New Book ; ಅಚ್ಚಿಗೂ ಮೊದಲು : ತನ್ನ ತಿಳಿವಳಿಕೆಗೆ ಅನ್ಯದ ಮುಖವಾಡ

‘ಸಾವಿರಾರು ವರ್ಷಗಳ ಅವಧಿಯಲ್ಲಿ, ‘ಹ್ಯೂಮನ್ ಕಂಡೀಷನ್’ ಎನ್ನುವುದು ಹೆಚ್ಚಿನ ಪ್ರಮಾಣದಲ್ಲಿ ಬದಲಾಗಿಲ್ಲವೆಂದೇ ದಿವಾಣಜಿ ಹೇಳುತ್ತಾರೆ. ಏಕೆಂದರೆ ಸಾಮಾಜಿಕ ಚಲನಶೀಲತೆ ಮತ್ತು ಮನುಷ್ಯ ಸ್ವಭಾವದ ಚಿರಂತನತೆಗಳ ಜೋಡಿಯನ್ನು ಅವರು ಗುರುತಿಸುತ್ತಾರೆ. ಆದ್ದರಿಂದ ಬದಲಾವಣೆಯು ಕೇವಲ ಕಾಸ್ಮೆಟಿಕ್ ಆದುದು. ಬೇಟೆಯಾಗುವವರು ಮತ್ತು ಬೇಟೆಯಾಡುವವರು ಅದಲುಬದಲಾಗಬಹುದೇ ವಿನಾ ಬೇಟೆಯೆಂಬ ಪ್ರಕ್ರಿಯೆಗೆ ಮುಕ್ತಾಯವಿಲ್ಲ. ಆದ್ದರಿಂದಲೇ ಅವರು ಬರೆಯುವ ಮತ್ತು ಬಯಸುವ ಬರವಣಿಗೆಯ ಚೌಕಟ್ಟು ಜೀವನದ್ದೇ ಹೊರತು ಸಮಾಜದ್ದಲ್ಲ.’ ಡಾ. ಎಚ್​.ಎಸ್​. ರಾಘವೇಂದ್ರ ರಾವ್

New Book ; ಅಚ್ಚಿಗೂ ಮೊದಲು : ತನ್ನ ತಿಳಿವಳಿಕೆಗೆ ಅನ್ಯದ ಮುಖವಾಡ
ಡಾ. ವಸಂತ ದಿವಾಣಜಿ (ಕುಸುಮಾಕರ ದೇವರಗೆಣ್ಣೂರು)
Follow us
ಶ್ರೀದೇವಿ ಕಳಸದ
| Updated By: ganapathi bhat

Updated on:Apr 18, 2021 | 6:19 PM

ಈಗೀಗ ಓದುವವರು ಕಡಿಮೆ, ಬರೆಯುವವರೇ ಹೆಚ್ಚು; ದಶಕಗಳಿಂದ ಸಾಹಿತ್ಯ ವಲಯದಿಂದ ಕೇಳಿಬರುತ್ತಿರುವ ಪುನರಾವರ್ತಿತ ಸಾಲು ಇದು. ಹಾಗಿದ್ದರೆ ನಾವೇಕೆ ಓದುತ್ತೇವೆ, ನಾವೇಕೆ ಬರೆಯುತ್ತೇವೆ? ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ನಕ್ಷೆಗೆ ಎಟುಕದ ಕಡಲು (ಸಮೀಕ್ಷೆ) ಲೇ : ಡಾ. ವಸಂತ ದಿವಾಣಜಿ (ಕುಸುಮಾಕರ ದೇವರಗೆಣ್ಣೂರು) ಪುಟ : 320 ಪ್ರಕಾಶನ : ಸಾಹಿತ್ಯ ಭಂಡಾರ, ಬೆಂಗಳೂರು 

*

ಸುಮಾರು ಹತ್ತು ವರ್ಷಗಳ ಹಿಂದೆ ಡಾ. ವಸಂತ ದಿವಾಣಜಿ (ಕುಸುಮಾಕರ ದೇವರಗೆಣ್ಣೂರು) ಅವರ ತಮ್ಮ ಪ್ರಹ್ಲಾದ ದಿವಾಣಜಿ ಅವರು ‘ನಕ್ಷೆಗೆ ಎಟುಕದ ಕಡಲು’ ಕೃತಿಯನ್ನು ಅಚ್ಚಿಗಾಗಿ ತಯಾರಿ ಮಾಡಿಟ್ಟುಕೊಂಡು ಅಣ್ಣನ ಅನುಮತಿಗಾಗಿ ಕಾಯುತ್ತಿದ್ದರು. ಆದರೆ ವಸಂತ ಅವರು, ‘ಇನ್ನೂ ಸ್ವಲ್ಪ ತಡಿ, ಛಂದಂಗೆ ಮಾಡಿ ಬರೀಬೇಕು’ ಎಂದು ಹೇಳುತ್ತಲೇ ಸ್ಮರಣ ಶಕ್ತಿ ಕಳೆದುಕೊಂಡು ಇನ್ನಿಲ್ಲವಾಗಿಬಿಟ್ಟರು. ಅವರು ತೀರಿ ಒಂಬತ್ತು ವರ್ಷಗಳ ನಂತರ ಈಗ ಆ ಪುಸ್ತಕ ಹೊರಬರುತ್ತಿದ್ದು ತಿಂಗಳೊಪ್ಪತ್ತಿನಲ್ಲಿ ಸಾಹಿತ್ಯಾಸಕ್ತರ ಕೈಸೇರಲಿದೆ. ಹಿರಿಯ ಸಾಹಿತಿಗಳಾದ ಡಾ. ರಹಮತ್ ತರೀಕೆರೆ, ಡಾ. ಎಚ್​. ಎಸ್.​ ರಾಘವೇಂದ್ರ ರಾವ್, ಪ್ರೊ. ಜಿ. ಎನ್​. ಉಪಾಧ್ಯಾಯ ಮತ್ತು ಪ್ರಹ್ಲಾದ ದಿವಾಣಜಿಯವರು ವಸಂತ ಅವರೊಂದಿಗೆ ನಡೆಸಿದ ಸಂವಾದಗಳು ಇದರಲ್ಲಿರಲಿವೆ. ಜೊತೆಗೆ ವಸಂತ ಅವರು ವಿವಿಧ ಕೃತಿಗಳ ಬಗ್ಗೆ ಬರೆದ ವಿಮರ್ಶೆ ಮತ್ತು ಜೆ. ಕೃಷ್ಣಮೂರ್ತಿ ಅವರ ತತ್ವಜ್ಞಾನದ ಬಗ್ಗೆ ಬರೆದ ದೀರ್ಘ ಲೇಖನವೂ ಓದಿಗೆ ಲಭ್ಯವಾಗಲಿದೆ. ಈಗಿಲ್ಲಿ ಹಿರಿಯ ಸಾಹಿತಿ, ವಿಮರ್ಶಕ ಡಾ. ಎಚ್. ಎಸ್​. ರಾಘವೇಂದ್ರ ರಾವ್ ಅವರು ಈ ಕೃತಿಗಾಗಿ ಬರೆದ ಮುನ್ನುಡಿ ನಿಮ್ಮ ಓದಿಗೆ. 

-1- ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಸಂತ ದಿವಾಣಜಿ ಅವರ ಬರವಣಿಗೆಯು ನೆಲದ ಮರೆಯ ನಿಧಾನದ ಹಾಗೆ. ಈ ಮಾತು ಕುಸುಮಾಕರ ದೇವರಗೆಣ್ಣೂರು ಎಂಬ ಹೆಸರಿನಲ್ಲಿ ಪ್ರಕಟವಾದ ಐದು ಕಾದಂಬರಿಗಳಿಗಿಂತ ಹೆಚ್ಚಾಗಿ ಅವರ ವೈಚಾರಿಕ ಲೇಖನಗಳಿಗೆ ಅನ್ವಯಿಸುತ್ತದೆ. ‘ಗಾಳಿ ಹೆಜ್ಜೆ ಹಿಡಿದ ಸುಗಂಧ’ ಎಂಬ ಪುಸ್ತಿಕೆ ಮತ್ತು ಅಕಡೆಮಿಕ್ ಒತ್ತಾಯಗಳಿಗಾಗಿ ಬರೆದ ‘ಪ್ರಸಾದಯೋಗ’ ಎಂಬ ಪಿಎಚ್.ಡಿ. ಮಹಾಪ್ರಬಂಧವನ್ನು ಹೊರತುಪಡಿಸಿದರೆ, ಈಗ ಮರಣೋತ್ತರವಾಗಿ ಪ್ರಕಟವಾಗುತ್ತಿರುವ ‘ನಕ್ಷೆಗೆ ಎಟುಕದ ಕಡಲು’ ಅವರ ಮೊದಲನೆಯ ವಿಮರ್ಶಾ ಸಂಕಲನ. ಬರವಣಿಗೆ ಮತ್ತು ಪ್ರಕಟಣೆಗಳ ಬಗ್ಗೆ ನಿಸ್ಸೀಮ ನಿರ್ಲಕ್ಷ್ಯ ಹೊಂದಿದ್ದ ಈ ಮಾತುಗಾರನ ಹಲವು ವಿಚಾರಗಳು ಕನ್ನಡ ಸಾಹಿತ್ಯದ ಕೆಲವು ಮೂಲ ಪ್ರಮೇಯಗಳನ್ನೇ ಪ್ರಶ್ನಿಸುತ್ತವೆ ಮತ್ತು ಗಂಭೀರವಾದ ಪರಿಗಣನೆಗೆ ಅರ್ಹವಾದ ಹೊಸ ಸಂಗತಿಗಳನ್ನು ಮಂಡಿಸುತ್ತವೆ. ಅವರ ಕಾದಂಬರಿಗಳ ಹಾಗೆಯೇ ಈ ಲೇಖನಗಳು ಕೂಡ ಓದುಗರಿಗೆ ವಿಶಿಷ್ಟವಾದ ಸವಾಲುಗಳನ್ನು, ತೊಡಕುಗಳನ್ನು ಒಡ್ಡುತ್ತವೆ. ಅದಕ್ಕೆ ಕಾರಣಗಳು ಅವರ ‘ಬರವಣಿಗೆ’ ಮತ್ತು ‘ನಮ್ಮ ಓದು’ ಎರಡರಲ್ಲಿಯೂ ಇವೆ. ಮೊದಲು ಆ ಸಮಸ್ಯೆಗಳ ಬಗ್ಗೆ ಆಲೋಚನೆ ಮಾಡಿ, ನಂತರ ಅವರ ಚಿಂತನೆಯ ಮುಖ್ಯ ನೆಲೆಗಳನ್ನು ಗುರುತಿಸುವುದು ನನ್ನ ಉದ್ದೇಶ.

