯಾದಲ್ಲಿ ಕರೆಂಟ್ ಹೋಗಿತ್ತು. ಬೇಸಿಗೆಯ ಶೆಕೆಗೆ ನಾವು ನಾಲ್ಕೂ ಜನ ಅಂಗಳದಲ್ಲಿ ಕೂತಿದ್ದೆವು. ನಾನು ನನ್ನದೇ ಪ್ರಪಂಚದಲ್ಲಿ ಮುಳುಗಿ ಹೋಗಿದ್ದೆ. ನಮ್ಮ ಚಿಕ್ಕಗೇಟಿನ ಮೇಲೆ ನಿಂತು, ಉಯ್ಯಾಲೆಯಂತೆ ತೂಗುತ್ತಿದ್ದೆ. ಇವತ್ತಿಗೂ ನನಗೆ ನೆನಪಿದೆ, ಆ ರಾತ್ರಿ ನಾನು ಆಕಾಶವನ್ನು ದಿಟ್ಟಿಸುತ್ತ ನಾನೇ ಕಟ್ಟಿದ ಹಾಡನ್ನು ಹಾಡುತ್ತಿದ್ದೆ. ಆಕಾಶ, ನಕ್ಷತ್ರಗಳ ಜೊತೆಗೆ ಏನೋ ಒಂದು ಸಂಬಂಧ ಇದ್ದ ಹಾಗೆ, ನಾನು ಆ ಪ್ರಪಂಚದವಳೇ ಅನ್ನುವ ಭಾವ. ತೆಂಗಿನ ಮರದ ಔಟ್​ಲೈನ್​ ಕಂಡಾಗ ಏನೋ ಒಂದು ವಿಚಿತ್ರ ಅನುಭವ. ನಾನು ಯಾರು, ಇಲ್ಲಿ ಯಾಕೆ ಹುಟ್ಟಿದೆ? ಏನೇನೋ ವಯಸ್ಸಿಗೆ ಮೀರಿದ ಯೋಚನೆಗಳು.

naanemba parimaladha haadhiyali

ಅಪ್ಪ, ತಂಗಿ, ಅಜ್ಜಿಯೊಂದಿಗೆ ನೀತು.

ಇದಾಗಿ ಒಂದೆರಡು ವರ್ಷಗಳ ನಂತರ ಹೀಗೊಂದು ಮಧ್ಯಾಹ್ನ. ನಮ್ಮ ಮನೆಯಲ್ಲಿ ಒಂದು ನೀರು ತುಂಬಿಸುವ ಅಲ್ಯೂಮಿನಿಯಂ ಡ್ರಮ್ ಇತ್ತು. ಖಾಲಿ ಡ್ರಮ್ಮಿನ ಒಳಗೆ ನನ್ನ ಮುಖ ಹಾಕಿ ಬಾಯಿಗೆ ಬಂದ ಹಾಡನ್ನು ಹಾಡುತ್ತಿದ್ದೆ. ನನ್ನದೇ ಧ್ವನಿ ಪ್ರತಿಧ್ವನಿಸುವುದನ್ನು ಕೇಳಲು ಏನೋ ಒಂಥರಾ ಖುಷಿ. ಆದರೆ ಆ ಮಧ್ಯಾಹ್ನ ಸ್ವಲ್ಪ ಬೇರೆ ತರಹ ಇತ್ತು. ಡ್ರಮ್ ಒಳಗೆ ಮುಖ ಹಾಕಿ ಹಾಡುತ್ತಿರಬೇಕಾದರೆ, ಅಕಾರಣವಾಗಿ ದುಃಖ ಉಮ್ಮಿಳಿಸಿ ಬಂದಿತು.  ಚಿಕ್ಕವಳಿದ್ದಾಗ ನನ್ನ ಭಾವನೆಗಳನ್ನು ನಾನು ತಳ್ಳಿ ಓಡಿ ಹೋಗುತ್ತಿರಲಿಲ್ಲ. ಧೈರ್ಯವಾಗಿ ಅದನ್ನು ಅನುಭವಿಸುತ್ತಿದ್ದೆ, ಅದು ಏನು ಎಂದು ಗೊತ್ತಾಗುವವರೆಗೆ ಬಿಡುತ್ತಿರಲಿಲ್ಲ. ಆಗ ನನಗೆ ಮೊದಲನೇ ಸಲ, ಇನ್ನು ಕೆಲವೇ ವರ್ಷಗಳಲ್ಲಿ ನನ್ನ ಪ್ರೀತಿಯ ಅಜ್ಜಿಯನ್ನು ಕಳೆದುಕೊಳ್ಳುತ್ತೇನೆ ಎನ್ನುವ ಸೂಚನೆ ಸಿಕ್ಕಿತು. ಮನುಷ್ಯನಿಗೆ ಯಾಕೆ ಸಾವು ಬರುತ್ತದೆ ಎನ್ನುವುದರ ಬಗ್ಗೆ ತುಂಬಾ ಹೊತ್ತು ಯೋಚಿಸಿ, ಪ್ರೀತಿಸಿದವರಿಂದ ದೂರವಾಗಬಾರದು ಅಂತೆಲ್ಲ ಬೇಜಾರು ಮಾಡಿಕೊಂಡು, ಅಲ್ಲೇ ಇದ್ದ ನನ್ನ ಅಜ್ಜಿಯನ್ನು ತಬ್ಬಿಕೊಂಡು ತುಂಬಾ ಹೊತ್ತು ಅತ್ತೆ.

