ವೃತ್ತಿ ಮತ್ತು ಗಂಭೀರ ಆಸಕ್ತಿಗಳನ್ನು ಒಟ್ಟಾಗಿಸಿಕೊಂಡು ನೆಲದ ಸಂಸ್ಕೃತಿಗೆ, ಸಾಮುದಾಯಿಕ ಶಕ್ತಿಗೆ ಹೊಸ ಸಾಧ್ಯತೆಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಮ್ಮ ಇಂದಿನ ಪೀಳಿಗೆ ಅಂತರ್ಜಾಲ ಸಂಬಂಧಿತ ಚಟುವಟಿಕೆಗಳಲ್ಲಿ ಹೆಚ್ಚು ಒಳಗೊಳ್ಳುತ್ತಿದೆ. ಅದಕ್ಕೆದರಾಗುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಆಸಕ್ತಿ ವಹಿಸುತ್ತಿದೆ. ಆ ಪೈಕಿ ಬೆಂಗಳೂರಿನ ಸಾಫ್ಟ್ವೇರ್ ತಂತ್ರಜ್ಞ ಓಂಶಿವಪ್ರಕಾಶ್ ಎಚ್.ಎಲ್ ಪ್ರಮುಖರ ಸಾಲಿನಲ್ಲಿ ನಿಲ್ಲುತ್ತಾರೆ. ಭಾಷೆ ಮತ್ತು ತಾಂತ್ರಿಕತೆಗೆ ಸಂಬಂಧಿಸಿದ ಕೆಲ ಮೊದಲುಗಳಿಗೂ ಇವರು ಕಾರಣರಾಗಿದ್ದಾರೆ. ಇದೀಗ ಜ್ಞಾನದ ಸೇವಕರು ಸಮುದಾಯ ಸಹಭಾಗಿತ್ವ ಯೋಜನೆಯಡಿ 6000ಕ್ಕೂ ಹೆಚ್ಚೂ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಿ ಇಂಟರ್ನೆಟ್ ಆರ್ಕೈವ್ನಲ್ಲಿ ಲಭ್ಯವಾಗಿಸಿದ್ದಾರೆ.
ನಾನಿರುವುದು ಬೆಂಗಳೂರಿನಲ್ಲಿ. ಮೂಲತಃ ಸಾಫ್ಟ್ವೇರ್ ಉದ್ಯೋಗಿ. ನನ್ನ ತಂದೆ ಜನರಲ್ ಸ್ಟೋರ್ ನಡೆಸುತ್ತಿದ್ದರು. ನಾನು ಶಾಲೆಗೆ ಸೇರಿದ ಮೇಲೆ ಪಠ್ಯಪುಸ್ತಕಗಳನ್ನೇ ಓದಿದ್ದು ಹೆಚ್ಚು. ತೆನಾಲಿರಾಮ, ಅಕ್ಬರ್ ಬೀರಬಲ್ ಕಥೆಗಳು, ಗೋವಿನಹಾಡು ಯಾರು ಬರೆದರು, ಈ ಕವಿತೆ ಯಾರದು ಇಂಥ ಸಂಗತಿಗಳಿಗಷ್ಟೇ ನನ್ನ ಇತರೇ ಓದು ಸೀಮಿತವಾಗಿತ್ತು. ಮನೆಯಲ್ಲಿ ಪತ್ರಿಕೆ ಓದಲು ಹೇಳುತ್ತಿದ್ದರು. ಹಾಗಾಗಿ ಸಾವಿರಾರು ಸುಭಾಷಿತಗಳನ್ನು ದಿನಪತ್ರಿಕೆಗಳಿಂದ ಕತ್ತರಿಸಿಟ್ಟುಕೊಳ್ಳುತ್ತಿದ್ದೆ. ಗೋಡೆಯ ಮೇಲೆ ಅಂಟಿಸುತ್ತಿದ್ದೆ. ಇಟ್ಟು ಇಟ್ಟು ಗೆದ್ದಲು ಹಿಡಿಯುವಷ್ಟು ಸಂಗ್ರಹಿಸಿದ್ದೆ. ಒಟ್ಟಾರೆಯಾಗಿ ಸಾಹಿತ್ಯದ ಓದಿಗೆ ಅಂತಹ ವಾತಾವರಣ ಇರಲಿಲ್ಲವೆಂದೇ ಹೇಳಬೇಕು.
