Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ

‘ನಾನು ಸ್ವಇಚ್ಛೆಯಿಂದಲೇ ಅವಿವಾಹಿತೆ. ನನಗೆ ಸ್ವಕೇಂದ್ರಿತ ಬದುಕು ಅಪ್ಯಾಯಮಾನವೆನಿಸುತ್ತದೆ. ವೈವಾಹಿಕ ಬದುಕಿನಲ್ಲಿನ ಲೈಂಗಿಕತೆ ನನಗೆ ಹಿಂಸಾತ್ಮಕವಾಗಿ, ಪುರುಷಕೇಂದ್ರಿತವಾಗಿ ಶೋಷಣಾತ್ಮಕವಾಗಿ ಹಾಗೂ ಆಕ್ರಮಣಕಾರಿಯಾಗಿ ಕಂಡುಬರುತ್ತದೆ. ನಾನು ಸಂತಾನ ನಿರಪೇಕ್ಷಿತೆ ಕೂಡ. ನಮ್ಮ ಸಮಾಜದಲ್ಲಂತೂ ಲೈಂಗಿಕತೆ–ಗರ್ಭಧಾರಣೆ ಮುಂತಾದ ನಾಜೂಕಿನ ಸಂಗತಿಗಳ ಬಗ್ಗೆ ಪೂರ್ವನಿಯೋಜಿತವಾದ ಸಿದ್ಧ ಮಾದರಿಗಳನ್ನೇ ಒಪ್ಪಿ ನಡೆಯಬೇಕು, ಅದು ನನಗೆ ಸಮ್ಮತವಲ್ಲ, ವಿವಾಹದೊಳಗೆ ಕೂಡ ಅತ್ಯಾಚಾರ ನಡೆಯಬಲ್ಲ ಸಾಧ್ಯತೆಗಳನ್ನೂ ಮಾನ್ಯಮಾಡದ ನಮ್ಮ ಸಾಮಾಜಿಕ-ನ್ಯಾಯಾಂಗ ವ್ಯವಸ್ಥೆಗಳಲ್ಲಿ ಮಹಿಳೆಯರು ಎಷ್ಟು ಸುಖಿಗಳಾಗಿ ಸುರಕ್ಷಿತರಾಗಿರಬಲ್ಲರು? ನಿಮಗೇಕೆ ನನ್ನ ಖಾಸಗಿ ಆಯ್ಕೆಗಳನ್ನು ತಿಳಿದುಕೊಳ್ಳಲು ಇಷ್ಟು ತೆವಲು? ಹೀಗೆಂದು ಚೀರಿ ಹೇಳಬೇಕೆನಿಸುತ್ತದೆ.‘ ಡಾ. ಕೆ. ಎಸ್​. ವೈಶಾಲಿ

Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ
ಕೆ. ಎಸ್​. ವೈಶಾಲಿ
Follow us
ಶ್ರೀದೇವಿ ಕಳಸದ
|

Updated on:Mar 07, 2021 | 5:02 PM

ಒಳಗಿರುವ ಜೀವಚೈತನ್ಯಕ್ಕೆ ಲಿಂಗಬೇಧವುಂಟೆ?; ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿ ಇದೀಗ ನಿಮ್ಮೆಲ್ಲರ ಆಪ್ತ ಒಳಗೊಳ್ಳುವಿಕೆಯಿಂದಾಗಿ ರೂಪಾಂತರದ ಹಂತಕ್ಕೆ ಬಂದು ನಿಂತಿದೆ. ನೂರಾರು ವರುಷಗಳಿಂದ ಸುತ್ತಿಕೊಂಡಿರುವ ಎಡರು ತೊಡರುಗಳನ್ನೆಲ್ಲ ಕಿತ್ತೊಗೆದರೇ ನನ್ನೊಳಗಿನ ನಾನು ಪೂರ್ತಿಯಾಗಿ ಅರಳುವುದು, ಹೆಜ್ಜೆ ಕಿತ್ತಿಟ್ಟರೆ ಮಾತ್ರ ಸಹಜ ಗತಿಯಲ್ಲಿ ಚಲಿಸಲು ಸಾಧ್ಯವಾಗುವುದು ಎನ್ನುತ್ತಿದ್ದಾರೆ ನಮ್ಮ ನಡುವಿನ ದಿಟ್ಟ ಮಹಿಳೆಯರು. ತಮ್ಮ ಧೀಶಕ್ತಿಯಿಂದ ಸಮಾಜಕ್ಕೆ ತಕ್ಕ ಉತ್ತರಗಳನ್ನು ಕೊಡುತ್ತ ಬಂದಿರುವ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತ ಸಾಗುತ್ತಿರುವ ಅವರವರ ಪರಿಯನ್ನು ನಿಮ್ಮ ಮುಂದೆ ಇಡುತ್ತಿದ್ದಾರೆ. ಈ ಸರಣಿಯಲ್ಲಿ ನೀವೂ ಒಳಗೊಳ್ಳಬೇಕೇ? ದಯವಿಟ್ಟು ಬರೆಯಿರಿ tv9kannadadigital@gmail.com ಪರಿಕಲ್ಪನೆ: ಶ್ರೀದೇವಿ ಕಳಸದ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿರುವ ಡಾ. ಕೆ.ಎಸ್​. ವೈಶಾಲಿ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ಮತ್ತು ಅನುವಾದಕಿ. ಪಾಠ ಉಪನ್ಯಾಸಗಳು, ಆನ್​ಲೈನ್​ ಸೆಮಿನಾರುಗಳು, ಆನ್​ಲೈನ್​ ಸಂಗೀತ ಕಛೇರಿಗಳು ಎಂದು ಮುಳುಗಿಹೋಗಿದ್ದ ಅವರನ್ನೊಮ್ಮೆ ಈ ಸರಣಿಗಾಗಿ ಹಿಂದಿರುಗಿ ನೋಡಲು ಕೇಳಿಕೊಂಡಾಗ…