ಈ ಲೇಖನಗಳನ್ನು ಓದುವಾಗ ನನಗೆ ಪ್ರಸಿದ್ಧ ವಿಜ್ಞಾನಿಯಾದ ಮೇರಿ ಕ್ಯೂರಿ ಅವರ ನೆನಪಾಯಿತು. ಅವರು ತನ್ನ ಮನೆಯ ನೆಲಮಾಳಿಗೆಯಲ್ಲಿ, ಒಂದು ಟನ್ ಪಿಚ್‍ಬ್ಲೆಂಡ್ ಅದಿರನ್ನು ಹತ್ತು ಹಲವು ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಪಡಿಸಿ, ಅದರಿಂದ ಒಂದು ಗ್ರಾಮ್‍ನಷ್ಟು ಅತ್ಯಮೂಲ್ಯವಾದ ರೇಡಿಯಂ ಅನ್ನು ಬೇರ್ಪಡಿಸುತ್ತಿದ್ದರಂತೆ. ದಿವಾಣಜಿಯವರ ಮಾತಿನಮಳೆಯ ಮುಸಲಧಾರೆಗಳ ಮಧ್ಯದಿಂದ ನಾವು ಹೊರತೆಗೆಯಬಹುದಾದ ವಿಚಾರಗಳು ಕೂಡ ಆ ರೇಡಿಯಂನ ಹಾಗೆಯೇ ಬೆಲೆಬಾಳುತ್ತವೆ. ಆದರೆ, ಅವುಗಳನ್ನು ನಾವು ಹುಡುಕಿ ತೆಗೆಯುವ ಜವಾಬ್ದಾರಿ ನಮ್ಮದು.

ಈ ಸಂಕಲನದ ತಾತ್ವಿಕವಾದ ಲೇಖನಗಳದು, ಕಾಲುಗಳು ಸರಿಯಾಗಿದ್ದರೂ ಎರಡು ಕೈಗಳಲ್ಲಿ ನೂರಾರು ಊರುಗೋಲುಗಳನ್ನು ಹಿಡಿದುಕೊಂಡು ನಡೆಯುತ್ತಿರುವ, ಓದಿನ ಭಾರದಿಂದ ಬಾಗಿದ ಸ್ವೋಪಜ್ಞ ಚಿಂತಕನ ಮಾರ್ಗ. ನನ್ನ ಈ ಮಾತಿನಲ್ಲಿ ಇರುವ ಪರಸ್ಪರ ವಿರೋಧವು ದಿವಾಣಜಿಯವರ ಬರವಣಿಗೆಯ ಲಕ್ಷಣ. ಸ್ವಂತವೂ ಸ್ವತಂತ್ರವೂ ಆದ ಯಾವುದೇ ವಿಚಾರವನ್ನು ಹೇಳಬೇಕಾದರೂ ಹತ್ತು ಹಲವು ಚಿಂತಕರನ್ನು, ವಿಚಾರಗಳನ್ನು, ಘಟನೆಗಳನ್ನು ಪುಂಖಾನುಪುಂಖವಾಗಿ ಹೇಳದೆ ಇರುವುದು ಅವರಿಗೆ ಸಾಧ್ಯವೇ ಇಲ್ಲ. ಆ ಕ್ವೋಟೇಷನ್‍ಗಳ ಹುಚ್ಚುಹೊಳೆಯಲ್ಲಿ ಮೂಲವಿಚಾರ ಮತ್ತು ಸ್ವಂತಿಕೆಗಳು ಕೊಚ್ಚಿಹೋದರೂ ಅವರಿಗೆ ಚಿಂತೆಯಲ್ಲ. ‘ಸ್ವಂತದ್ದು’ ಎಂದು ನನ್ನದೇನೂ ಇಲ್ಲವೆಂದೇ ಅವರು ಹೇಳಿಯಾರು. ಆದರೆ ಅವರು ನಿಜಕ್ಕೂ ತಮ್ಮದೇ ಆದ ಹತ್ತು ಹಲವು ಮಹತ್ವದ ಸಂಗತಿಗಳನ್ನು ಹೇಳಿದ್ದಾರೆ. ಇದು ಯಾಕೆ ಹೀಗೆ ಎಂದು ಸಾಕಷ್ಟು ಯೋಚಿಸಿದ ಬಳಿಕ ನನಗೆ ಹೊಳೆದ ಉತ್ತರ ಹೀಗಿದೆ:

achchigoo modhalu

ಬೇಂದ್ರೆ-ಕುಸುಮಾಕರ

ದಿವಾಣಜಿಯವರ ಕಾದಂಬರಿಗಳು ಮತ್ತು ಮುಖ್ಯ ಲೇಖನಗಳ ಹಿಂದೆ ಇರುವ ಬಹಳ ಮುಖ್ಯವಾದ ಭಾವಕೋಶಗಳೆಂದರೆ ಭಯ, ಹಿಂಜರಿಕೆ ಮತ್ತು ನೈಚ್ಯಾನುಸಂಧಾನ. ಅವರ ಬುದ್ಧಿಯು ಈ ಸಂಗತಿಯನ್ನು ನಿಚ್ಚಳವಾಗಿ ಗ್ರಹಿಸಿದರೂ ಅವರಿಗೆ ಆ ಸೆರೆಮನೆಯಿಂದ ಬಿಡುಗಡೆಯಿಲ್ಲ. ಅವರ ಕಾದಂಬರಿಗಳ ಬಹು ಪಾಲು ಪಾತ್ರಗಳು ಇಂತಹ ‘ವಿಕಲತೆ’ಯಿಂದಲೇ ಬಳಲುತ್ತಾರೆ. ಸೆನ್ಸಿಟಿವ್ ಆದ ವ್ಯಕ್ತಿಯ ‘ಪುಕ್ಕಲುತನದಿಂದ’ ಸೃಷ್ಟಿಯಾಗುವ ನರಕವು ಭಯಂಕರವಾದುದು. ಅಂಥವನು ಏನನ್ನೂ ದಿಟ್ಟತನದಿಂದ, ಆಕ್ರಾಮಕವಾಗಿ ಹೇಳಲಾರ. ಒಂದು ಸಣ್ಣ ಸಂಗತಿಗೂ ಹತ್ತಾರು ‘ಆಲಂಬನೆ’ಗಳನ್ನು, ‘ಸಮರ್ಥನೆ’ಗಳನ್ನು ಹುಡುಕುತ್ತಾನೆ. ಇಂತಹ ಜೊತೆ-ಮಾತುಗಳಿಂದ ಹೆಚ್ಚಿನ ಪ್ರಯೋಜನವಿಲ್ಲವೆಂದು ಗೊತ್ತಿದ್ದರೂ ಅವನು ನಿರುಪಾಯ. ನಿರ್ಣಾಯಕವಾದ ತೀರ್ಮಾನಗಳನ್ನು ಕೊಡುವುದರ ಬಗ್ಗೆ ದಿವಾಣಜಿಯವರಿಗೆ ಇದ್ದ ಈ ಹಿಂಜರಿಕೆಯನ್ನು ಗೆಳೆಯ ರಹಮತ್ ತರೀಕೆರೆಯವರು ತಮ್ಮ ಸಂದರ್ಶನದಲ್ಲಿ ಗುರುತಿಸಿದ್ದಾರೆ. ಹಾಗೆಂದರೆ, ಅವರ ಬಳಿ ಅಂತಹ ತೀರ್ಮಾನಗಳು ಇರಲಿಲ್ಲವೆಂದು ಅರ್ಥವಲ್ಲ. ಬಹುಮಟ್ಟಿಗೆ ಅವು ಸರಿಯಾದ ತೀರ್ಮಾನಗಳೇ ಆಗಿರುತ್ತವೆ. ಅದೂ ಅಲ್ಲದೆ, ದಿವಾಣಜಿಯರು ಮಾತನಾಡುತ್ತಿದ್ದರೇ ವಿನಾ ಒಂದು ಶಿಸ್ತಿಗೆ ಒಳಪಟ್ಟು ಬರೆಯುತ್ತಿರಲಿಲ್ಲ. ಇಲ್ಲಿನ ಬಹುಪಾಲು ಬರೆಹಗಳು, ಅವರು ತಮ್ಮ ಪ್ರೀತಿಯ ಸೋದರ ಪ್ರಹ್ಲಾದ ದಿವಾಣಜಿಯವರ ಸಂತೋಷಕ್ಕಾಗಿ, ಅವರ ಒತ್ತಾಯದಿಂದ, ಅವರಿಗೇ ಡಿಕ್ಟೇಟ್ ಮಾಡಿ ಬರೆಸಿದವು. ಉಳಿದವು ಅವರ ಗುರುಗಳಾದ ಪ್ರೊ. ರಂ.ಶ್ರೀ. ಮುಗಳಿಯವರೂ ಸೇರಿದಂತೆ ಹಲವು ಹಿರಿಯರ, ಗೆಳೆಯರ ಒತ್ತಾಯದಿಂದ ಬರೆದ ಪರಿಚಯಾತ್ಮಕ/ವಿಮರ್ಶಾತ್ಮಕ ಲೇಖನಗಳು. ಅಲ್ಲಿಯೂ ವಿಮರ್ಶಿತವಾದ ಕೃತಿಗಳಿಂದ ತೆಗೆದ ಬಂಡಿಗಟ್ಟಲೆ ಕ್ವೋಟೇಷನ್ನುಗಳು ಇಡಿಕಿರಿದಿರುವುದನ್ನು ಗಮನಿಸಬಹುದು. ಆದರೆ, ಬೇಂದ್ರೆಯವರೇ ಹೇಳಿದ್ದನ್ನು ಸ್ವಂತ ನೆನಪಿನಿಂದ ಹೇಳಿ ಬರೆಸುವಾಗ ಹೀಗೆ ಆಗುವುದಿಲ್ಲ. ಏಕೆಂದರೆ, ಬೇಂದ್ರೆಯವರು ಅವರಿವರನ್ನು ಕ್ವೋಟ್ ಮಾಡುತ್ತಿರಲಿಲ್ಲ.