ಪಿಯುಸಿಗೆ ಬಂದಾಗ ಗ್ರಂಥಾಲಯಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಯಿತು. ಪಠ್ಯಗಳನ್ನೂ ಗ್ರಂಥಾಲಯದ ಪುಸ್ತಕಗಳ ಮೇಲೆಯೇ ಅವಲಂಬಿಸಿದೆ. ಎನ್ಐಐಟಿ ಯಲ್ಲಿ ಬಾಲಸುಬ್ರಹ್ಮಣ್ಯಂ ಎಂಬ ನನ್ನ ಗುರುಗಳು, ವಾರಾಂತ್ಯಕ್ಕೆ ನನ್ನನ್ನು ಪುಸ್ತಕದಂಗಡಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅವರಿಂದಲೇ ವೈವಿಧ್ಯ ಓದಿನ ಹವ್ಯಾಸ ಶುರುವಾಯಿತು. ಆಗ ಅವರೇ ಕೆಲ ಪುಸ್ತಕಗಳನ್ನು ಕೊಟ್ಟು ಓದಲು ತಿಳಿಸುತ್ತಿದ್ದರು. ಹೀಗೆ ನನ್ನ ಪಠ್ಯೇತರ ಓದು ಪ್ರಾರಂಭವಾಯಿತು. ನಂತರ ನೌಕರಿಗೆ ಸೇರಿದ ನಂತರ ನಾನಾಗಿಯೇ ಪುಸ್ತಕಗಳನ್ನು ಖರೀದಿಸಲು ಪ್ರಾರಂಭಿಸಿದೆ. ಸಾಫ್ಟ್ವೇರ್ ಕ್ಷೇತ್ರಕ್ಕೆ ಸೇರಿದ ಮೇಲಂತೂ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿದೆ. ಓದುತ್ತಾ ಓದುತ್ತಾ ಬರೆಯಬೇಕು ಎನ್ನಿಸಿತು. ಕನ್ನಡದಲ್ಲಿ ಬ್ಲಾಗ್ ಬರೆಯಲು ಶುರುಮಾಡಿದೆ. ಆಗ ಪುಸ್ತಕ ಬರೀ ಓದುವುದಕ್ಕೆ ಮತ್ತು ಬರೆಯುವುದಕ್ಕಷ್ಟೇ ಅಲ್ಲ ಎನ್ನುವುದು ಕ್ರಮೇಣ ಅರ್ಥವಾಗಿ ಡಿಜಿಟೈಜೇಷನ್ ಬಗ್ಗೆ ಆಸಕ್ತಿ ಮೂಡಿತು. ವಿಕಿಪೀಡಿಯಾ, ಫ್ರೀ ಸಾಫ್ಟ್ವೇರ್ ಚಳವಳಿಯ ಕೆಲಸಗಳಲ್ಲಿ ನನ್ನ ಸ್ನೇಹಿತರೊಂದಿಗೆ ಭಾಗಿಯಾದೆ. ವಿಕಿಪೀಡಿಯಾದಲ್ಲಿ ಕನ್ನಡದಲ್ಲಿ ಒಂದು ಲೇಖನ ಅಥವಾ ಮಾಹಿತಿ ಬರೆದಾದ ಮೇಲೆ ಉಲ್ಲೇಖಿತ ಪುಸ್ತಕಗಳನ್ನು ನಮೂದಿಸುವುದು ಹೇಗೆ? ಎಂಬ ಯೋಚನೆ ಶುರುವಾಯಿತು. ಹೀಗೆ ಕನ್ನಡ ಮತ್ತು ತಾಂತ್ರಿಕತೆಗಳೆರಡೂ ಹಗಲುರಾತ್ರಿ ನನ್ನೊಳಗೆ ಹೊಕ್ಕು ಎದುರಾಗುವ ಒಂದೊಂದು ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವುದರಲ್ಲೇ ಹೆಚ್ಚು ಸಮಯ ವ್ಯಯಿಸತೊಡಗಿದೆ. ಇದೇ ನನ್ನ ಮುಖ್ಯ ಆಸಕ್ತಿಯೂ ಆಯಿತು.