ಆಗ ನಾನಿನ್ನೂ ಹದಿನಾರರ ಹುಡುಗಿ. ಆಗಷ್ಟೇ ಕಪ್ಪು-ಬಿಳುಪಿನ ಟಿವಿಗಳು ಕಣ್ಮರೆಯಾಗುತ್ತ, ಕಲರ್ ಟಿವಿಗಳು ಕೆಲವರ ಮನೆಗಳಲ್ಲಿ ರಾರಾಜಿಸತೊಡಗಿದ್ದವು. ಮೊಬೈಲ್ ಫೋನಿನ ಹಾವಳಿಯಾಗಲೀ, ಮಾಹಿತಿ ತಂತ್ರಜ್ಞಾನದ ಆಸ್ಫೋಟದ ಬಿಸಿಯಾಗಲೀ, ಅಂತರ್ಜಾಲದ ನಿಬ್ಬೆರಗಾಗಿಸುವ ಅಸಂಖ್ಯಾತ ವಲಯಗಳಿಗಾಗಲೀ ತೆರೆದುಕೊಂಡಿರದಿದ್ದ, ಸಮಯ ನಿಧಾನವಾಗಿ ಹೊರಳುತ್ತಿದ್ದ ಕಾಲ. ಜ್ಞಾನಾರ್ಜನೆಗಾಗಿ, ವಿಷಯ ಸಂಗ್ರಹಣೆಗಾಗಿ ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನೇ ಆಶ್ರಯಿಸುತ್ತಿದ್ದ ಕಾಲಘಟ್ಟ. ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ ಎದುರುಗೊಂಡವರು ಸಿಮೋನ್ ದ ಬುವಾ! ಫ್ರೆಂಚ್​ ಸ್ತ್ರೀವಾದಿ ಚಿಂತಕಿ, ಅಸ್ತಿತ್ವವಾದಿ ತತ್ವಶಾಸ್ತ್ರಜ್ಞ ಜೀನ್ ಪಾಲ್ ಸಾರ್ತೃನ ಸಹಪಾಠಿ ಆಕೆ. ಸದಸ್ಯತ್ವ ಹೊಂದಿದ್ದ ಕ್ಲಬ್‍ವೊಂದರ ಗ್ರಂಥಾಲಯದಲ್ಲಿ ಅಕಸ್ಮಾತ್ ಆಗಿ ಕಣ್ಣಿಗೆ ಬಿದ್ದಿದ್ದು ಅವರ ‘ದಿ ಸೆಕೆಂಡ್ ಸೆಕ್ಸ್’ ಕೃತಿ. ಕುತೂಹಲದಿಂದ ಕೈಗೆತ್ತಿಕೊಂಡಿದ್ದೆ. ಆಗ ನನಗೆ ಸ್ತ್ರೀವಾದದ ಬಗ್ಗೆ ಏನೂ ತಿಳಿವಳಿಕೆ ಮೂಡಿರದಿದ್ದರೂ ಆಸಕ್ತಿಯಿಂದ ಓದಲಾರಂಭಿಸಿದೆ. ಆದರದು ಗಾಢವಾಗಿ ಆವರಿಸಿಕೊಂಡುಬಿಟ್ಟಿತು. ಆಕೆಯ ತರ್ಕಬದ್ಧ ನಿಲುವುಗಳು ನನ್ನನ್ನು ಆಯಸ್ಕಾಂತದಂತೆ ಆಕರ್ಷಿಸಿದವು.

ಸ್ತ್ರೀವಾದವು ಲಿಂಗ ಪ್ರಭೇದದ ಪರಿಕಲ್ಪನೆಗಳನ್ನು ನೋಡುವ ದೃಷ್ಟಿಕೋನದಲ್ಲಿಯೇ ದೂರಗಾಮಿನಿಯಾದ ಮೂಲಜಿಜ್ಞಾಸಿಕ ಪರಿವರ್ತನೆಗಳನ್ನು ತಂದಿದೆ. ಗಂಡು- ಹೆಣ್ಣೆಂಬ ವರ್ಗೀಕರಣ ದೈಹಿಕ ಭಿನ್ನತೆಗೆ ಸಂಬಂಧಿಸಿದ್ದಾದರೂ ಅವುಗಳಿಂದ ಪ್ರತೀತವಾದಂತೆ ಕಂಡುಬರುವ ಸ್ತ್ರೀಪುರುಷತ್ವವೆಂಬ ಲಿಂಗಪ್ರಭೇದವು ಸಾಮಾಜಿಕವಾಗಿ, ಚಾರಿತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕಟ್ಟಲ್ಪಟ್ಟ ಅರ್ಥಕಲ್ಪನೆಯಾಗಿದೆ ಎಂಬುದು ಸ್ತ್ರೀವಾದಿ ಚಿಂತಕಿಯರ ಅಭಿಪ್ರಾಯ. ಆದುದರಿಂದ ಗಂಡು-ಹೆಣ್ಣುಗಳ ನಡುವಿನ ದೈಹಿಕ ಭಿನ್ನತೆಗಳ ಬಗೆಗಿನ ಚರ್ಚೆಗಿಂತ, ಆ ಬುನಾದಿಯ ಮೇಲೆ ಸಾಮಾಜಿಕ ವಲಯದಲ್ಲಿ ತಾಂಡವವಾಡುತ್ತಿರುವ ಅಸಮಾನತೆಗಳು, ಲೈಂಗಿಕ ರಾಜಕಾರಣ ಮತ್ತು ಇವುಗಳ ಮಹತ್ವ-ಇವೇ ಮುಂತಾದವು ಸ್ತ್ರೀವಾದಿಗಳ ಕೇಂದ್ರ ಆಸಕ್ತಿಯ ವಿಷಯಗಳಾಗಿವೆ. ಸಿಮೋನ್ ದ ಬುವಾ ಹೇಳಿರುವಂತೆ ಸ್ತ್ರೀಯು ಮೂಲತಃ ರೂಪಿಸಲ್ಪಟ್ಟವಳು. ಹೆಣ್ಣು ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಗುತ್ತಾಳೆಯೇ ವಿನಃ ಯಾರೂ ಹೆಣ್ಣಾಗಿಯೇ ಹುಟ್ಟುವುದಿಲ್ಲ. ಈ ಬಗೆಯ ಸಮರ್ಥನೆಯು ರೂಢಿಗತವಾಗಿ, ತಲೆತಲಾಂತರದಿಂದ, ಸಹಜವೆಂದೂ, ಪರಿವರ್ತನಾತೀತವೆಂದು ತಿಳಿದ ಕಲ್ಪನೆಗಳನ್ನು ಪ್ರಶ್ನಿಸಲು ಮತ್ತು ಚಾರಿತ್ರಿಕವಾಗಿ ವಿಮರ್ಶಿಸಲು ಅಗತ್ಯವಾದ ನೈತಿಕ ಧೀಮಂತಿಕೆಯನ್ನು ಮಹಿಳೆಯರಿಗೆ ನೀಡಿದೆ.