ಹೀಗೆ ಒಬ್ಬ ಲೇಖಕನ ಸ್ವಭಾವಸಹಜವಾದ ಗುಣಗಳು ಅವನ ಸೃಜನಶೀಲ ಮತ್ತು ವಿಮರ್ಶಾತ್ಮಕ ಬರೆಹಗಳಲ್ಲಿ ಒಂದೇ ಬಗೆಯಲ್ಲಿ ಹಾಸುಹೊಕ್ಕಾಗಿರುವಾಗ, ಅವುಗಳನ್ನು ಎಚ್ಚರಿಕೆಯಿಂದ ಓದುವ ಅಗತ್ಯವಿದೆ. ಬಹುಮಟ್ಟಿಗೆ ಸುಪ್ತಪ್ರಜ್ಞೆಯಿಂದಲೇ ನಿಯಂತ್ರಿತವಾಗಿ, ಕನಸು, ಪ್ರತಿಮೆ, ಧ್ವನಿಪೂರ್ಣವಾದ ಭಾಷೆ ಮುಂತಾದ ಪರಿಕರಗಳನ್ನು ಬಳಸಿಕೊಂಡು ತಮ್ಮದೇ ಆದ ಶಿಲ್ಪವನ್ನು ಪಡೆದಿರುವ ಅವರ ಕಾದಂಬರಿಗಳನ್ನು ಹೇಗೋ ಓದಿಕೊಳ್ಳಬಹುದು. ಅಲ್ಲಿ ಓದುಗನ ಸುಪ್ತಪ್ರಜ್ಞೆ ಮತ್ತು ಸಂವೇದನೆಗಳಿಗೆ ತಮ್ಮದೇ ಆದ ಪಾತ್ರವಿರುತ್ತದೆ. ಅವುಗಳಿಗೆ ಇರುವ ಬಹುಮುಖಿಯಾದ ವ್ಯಾಖ್ಯಾನ ಸಾಧ್ಯತೆಗಳನ್ನು ಸ್ವತಃ ಲೇಖಕನೂ ಅಲ್ಲಗಳೆಯುವುದಿಲ್ಲ. ಆದರೆ, ವೈಚಾರಿಕವಾದ ಬರವಣಿಗೆಯ ಮಾತು ಬೇರೆ. ಅಲ್ಲಿ ಲೇಖಕನಿಗೆ ಖಚಿತವಾದ ಏನನ್ನೋ ಹೇಳುವ ದರ್ದು ಇರುತ್ತದೆ. ದಿವಾಣಜಿಯವರು ಕೂಡ ಕೃತಿಗಳ ‘ಸಮೀಕ್ಷೆ’ಗೆ ನಿರ್ದಿಷ್ಟವಾದ ಸ್ವರೂಪ ಮತ್ತು ಉದ್ದೇಶಗಳನ್ನು ಆರೋಪಿಸುತ್ತಾರೆ. ಆದರೆ ಹಲವು ಮರಗಳ ಕಾಡಿನಲ್ಲಿ ಅಡಗಿರುವ ಗಂಧದ ಮರವನ್ನು ಹುಡುಕುವ ಕೆಲಸ ಸುಲಭವಲ್ಲ. ಆ ಮರ ತನ್ನ ಸುಗಂಧವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದೂ ಇಲ್ಲ. ಶಂ.ಬಾ. ಜೋಶಿಯವರ ಬರೆಹಗಳನ್ನು ಅರ್ಥ ಮಾಡಿಕೊಳ್ಳುವಾಗ ಇರುವ ಬಿಕ್ಕಟ್ಟುಗಳಿಗೂ ದಿವಾಣಜಿಯವರ ಬರೆಹವು ಒಡ್ಡುವ ಸವಾಲುಗಳಿಗೂ ವ್ಯತ್ಯಾಸವಿದೆ.

achchigoo modhalu

ಪತ್ನಿ ಪ್ರತಿಭಾ ಅವರೊಂದಿಗೆ ಮತ್ತು ಬೆಂಗಳೂರಿನ ಬಿ.ಎಚ್. ಎಸ್ ಕಾಲೇಜಿನಲ್ಲಿ ಬೇಂದ್ರೆಯವರ ಬಗ್ಗೆ ಭಾಷಣದ ಸಂದರ್ಭ

ದಿವಾಣಜಿಯವರೇ ಒಂದು ಬರೆಹದಲ್ಲಿ ಹೇಳಿಕೊಂಡಿರುವ ಹಾಗೆ, ಅವರದು ಮಕರಂದ ಮಾರ್ಗ. ಜೇನುಹುಳಗಳು ಹಲವು ಹೂಗಳ ರಸವನ್ನು ಮಧುವಾಗಿ ಮಾರ್ಪಡಿಸಿದ ಬಳಿಕ ಆ ಹೂಗಳು ತಮ್ಮ ಅಸ್ಮಿತೆಯನ್ನು ಕಳೆದುಕೊಂಡು ಮಧುವಾಗಿ ಬಿಟ್ಟಿರುತ್ತವೆ. ಒಂದು ಹನಿ ಜೇನಿನಲ್ಲಿ ಎಷ್ಟು ಹೂಗಳ ಮಕರಂದ ಇರುವುದೆಂದು ಯಾರು ಬಲ್ಲರು! ಆದರೆ, ಈ ಗುಟ್ಟನ್ನು ಬಲ್ಲವರಾದರೂ ದಿವಾಣಜಿಯವರು ಜೇನಹನಿಯ ಜೊತೆಗೆ, ಹೂವುಗಳ ಗೊಂಚಲನ್ನೂ ಕೊಡುತ್ತಾರೆ. ಇದು ಓದುವವರ ಹಾದಿ ತಪ್ಪಿಸುತ್ತವೆ.

ಕುಸುಮಾಕರ ದೇವರಗೆಣ್ಣೂರರು ಹಲವು ಹಿರಿಯರ ಸಂಗಡ ಆತ್ಮೀಯವಾದ ಸಮಯ ಕಳೆದರೂ, ಹಲವು ಶಾಸ್ತ್ರಗಳಿಗೆ ಸಂಬಂಧಿಸಿದ ಅಕ್ಷರಶಃ ಸಾವಿರಾರು ಪುಸ್ತಕಗಳನ್ನು ಓದಿ, ಅದೆಲ್ಲವನ್ನೂ ಅರಗಿಸಿಕೊಂಡರೂ ನೆನಪಿನಲ್ಲಿ ಇಟ್ಟುಕೊಂಡರೂ ಅವರು ಯಾರ ಅನುಯಾಯಿಯೂ ಅಲ್ಲ. ಅವರಿಗೆ ಯಾರೂ ಗುರುಗಳಲ್ಲ. ಬೇಂದ್ರೆಯವರು ಕೂಡ ಈ ಮಾತಿಗೆ ಅಪವಾದವಲ್ಲ. ಪ್ರೀತಿ-ಗೌರವಗಳ ಮಾತು ಬೇರೆ, ಸಮ್ಮತಿ-ಶರಣಾಗತಿಗಳ ಮಾತು ಬೇರೆ. ಅವರು ಅನ್ಯರಿಂದ ಕಲಿತರೂ ಅವರನ್ನು ಸಾರಾಸಗಟಾಗಿ ಒಪ್ಪುತ್ತಿರಲಿಲ್ಲ. ವಿಭಿನ್ನ ಕಾಲಘಟ್ಟಗಳಲ್ಲಿ ಬಂದ ಹಲವು ಬಗೆಯ ಪುಸ್ತಕಗಳ ಕಡುಏಕಾಗ್ರದ ಓದು ಅವರಲ್ಲಿ ವಿಶಿಷ್ಟವಾದ ‘ಸ್ವಂತಿಕೆ’ ಮತ್ತು ‘ಸಮತೋಲನ’ಗಳನ್ನು ಮೂಡಿಸಿತ್ತು. ಅವರು ಹಲವು ಲೇಖಕರನ್ನು ದೊಡ್ಡವರು ಎಂದು ಕರೆದರೂ ಅವರಿಗೆ ತನ್ನದೇ ಆದ ‘ಕೋರ್’ ಇತ್ತು. ಅದು ಎಲ್ಲರನ್ನೂ ಎಲ್ಲವನ್ನೂ ಒಂದು ಚಿಟಿಕೆ ಉಪ್ಪಿನೊಂದಿಗೆ ಸ್ವೀಕರಿಸುತ್ತಿತ್ತು. ಗಟ್ಟಿಯಾಗಿ ಹೇಳದಿದ್ದರೂ ಅವರ ಮನದಾಳದಲ್ಲಿ ಒಬ್ಬ ಭಿನ್ನಮತೀಯ ಇರುತ್ತಿದ್ದ. ದಿವಾಣಜಿಯವರ ವ್ಯಕ್ತಿತ್ವ ಮತ್ತು ಬರವಣಿಗೆಯನ್ನು ಕುರಿತ ಈ ಅನಿಸಿಕೆಗಳ ಹಿನ್ನೆಲೆಯಲ್ಲಿ ಅವರ ವಿಚಾರಗಳನ್ನು ಗ್ರಹಿಸುವ ಪ್ರಯತ್ನವನ್ನು ಇನ್ನುಮುಂದೆ ಮಾಡಲಾಗಿದೆ.

