Books Day 2021: ಮೆಜೆಸ್ಟಿಕ್​, ಬಳೆಪೇಟೆಯ ಫುಟ್​ಪಾತ್​ಗಳೇ ನನ್ನ ಓದಿನ ಹಸಿವನ್ನು ಪೊರೆಯುತ್ತಿದ್ದವು

|

Updated on: Apr 23, 2021 | 2:46 PM

‘ನನ್ನ ತಾಯಿ ಅನಕ್ಷರಸ್ಥೆ. ಆದರೆ ಆಕೆಗೆ ಪತ್ರಿಕೆಗಳಲ್ಲಿ ಏನು ಬರುತ್ತದೆ ಎನ್ನುವ ಕುತೂಹಲ. ಕನ್ನಡಪ್ರಭದಲ್ಲಿ ಭೈರಪ್ಪನವರ ಗೃಹಭಂಗ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಅದನ್ನು ತಪ್ಪದೇ ತಾಯಿಗಾಗಿ ಜೋರಾಗಿ ಓದಿ ಹೇಳುತ್ತಿದ್ದೆ. ಅಕ್ಕಂದಿರು ಮನೆಯ ಹಿರಿಯರೆಲ್ಲರಿಗಾಗಿ ಅನಕೃ, ತರಾಸು ಅವರ ಕಾದಂಬರಿಗಳನ್ನು ಓದಿ ಹೇಳುತ್ತಿದ್ದರು. ಇಂಥ ಓದಿನ ವಾತಾವರಣ ನನಗಿತ್ತು.‘ ಪ್ರಕಾಶ ಕಂಬತ್ತಳ್ಳಿ

Books Day 2021: ಮೆಜೆಸ್ಟಿಕ್​, ಬಳೆಪೇಟೆಯ ಫುಟ್​ಪಾತ್​ಗಳೇ ನನ್ನ ಓದಿನ ಹಸಿವನ್ನು ಪೊರೆಯುತ್ತಿದ್ದವು
ಅಂಕಿತ ಪುಸ್ತಕದ ಪ್ರಕಾಶ ಕಂಬತ್ತಳ್ಳಿ
Follow us on

ಪುಸ್ತಕಪ್ರಿಯರಾದ ಯಾರೂ ಬೆಂಗಳೂರಿಗೆ ಕಾಲಿಟ್ಟ ಮೇಲೆ ಮುಗಿಯಿತು, ಮೊದಲು ಅವರು ಬೆಳೆಸಿಕೊಳ್ಳುವುದೇ ಪುಸ್ತಕದಂಗಡಿಗಳೊಂದಿಗೆ ಸಂಬಂಧವನ್ನು. ಅಲ್ಲಿಂದ ಸಮಾನ ಆಸಕ್ತರ ಒಡನಾಟಗಳು ಶುರುವಾಗುತ್ತವೆ. ಬದುಕಿನ ಜವಾಬ್ದಾರಿ ತಿರುವುಗಳೊಂದಿಗೆ ಕನಸುಗಳು ನೇಯ್ದುಕೊಳ್ಳುತ್ತವೆ. ಅನಿವಾರ್ಯತೆಗಳು ಸಾಹಸಕ್ಕಿಳಿಯುವಂತೆ ಮಾಡುತ್ತವೆ. ಹಲವರು ಓದುಗರಾಗಿಯೇ ಉಳಿಯುತ್ತಾರೆ, ಕೆಲವರು ಬರಹಗಾರರಾಗಿ ಮಾರ್ಪಾಡಾಗುತ್ತಾರೆ. ಮತ್ತೂ ಕೆಲವರು ಪ್ರಕಾಶಕರಾಗಿಯೂ. ಹಾಗಿದ್ದರೆ ದಾವಣಗೆರೆಯ ಕಂಬತ್ತಳ್ಳಿಯವರಾದ ಪ್ರಕಾಶ ಅವರು ಬೆಂಗಳೂರಿಗೆ ಯಾಕಾಗಿ ಬಂದರು, ಅಂಕಿತವನ್ನು 25ರ ಹರೆಯಕ್ಕೆ ಮುಟ್ಟಿಸಿರುವುದರ ಹಿನ್ನೆಲೆ ಏನು, ಅವರು ಪ್ರಕಾಶನೋದ್ಯಮಕ್ಕೆ ಇಳಿದದ್ದು ಆಕಸ್ಮಿಕವೇ, ಅನಿವಾರ್ಯವೇ?  