naanemba parimaladha haadhiyali

ಅಪ್ಪ ಅಮ್ಮನೊಂದಿಗೆ ಪುಟಾಣಿ ನೀತು

ಇದೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ ತುಂಬಾ ಚಿಕ್ಕ ವಯಸ್ಸಿನಲ್ಲೇ ಬಹಳ ದೊಡ್ಡ ವಯಸ್ಸಿನವರಂತೆ ಬದುಕುತ್ತಿದ್ದೇನೆ ಎಂದೆನ್ನಿಸುತ್ತಿತ್ತು. ಬದುಕು-ಸಾವು, ಪ್ರಕೃತಿ, ಪ್ರೀತಿ, ಜವಾಬ್ದಾರಿ, ಸಹಾನುಭೂತಿ, ಆತ್ಮ ಇಂಥ ವಿಷಯಗಳೆಲ್ಲಾ ನನ್ನ ಬದುಕಿನಲ್ಲಿ ಬೇಗ ಆವರಿಸಿಕೊಂಡುಬಿಟ್ಟವು. ಹಾಗೇ ಬೆಳೆಯುತ್ತಾ ಬೆಳೆಯುತ್ತಾ ಬೇಗ ಗೆಳೆಯನ ಪ್ರೀತಿ ಸಿಗಬೇಕು ಎನ್ನುವ ಆಸೆ ಬಲವಾಗುತ್ತಾ ಹೋಯಿತು. ಜೊತೆಗೆ ನಾನು ದೊಡ್ಡವಳಾದ ಮೇಲೆ ಕಲಾವಿದೆಯೇ ಆಗುವುದು ಅನ್ನುವುದರ ಬಗ್ಗೆಯೂ ನನಗೆ ಖಚಿತವಿತ್ತು. ಆದರೆ ಇದೆಲ್ಲ ಹೇಗೆ ಎನ್ನುವುದು ನನಗಾಗ ಗೊತ್ತಾಗುತ್ತಿರಲಿಲ್ಲ. ಇವತ್ತು ಹಿಂತಿರುಗಿ ನೋಡಿದಾಗ ನನಗೆ ಅರ್ಥವಾಗುತ್ತಿದೆ. ತಂದೆಯ ಪ್ರೀತಿಯನ್ನೇ ಎಲ್ಲ ಹುಡುಗರಲ್ಲಿ ಹುಡುಕುತ್ತಿದ್ದೆ. ಆದ್ದರಿಂದಲೇ ಬದುಕಿನಲ್ಲಿ ಪ್ರೀತಿ ನನಗೆ ಅಷ್ಟೊಂದು ಮುಖ್ಯ ಅನ್ನಿಸಿಬಿಟ್ಟಿತು.