-2-

‘ನಕ್ಷೆಗೆ ಎಟುಕದ ಕಡಲು’ ಬಹಳ ಸಂಕೀರ್ಣವಾದ ಮಾತು. ಅದು ದಿವಾಣಜಿಯವರ ಜೀವನದರ್ಶನವನ್ನೇ ಹಿಡಿದಿಡುತ್ತದೆ. ಅವರ ಆಲೋಚನೆಗಳ ಮೇಲೆ ತೀವ್ರವಾದ ಪ್ರಭಾವವನ್ನು ಬೀರಿರುವ ಜಿಡ್ಡು ಕೃಷ್ಣಮೂರ್ತಿಯವರು ‘ಸತ್ಯವೆನ್ನುವುದು ದಾರಿಯಿಲ್ಲದ ಸೀಮೆ’ (ಟ್ರುತ್ ಈಸ್ ಅ ಪಾತ್‍ಲೆಸ್ ಲ್ಯಾಂಡ್) ಎಂದು ಹೇಳಿದರು. ಅದು, ಅವರು ತಮ್ಮ ಸುತ್ತಲೂ ಬೆಳೆದುಕೊಂಡಿದ್ದ, ತಮ್ಮನ್ನು ಗುರುವೆಂದು ಆರಿಸಿಕೊಂಡಿದ್ದ ಶಿಷ್ಯವಲಯವನ್ನು ವಿಸರ್ಜನೆ ಮಾಡುವಾಗ ಹೇಳಿದ ಮಾತು. ಜೆ.ಕೆ.ಯವರುಈ ಮಾತನ್ನು ವಿವರಿಸುತ್ತಾ, “ಸತ್ಯವು ನಿಸ್ಸೀಮವೂ ಉಪಾಧಿರಹಿತವೂ ಯಾವುದೇ ನಿಶ್ಚಿತವಾದ ಹಾದಿಯ ಮೂಲಕ ತಲುಪಲು ಅಸಾಧ್ಯವೂ ಆಗಿರುವದರಿಂದ ಅದನ್ನು ಸಂಘಟಿಸಲು ಸಾಧ್ಯವಿಲ್ಲ. ಸತ್ಯದ ಕಡೆಗೆ ಕರೆದೊಯ್ಯಲು, ಇಂಥದೇ ನಿರ್ದಿಷ್ಟ ಹಾದಿಯಲ್ಲಿ ಸತ್ಯದ ಕಡೆಗೆ ನಡೆಯುವಂತೆ ಜನರ ಮನವೊಲಿಸಲು ಯಾವುದೇ ಸಂಸ್ಥೆಯನ್ನು ಕಟ್ಟಬಾರದು. ನೀವು ಈ ವಿಷಯವನ್ನು ಮನಗಂಡರೆ, ನಂಬಿಕೆಯೊಂದನ್ನು ಸಮುದಾಯದ ಮೇಲೆ ಹೇರುವುದು ಎಷ್ಟು ತಪ್ಪು ಎನ್ನುವುದನ್ನು ಕೂಡ ಮನಗಾಣುವಿರಿ. ನಂಬಿಕೆಯು ನೂರಕ್ಕೆ ನೂರರಷ್ಟು ವೈಯಕ್ತಿಕವಾದ ಸಂಗತಿ. ಅದನ್ನು ಸಾಂಸ್ಥಿಕವಾಗಿ ರೂಪಿಸಲು ಸಾಧ್ಯವಿಲ್ಲ, ಹಾಗೆ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದರೆ, ಆಗ ಆ ನಂಬಿಕೆಯು ಸತ್ತು ಹೋಗುತ್ತದೆ, ಕಲ್ಲಾಗುತ್ತದೆ. ಆಗ ಅದು ಮತವೋ ಪಂಥವೋ ಧರ್ಮವೋ ಆಗಿಬಿಡುತ್ತದೆ. ಅದನ್ನು ಇತರರ ಮೇಲೆ ಹೇರುವ ಪ್ರಯತ್ನ ನಡೆಯುತ್ತದೆ” ಎಂದು ಹೇಳಿದರು. ದಿವಾಣಜಿಯವರು ಈ ಮಾತುಗಳನ್ನು ಒಪ್ಪಿಕೊಂಡವರು. ಅವರು ತಮ್ಮ ಅನಿಸಿಕೆಗಳನ್ನು ಹೇರುವುದಿರಲಿ, ಗಟ್ಟಿಯಾಗಿ ಹೇಳಲು ಕೂಡ ಇಷ್ಟ ಪಡುತ್ತಿರಲಿಲ್ಲ. ಅವರ ಹಿತೈಷಿಗಳು ಒತ್ತಾಯ ಪಡಿಸದಿದ್ದರೆ ಅವರು ಏನನ್ನೂ ಬರೆಯುತ್ತಿರಲಿಲ್ಲ. ಈಗಲೂ ಅವರು ತಮ್ಮ ತಿಳಿವಳಿಕೆಯ ಚಿಕ್ಕ ಭಾಗವನ್ನೂ ಅವರು ಓದುಗರೊಂದಿಗೆ ಹಂಚಿಕೊಂಡಿಲ್ಲ. ಆದರೆ, ಅವರು ಹಲವು ಸಂಗತಿಗಳ ಬಗ್ಗೆ ನಿಜಕ್ಕೂ ಹೊಸದಾದ, ನಮ್ಮೆಲ್ಲರ ಗ್ರಹಿಕೆಗಿಂತ ಭಿನ್ನವಾದ ಅಭಿಪ್ರಾಯಗಳನ್ನು ಹೊಂದಿದ್ದರು. ಅವುಗಳ ಸುಳಿವು ಈ ಪುಸ್ತಕದಲ್ಲಿಯೂ ಸಿಗುತ್ತದೆ. ಅವರ ಇನ್ನೊಬ್ಬ ಗುರುಗಳಾದ ಬೇಂದ್ರೆಯವರು ಕೂಡ ‘ನಕ್ಷೆಯನು ಹಿಡಿದು ತಡಕಾಡಬೇಡ ನಕ್ಷತ್ರಮಾರ್ಗವನ್ನು” ಎಂದು ಹೇಳಿದರು. ದಿವಾಣಜಿಯವರು ಜೀವನವೆಂಬ ಕಡಲಿನ ಅಂತಪಾರಗಳನ್ನು ತಿಳಿಯಲು ಯಾವ ರೀತಿಯ ವೈಚಾರಿಕ ನಕ್ಷೆಯಿಂದಲೂ ಸಾಧ್ಯವಿಲ್ಲವೆಂದೇ ನಂಬಿದವರು. ಅಂತಹ ತಿಳಿವು ಸಾಹಿತ್ಯದಿಂದಲೂ ಬರುವುದಿಲ್ಲವೇನೋ. ‘ನಕ್ಷೆಗೆ ಎಟುಕದ ಕಡಲು’ ಎಂಬ ತಲೆಬರಹವು ಇಂತಹುದೇ ಸೂಚನೆಯನ್ನು ಕೊಡುತ್ತದೆ.