naanemba parimaladha haadhiyali

ವೈಶಾಲಿ ಅವರ ಪುಸ್ತಕಗಳು

ನನ್ನ ಹದಿನಾರರ ವಯಸ್ಸಿನಿಂದಲೇ ನನ್ನ ಮೇಲೆ ಸ್ತ್ರೀವಾದಿ ಸಿದ್ಧಾಂತಗಳ ಪ್ರಭಾವ ಬಹಳ ತೀಕ್ಷ್ಣವೆನಿಸುವಷ್ಟೇ ಆಯಿತು. ಆಂಗ್ಲ ಸಾಹಿತ್ಯದ ವಿದ್ಯಾರ್ಥಿನಿಯಾಗಿದ್ದ ನನಗೆ ಸಾಹಿತ್ಯ-ಸಂಸ್ಕೃತಿಗಳ ವಲಯಗಳಲ್ಲಿನ ಲೈಂಗಿಕ ರಾಜಕೀಯವನ್ನು ಅನಾವರಣಗೊಳಿಸುವ ಸ್ತ್ರೀವಾದಿ ವಿಮರ್ಶಕಿಯರಾದ ಕೇಟ್ ಮಿಲೆಟ್, ಜರ್ಮೇನ್‍ ಗ್ರೀಯರ್ ಹಾಗೂ ಫ್ರೆಂಚ್ ಸ್ತ್ರೀವಾದಿ ಚಿಂತಕಿಯರ ಕೃತಿಗಳು ಆದರ್ಶವಾಗಿಬಿಟ್ಟಿದ್ದವು. ಅವು ನನ್ನಮನಸ್ಸನ್ನು ಪರಿಪೂರ್ಣವಾಗಿ ಸೂರೆಗೊಂಡಿದ್ದವು. ಪುರುಷ ಸಾರ್ವಭೌಮತ್ವವನ್ನು ಸಹಜವೆಂದು ಪುರಸ್ಕರಿಸುವ ನಮ್ಮ ಅನೇಕ ಧಾರ್ಮಿಕ ವಿಧಿಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕೌಟುಂಬಿಕ ವ್ಯವಸ್ಥೆ, ವಿವಾಹ, ತಾಯ್ತನ–ಇವೆಲ್ಲದರ ಬಗ್ಗೆ ಬಾಲ್ಯದಿಂದಲೇ ನನ್ನಲ್ಲಿ ಸುಪ್ತವಾಗಿ ಹೊಗೆಯಾಡುತ್ತಿದ್ದ ಅಸಮಾಧಾನದ ಕಿಡಿ ಇನ್ನಷ್ಟು ಪ್ರಬಲವಾಗಿ ಪ್ರಜ್ವಲಿಸುವಂತೆ ಮಾಡಿತು. ಇದಕ್ಕೆ ಪೂರಕವಾಗಿಯೇ ನಾನು ಮಾರ್ಗರೆಟ್ ಆಟ್‍ವುಡ್‍ಳ ಹತ್ತು ಕವನ ಸಂಕಲನಗಳನ್ನು ರ್ಯಾಡಿಕಲ್ ಹಾಗೂ ಫ್ರೆಂಚ್ ಸ್ತ್ರೀವಾದಿ ಸಿದ್ಧಾಂತಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಅಧ್ಯಯನವನ್ನು ಎಮ್.ಫಿಲ್ ಪದವಿಗೆ ಆಯ್ಕೆ ಮಾಡಿಕೊಂಡಿದ್ದೆ. ಅನಂತರ ನಾನು ಪಿಹೆಚ್. ಡಿ ಪ್ರಬಂಧವನ್ನು, ಫೆಮಿನಿಸ್ಟ್​ ಯುಟೋಪಿಯನ್ ಕಾದಂಬರಿಗಳು ಎಂಥಾ ವೈಶಿಷ್ಟ್ಯಪೂರ್ಣವಾದ ರೂಪಾಂತರಿ ಪಯಣಗಳಾಗಿ, ನಮ್ಮ ಸಮಕಾಲೀನ ಲಿಂಗಾಧಾರಿತ ಅಸಮಾನತೆಗಳನ್ನು ವಿಡಂಬನಾತ್ಮವಾಗಿ ಪರಿಶೋಧಿಸುತ್ತವೆಂಬುದರ ಬಗ್ಗೆ ಸಿದ್ಧಪಡಿಸಿದೆ. ಈ ಹಂತದಲ್ಲಿ ನಾನು ಫ್ರೆಂಚ್ ಭಾಷೆ -ಸಾಹಿತ್ಯಗಳನ್ನು ಅಲಯನ್ಸ್​ ಫ್ರಾಂಚೈಸ್​ನಲ್ಲಿ ಅಭ್ಯಸಿಸತೊಡಗಿ ಸ್ವಲ್ಪ ಸಮಯ ಫ್ರೆಂಚ್ ಅಧ್ಯಾಪಕಿಯಾಗಿಯೂ ಕೆಲಸ ಮಾಡಿದೆ. ಬಳಿಕ ಮೌಂಟ್‍ಕಾರ್ಮೆಲ್‍ ಕಾಲೇಜಿನಲ್ಲಿಇಂಗ್ಲಿಷ್ ಸಾಹಿತ್ಯದ ಉಪನ್ಯಾಸಕಿ ನಂತರ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿಅಧ್ಯಾಪಕಿಯಾಗಿ ನೇಮಕಗೊಂಡೆ.