ನನ್ನ ತಂದೆ ಕುಂದಾಪುರದ ಗುಡ್ಡೆಯಂಗಡಿಯವರು. ಸೌಮ್ಯ ಸ್ವಭಾವದವರು, ತುಂಬಾ ಸ್ಫುರದ್ರೂಪಿಯಾಗಿದ್ದರು. ಎಲ್ಲರೂ ನಾನು ನನ್ನ ತಂದೆಯ ಪಡಿಯಚ್ಚು ಎಂದೇ ಹೇಳುತ್ತಿದ್ದರು. ಆದರೆ ದುರದೃಷ್ಟವಶಾತ್, ನನ್ನ ಹೆತ್ತವರು ಬಹಳ ಬೇಗ ಬೇರೆಬೇರೆಯಾಗಿಬಿಟ್ಟರು. ಈ ಸಂದರ್ಭದಲ್ಲಿ ನನ್ನ ತಾಯಿ, ಇಡೀ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡು ನಮಗೆ ಒಳ್ಳೆಯ ಜೀವನವನ್ನು ಕಲ್ಪಿಸಬೇಕು ಎಂದು ಪಣ ತೊಟ್ಟರು. ಯಾವುದೇ ಕಾರಣಕ್ಕೂ ನನ್ನ ತಂದೆ ಆಗಲೀ, ತಾಯಿ ಆಗಲೀ ಒಬ್ಬರ ಬಗ್ಗೆ ಮತ್ತೊಬ್ಬರು ನಮ್ಮಲ್ಲಿ ವಿಷವನ್ನು ತುಂಬಲಿಲ್ಲ. ಆದರೆ ನಾವು ಬೆಳೆದಿದ್ದೆಲ್ಲ ತಾಯಿ, ಅಜ್ಜಿಯ ಜೊತೆಗೆ. ನನ್ನ ತಂದೆಯನ್ನು ಭೇಟಿಯಾಗಲು ನಾನು ಹಾಗೂ ನನ್ನ ತಂಗಿ ಪ್ರೀತಿ, ಹತ್ತಿರದ ದೇವಸ್ಥಾನಕ್ಕೆ ಹೋಗುತ್ತಿದ್ದೆವು.

naanemba parimaladha haadhiyali

ತಂಗಿ ಪ್ರೀತಿಯೊಂದಿಗೆ ನೀತು ಮತ್ತು ಪುಟ್ಟ ನೀತು

ಮಂಗಳೂರಿನಲ್ಲಿದ್ದಾಗ ನನ್ನ ಶಾಲಾ ದಿನಗಳಲ್ಲೇ ಅಜ್ಜಿಯನ್ನು ಕಳೆದುಕೊಂಡೆ. ಸಿಂಡಿಕೇಟ್ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿ ಬೆಂಗಳೂರಿಗೆ ವರ್ಗಾವಣೆ ತೆಗೆದುಕೊಂಡರು. ನನ್ನ ತಂಗಿ ಮತ್ತು ತಾಯಿ ನನ್ನ ಭವಿಷ್ಯದ ಬಗ್ಗೆ ಆಲೋಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದರು. ನಾನು ಕಲಾವಿದೆಯಾಗಿ ರೂಪುಗೊಳ್ಳಲು ಅವರಿಬ್ಬರ ಸಹಕಾರ ದೊಡ್ಡದು. ಆಶ್ಚರ್ಯವೆಂದರೆ ಇಲ್ಲಿಗೆ ಬಂದ ಎರಡೇ ದಿನಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಪುಣ್ಯ’ ಧಾರಾವಾಹಿಯಲ್ಲಿ ನನಗೆ ಮುಖ್ಯ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಉದಯ ಟಿವಿಯಲ್ಲಿ ಇದು ಪ್ರಸಾರವಾಗುತ್ತಿತ್ತು. ‘ರೇವತಿ’ ಎನ್ನುವ ಪಾತ್ರ. ಬಂಜೆ ಎಂದು ಸಮಾಜ ಹೀಗಳೆಯುವ ಪಾತ್ರ. ಇನ್ನೂ ಪಿಯುಸಿ ಓದುತ್ತಿದ್ದ ನನಗೆ ತುಂಬಾ ಪ್ರಬುದ್ಧವಾದ ಪಾತ್ರ ನಿಭಾಯಿಸುವ ಅವಕಾಶ. ಇದಾದ ಮೇಲೆ, ನನಗೆ ಸತತವಾಗಿ ಸಿನೆಮಾದಲ್ಲಿ ಅವಕಾಶ ಬರಲಾರಂಭಿಸಿದವು. ನೋಡನೋಡುತ್ತಿದ್ದಂತೆ ಪೂಜಾರಿ, ಗಾಳಿಪಟದಲ್ಲಿಯೂ ಅಭಿನಯಿಸಿದೆ. ರಾಜ್ಯ ಪ್ರಶಸ್ತಿಯೂ ಸಿಕ್ಕೇಬಿಟ್ಟಿತು.