ದಿವಾಣಜಿಯವರು ಆ ಪದದ ನಿಜವಾದ ಅರ್ಥದಲ್ಲಿ ಅನಿಕೇತನ ಪ್ರಜ್ಞೆಯನ್ನು ಹೊಂದಿರುವವರು. ಅವರ ಪ್ರಕಾರ ಸಾಹಿತ್ಯಕ್ಕೆ ದೇಶ, ಕಾಲ, ಸಂದರ್ಭ ಮತ್ತು ಭಾಷೆಗಳ ಬಂಧನ ಮತ್ತು ಮಿತಿಗಳು ಇಲ್ಲ, ಇರಬಾರದು. ಸಾಹಿತ್ಯದ ಸಂವಹನಕ್ಕೆ ಸಂಸ್ಕೃತಿನಿರ್ದಿಷ್ಟವಾದ ಲಕ್ಷಣಗಳು ಅಡ್ಡಿಯಾಗುತ್ತವೆಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. ಭೂಮಿಯಲ್ಲಿ ಇದ್ದ, ಇರುವ ಮತ್ತು ಬರಲಿರುವ ಎಲ್ಲ ಮನುಷ್ಯರಿಗೂ ಸಮಾನವಾದ ಅಥವಾ ಸಂವಾದಿಯಾದ ಅನುಭವ, ಭಾವನೆ ಮತ್ತು ಆಲೋಚನೆಗಳು ಇರುವುದರಿಂದ ಮತ್ತು ಸಾಹಿತ್ಯವು ಅವುಗಳನ್ನು ಕಲೆಯಾಗಿ ಕಟ್ಟುವುದರಿಂದ ಅವುಗಳು ಎಲ್ಲರಿಗೂ ಸಂವಹನವಾಗುವುದು ಸಾಧ್ಯವೆಂದೇ ಅವರ ನಂಬಿಕೆ. ಅಮೆರಿಕಾದ ಆಗರ್ಭ ಶ್ರೀಮಂತ ಮತ್ತು ಕರ್ನಾಟಕದ ಯಾವುದೋ ಹಳ್ಳಿಯ ಕಡುಬಡವ ಇಬ್ಬರೂ ಭಯ, ತಲ್ಲಣ ಮತ್ತು ಆನಂದಗಳಲ್ಲಿ ಸಮಾನರೆಂದೇ ಅವರು ಹೇಳುತ್ತಾರೆ. ತನ್ನ ಕಾದಂಬರಿಯಲ್ಲಿ ಬರುವ ‘ಅಮಾವಾಸ್ಯೆ’ಯೆಂಬ ಪದದ ಅರ್ಥಛಾಯೆಗಳು ಭಾರತೀಯ ಸಂಸ್ಕೃತಿಗೆ ಅನ್ಯರಾದವರಿಗೆ ಗೊತ್ತಾಗುವುದಿಲ್ಲವೆಂದು ಅವರು ಅದನ್ನು ತೆಗೆದು ಹಾಕಲು ಪ್ರಯತ್ನಿಸುತ್ತಾರೆ. ಹಾಗೆ ರೂಪಿತವಾದ ಕಲೆಯೂ ಬುದ್ಧಿಪೂರ್ವಕವಾದ ನಿರ್ಮಿತಿಯಲ್ಲ. ಅದು ಒಳಗಿನಿಂದ ಚಿಮ್ಮಿಬರುವ ಸ್ವಪ್ನರೂಪಕಗಳ ಸರಣಿ. ಅವು ಕೂಡ ಲೇಖಕನು ಕಂಡ ಕನಸುಗಳಲ್ಲ. ಬದಲಾಗಿ ಕನಸುಗಳಿಗೆ ಒಂದು ಬಗೆಯ ವಿಶೃಂಖಲತೆ ಇರುವುದೆಂದು ಅವರು ನಂಬುತ್ತಾರೆ. ಅವರವರ ಸಂಸ್ಕೃತಿಯ ವಿಶಿಷ್ಟ ಅಂಶಗಳನ್ನು ಅಭಿವ್ಯಕ್ತಿಸುವುದೇ ಬರವಣಿಗೆಯ ಉದ್ದೇಶವೆಂದು ನಂಬುವ ಸಮಕಾಲೀನ ಚಿಂತನೆಗೆ ಇವರ ಈ ನಿಲುವುಗಳನ್ನು ಒಪ್ಪಿಕೊಳ್ಳುವುದು ಕಷ್ಟ. ಆದರೆ, ಇಂತಹ ಮೂಲಭೂತವಾದ ವಿಷಯಗಳನ್ನು ಕುರಿತು ಆಲೋಚಿಸಲೇಬೇಕು.

achchigoo modhalu

ಮನುಷ್ಯನ ವ್ಯಕ್ತಿತ್ವದ ಬಹುಭಾಗವು ಅವನ ಸುಪ್ತಪ್ರಜ್ಞೆಯಲ್ಲಿಯೇ ಇರುವುದೆಂದು ಮತ್ತು ಅದೇ ಅವನ ವರ್ತನೆಯನ್ನು ನಿರ್ದೇಶಿಸುವುದೆಂದು ನಂಬುವ ದಿವಾಣಜಿಯವರು, ಕಾಲದಿಂದ ಕಾಲಕ್ಕೆ ವ್ಯಕ್ತಿಯಲ್ಲಿ ಬದಲಾವಣೆ ಆಗುವ ಸಾಧ್ಯತೆಗಳನ್ನೂ ಅಷ್ಟಾಗಿ ನಂಬುವುದಿಲ್ಲ. ಅವರ ಕಾದಂಬರಿಗಳಲ್ಲಿ ವಿಕಸನವಾಗುವ, ‘ಉದ್ಧಾರ’ವಾಗುವ ಪಾತ್ರಗಳು ಬಹಳ ಬಹಳ ಕಡಿಮೆ. ಅವರ ಪಾತ್ರಗಳ ಬಾಹ್ಯಚಹರೆಗಳು ಬದಲಾದಂತೆ ಕಂಡರೂ ಒಳಹುರುಳು ಬದಲಾಗುವುದಿಲ್ಲ. ಆಳವಾಗಿ ಯೋಚಿಸಿದಾಗ ಅವರ ಅನಿಸಿಕೆ ನಿಜವೆಂದೇ ತೋರುತ್ತದೆ. ಬದಲಾಗುವುದು ಅಗತ್ಯವೆನಿಸಿದರೂ ಎಷ್ಟೋ ಸಲ ಅದಕ್ಕಾಗಿ ಹಂಬಲಿಸಿದರೂ ಪ್ರಯತ್ನಿಸಿದರೂ ಅಂತಹ ಪರಿವರ್ತನೆಯು ಅಸಾಧ್ಯವೆಂದೇ ಅವರ ನಂಬಿಕೆ. ಅವರ ಪ್ರಕಾರ ‘ಮುಕ್ತಿ’ ಕಾದಂಬರಿಯ ಗೌರೀಶನಾಗಲೀ ‘ಶಿಕಾರಿ’ಯ ನಾಗಪ್ಪನಾಗಲೀ ಕಾದಂಬರಿಗಳಲ್ಲಿ ಬರುವಂತೆ ಆಮೂಲಾಗ್ರವಾಗಿ ಬದಲಾಗಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ತೋರಿದರೂ ಅವರು ತಮ್ಮ ಮೂಲ ನೆಲೆಗಳಿಗೆ ಮರಳುವವರೇ. ಹಾಗೆ ಬದಲಾದಂತೆ ತೋರುವ ವರ್ತನೆಯೂ ಮೂಲದಲ್ಲೇ ಅಡಗಿರುವ ಸಾಧ್ಯತೆಗಳ ಮರುಕಳಿಕೆಯೇ ಆಗಿರುತ್ತದೆ. ಆದ್ದರಿಂದಲೆ ಅವರು ಪರಿವರ್ತನಶೀಲವಾದ ಪಾತ್ರಗಳಿರುವ ಬರವಣಿಗೆಯನ್ನು ನಿರಾಕರಿಸುತ್ತಾರೆ. ಅನೇಕ ಸಲ ಅವರು ಸ್ವತಃ ತಾನು ಸೃಷ್ಟಿಸುವ ಎಷ್ಟೋ ಪಾತ್ರಗಳಿಗೆ ಹೆಸರು ಕೂಡ ಕೊಡುವುದಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಈ ಮಾತುಗಳನ್ನು ಅವರು ಅನ್ವಯಿಸುತ್ತಾರೆ. ಹೀಗೆ, ಇಡೀ ಜಗತ್ತಿನ ಎಲ್ಲರಿಗೂ ಸಮಾನವಾದ ಅನುಭವಲೋಕದ ಮಂಡನೆಗೆ ಹೊರಟಾಗ ಬರವಣಿಗೆಯ ಮೇಲೆ ಸದ್ಯದ ಒತ್ತಡಗಳಾಗಲೀ ಅದರ ಪರಿಣಾಮವಾದ ತೀವ್ರತೆಯಾಗಲೀ ಇರುವುದಿಲ್ಲ. ಸಾಮಾಜಿಕ ನಿಲುವುಗಳ ಮಂಡನೆ ಮತ್ತು ಸಾಹಿತ್ಯಕ್ಕೆ ಇರುವ ರೋಗನಿದಾನದ ಸಾಧ್ಯತೆಯಲ್ಲಿ ನಂಬಿಕೆ ಇರುವ ವಿಮರ್ಶಕ/ಓದುಗರಿಗೆ ಮಾತ್ರ ಹಿಡಿಸುವ ಬರವಣಿಗೆಯನ್ನು ದಿವಾನಜಿಯವರ ಚಿಂತನೆ ದೂರವಿಡುತ್ತದೆ. ಅವರ ಪ್ರಕಾರ ಓದು ಎನ್ನುವುದು ಎರಡು ವಿಶಿಷ್ಟವಾದ ಅಂತರಂಗಗಳ ನಡುವೆ ನಡೆಯುವ ಸಂವಾದ ಮಾತ್ರ.