ನಾನು ಸ್ವಇಚ್ಛೆಯಿಂದ ಅವಿವಾಹಿತೆ. ಭಾರತೀಯ ಸಮಾಜದಲ್ಲಿ ಇಂದಿಗೂ ಕೂಡ ಅವಿವಾಹಿತ ಮಹಿಳೆಯ ಬಗ್ಗೆ ಹಲವಾರು ಅಹಿತಕರ ಪೂರ್ವಗ್ರಹಗಳು,  ಪಕ್ಷಪಾತೀಯ ನಿಲುವುಗಳು ಹೇರಳವಾಗಿವೆ. ವಿಚ್ಛೇದಿತರಿರಬಹುದು, ಸಂಗಾತಿಯಿಂದ ಬೇರ್ಪಟ್ಟು ವಿಚ್ಛೇದನದ ಹಾದಿಯಲ್ಲಿರಬಹುದು ಅಥವಾ ಸಂಗಾತಿಯ ವಿಯೋಗದಿಂದ ನೊಂದಿರುವ ವಿಧವೆ/ವಿಧುರರಿರಬಹುದು. ಆದರೆ ಅವಿವಾಹಿತ ಮಹಿಳೆಯನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ಪುರುಷರಾಗಲೀ , ಮಹಿಳೆಯರಾಗಲೀ ಒಬ್ಬ ಅವಿವಾಹಿತ ಮಹಿಳೆಯ ವಿಷಯದಲ್ಲಿ ಮುಜುಗರಕ್ಕೊಳಗಾಗಿ ಬಿಡುತ್ತಾರೆ. ಹಲವಾರು ಬಾರಿ ಇದನ್ನು ಅನುಭವಿಸಿರುವ ನನಗೆ ಈ ಪ್ರತಿಕ್ರಿಯೆಗಳು ಒಮ್ಮೊಮ್ಮೆ ರೇಜಿಗೆ-ಕಿರಿಕಿರಿ ಹುಟ್ಟಿಸಿವೆ, ತಮಾಷೆಯಾಗಿಯೂ ಕಂಡಿವೆ. ಆದರೆ ಮಹಿಳೆಯೊಬ್ಬಳ ಅವಿವಾಹಿತ ಸ್ಥಿತಿಯನ್ನು ನಮ್ಮ ಸಮಾಜ ಸ್ವಾಭಾವಿಕವೆಂದು ಸ್ವೀಕರಿಸುವುದಿಲ್ಲವೆಂಬುದು ಸುಸ್ಪಷ್ಟ. ಅದರ ಸುತ್ತ ಅನೇಕ ಪುಕಾರುಗಳು, ವದಂತಿಗಳು, ಅಣಕ, ಪರಿಹಾಸ್ಯ, ಚುಚ್ಚು ಮಾತುಗಳು ಇತ್ಯಾದಿಗಳನ್ನು ಸಹಿಸಿ ಮುಗುಳ್ನಗುವುದನ್ನು ಅವಿವಾಹಿತ ಮಹಿಳೆಯರು ರೂಢಿಸಿಕೊಳ್ಳಬೇಕಾಗುತ್ತದೆ. ವಿವಾಹ, ಲೈಂಗಿಕ ಜೀವನ, ತಾಯ್ತನ–ಇವೆಲ್ಲ ಮಹಿಳೆಯ ಖಾಸಗಿ ವಿಚಾರಗಳು. ಆಕೆಯ ಆಯ್ಕೆಗೇ ಬಿಟ್ಟ ವಿಷಯಗಳು ಎನ್ನುವುದರ ಸಾಮಾನ್ಯ ತಿಳಿವಳಿಕೆ ಕೂಡ ನಮ್ಮಲ್ಲಿ ಅನೇಕ ಸುಸಂಸ್ಕೃತ, ವಿದ್ಯಾವಂತ , ಸುಶಿಕ್ಷಿತರೆನಿಸಿಕೊಂಡವರಿಗೆ ಗೊತ್ತಾಗುವುದೇ ಇಲ್ಲ.

naanemba parimaladha haadhiyali

ಪಂಡಿತ್ ವಿನಾಯಕ ತೊರವಿ ಶಿಷ್ಯಬಳಗದೊಂದಿಗೆ ಹದಿಹರೆಯದ ವೈಶಾಲಿ.