ಆಗ ರೂಪುಗೊಂಡಿದ್ದೇ ಸಮೂಹ ಸಂಚಯ ಪ್ರಾಜೆಕ್ಟ್. ಸಂಚಯ ಮತ್ತು ಸಂಚಿ ಫೌಂಡೇಷನ್ ಒಟ್ಟಾಗಿ ಕೆಲಸ ಶುರುಮಾಡಿತು. ಏಕೆಂದರೆ ಪ್ರಾಜೆಕ್ಟ್ನ ಉದ್ದೇಶ ಮುಖ್ಯವೇ ಹೊರತು ತಂಡ ಅಥವಾ ಗುಂಪು ಎಂದು ಗುರುತಿಸಿಕೊಳ್ಳದೆ ಸಮುದಾಯ ಶಕ್ತಿ ಎಂಬಂತೆ ಕೆಲಸ ಮಾಡಬೇಕು ಎಂಬ ಉದ್ದೇಶ ನನ್ನ ಮತ್ತು ನನ್ನೊಂದಿಗಿರುವ ಸಮಾನ ಮನಸ್ಕರದಾಗಿತ್ತು. ಮೊದಲು ‘ವಚನ ಸಂಚಯ’ ಪ್ರಾಜೆಕ್ಟ್ ಮುಗಿಸಿದೆವು. ನಂತರ ಸಮೂಹ ಸಂಚಯದಿಂದ 6,000 ಕನ್ನಡ ಪುಸ್ತಕಗಳ ತಾಂತ್ರಿಕ ವಿವರವನ್ನಷ್ಟೇ ದಾಖಲಿಸುವ ಪ್ರಯತ್ನ ಮಾಡಿದೆವು. ಈ ಪರಿಣಾಮವಾಗಿ ಕನ್ನಡ ಪುಸ್ತಕಗಳ ಬಗ್ಗೆ ಮೂಲ ಮಾಹಿತಿಯಾದರೂ ಇಂಟರ್ನೆಟ್ನಲ್ಲಿ ದೊರಕುವಂತಾಯಿತು. ಈ ತನಕ 25,000 ಕನ್ನಡ ಪುಸ್ತಕಗಳಿಗೆ ಸರ್ಚ್ ಸೌಲಭ್ಯವನ್ನು ಈ ಪ್ರಾಜೆಕ್ಟಿನಡಿ ಕಲ್ಪಿಸಲಾಗಿದೆ.
2019 ನಂತರ ಸಂಚಯದ ಸಮುದಾಯದ ಕೆಲಸಗಳಲ್ಲಿ ಜ್ಞಾನದ ಸೇವಕರು – ServantsOfKnowledge ಯೋಜನೆಯ ಮೂಲಕ ಪುಸ್ತಕಗಳ ಡಿಜಿಟೈಜೇಷನ್‌ಗೆ ಹೊಸ ಸಾಧ್ಯತೆ ಕಂಡುಕೊಳ್ಳಲು ಸಾಧ್ಯವಾಯಿತು. ಇಂಟರ್ನೆಟ್ ಆರ್ಕೈವ್ ಆವಿಷ್ಕಾರದ ಸ್ಟೇಟ್ ಆಫ್ ಆರ್ಟ್ ಸ್ಕ್ಯಾನರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಉಪಯೋಗಿಸದೇ ಹಾಗೇ ಇದೆ ಎನ್ನುವುದು ತಿಳಿಯಿತು. ಅದನ್ನು ಬೆಂಗಳೂರಿಗೆ ತಂದಿದ್ದ ಅಮೆರಿಕದ ಕಂಪ್ಯೂಟರ್ ವಿಜ್ಞಾನಿ, ಆರ್ಕೈವಿಸ್ಟ್ ಡಾ. ಕಾರ್ಲ್ ಮಲಮದ್ ಅವರನ್ನು ಸಂಪರ್ಕಿಸಿ, ನಮ್ಮ ಕನ್ನಡದ ಕೆಲಸಗಳಿಗೆ ಇದನ್ನು ಸಮುದಾಯದ ಭಾಗವಾಗಿ ಬಳಸಿಕೊಳ್ಳುವ ಬಗ್ಗೆ ವಿವರಿಸಲಾಯಿತು. ತಕ್ಷಣ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಿತು. ಈ ಫಲವಾಗಿಯೇ ಸಾವಿರಾರು ಪುಸ್ತಕಗಳು ಡಿಜಿಟಲೀಕರಣಕ್ಕೆ ಒಳಪಡುವ ಪ್ರಕ್ರಿಯೆ ಶುರುವಾಗಿದ್ದು. ಈ ಯೋಜನೆಯ ಮೂಲಕ ಇದುವರೆಗೂ 6125 ಕ್ಕೂ ಹೆಚ್ಚು ಪುಸ್ತಕಗಳನ್ನು ಡಿಜಿಟಲೀಕರಿಸಿದ್ದೇವೆ. ಸುಮಾರು 16 ಭಾಷೆಗಳ ಪುಸ್ತಕಗಳು ಇಲ್ಲಿ ಓದಲು ಲಭ್ಯ. 2021 ರ ಕಡೆಯ ಭಾಗದಿಂದ ಚೆನೈನ ರೋಜಾ ಮುತ್ತಯ್ಯ ಲೈಬ್ರರಿ ಹಾಗೂ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲೂ ಡಿಜಿಟಲೀಕರಣದ ಕೆಲಸಗಳನ್ನು ಪ್ರಾರಂಭಿಸಿದ್ದು ದಿನವೊಂದಕ್ಕೆ ಸುಮಾರು 8 ಸಾವಿರ ಪುಟಗಳ ಸ್ಕ್ಯಾನಿಂಗ್ ಆಗುತ್ತಲಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ನಮಗೆ ದೊರಕಿದ ಪುಸ್ತಕಗಳು, ಕೃಷ್ಣಾನಂದ ಕಾಮತರ ಛಾಯಾಚಿತ್ರಗಳು, ಸ್ಲೈಡ್‌ಗಳು, ಬಿ. ಎಸ್. ಮಾಧವ ರಾವ್ ಹಾಗೂ ಶ್ರೀನಿವಾಸ ಹಾವನೂರರ ಖಾಸಗೀ ಲೈಬ್ರರಿಗಳನ್ನು ಹಂತಹಂತವಾಗಿ ಡಿಜಿಟಲೀಕರಣ ಮಾಡುತ್ತಾ ಬರುತ್ತಿದ್ದೇವೆ.