ನಾವು ಕಟ್ಟಿಕೊಂಡಿರುವ ಸಾಮಾಜಿಕ ರಚನೆಗಳ ಮಿತಿಯನ್ನು ದಿವಾಣಜಿಯವರು ಖಚಿತವಾಗಿ ಗುರುತಿಸುತ್ತಾರೆ. ಈ ಮಿತಿಗಳನ್ನು ಸರಿಪಡಿಸಲು ಹೊರಡುವ ವಿಚಾರಧಾರೆಗಳು, ಚಳುವಳಿಗಳು ಕೂಡ ತಮ್ಮದೇ ಆದ ಮಿತಿಗಳನ್ನು ಹೊಂದಿರುತ್ತವೆ. ಆದ್ದರಿಂದ ‘ನಮ್ಮವನು’ ಮತ್ತು ‘ನಮ್ಮವನಲ್ಲ’ ಎಂಬ ಅಂತರವು ಎಲ್ಲ ಸನ್ನಿವೇಶಗಳಲ್ಲಿಯೂ ಇದ್ದೇ ಇರುತ್ತದೆ. ಆದ್ದರಿಂದಲೇ ಐಡಿಯಾಲಜಿಗಳು ‘ಅನ್ವಯ’ದ ನೆಲೆಯಲ್ಲಿ ಹುಸಿಹೋಗುತ್ತವೆ. ಮತ್ತು ಆಳದಲ್ಲಿ ಯಥಾಸ್ಥಿತಿಯು ಮುಂದುವರಿಯುತ್ತದೆ. ದಿವಾಣಜಿಯವರ ಪ್ರಕಾರ ಇದುವೇ ನಮಗೆ ಇತಿಹಾಸವು ಕಲಿಸುವ ಪಾಠ ಕೂಡ. ಸಾವಿರಾರು ವರ್ಷಗಳ ಅವಧಿಯಲ್ಲಿ, ‘ಹ್ಯೂಮನ್ ಕಂಡೀಷನ್’ ಎನ್ನುವುದು ಹೆಚ್ಚಿನ ಪ್ರಮಾಣದಲ್ಲಿ ಬದಲಾಗಿಲ್ಲವೆಂದೇ ಅವರು ಹೇಳುತ್ತಾರೆ. ಏಕೆಂದರೆ ಸಾಮಾಜಿಕ ಚಲನಶೀಲತೆ ಮತ್ತು ಮನುಷ್ಯ ಸ್ವಭಾವದ ಚಿರಂತನತೆಗಳ ಜೋಡಿಯನ್ನು ಅವರು ಗುರುತಿಸುತ್ತಾರೆ. ಆದ್ದರಿಂದ ಬದಲಾವಣೆಯು ಕೇವಲ ಕಾಸ್ಮೆಟಿಕ್ ಆದುದು. ಬೇಟೆಯಾಗುವವರು ಮತ್ತು ಬೇಟೆಯಾಡುವವರು ಅದಲುಬದಲಾಗಬಹುದೇ ವಿನಾ ಬೇಟೆಯೆಂಬ ಪ್ರಕ್ರಿಯೆಗೆ ಮುಕ್ತಾಯವಿಲ್ಲ. ಆದ್ದರಿಂದಲೇ ದಿವಾಣಜಿಯವರು ಬರೆಯುವ ಮತ್ತು ಬಯಸುವ ಬರವಣಿಗೆಯ ಚೌಕಟ್ಟು ಜೀವನದ್ದೇ ಹೊರತು ಸಮಾಜದ್ದಲ್ಲ. ‘ಆಶ್ರಮ ಮೃಗ’ವು ವಿಶೇಷವಾದ ಸವಲತ್ತುಗಳಿಗೆ ಅರ್ಹವಾದರೆ, ಕಾಡಿನಲ್ಲಿ ಬದುಕುವ ಯಾರ ಸಲಹುವಿಕೆಯ ರಕ್ಷಾಕವಚವೂ ಇಲ್ಲದ ಅನಾಥ ಜಿಂಕೆಗಳ ಪಾಡು ಯಾರ ಗಮನಕ್ಕೂ ಬರುವುದಿಲ್ಲ. ‘ಅಭಿಜ್ಞಾನ ಶಾಕುಂತಲ’ ನಾಟಕದ ಈ ಮಾತು ಅವರನ್ನು ಬಹಳವಾಗಿ ಕಾಡಿದೆ. ನಮ್ಮ ಕಾಲದ ವಾಸ್ತವವನ್ನು ಎಚ್ಚರದಿಂದ ಗಮನಿಸಿದಾಗ, ಅಸ್ಮಿತೆಗಳನ್ನು ಗುರುತಿಸುವ, ಕಾಪಾಡಿಕೊಳ್ಳುವ, ಅನ್ಯವನ್ನು ನಿರಾಕರಿಸುವ/ದ್ವೇಷಿಸುವ ಪ್ರವೃತ್ತಿಗಳೇ ಮತ್ತೆ ಮತ್ತೆ ಗಮನಕ್ಕೆ ಬರುತ್ತವೆ. ಈ ಮಾತು ಸಮುದಾಯಗಳ ನಡುವಿನ ಸಂಬಂಧದ ಹಾಗೆಯೇ ವ್ಯಕ್ತಿಗಳ ನಡುವಿನ ಸಂಬಂಧಕ್ಕೂ ಅನ್ವಯಿಸುತ್ತದೆ. ಸ್ತ್ರೀವಾದ, ದಲಿತಚಿಂತನೆ, ಶ್ರಮಿಕರ ಹೋರಾಟ ಎಲ್ಲವೂ ನಿಜವಾಗಲೂ ಅನ್ಯಾಯಕ್ಕೆ ಒಳಗಾದವರ ಪರವಾದ ವಾದಮಂಡನೆಯೆಂದು ಒಪ್ಪಿಕೊಂಡಾಗಲೂ ಅವು ಸ್ವರಕ್ಷಣೆಯ ಕೋಟೆಯನ್ನು ಕಟ್ಟಿಕೊಳ್ಳುವುದನ್ನು ನಾವು ಗಮನಿಸಬಹುದು. ಇದು ಆಕ್ಷೇಪಣೆಯ ಮಾತಲ್ಲ. ಬದಲಾಗಿ ನಮ್ಮ ಕಣ್ಣೆದುರಿನ ವಾಸ್ತವವನ್ನು ಗುರುತಿಸಿ, ಒಪ್ಪಿಕೊಳ್ಳುವ ಮಾತು. ಈ ಬಗೆಯ ಚಿಂತನೆಯು ಹೋರಾಟದ ಅಗತ್ಯವನ್ನು ನಿರಾಕರಿಸುವುದಿಲ್ಲ. ಆದರೆ, ಸಾಹಿತ್ಯದಂತಹ ಕಲೆಯ ಸಂಕೀರ್ಣ ಸಾಧ್ಯತೆಗಳನ್ನು ಮತ್ತೆ ನಮ್ಮ ಗಮನಕ್ಕೆ ತರುತ್ತದೆ.

achchigoo modhalu

ಸೊಲ್ಲಾಪುರದ ಜನರಲ್ ಲೈಬ್ರರಿಯಲ್ಲಿ ಶ್ರೀ ದತ್ತೋ ವಾಮನ ಪೋದ್ದಾರ ಅವರಿಂದ ಸತ್ಕಾರ ಮತ್ತು ಸುಮಾರು ೬೫ವರುಷಗಳ ಹಿಂದೆ ಸ್ವಪ್ನನೌಕೆ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಾಗ

ದಿವಾಣಜಿಯವರು ಬೇಂದ್ರೆಯವರ ಅತ್ಯಂತ ನಿಕಟವರ್ತಿಯಾದ ಶಿಷ್ಯರಾಗಿದ್ದರೂ ಆ ಕವಿಯ ಆಶಾವಾದವನ್ನು ಒಪ್ಪಿಕೊಳ್ಳಲು ತಯಾರಾಗಿಲ್ಲ. ಈ ಬಗೆಯ ಭಯ-ನಿರಾಶೆಗಳ ಹಿಡಿತದಿಂದ ತಪ್ಪಿಸಿಕೊಳ್ಳಲು ಅವರು ಪ್ರಯತ್ನಿಸುವುದೂ ಇಲ್ಲ. ಅವರಿಗೆ ನಿಸರ್ಗ ಕೂಡ ಲವಲವಿಕೆಯನ್ನು ಕೊಡುವುದಿಲ್ಲ. ಒಳಮನಸ್ಸಿನಿಂದ, ಯಾವುದೇ ಉದ್ದೇಶದ ನಿಯಂತ್ರಣವಿಲ್ಲದೆ ಚಿಮ್ಮಿಬರುವ, ಸ್ವತಃ ಕವಿಗೂ ಕೂಡ ಬೆರಗು ಮೂಡಿಸುವ ಕವಿತೆಯನ್ನು ಮಾತ್ರ ಅವರು ಒಪ್ಪುತ್ತಾರೆ. ಆದರೆ, ಅಂತಹ ಕವಿತೆ ಕೂಡ ಭಾಷೆಗೆ ಸಹಜವಾದ ಮತ್ತು ಭಾಷೆಯನ್ನು ಮೀರಿದ ಅರ್ಥವಲಯಗಳನ್ನು ಹೊಂದಿರುತ್ತದೆ. ಅದು ಅರ್ಥ ಮತ್ತು ಸ್ವಾರ್ಥಗಳಿಲ್ಲದ ‘ಬರಿಯ ಭಾವಗೀತ.’ ಯಾಕೆಂದರೆ, ಅವರು ಚಿಂತನೆಯಿಂದ, ದೃಷ್ಟಿಕೋನದಿಂದ, ಐಡಿಯಾಲಜಿಗಳಿಂದ ಮೂಡಿ ಬಂದ ಬರವಣಿಗೆಯನ್ನು ಅನುಮಾನದಿಂದ ನೋಡುತ್ತಾರೆ. ಲೇಖಕನ ಒಳಮನಸ್ಸು ಕೂಡ ಸಾಮಾಜಿಕ ಆಯಾಮಗಳನ್ನು ಪಡೆದಿರುವುದು ನಿಜವಾದರೂ, ಅದರಿಂದ ವಿಶೃಂಖಲವಾಗಿ ಮೂಡಿಬರುವ ಸೃಜನಶೀಲ ಸಂಯೋಜನೆಗಳು ಸತ್ಯಸಮೀಪವೆಂದು ಅವರು ತಿಳಿಯುತ್ತಾರೆ. ಆದ್ದರಿಂದಲೇ ಅವರಿಗೆ ಬರವಣಿಗೆಯು ಲೇಖಕನ ಅಜೆಂಡಾಗಳಾಚೆಗೆ ಇರಬೇಕಾದ ಸಂಗತಿ. ಆದ್ದರಿಂದಲೇ ‘ಅಸಂಗತ’, ‘ಅಸ್ತಿತ್ವವಾದ’ ಮುಂತಾದ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಮಂಡಿಸಿದರೂ ತನ್ನ ಕಾದಂಬರಿಗಳು ಆ ವಿಚಾರಧಾರೆಗಳನ್ನು ಪ್ರತಿಪಾದನೆ ಮಾಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳುವ, ವೈಚಾರಿಕವಾಗಿ ಆತ್ಮೀಯರಾದ ಗೆಳೆಯರ ವಿರೋಧವನ್ನು ಕಟ್ಟಿಕೊಳ್ಳಲು ಹಿಂಜರಿಯದ ಆಲ್ಬರ್ಟ್ ಕಮೂ ಅಂತಹ ಲೇಖಕ ಅವರಿಗೆ ಇಷ್ಟವಾಗುತ್ತಾನೆ.