ನನ್ನ ಬಾಲ್ಯ ಕಳೆದಿದ್ದು ದಾವಣಗೆರೆಯ ಕಂಬತ್ತಳ್ಳಿಯಲ್ಲಿ. ತಂದೆ ಶಿಕ್ಷಕರಾಗಿದ್ದರಿಂದ ನಮ್ಮ ಮನೆಯಲ್ಲಿ ಓದಿನ ವಾತಾವರಣ ಸಹಜವಾಗಿಯೇ ಇತ್ತು. ಆದರೆ ಬಡತನ. ಪುಸ್ತಕ ಕೊಳ್ಳಲು ಹಣವಿರುತ್ತಿರಲಿಲ್ಲ. ಅಣ್ಣಂದಿರೆಲ್ಲ ಕೆಲಸಕ್ಕೆ ಸೇರಿದ ಮೇಲೆಯೇ ನಮ್ಮ ಮನೆಗೆ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳು ಬರಲಾರಂಭಿಸಿದವು. ದಾವಣೆಗೆರೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹದಿನಾರನೇ ವಯಸ್ಸಿಗೆ ಬೆಂಗಳೂರಿನ ಎನ್​ಜಿಇಎಫ್ ಗೆ ಸೇರಿಕೊಂಡೆ. ಬರುತ್ತಿದ್ದ ಸ್ಟೈಪೆಂಡ್ ಹಣದಲ್ಲಿ ಹೊಸ ಪುಸ್ತಕ ಕೊಳ್ಳಲಾಗುತ್ತಿರಲಿಲ್ಲ. ಏನು ಮಾಡುವುದು? ಒಂದುತಿಂಗಳು ಕಾಯ್ದು  ಬಳೇಪೇಟೆಯಲ್ಲಿ ಹಳೇಪುಸ್ತಕದಂಗಡಿಗಳಲ್ಲಿ, ಮೆಜೆಸ್ಟಿಕ್​ನ ಫುಟ್​ಪಾತ್​ಗಳಲ್ಲಿ ಹಳೇ ಸುಧಾ, ತರಂಗ, ಮಯೂರ, ತುಷಾರ, ಕಸ್ತೂರಿಯನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದೆ. ಲೈಬ್ರರಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಎನ್​ಜಿಇಎಫ್​ನಲ್ಲೇ ಕೆಲಸವೂ ಸಿಕ್ಕಾಗ ಕ್ರಮೇಣ ಪುಸ್ತಕಗಳನ್ನು ಖರೀದಿಸುತ್ತ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿದೆ.

ಇನ್ನೊಂದು ವಿಷಯ ಹೇಳುವುದನ್ನು ಮರೆತೆ. ನನ್ನ ತಾಯಿ ಅನಕ್ಷರಸ್ಥೆ. ಆದರೆ ಆಕೆಗೆ ಪತ್ರಿಕೆಗಳಲ್ಲಿ ಏನು ಬರುತ್ತದೆ ಎನ್ನುವ ಕುತೂಹಲ. ಕನ್ನಡಪ್ರಭದಲ್ಲಿ ಭೈರಪ್ಪನವರ ಗೃಹಭಂಗ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಅದನ್ನು ತಪ್ಪದೇ ತಾಯಿಗಾಗಿ ಜೋರಾಗಿ ಓದಿ ಹೇಳುತ್ತಿದ್ದೆ. ಅಕ್ಕಂದಿರು ಮನೆಯ ಹಿರಿಯರೆಲ್ಲರಿಗಾಗಿ ಅನಕೃ, ತರಾಸು ಅವರ ಕಾದಂಬರಿಗಳನ್ನು ಓದಿ ಹೇಳುತ್ತಿದ್ದರು. ಇಂಥ ಓದಿನ ವಾತಾವರಣ ನನಗಿತ್ತು. ನಂತರ ಎನ್​ಜಿಇಎಫ್​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಲೇ ಹೌಸ್ ಮ್ಯಾಗಝೀನ್ ಸಹಸಂಪಾದಕನಾದೆ. ಡ್ರಾಮಾಟಿಕ್ಸ್​ನಲ್ಲಿ ಪದವಿಯನ್ನೂ ಪೂರೈಸಿದೆ. ಆಗ ರಂಗಭೂಮಿಯ ಬಗ್ಗೆ ಇದ್ದದ್ದು ಇದೊಂದೇ ಪದವಿ ಸೆಂಟ್ರಲ್ ಕಾಲೇಜಿನಲ್ಲಿ. ಮುಖ್ಯಮಂತ್ರಿ ಚಂದ್ರು, ಬಿ.ವಿ. ರಾಜಾರಾಮ್, ನಾಗಾಭರಣ ಕೆಲವೇ ಕೆಲವರು ಈ ಪದವಿ ಓದಿದ್ದಾರೆ. ಆನಂತರ ರಾತ್ರಿಪಾಳಿ ಮಾಡುತ್ತ ಎಂ.ಎ ಕೂಡ ಮುಗಿಸಿದೆ.