ಹೇಗೆ ಕಾಲಹರಣ ಮಾಡುತ್ತೀರಿ? ಅಯ್ಯೋ ಪಾಪ, ವಾರಾಂತ್ಯದಲ್ಲಿಒಂಟಿತನ ಕಾಡುವುದಿಲ್ಲವೇ? ಯಾಕೆ ನಿಮಗೆ ಮದುವೆಯಾಗಬೇಕು ಎಂದು ಅನಿಸಲೇ ಇಲ್ಲ?ಲೈಂಗಿಕ ಅತೃಪ್ತಿ ಕಾಡುವುದಿಲ್ಲವೇ? ಈ ಹಟಮಾರಿತನ ಬಿಟ್ಟು ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದರೆ ಒಂದು ಸುಂದರ ವೈವಾಹಿಕ ಬದುಕನ್ನು ಕಟ್ಟಿಕೊಳ್ಳಬಹುದಾಗಿತ್ತಲ್ಲವೇ? ಮುದ್ದಾದ ಒಂದೋ, ಎರಡೋ ಮಕ್ಕಳ ತಾಯಿಯಾಗಬಹುದಿತ್ತಲ್ಲವೇ? ಇನ್ನೂ ಸಮಯ ಮಿಂಚಿಲ್ಲ, ನೋಡಲು ಎಷ್ಟು ಸುಂದರವಾಗಿದ್ದೀರಲ್ಲಾ? ನಿಮಗೆ ಇನ್ನೂ ಯಾರಾದರೂ ಜೀವನ ಸಂಗಾತಿ ಸಿಗಬಹುದು ನೋಡಿ ಎಂದು ಉಪದೇಶ ನೀಡುವ ಬಂಧುಗಳು, ಕೆಲವೊಮ್ಮೆ ದಿಗ್ಭ್ರಾಂತಿ ಹುಟ್ಟಿಸುತ್ತಾರೆ. ಅಕಡೆಮಿಕ್ ವಲಯಗಳೂ ಇದಕ್ಕಿಂತ ಬಹಳ ಭಿನ್ನವಾಗೇನಿಲ್ಲ. ಅಸಾಂಪ್ರದಾಯಿಕ ಜೀವನಶೈಲಿಯನ್ನೆಂದೂ ಒಪ್ಪಿಕೊಳ್ಳದ ಅಥವಾ ಅಂತಹ ಆಯ್ಕೆಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂಬುದು ಅಚ್ಚರಿಯೆನಿಸಿದರೂ ದಿಟ. ಅನೇಕ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವ ನನಗೆ ಎಷ್ಟೋ ಬಾರಿ, ‘ಮೇಡಂ, ತುಂಬಾ ಸೊಗಸಾಗಿ ಮಾತನಾಡುತ್ತೀರಿ ನಿಮ್ಮ ಮನೆಯವರು ಏನು ಮಾಡುತ್ತಾರೆ? ನಿಮ್ಮ ಮಕ್ಕಳಂತೂ ಬಹಳ ಪ್ರತಿಭಾವಂತರಿರಬಹುದುಅಲ್ವಾ?’ ಎಂದಾಗ ನಾನು ಕಿರುನಗೆ ಬೀರುತ್ತ ‘ನಾನು ಅವಿವಾಹಿತೆ’ ಎಂದು ಉತ್ತರಿಸಿದಾಗ ಮುಜುಗರ-ಗೊಂದಲಗಳಿಂದ ಬೆಪ್ಪಾಗಿ ಹೋಗುತ್ತಾರೆ.