ಸುಮಾರು 35 ಸಿನಿಮಾಗಳಲ್ಲಿ ಅಭಿನಯಿಸಿದೆ. ಆದರೆ ನನ್ನ ತಂದೆಯನ್ನು ಕಳೆದುಕೊಂಡ ನೋವು ಇದ್ದೇ ಇತ್ತು. ಯಾರದೋ ಮಾತು ಕೇಳಿ ನಾನು ಸರ್ಜರಿ ಮಾಡಿಸಿಕೊಂಡಿದ್ದು, ಹಾರ್ಮೋನ್ ಅಸಮತೋಲನದಿಂದಾಗಿ ತೂಕ ಹೆಚ್ಚಾಗಿದ್ದು, ಬಿಗ್ ಬಾಸ್ ನಂತಹ ರಿಯಾಲಿಟಿ ಷೋನಲ್ಲಿ ಭಾಗವಹಿಸಿದ್ದು, ಇವೆಲ್ಲವೂ ನನ್ನ ಐಡೆಂಟಿಟಿಯ ಹಿಂದಿರುವ ಬಹುಮುಖ್ಯ ಸಂಗತಿಗಳು ಎಂಬಂತೆ ಈ ತನಕವೂ ಈ ಸುತ್ತಮುತ್ತವೇ ಪ್ರಶ್ನೆಗಳನ್ನು ಸಂದರ್ಶನಲ್ಲಿ ಕೇಳುತ್ತಲೇ ಇರುತ್ತಾರೆ. ಆದರೆ ಇದರಾಚೆಗೆ ನನ್ನನ್ನು ಆತಂಕಕ್ಕೆ ದೂಡಿದ ಒಂದು ವಿಷಯವನ್ನು ನಿಮ್ಮೆಲ್ಲರ ಜೊತೆ ಈಗ ಹಂಚಿಕೊಳ್ಳುತ್ತಿದ್ದೇನೆ. 2012 ರಿಂದ ನನಗೆ ಒಬ್ಬಳೇ ಮಲಗಲು ಸಾಧ್ಯವೇ ಆಗುತ್ತಿರಲಿಲ್ಲ. ಯಾಕೆಂದರೆ  ನನ್ನ ಹತ್ತಿರ ಯಾವುದೋ ಒಂದು ಕಪ್ಪು ಬಣ್ಣದ ನೆರಳು ನಿದ್ದೆಯಲ್ಲಿ ಬಂದು ಹೋಗುತ್ತಿದೆ ಎನ್ನಿಸುತ್ತಿತ್ತು. ತುಂಬಾ ವಿಚಲಿತಳಾಗಿ ಭಯದಿಂದ ಎದ್ದುಬಿಡುತ್ತಿದ್ದೆ. ಕೊನೆಗೊಮ್ಮೆ ಅದಕ್ಕೆ ಕಾರಣವೂ ತಿಳಿಯಿತು. ಅದಕ್ಕೆ ನನ್ನ ತಂದೆಯ ಆಕಸ್ಮಿಕ ಸಾವಿನ ಹಿನ್ನೆಲೆಯಿತ್ತು. ಪರ್ಯಾಯ ಚಿಕಿತ್ಸಕರ ಸಲಹೆಯಂತೆ ಕೇರಳದ ಗುರುವಾಯೂರಪ್ಪ ದೇವಸ್ಥಾನಕ್ಕೆ ತಾಯಿಯೊಂದಿಗೆ ಭೇಟಿ ನೀಡಿದೆ. ಅದಾದ ಮೇಲೆ ನನ್ನ ಜೀವನದಲ್ಲಿ ಒಂದು ಹೊಸ ಅಧ್ಯಾಯವೇ ಶುರುವಾಯಿತು.