ServantsOfKnowledge ಯೋಜನೆಯ ಅಡಿಯಲ್ಲಿ ಪಾ.ವೆಂ. ಆಚಾಯರ್, ಟಿ. ಆರ್. ಅನಂತರಾಮು, ಓ. ಎಲ್ ನಾಗಭೂಷಣ ಸ್ವಾಮಿ, ಪಾಲಹಳ್ಳಿ ವಿಶ್ವನಾಥ್, ಪಂ. ಚನ್ನಪ್ಪ ಎರೇಸೀಮೆ, ಬಿ. ಎಚ್. ಶ್ರೀಧರ, ಕೆ. ವಿ. ಸುಬ್ಬಣ್ಣ, ಗೌರೀಶ ಕಾಯ್ಕಿಣಿ, ಕುಡ್ಪಿ ವಾಸುದೇವ ಶೆಣೈ ಅವರ ಒಂದಾಣೆ ಮಾಲೆ, ಎ. ಪಿ. ಮಾಲತಿ, ಡಾ. ಆರ್. ವಿ. ಬಂಡಾರಿ, ಹೀಗೆ ಅನೇಕರ ಸಮಗ್ರ ಸಾಹಿತ್ಯ ಕನ್ನಡಿಗರಿಗೆ ಆನ್ಲೈನ್ನಲ್ಲಿ ಲಭ್ಯವಾಗುತ್ತಿವೆ. ಇವುಗಳೊಂದಿಗೆ 50 ವರ್ಷಗಳ ಕಸ್ತೂರಿ, 20 ವರ್ಷಗಳ ನೀನಾಸಂ ಮಾತುಕತೆ, ನವಕರ್ನಾಟಕದ ಹೊಸತು, ನಗುವ ನಂದ, ಸಂಚಯ, ಸಂವಾದ, ಸಾಕ್ಷಿ, ರುಜುವಾತು ಹೀಗೆ ಹತ್ತು ಹಲವು ಮಾಸಿಕಗಳೂ, ಪತ್ರಿಕೆಗಳೂ ದೊರೆಯುತ್ತಿವೆ. ಕೆಲವೊಂದು ಅತ್ಯಮೂಲ್ಯ ಕನ್ನಡ ಸಾಹಿತ್ಯಗಳೂ ದೊರಕಿವೆ. ಶಂಕರ ಆರ್ಟ್ಸ್ ಮತ್ತು ಕಾರ್ಮಸ್ ಕಾಲೇಜು ನವಲಗುಂದ ನಮ್ಮೊಡನೆ ಅನೇಕ ಮಹತ್ವದ ಪುಸ್ತಕಗಳನ್ನು ಹಂಚಿಕೊಂಡಿದೆ.