ಹೀಗೆಯೇ ಒಂದು ಅಂತಾರಾಷ್ಟ್ರೀಯ ಸಮಾವೇಶದಲ್ಲಿ ನಾನು ವೇದಿಕೆಯಲ್ಲಿದ್ದಾಗ ಒಬ್ಬ ನಿವೃತ್ತ ಕುಲಪತಿ ನನಗೆ ಇಂತಹುದೇ ಬಗೆಯ ಪ್ರಶ್ನೆಗಳನ್ನು ಕೇಳಿ ನಾನು ಅವಿವಾಹಿತೆಯೆಂದು ಉತ್ತರಿಸಿದಾಗ ‘ಅಯ್ಯೋ ಎಂಥಾ ದುರಂತ’ ಎಂದು ಉದ್ಗರಿಸಿದ್ದರು. ನಾನು ಆತನ ಈ ಅಸಂಸ್ಕೃತ ಪ್ರತಿಕ್ರಿಯೆಯಿಂದ ನಖಶಿಖಾಂತ ಉರಿದುಹೋಗಿದ್ದೆ. ಕೆಲವೊಮ್ಮೆ ನನ್ನ ತಾಳ್ಮೆಯನ್ನು ಪರೀಕ್ಷಿಸುವ ಸಂದರ್ಭಗಳಲ್ಲಿ ನನಗೆ ಜೋರಾಗಿಯೇ ‘ನಾನು ಸ್ವಇಚ್ಛೆಯಿಂದಲೇ ಅವಿವಾಹಿತೆ. ನನಗೆ ಸ್ವಕೇಂದ್ರಿತ ಬದುಕು ಅಪ್ಯಾಯಮಾನವೆನಿಸುತ್ತದೆ. ವೈವಾಹಿಕ ಬದುಕಿನಲ್ಲಿನ ಲೈಂಗಿಕತೆ ನನಗೆ ಹಿಂಸಾತ್ಮಕವಾಗಿ, ಪುರುಷಕೇಂದ್ರಿತವಾಗಿ ಶೋಷಣಾತ್ಮಕವಾಗಿ ಹಾಗೂ ಆಕ್ರಮಣಕಾರಿಯಾಗಿ ಕಂಡುಬರುತ್ತದೆ. ನಾನು ಸಂತಾನ ನಿರಪೇಕ್ಷಿತೆ ಕೂಡ. ನಮ್ಮ ಸಮಾಜದಲ್ಲಂತೂ ಲೈಂಗಿಕತೆ–ಗರ್ಭಧಾರಣೆ ಮುಂತಾದ ನಾಜೂಕಿನ ಸಂಗತಿಗಳ ಬಗ್ಗೆ ಪೂರ್ವನಿಯೋಜಿತವಾದ ಸಿದ್ಧ ಮಾದರಿಗಳನ್ನೇ ಒಪ್ಪಿ ನಡೆಯಬೇಕು, ಅದು ನನಗೆ ಸಮ್ಮತವಲ್ಲ, ವಿವಾಹದೊಳಗೆ ಕೂಡ ಅತ್ಯಾಚಾರ ನಡೆಯಬಲ್ಲ ಸಾಧ್ಯತೆಗಳನ್ನೂ ಮಾನ್ಯಮಾಡದ ನಮ್ಮ ಸಾಮಾಜಿಕ-ನ್ಯಾಯಾಂಗ ವ್ಯವಸ್ಥೆಗಳಲ್ಲಿ ಮಹಿಳೆಯರು ಎಷ್ಟು ಸುಖಿಗಳಾಗಿ ಸುರಕ್ಷಿತರಾಗಿರಬಲ್ಲರು? ನಿಮಗೇಕೆ ನನ್ನ ಖಾಸಗಿ ಆಯ್ಕೆಗಳನ್ನು ತಿಳಿದುಕೊಳ್ಳಲು ಇಷ್ಟು ತೆವಲು?’ ಎಂದು ಚೀರಿ ಹೇಳಬೇಕೆನಿಸುತ್ತದೆ.

naanemba parimaladha haadhiyali

ರಾಜ್ಯಪ್ರಶಸ್ತಿ ಸ್ವೀಕರಿಸುವಾಗಿನ ಸಂದರ್ಭ

ನನ್ನಂತಹ ಮೇಲ್ವರ್ಗದ ವಿದ್ಯಾವಂತ, ಉದ್ಯೋಗಸ್ಥ ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಗೇ ಇಷ್ಟು ಕಸಿವಿಸಿಯಾದರೆ ಯಾರೋ ಕೆಳಮಧ್ಯಮ ವರ್ಗದ ಸಣ್ಣ ಕೆಲಸವನ್ನೇ ಜೀವನೋಪಾಯಕ್ಕಾಗಿ ಅವಲಂಬಿಸರುವ ಅವಿವಾಹಿತ ಮಹಿಳೆಯ ಪಾಡು ಏನಿರಬಹುದು ಎಂದು ಊಹಿಸಿಯೇ ಹೌಹಾರಿದ್ದೇನೆ. ಆಗೆಲ್ಲಾ ನನ್ನ ಮನಸ್ಸಿನ ಅಕ್ಷಿಪಟಲದ ಮುಂದೆ ಸುಪ್ರಸಿದ್ಧ ಮರಾಠಿ ನಾಟಕಕಾರ ವಿಜಯ್‍ ತೆಂಡೂಲ್ಕರ್​ ಅವರ ನಾಟಕ ‘ಸದ್ದು! ವಿಚಾರಣೆ ನಡೆಯುತ್ತಿದೆ’; ನಾಯಕಿ ಲೀಲಾ ಬೆನಾರೆ ಸುಳಿದಾಡುತ್ತಾಳೆ. ನಮ್ಮ ಮಧ್ಯಮವರ್ಗದ ಬೂಟಾಟಿಕೆ, ಸೋಗಿನ ಮೌಲ್ಯಗಳು ಜಿಗುಪ್ಸೆ ತರಿಸುತ್ತವೆ. ‘ಅಕ್ಕ ನೀನು ಎಷ್ಟು ಗಟ್ಟಿಗಿತ್ತಿ! ಒಳ್ಳೆ ಕೆಲಸದಲ್ಲಿದ್ದೀಯ, ಆರಾಮಾಗಿ ನಿನ್ನ ಸ್ವಂತಮನೆ, ಕಾರು ಇಟ್ಟುಕೊಂಡು ಬಾಳುವೆ ಮಾಡ್ತೀಯ. ನಿನ್ನಅಪ್ಪ ಅಮ್ಮ ಎಷ್ಟು ಗಟ್ಟಿ ಕುಳ. ಅನುಕೂಲಸ್ಥರು , ನಿನ್ನ ಆಯ್ಕೆಯನ್ನ ನಿನಗೇ ಬಿಟ್ಟಿದ್ದಾರೆ, ನೀನು ಮದುವೆಯಾಗಿಲ್ಲ ಅನ್ನುವದರ ಬಗ್ಗೆ ಒಂದು ದಿನವೂ ನಿನ್ನ ಗೋಳುಹೊಯ್ದುಕೊಂಡಿಲ್ಲ. ಸ್ವಲ್ಪ ದಿನ ಅಪಾರ್ಟ್‍ಮೆಂಟಿನಲ್ಲಿ ಇರ್ತೀಯ, ಸಂಗೀತ ಕಛೇರಿ, ಪ್ರವಾಸ ಅದೂ-ಇದು ಅಂತ ತಿಂಗಳುಗಟ್ಟಲೇ ಬೀಗ ಹಾಕಿ ಅಪ್ಪ ಅಮ್ಮನ ಜೊತೆಗೂ ಹೋಗಿ ಹಾಯಾಗಿ ಇದ್ದು ಬಿಡ್ತೀಯ. ಎಷ್ಟು ಮಜ ಅಕ್ಕ! ಆದರೆ ನನಗೆ ಆ ದರಿದ್ರ ಮೂದೇವಿ ಗಂಡನ ಜೊತೆ ಸಂಸಾರ ಮಾಡಕ್ಕೆ ಇಷ್ಟ ಅಲ್ಲ ಅಕ್ಕ. ಆ ಹಾಳಾದವನ ಜೊತೆಗೆ ಮಲಗಕ್ಕೆ ನನಗೆ ಅಸಹ್ಯ ಆಗತ್ತೆ. ಆದರೆ ನನಗೆ ಆ ಸ್ವಾತಂತ್ರ್ಯ ಯಾರು ಕೊಡ್ತಾರೆ? ನಾನೊಬ್ಳೆಇದ್ದರೆ ನಮ್ಮ ಕಾಲನಿಯಲ್ಲಿರುವ ಬೀದಿ ಕಾಮಣ್ಣಗಳು ನನ್ನ ಹರಿದು ಮುಕ್ಕಿ ಬಿಡ್ತಾರಕ್ಕ’ ಹೀಗೆಂದು ಬಿಕ್ಕಿದ ನನ್ನ ಮನೆಗೆಲಸದಾಕೆ ಕೋಮಲಳನ್ನು ಸಂತೈಸಲಾಗದೇ ನಾನೂ ಆಕೆಯ ಅಸಹಾಯಕತೆಗೆ ಕಣ್ಣೀರಾಗಿದ್ದೆ. ನನ್ನ ಆಸೆ, ಕನಸುಗಳು,  ಆಕಾಂಕ್ಷೆಗಳಿಗೆ ಎಂದೂ ಅಡ್ಡಿಪಡಿಸದೆ, ನನ್ನ ಮೇಲೆ ವಾತ್ಸಲ್ಯದ ಮಹಾಪೂರವನ್ನೇ ಹರಿಸಿರುವ, ನಾನು ಅವಿವಾಹಿತೆಯಾಗಿರುವುದನ್ನು ಎಂದೂ ಮೂದಲಿಸದ, ನನ್ನ ಮೇಲೆ ಒತ್ತಡ ಹೇರದ ಅಮ್ಮ ಅಪ್ಪನ ಬಗ್ಗೆ ಬಹಳ ಹೆಮ್ಮೆಯೆನಿಸಿತ್ತು.