naanemba parimaladha haadhiyali

ನಾನು ನಡೆಯಬೇಕು ಎಂದುಕೊಂಡಿದ್ದ ದಾರಿಯಲ್ಲಿ ನನಗೆ ಗುರುಗಳೂ ಕಾಣಿಸಿಕೊಂಡರು. ‘ಶಮನಿಸಮ್’ ನನ್ನ ದಾರಿಯಾಯಿತು. ಶಮನಿಸಮ್ ಅಂದರೆ, ಭಾವಸಮಾಧಿಯಿಂದ ಶಕ್ತಿ ಪಡೆದು, ವ್ಯಕ್ತಿಯ ಮನೋದೈಹಿಕ ರೋಗಗಳನ್ನು ವಾಸಿ ಮಾಡುವುದು. ನಕಾರಾತ್ಮಕ ಶಕ್ತಿಯು ಯಾಕೆ ಈ ವ್ಯಕ್ತಿಯ ಜೀವಚೈತನ್ಯವನ್ನೇ ಆಯ್ಕೆ ಮಾಡಿಕೊಂಡಿತು, ಇದರ ಹಿಂದಿನ ಕಾರಣ ಏನು ಎನ್ನುವುದನ್ನು ಕಂಡುಹಿಡಿಯುವುದು ಮತ್ತು ಪ್ರಕೃತಿಯ ಆರಾಧನೆಯ ಮೂಲಕ ಇದಕ್ಕೆ ಉತ್ತರ ಕಂಡುಕೊಳ್ಳುವುದು. 2015ರಿಂದ ನನಗೆ ತುಂಬಾನೇ ಕನಸುಗಳು ಬೀಳಲು ಶುರುವಾದವು. ಆ ಕನಸುಗಳನ್ನು ನಾನು ನಿರ್ಲಕ್ಷಿಸುವ ಹಾಗಿರಲಿಲ್ಲ. ಏಕೆಂದರೆ ಆ ಕನಸುಗಳಿಗೂ ನನ್ನ ನಿಜಜೀವನಕ್ಕೂ ಏನೋ ಒಂದು ರೀತಿಯ ಸಂಬಂಧವಿರುತ್ತಿತ್ತು. ಹಲವಾರು ಸಂದೇಶಗಳು, ಮಾರ್ಗದರ್ಶನ ಎಚ್ಚರಿಕೆ ಕೂಡಾ ನನಗೆ ಕನಸಿನಿಂದಲೇ ಬರಲಾರಂಭಿಸಿದವು. ಹಾಗಾಗಿ ಕನಸಿನೊಳಗೆ ಪ್ರವೇಶಿಸಿ ಅದರ ಅರ್ಥ ಏನೆಂದು ತಿಳಿದುಕೊಳ್ಳುವುದು ನನಗೆ ತುಂಬಾನೇ ಮುಖ್ಯ ಆಗಿತ್ತು. ಹೀಗೆ ನನ್ನನ್ನು ನಾನು ಅರಿತುಕೊಳ್ಳುವ ಹಾದಿಯಲ್ಲಿ ಡ್ರೀಮ್​ ಟ್ರ್ಯಾಕಿಂಗ್ ಎಂಬ ವಿದ್ಯೆಯನ್ನೇ ಕಲಿಯಲು ಶುರುಮಾಡಿದೆ. ಶಮನಿಸಂನಲ್ಲಿ ಸಿದ್ಧಿ ಸಾಧಿಸಿದ ಪೌಲ್ ಮತ್ತು ನೀಲಮ್ ನನಗೆ ಗುರುಗಳಾದರು.