ಈ ಎಲ್ಲ ಪ್ರಕ್ರಿಯೆಗಳ ನಡುವೆಯೇ ಕನ್ನಡದ ಪುಸ್ತಕಗಳ ಐಎಸ್ಬಿಎನ್ ಕೋಡ್ ಬಗ್ಗೆ ಯೋಚನೆ ಶುರುವಾಯಿತು. ಓದುಗರು ಕ್ಷಣದಲ್ಲಿಯೇ ಪುಸ್ತಕದ ಮೂಲ ವಿವರ, ವಿಮರ್ಶೆ, ಆನ್ಲೈನ್ ಹಂಚಿಕೆ ಇತ್ಯಾದಿಗಳನ್ನು ಸುಲಭವಾಗಿ ಪತ್ತೆ ಹಚ್ಚುಬಹುದಾದ ತಂತ್ರವಿದು. ಇದರ ದತ್ತಸಂಚಯ ಕನ್ನಡದಲ್ಲಿಲ್ಲ. ಈ ದಿಕ್ಕಿನತ್ತಲೂ ಸಂಚಯ ತೊಡಗಿದ್ದು ಐಎಸ್ಬಿಎನ್ ಸಂಚಯ ಕನ್ನಡಕ್ಕೆ ದೊರೆಯಲಿದೆ. ಕನ್ನಡದ ಪುಸ್ತಕಗಳನ್ನು ಹುಡುಕುವುದು ಇದರಿಂದ ಸುಲಭವಾಗಲಿದೆ.
ಇದರ ನಡುವೆ, ಕನ್ನಡದಲ್ಲಿ ಹೊಸತಾಗಿ ಪುಸ್ತಕ ಬರೆಯುತ್ತಿರುವವರಿಗೆ, ತಂತ್ರಜ್ಞಾನವನ್ನು ಮುದ್ರಣಕ್ಕೆ ಒಗ್ಗಿಸಿಕೊಳ್ಳಲು ತಯಾರಿರುವ ಲೇಖಕರು, ಪ್ರಕಾಶಕರಿಗೆ ತಾಂತ್ರಿಕ ಸಹಕಾರದ ಮೂಲಕ ಪುಸ್ತಕಗಳನ್ನು ಸಿದ್ಧಪಡಿಸಲು Techfiz Inc https:techfiz.com ಇಂಕ್ & ವೀವ್ ಇ-ಪುಸ್ತಕ ಅಭಿಯಾನ ಪುಸ್ತಕ ಅಭಿಯಾನ ಪ್ರಾರಂಭಿಸಿದೆವು. ಪುಸ್ತಕ ಪ್ರಕಟಿಸುವ ಯಾರೂ ಈ ಮೂಲಕ ತಾಂತ್ರಿಕ ಸಲಹೆಗಳನ್ನು ಪಡೆದುಕೊಳ್ಳಬಹುದು. ಕೆಲವೇ ನಿಮಿಷಗಳಲ್ಲಿ ಪುಸ್ತಕ ಮುದ್ರಣಕ್ಕೂ, ಇ ಬುಕ್ ಆವೃತ್ತಿಗೂ ಸಿದ್ಧವಾಗಿಬಿಡುತ್ತದೆ. ಈ ಟೆಕ್ ಪ್ಲ್ಯಾಟ್ಫಾರ್ಮ್ನಡಿ ಐವತ್ತು ಪುಸ್ತಕಗಳು ಪ್ರಕಟಗೊಂಡಿವೆ. ಗೂಗಲ್ ಪ್ಲೇ ಬುಕ್ ಅಕೌಂಟ್ ಹೊಂದಿರುವವರಿಗೆ ಪುಸ್ತಕ ಜಗತ್ತಿನಾದ್ಯಂತ ಖರೀದಿಗೆ ಸಿಗುತ್ತದೆ. ಬೇರೆ ಇ ಪುಸ್ತಕದ ಅಂಗಡಿಗಳಲ್ಲೂ ಪುಸ್ತಕ ಮಾರುವ ಸ್ವಾತಂತ್ರ್ಯವೂ ಲೇಖಕರಿಗೆ/ಪ್ರಕಾಶಕರಿಗೆ ದೊರೆಯುತ್ತದೆ.
ಪುಸ್ತಕ ಸಂಗ್ರಹ ಪ್ರೀತಿ ಮತ್ತು ತಂತ್ರಜ್ಞಾನ ಒಂದುಗೂಡಿ ನನ್ನನ್ನು ಇಂದು ಹೀಗೆ ರೂಪಿಸಿದೆ.
https:sanchaya.orgprojectkannada-digitization-project
https:archive.org ನಲ್ಲಿ ServantsOfKnowlege ಸರ್ಚ್ ಕೊಟ್ಟರೆ ನಾವು ಡಿಜಿಟಲೀಕರಿಸಿರುವ ಎಲ್ಲಾ ಪುಸ್ತಕಗಳು ಸಿಗುತ್ತವೆ.
ಇದನ್ನೂ ಓದಿ :Books Day 2021 : ನನ್ನ ಸಮಯವೆನ್ನುವುದು ಮತ್ತೆ ನನಗೀಗ ಸಿಕ್ಕಿದೆ
Published On - 8:18 pm, Fri, 23 April 21