ಈ ಎಲ್ಲ ಪ್ರಶ್ನೆಗಳೊಂದಿಗೆ, ವಿಹ್ವಲಗಳೊಂದಿಗೆ, ಸಮರ್ಥನೆಗಳೊಂದಿಗೆ ನನ್ನನ್ನೀವತ್ತು ಶಾಂತ ಸರೋವರದಂತೆ ಕಾಪಾಡುತ್ತಿರುವುದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ. ಸುಮಾರು ಐದು ವರ್ಷದವಳಿದ್ದಾಗಲೇ ಶಿವಮೊಗ್ಗದಲ್ಲಿ ನನ್ನ ತಂದೆತಾಯಿ ಬೇಗಮ್ ಪರವೀನ್ ಸುಲ್ತಾನಾ ಅವರ ಕಛೇರಿಗೆ ಕರೆದೊಯ್ದಿದ್ದರು. ಮೂರು ಮುಕ್ಕಾಲು ತಾಸು ಆ ಕೇಳ್ಮೆಯಲ್ಲಿ ತಲ್ಲೀನಳಾಗಿದ್ದರ ಫಲವೇ ನನ್ನನ್ನೀವತ್ತು ಸಪ್ತಸ್ವರಗಳು ಶಾಶ್ವತವಾಗಿ ಹಿಡಿದಿಟ್ಟುಕೊಂಡಿರುವುದು. ಪರ್ವೀನರ ಕಛೇರಿ ಅನಿಬದ್ಧ ಆಲಾಪದಿಂದ ಪ್ರಾರಂಭವಾಗಿ ಹಂತಹಂತವಾಗಿ ರಾಗವನ್ನು ಅನಾವರಣಗೊಳಿಸುವ ಪ್ರಕ್ರಿಯೆ, ಖಯಾಲ್ ಬಂದಿಶ್‍ಗಳ ನಿರೂಪಣೆ, ತಬಲಾದೊಡನೆ ಆವರ್ತನಗಳಲ್ಲಿ ಸಂಚರಿಸುತ್ತ, ಚಮತ್ಕಾರವೆಂಬಂತೆ ಸಮ್​ಗೆ ಬಂದು ಸೇರುವ ವೈಖರಿಯನ್ನು ಎವೆಯಿಕ್ಕದೆ ಕೇಳುತ್ತ ಪುಳಕಿತಳಾಗಿದ್ದೆ. ಆಗಲೇ ನನ್ನ ತಾಯಿ ನನ್ನೊಳಗಿಳಿದ ಸಂಗೀತದ ರುಚಿಯನ್ನು ಗ್ರಹಿಸಿದರು. ಗುರುಗಳ ಹುಟುಕಾಟ ಆರಂಭವಾಯಿತು. ವಾತ್ಸಲ್ಯಮಯಿ ಪಂಡಿತ್ ಶೇಷಾದ್ರಿ ಗವಾಯಿಗಳು ಸಿಕ್ಕರು. ಗದುಗಿನ ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಡಾ. ಪುಟ್ಟರಾಜ ಗವಾಯಿಗಳ ನೇರ ಶಿಷ್ಯರಾದ ಅವರು 25 ವರ್ಷಗಳತನಕ ಸುದೀರ್ಘ ಪಾಠ ಮಾಡಿದರು. ನನ್ನ ಮನೆಯ ಬಳಿಯೇ ಇದ್ದ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯುತ್ತಿದ್ದಅಸಂಖ್ಯಾತ ಸಂಗೀತ ಕಛೇರಿಗಳನ್ನು ಕೇಳುತ್ತ ಸಂಗೀತವೇ ಜೀವನವನ್ನಾಗಿಸಿಕೊಂಡೆ. ಮುಂದೆ ನಾನು ಸ್ವಲ್ಪ ಕಾಲ ಅತ್ರೌಲಿ-ಜೈಪುರ್ ಘರಾಣೆಯ ಮೇರುಗಾಯಕಿ ಕಿಶೋರಿ ಅಮೋನ್​ಕರ್ ಅವರ ಬಳಿ ಕಲಿಯುವ ಅಪೇಕ್ಷೆ ವ್ಯಕ್ತಪಡಿಸಿದಾಗ, ನನ್ನ ಗುರುಗಳೇ ನನ್ನನ್ನು ಹುರಿದುಂಬಿಸಿ ಕಳುಹಿಸಿಕೊಟ್ಟರು. ಮುಂದೆ ಗುರುಗಳೊಡನೆ ಇಂಗ್ಲೆಂಡ್, ಅಮೆರಿಕದಲ್ಲಿ ಸಂಗೀತ ಕಛೇರಿಗಳನ್ನು ನೀಡುವ ಸೌಭಾಗ್ಯವೂ ಒದಗಿತು. ನಾಲ್ಕು ದಶಕಗಳ ನನ್ನ ಸಂಗೀತ ಕಲಿಕೆಯಲ್ಲಿ ರಾಜ್ಯದಾದ್ಯಂತ ಸಂಚರಿಸಿದೆ. ಮುಂಬಯಿ ಮೊದಲಾದ ಪ್ರಮುಖ ನಗರಗಳಲ್ಲಿ, ಅಮೆರಿಕ, ಕೆನಡಾ, ಇಂಗ್ಲೆಂಡ್, ಥೈಲ್ಯಾಂಡ್ ಮೊದಲಾದ ದೇಶಗಳಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡಿದೆ. ಸೋದಾಹರಣದ ಪ್ರಾತ್ಯಕ್ಷಿಕೆಗಳನ್ನು ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ಮಂಡಿಸಿದೆ.