ನಿಜವಾದ ಕಲಾಕೃತಿಯ ಸ್ವಾಯತ್ತತೆಯನ್ನು ಎತ್ತಿ ಹಿಡಿಯುವ ದಿವಾಣಜಿಯವರು ಕಲಾಕೃತಿಯು ಅರ್ಥವಾಗಲು ಬೇರೆ ಯಾವುದೇ ತಿಳಿವಳಿಕೆಯೂ ಅನಗತ್ಯವೆಂದೇ ಹೇಳುತ್ತಾರೆ. “ಒಂದು ಕಲಾಕೃತಿ ಅರ್ಥವಾಗಲು ಕಲಾಕೃತಿಯ ಹೊರಗಿನ ಯಾವ ಅವಶ್ಯಕತೆಯೂ ಇಲ್ಲ. ನಿಜವಾದ ಕೃತಿಯ ಸಾರ್ಥಕತೆ ಯಾವುದರಲ್ಲಿದೆ? ಅದರ ಅರ್ಥಾನುಸಂಧಾನಕ್ಕೆ, ಅರ್ಥಾನುಭವಕ್ಕೆ ಆ ಕೃತಿಯೊಂದೆ ಸಾಕು. ಕೃತಿ ಸಹೃದಯರಿಗೆ ಹೃದಯಗಮ್ಯವಾಗಲು ತನ್ನ ಹೊರಗಿನ ಸಹಾಯವನ್ನು ಬಯಸಿದರೆಅಷ್ಟರಮಟ್ಟಿಗೆ ಅದು ಆ ಕೃತಿಯ ಸೋಲು.” ಆದರೆ, ಇವರು ಬಯಸುವ ಆದರ್ಶ ಓದುಗರು ಕೂಡ ಬಹಳ ನಿಧಾನವಾಗಿ ಒಳ್ಳೆಯ ಕೃತಿಗಳ ಓದಿನಿಂದಲೇ ರೂಪಿತವಾಗಬೇಕು. ಅವರು ಸಹಜವಾಗಿಯೇ ಇರುವುದಿಲ್ಲ. ಲೇಖಕನಂತೆಯೇ ಓದುಗರಿಗೂ ಅವರದೇ ಆದ ‘ಬ್ಯಾಗೇಜ್’ ಇರುತ್ತದೆ. ಅತ್ಯುತ್ತಮ ಕೃತಿಗಳು ತಮ್ಮನ್ನು ಅನಾವರಣ ಮಾಡಿಕೊಳ್ಳುವ ಬಗೆಯಲ್ಲಿಯೇ ಓದುಗನನ್ನು ಹೊಸ ತಿಳಿವಳಿಕೆಗೆ, ಹೊಸ ನಿಲುವುಗಳಿಗೆ ಅನಾವರಣ ಮಾಡುತ್ತವೆ. ‘ಸಾಹಿತ್ಯ ಶಿಕ್ಷಣ’, ‘ಸಾಹಿತ್ಯದ ಪ್ರಸ್ತುತತೆ’, ‘ಅದರ ಭಾಷಿಕ ಆಕೃತಿ’ ಮುಂತಾದ ಸಂಗತಿಗಳ ಬಗ್ಗೆ ಸಮುದಾಯಗಳ ಗ್ರಹಿಕೆಯು ಬದಲಾದಂತೆ ಕೃತಿಗಳ ಸ್ಥಾನಪಲ್ಲಟ ನಡೆಯುತ್ತದೆ. ಮಹಾಕೃತಿಗಳನ್ನು ಕೂಡಾ ಮತ್ತೆ ಮತ್ತೆ ‘ಡಿಸ್ಕವರ್’ ಮಾಡಬೇಕಾಗುತ್ತದೆ. ಇದು ಸಾಧ್ಯವಾಗಲು ‘ವ್ಯಕ್ತಿಕೇಂದ್ರಿತ’ವಾದ ಸಂಸ್ಕೃತಿಯ ಜಾಗದಲ್ಲಿ ‘ಕೃತಿಕೇಂದ್ರಿತ’ವಾದ ಸಂಸ್ಕೃತಿಯು ಒಡಮೂಡಬೇಕಾಗುತ್ತದೆ. ಹಾಗೆ ನೋಡಿದರೆ,ಆಧುನಿಕಪೂರ್ವ ಭಾರತೀಯ ಕಲೆ-ಸಂಸ್ಕೃತಿಗಳಲ್ಲಿ ಕಲಾವಿದರ, ಲೇಖಕರ ಇತಿವೃತ್ತಗಳು ಇರುವುದು ಬಹಳ ಬಹಳ ಕಡಿಮೆ. ಭಾರತೀಯ ಶಿಲ್ಪವು ಇದಕ್ಕೆ ಅತ್ಯುತ್ತಮ ಉದಾಹರಣೆ. ನಮ್ಮದು ‘ಜ್ಞಾನಪೀಠ ಪ್ರಶಸ್ತಿವಿಜೇತ’ರನ್ನು ಮೆರೆಸುವ ಓಲೈಸುವ ಕಾಲ.

ದಿವಾಣಜಿಯವರು ಲೇಖಕರ ಹೆಸರುಗಳ ಸುರಿಮಳೆ ಸುರಿಸುವಾಗಲೂ ಅವರು ಹೇಳಿರುವ ವಿಷಯಗಳಿಗೆ ಒತ್ತು ಕೊಡುವವರೇ ವಿನಾ ಲೇಖಕನ ವ್ಯಕ್ತಿತ್ವಕ್ಕೆ ಅಲ್ಲ. ದಿವಾಣಜಿಯವರದು ಕನ್ನಡ ಸಾಹಿತ್ಯದ ಜೊತೆಗೆ ಒಂದು ಬಗೆಯ ‘ಲವ್-ಹೇಟ್’ ಸಂಬಂಧ. ಸ್ವತಃ ಅವರು ಕನ್ನಡದಲ್ಲಿ ಬರೆಯುವುದರಿಂದ ಮತ್ತು ಆ ಭಾಷೆಯ ಸಾಹಿತ್ಯ ಪರಂಪರೆಗಳ ಜೊತೆಗೆ ಗಾಢವಾದ ಸಂಬಂಧ ಇಟ್ಟುಕೊಂಡಿರುವುದರಿಂದ ಅವರು ಹಲವು ಕನ್ನಡ ಕೃತಿಗಳನ್ನು ಪ್ರೀತಿ ಗೌರವಗಳಿಂದ ನೋಡುತ್ತಾರೆ. ಆದರೆ, ಕನ್ನಡ ಸಾಹಿತ್ಯವು ಜಗತ್ತಿನಲ್ಲೇ ಶ್ರೇಷ್ಠವೆಂಬ ತಿಳಿವಳಿಕೆಯನ್ನು ಅವರು ಒಂದಿನಿತೂ ಒಪ್ಪುವುದಿಲ್ಲ. ಆದ್ದರಿಂದಲೇ ಪಂಪನನ್ನೋ ಕಾಳಿದಾಸನನ್ನೋ ಶೇಕ್ಸ್‍ಪಿಯರ್​ಗೆ ಹೋಲಿಸುವ ಪ್ರಯತ್ನವನ್ನು ತಮಾಷೆ ಮಾಡುತ್ತಾರೆ. ನಮ್ಮ ಕನ್ನಡ ಭಾಷೆಯಲ್ಲಿ ಬಂದ ಒಳ್ಳೆಯ ಪುಸ್ತಕವು ಬೇರೆ ಯಾವುದೋ ಭಾಷೆಯಲ್ಲಿ ಬಂದಿರುವ ಒಳ್ಳೆಯ ಪುಸ್ತಕಕ್ಕಿಂತ ಮುಖ್ಯವೆಂಬ ವಿಚಾರವನ್ನು ಅವರು ಒಪ್ಪುವುದಿಲ್ಲ. ಬೇರೆ ಭಾಷೆಗಳು ಗೊತ್ತಿಲ್ಲದೆ ಹೋದರೂ ಅಂಥ ಕೃತಿಗಳು ಅನುವಾದದ ಮೂಲಕವೂ ಸಂವಹನವಾಗುವ ಸಾಮರ್ಥ್ಯವನ್ನು ಪಡೆದಿರುತ್ತವೆಯೆಂದೇ ಅವರ ಖಚಿತವಾದ ನಂಬಿಕೆ. ಅಲ್ಲದೆ ಅನ್ಯ ಭಾಷೆಗಳನ್ನು ಓದುವ ಶಕ್ತಿಯಿರುವವನಿಗಂತೂ ಅದು ತಿಳಿದೇ ತಿಳಿಯಬೇಕು. ಈ ಮಾತು ಸಂಸ್ಕೃತಿ ರಾಜಕೀಯದ ಹಲವು ನೆಲೆಗಳನ್ನು ತಿಳಿದ ನಂತರವೂ ನಿಜವೇ.

achchigoo modhalu

ಬಲಬದಿಯಿಂದ ಡಾ. ಸಿ. ಎನ್. ರಾಮಚಂದ್ರನ್ , ವಸಂತ ದಿವಾಣಜಿ, ದ. ರಾ. ಬೇಂದ್ರೆ, ಕೃಷ್ಣಮೂರ್ತಿ ಸೊಲ್ಲಾಪುರದಲ್ಲಿ.