naanemba parimaladha haadhiyali

ಹಿರಿಯ ನಟ ಮೋಹನಲಾಲ್​ ಜೊತೆ ನೀತು

2020ರಲ್ಲಿ ನನ್ನ ಸೋಶಿಯಲ್ ಮೀಡಿಯಾ ಪೇಜಿನ ಮೂಲಕ ನಾನು ವೃತ್ತಿಪರ ಡ್ರೀಮ್ ಟ್ರ್ಯಾಕರ್ ಆಗಿ ಪರಿಚಯಿಸಿಕೊಂಡೆ. ಕಳೆದ ಆಗಸ್ಟ್​ನಲ್ಲಿ ನಾನು ಹಾಕಿದ್ದ ಒಂದು ವಿಡಿಯೋ ಜನರ ಗಮನ ಸೆಳೆಯಿತು. ಈತನಕವೂ ಜನರು ಸೆಷನ್​ಗೋಸ್ಕರ ಸಂಪರ್ಕಿಸುತ್ತಿರುತ್ತಾರೆ. ಈಗ ನನಗೆ ಖಚಿತವಾಗಿರುವ ವಿಷಯ ಏನೆಂದರೆ,  ನಮ್ಮ ದಾರಿ ಯಾವತ್ತೋ ರಚನೆಯಾಗಿರುತ್ತದೆ. ನಾವು ಧೈರ್ಯದಿಂದ ಆ ದಾರಿಯೊಳಗೆ ನಡೆಯಬೇಕಷ್ಟೇ. ನಮ್ಮ ಆತ್ಮದ/ಹೃದಯದ ಆಸೆಗೆ ತಕ್ಕಹಾಗೆ ಬದುಕಬೇಕು ಹೊರತು, ಸಮಾಜದ ದೃಷ್ಟಿಕೋನದಿಂದ ಖಂಡಿತ ಅಲ್ಲ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಏನಾದರೂ ಒಂದು ಶಕ್ತಿ ಇದ್ದೇ ಇರುತ್ತದೆ. ನಮ್ಮೆಲ್ಲರ ಶಕ್ತಿ ಒಗ್ಗೂಡಿಯೇ ಪ್ರಪಂಚ ಮುನ್ನಡೆಯುವುದು. ಇವತ್ತು ನಾನು ನಟಿ ಆಗಿರಬಹುದು, ಶಮಾನಿಕ್ ಪ್ರಾಕ್ಟೀಷನರ್ ಆಗಿರಬಹುದು, ನನ್ನ ಮನಸ್ಸಿನಲ್ಲಿ ನಾನು ಇನ್ನೂ ಮನೆಯ ಗೇಟ್ ಮೇಲೆ ನಿಂತು ಆಕಾಶ ನೋಡಿ ಹಾಡುತ್ತಿದ್ದಂತಹ ಹುಡುಗಿಯೇ. ಹೆಸರು, ಹಣ, ಐಶ್ವರ್ಯ, ಪ್ರೀತಿ, ದೇಶ-ವಿದೇಶ ಸುತ್ತಾಟ, ಇದೆಲ್ಲಾ ಎಷ್ಟೇ ಅನುಭವಿಸಿದರೂ ಕೂಡ ನಾನು ಯಾವತ್ತಿಗೂ ನನ್ನ ಹೆತ್ತವರ ಮಗಳು; ನೀತು!

ಇದನ್ನೂ ಓದಿ :ನಾನೆಂಬ ಪರಿಮಳದ ಹಾದಿಯಲಿ : ಹಡಗು ದಡ ಮುಟ್ಟಿತೇ ಎಂದು ಕೇಳುವವರು ದಾರಿಯ ಬಗ್ಗೆ ಯೋಚಿಸಲಾರರು

naanemba parimaladha haadhiyali series by actress neethu shetty

Published On - 4:42 pm, Sat, 24 April 21

ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