naanemba parimaladha haadhiyali

ಕಛೇರಿಯೊಂದರಲ್ಲಿ

ಇದೆಲ್ಲದರೊಂದಿಗೆ ನನ್ನ ಸಾಹಿತ್ಯದ ಓದು ಬರೆಯುವಂತೆಯೂ ಪ್ರೇರೇಪಿಸತೊಡಗಿತು. ಪುಸ್ತಕಗಳೂ ಪ್ರಕಟವಾದವು. ಟರ್ಕಿಷ್‍ ಕಾದಂಬರಿಕಾರ ನೋಬೆಲ್ ಪ್ರಶಸ್ತಿ ವಿಜೇತ ಒರ್ಹಾನ್ ಪಮುಕ್‍ ಅವರ 600 ಪುಟಗಳ ರಾಜಕೀಯ ಕಾದಂಬರಿ ‘ಸ್ನೋ’, ಕನ್ನಡದಲ್ಲಿ ‘ಹಿಮ’ವಾಗಿ ಪ್ರಕಟಗೊಂಡಿತು. ಇದರ ಅನುವಾದ ಒಂದು ಅವಿಸ್ಮರಣೀಯ ಅನುಭವ.

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿಯಾಗಿ ಹಾಗೂ ವಿಶ್ವವಿದ್ಯಾಲಯದಲ್ಲಿಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಎರಡು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿರುವ ನಾನು ಎರಡನ್ನೂ ತುಂಬುಪ್ರೀತಿಯಿಂದ ಅಪ್ಪಿಕೊಂಡಿದ್ದೇನೆ. ನನ್ನ ಸಂಗಾತಿಗಳೇ ಆಗಿಬಿಟ್ಟರುವ ಈ ವೃತ್ತಿಗಳು ನನಗೆ ಅಪಾರವಾದ ಸಂತಸದ ಗಳಿಗೆಗಳನ್ನು ತಂದಿವೆ, ತರುತ್ತಿವೆ. ವಿಭಿನ್ನ ಬದುಕನ್ನು ಬದುಕುತ್ತಿರುವ ನಾನು ಘನತೆಯಿಂದ, ಸ್ವಾಭಿಮಾನದಿಂದ ಅದನ್ನು ನಿರ್ವಹಿಸುತ್ತಿರುವುದರ ಬಗ್ಗೆ ಧನ್ಯತೆ ನನಗಿದೆ.

ಇದನ್ನೂ ಓದಿ: Women Empowerment; ನಾನೆಂಬ ಪರಿಮಳದ ಹಾದಿಯಲಿ: ಇನ್ನಾದರೂ ನಿಲ್ಲಿಸುವಿರೇ ಹೂ ಅರಳಿದ್ದಕ್ಕೆ ಸಾಕ್ಷಿ ಹುಡುಕುವುದನ್ನು

Published On - 4:58 pm, Sun, 7 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