ಬೆಂಗಳೂರಿನ ಗಾಂಧೀ ಬಾಝಾರಿನಲ್ಲಿರುವ ಅಂಕಿತ ಪುಸ್ತಕ.

ಬರಗೂರು ರಾಮಚಂದ್ರಪ್ಪ, ಕೆ.ವಿ. ನಾರಾಯಣ, ಕಾಳೇಗೌಡ ನಾಗಾವರ ನಮಗೆಲ್ಲ ಮೇಷ್ಟ್ರಾಗಿದ್ದರು. ನಂತರ ಸೆಂಟ್ರಲ್ ಕಾಲೇಜಿನಲ್ಲಿ ಭಾಷಾಂತರ ವಿಭಾಗಕ್ಕೆ ಕೆಲಸಕ್ಕೆ ಸೇರಿಕೊಂಡೆ. ಹೀಗೆ ಮತ್ತಷ್ಟು ಪುಸ್ತಕದ, ಸಾಹಿತಿಗಳ ಒಡನಾಟ ಬೆಳೆಯಿತು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದಲ್ಲಿ ಸಹಾಯಕ ನಿರ್ದೇಶಕನಾದೆ. ಆಗಲೇ ಪಿಎಚ್​.ಡಿ ಕೂಡ ಅರ್ಧಕ್ಕೆ ನಿಲ್ಲಿಸಿದೆ. ಆದರೆ ಬೇರೆ ಬೇರೆ ಕಾರಣಗಳಿಗೋಸ್ಕರ ಆ ಕೆಲಸವನ್ನೂ ಬಿಟ್ಟು ಮತ್ತೆ ಬೆಂಗಳೂರಿಗೆ ಬಂದೆ. ನಿರ್ದೇಶಕ ಟಿ. ಎನ್. ಸೀತಾರಾಮ್ ಅವರೊಂದಿಗೆ ಧಾರಾವಾಹಿಗಳಿಗೆ ಕೆಲಸ ಮಾಡಲು ಶುರುಮಾಡಿದೆ. ಸಂಭಾಷಣೆ ಬರೆಯುವುದರೊಂದಿಗೆ ಸಹಾಯಕ ನಿರ್ದೇಶಕನಾಗಿಯೂ ಅನುಭವ ಪಡೆದುಕೊಂಡೆ. ನಿರ್ದೇಶಕ ಪಿ.ಶೇಷಾದ್ರಿ ಮತ್ತು ನಾಗೇಂದ್ರ ಷಾ ಜೊತೆಗೂಡಿ ಸ್ವಲ್ಪ ಕಾಲ ಈ ಅನುಭವ ಪಡೆದುಕೊಂಡೆ.

ಪಿಎಚ್​.ಡಿ ಅರ್ಧಕ್ಕೆ ನಿಂತರೂ ರೀಸರ್ಚ್ ಪೇಪರ್ ಪುಸ್ತಕವಾಗಿ ಪ್ರಕಟಿಸಬೇಕು ಎನ್ನುವ ಇರಾದೆ ಬಹಳ ಇತ್ತು. ಪ್ರಕಟಿಸುವ ವಿಷಯವಾಗಿ ಯಾವ ಪ್ರಕಾಶಕರೂ ಭರವಸೆ ಕೊಡಲಿಲ್ಲ. ಕೊನೆಗೆ ನಾನೇ ಯಾಕೆ ಪ್ರಕಟಿಸಬಾರದು ಎಂದು ತೀರ್ಮಾನಿಸಿ ರಂಗವಿಹಾರ ಎನ್ನುವ ನನ್ನ ಮೊದಲ ಪುಸ್ತಕವನ್ನು ನಾನೇ ಪ್ರಕಟಿಸಿದೆ. ನಂತರ ವಾಸವಿ ಕಾಲೇಜಿನ ಪ್ರಾಧ್ಯಾಪಕ ಎಚ್​. ಎನ್​. ಮುರಳೀಧರ ಅವರ ಪುಸ್ತಕವನ್ನೂ ಪ್ರಕಟಿಸಿದೆ. ಆದರೆ ಅಲ್ಲಿಯತನಕ ಪ್ರಕಾಶನ ಮಾಡುವ ಉದ್ದೇಶ ಖಂಡಿತ ನನಗಿರಲಿಲ್ಲ. ನಮ್ಮ ಪುಸ್ತಕಗಳನ್ನು ಜಿ.ಎಸ್​. ಶಿವರುದ್ರಪ್ಪ, ಲಕ್ಷ್ಮೀನಾರಾಯಣಭಟ್ಟ, ಎಚ್​. ಎಸ್. ವೆಂಕಟೇಶಮೂರ್ತಿಯವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಅಂದಿನಿಂದ ಸಾಹಿತಿಗಳ ಒಡನಾಟ ಶುರುವಾಯಿತು. ಆದರೆ ಪ್ರಕಟಿಸಿದ ಪುಸ್ತಕಗಳಿಗೆ ಮಾರಾಟ ವ್ಯವಸ್ಥೆ ಕಲ್ಪಿಸುವುದು ಹೇಗೆ? ಆಗಲೇ ಅಂಕಿತ ಹುಟ್ಟಿಕೊಂಡಿದ್ದು. ಆಗಿನ ಕಾಲದಲ್ಲಿ ಹೆಚ್ಚೆಚ್ಚು ಪುಸ್ತಕಗಳು ಪ್ರಕಟವಾಗುತ್ತಿದ್ದರೂ ಒಟ್ಟಾರೆಯಾಗಿ ಗುಣಮಟ್ಟದ ಕೊರತೆ ಇದೆ ಎನ್ನಿಸುತ್ತಿತ್ತು. ಹಾಗಾಗಿ ಒಟ್ಟಾರೆಯಾಗಿ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಬೇಕು ಎನ್ನುವ ಯೋಚನೆಯಲ್ಲಿ ಅಂಕಿತ ಹಲವು ಪ್ರಥಮಗಳಿಗೆ ಕಾರಣವಾಯಿತು. ಅಂಕಿತ ಪುಸ್ತಕ 25 ವಸಂತಗಳನ್ನು ಕಳೆದಿದೆ. ನನ್ನ ಪತ್ನಿ ಪ್ರಭಾ ಕೂಡ ಕೈಗೂಡಿಸಿದರು. ಸದ್ಯ ಕೊರೋನಾ ಕಾರಣದಿಂದ ಅಂಗಡಿಯೂ ಬಂದ್. ಪರಿಸ್ಥಿತಿ ಸರಿಹೋಗುವ ತನಕ ಏನಿದ್ದರೂ ಆನ್​ಲೈನ್​ ಮಾರಾಟ; ankitapustaka.com

ಇದನ್ನೂ ಓದಿ :New Book ; ಅಚ್ಚಿಗೂ ಮೊದಲು : ತನ್ನ ತಿಳಿವಳಿಕೆಗೆ ಅನ್ಯದ ಮುಖವಾಡ 

Published On - 1:25 pm, Fri, 23 April 21