ನಮ್ಮ ಭಾಷೆಯಲ್ಲಿಯೇ ಮೂಡಿಬಂದಿರುವ, ನಮ್ಮ ಭಾಷೆಗೇ ವಿಶಿಷ್ಟವಾದ ಸೃಜನಶೀಲತೆಯ ಪರಿಯನ್ನು ಅಷ್ಟು ಮುಖ್ಯವೆಂದು ಪರಿಗಣಿಸದ ಈ ನಿಲುವು ಬಹಳ ಕುತೂಹಲಕಾರಿಯಾದುದು. ಇದಕ್ಕೂ ಅವರು ತಮ್ಮ ಕಾದಂಬರಿಗಳಲ್ಲಿ ಭಾಷೆಯನ್ನು ಬಳಸುವ ತಟಸ್ಥ ಬಗೆಗೂ ಹೊಂದಾಣಿಕೆಯಾಗುತ್ತದೆ. ಸಾಹಿತ್ಯ ಕೃತಿಗಳ ನಡುವಿನ ತರತಮಗಳನ್ನು ಗುರುತಿಸಲು ಈ ನಿಲುವು ಸೂಕ್ತವೆನಿಸಬಹುದು. ಆದರೆ, ನಮ್ಮ ಭಾಷೆಯಲ್ಲಿ ನಡೆದ ಸೃಜನಶೀಲ ಚಟುವಟಿಕೆಗಳು ಆ ಕಾರಣಕ್ಕಾಗಿಯೇ ನಮ್ಮ ಒಳ ಮನಸ್ಸಿನ ಭಾಗವಾಗಿಬಿಡುವ ಪವಾಡವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅದೂ ಅಲ್ಲದೆ ನಮ್ಮ ಭಾಷೆಯ ಬೆಳವಣಿಗೆ, ಸಂಸ್ಕೃತಿಯ ಬೆಳವಣಿಗೆ ಮತ್ತು ನಮ್ಮ ಅಂತರಂಗದ ರೂಪಣಗಳು ಪರಸ್ಪರ ಒಳಗೊಂಡಿರುತ್ತವೆ. ಉದಾಹರಣೆಗೆ ಬೇಂದ್ರೆಯವರ ಕವಿತೆಗಳು ನಮ್ಮಲ್ಲಿ ಮೂಡಿಸುವ ಧ್ವನಿತರಂಗಗಳನ್ನು ಬೇರೆ ಯಾವುದೇ ಭಾಷೆಯ ಕವಿತೆಯ ಅತ್ಯುತ್ತಮ ಅನುವಾದಗಳೂ ಮೂಡಿಸಲಾರವು. ಈ ಮಾತಿಗೆ ಸ್ವತಃ ಬೇಂದ್ರೆಯವರ ಅನುವಾದಗಳೂ ಅಪವಾದವಲ್ಲ. ರಾಮಾಯಣ ಮಹಾಭಾರತಗಳು ನಮ್ಮ ಒಳಗನ್ನು ತುಂಬಿಕೊಂಡಿರುವುದು ಸಂಸ್ಕೃತದ ಮಹಾಕಾವ್ಯಗಳಾಗಿ ಅಲ್ಲ. ಅವು ಕನ್ನಡದೊಳಗೆ ಮೈಪಡೆದಿರುವ ಕಥನಗಳು. ನಮ್ಮಲ್ಲಿ ಬಹುಪಾಲು ಜನರಿಗೆ ಸಂಸ್ಕೃತ ಮಹಾಭಾರತದ ಒಂದೇ ಒಂದು ವಾಕ್ಯವೂ ಗೊತ್ತಿಲ್ಲ. ಹಾಗೆಂದು ವೈಯಕ್ತಿಕವಾಗಿ ನಮ್ಮ ಒಟ್ಟು ತಿಳಿವಳಿಕೆಯ ಬೆಳವಣಿಗೆಗೆ ಮತ್ತು ಸಾಹಿತ್ಯದ ಸಾಧ್ಯತೆಗಳನ್ನು ಕುರಿತಾದ ಅರಿವಿಗೆ ಅನ್ಯಭಾಷೆ ಹಾಗೂ ಸಂಸ್ಕೃತಿಗಳ ಕೊಡುಗೆಯನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ‘ಅನ್ಯ’ವನ್ನು‘ಆತ್ಮಸಾತ್’ ಮಾಡಿಕೊಂಡವರ ಪ್ರಜ್ಞೆಯಿಂದ ಆ ‘ಅನ್ಯ’ವೂ ನಮ್ಮದಾಗಿಯೇ ಮೈಪಡೆಯುವ ಪವಾಡ ಸಂಭವಿಸುವುದೆಂದು ತೋರುತ್ತದೆ. ದಿವಾಣಜಿಯವರ ಜೀವನ ದರ್ಶನ ಮತ್ತು ಕಲಾದರ್ಶನಗಳು ಈ ಮಾತಿಗೆ ಅತ್ಯುತ್ತಮ ಉದಾಹರಣೆಗಳು. ಅಲ್ಲದೆ ಡಾಮಿನಂಟ್ ಆದ ಸಂಸ್ಕೃತಿಯು ಕೊಡುವವನ ಪಾತ್ರವನ್ನು ವಹಿಸಿ, ದಮನಿತವಾದ ಸಂಸ್ಕೃತಿಗಳ ತಿಳಿವಳಿಕೆಯು ಪಕ್ಕಕ್ಕೆ ಸರಿಯುವುದು ಸಂಸ್ಕೃತಿ-ರಾಜಕೀಯದ ದುರಂತ. ಕೊನೆಗೂ ವಿಚಾರಗಳಿಗೆ, ಅನುಭವಗಳಿಗೆ, ಮಾನುಷಿಕ ಪ್ರತಿಕ್ರಿಯೆಗಳಿಗೆ ಭಾಷಿಕವಾದ, ದೇಶಿಕವಾದ, ಕಾಲಿಕವಾದ ಗಡಿಗೆರೆಗಳು ಇಲ್ಲವೆನ್ನುವ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು. ಪಂಪನು ‘ಮನುಷ್ಯಜಾತಿ ತಾನೊಂದೆ ವಲಂ’ ಎಂದು ಹೇಳಿದ್ದು ಈ ನೆಲೆಯಲ್ಲಿಯೇ. ಕುವೆಂಪು ಅವರು ಕೂಡ ಲೌಕಿಕ ಮತ್ತು ವೈಶ್ವಿಕಗಳ ಕರುಳುಬಳ್ಳಿಯ ಸಂಬಂಧವನ್ನು ಕುರಿತು ಗಂಭೀರವಾಗಿ ಚಿಂತಿಸಿಯೇ ಅನಿಕೇತನ ಸ್ಥಿತಿಯ ಬಗ್ಗೆ ಒಲವು ತಳೆದರು.

ಆದ್ದರಿಂದಲೇ ಕನ್ನಡ ಸಾಹಿತ್ಯ ಪರಂಪರೆಯಲ್ಲಿ, ಅದರಲ್ಲೂ ಆಧುನಿಕ ಸಾಹಿತ್ಯ ಸನ್ನಿವೇಶದಲ್ಲಿ ದಿವಾಣಜಿಯವರು ಊನಗಳನ್ನು ಗುರುತಿಸುತ್ತಾರೆ. ನಮ್ಮದು ಸಂವಾದಸಾಧ್ಯತೆಗಳಿಗೆ ಎರವಾದ ಲೀನಿಯರ್ ಮಂಡನೆಯ ಪರಂಪರೆಯೆಂದು ಅವರು ತಿಳಿಯುತ್ತಾರೆ. ಬಹುಪಾಲು ಲೇಖಕರಿಗೆ ತಮ್ಮ ಅನಿಸಿಕೆಗಳನ್ನು ಮಂಡಿಸುವ ಉಮೇದು ಇರುವಂತೆ ‘ಅನ್ಯ’ವನ್ನು ಅರ್ಥ ಮಾಡಿಕೊಳ್ಳುವ ಆಸಕ್ತಿ ಇರುವುದಿಲ್ಲ. ಗಂಡು-ಹೆಣ್ಣುಗಳ ಸಂಬಂಧವನ್ನು ಪುರುಷಪ್ರಧಾನವಾದ ನೆಲೆಯಿಂದಲೇ ಚಿತ್ರಿಸಿರುವುದರ ಬಗ್ಗೆ ಅವರ ತಕರಾರುಗಳಿದ್ದವು. ಕಳೆದ ಕೆಲವು ವರ್ಷಗಳಲ್ಲಿ ಗಂಡು-ಹೆಣ್ಣುಗಳ ಒಂದುತನದ ನೆಲೆಯಲ್ಲಿ, ಲೇಖಕಿಯರಿಂದಲೇ ಮೂಡಿಬಂದಿರುವ ಕೆಲವು ಕವಿತೆ, ಕಥೆಗಳನ್ನು ಅವರು ಪ್ರೀತಿಯಿಂದ ನೋಡುತ್ತಿದ್ದರೆಂದು ನನ್ನ ನಂಬಿಕೆ. ಆದರೂ ಹೀಗೆ ಪೂರ್ವಗ್ರಹ ಪೀಡಿತವಾದ ಸಾಹಿತ್ಯವು ಮನುಷ್ಯಚೇತನಕ್ಕೆ ಸಾಂತ್ವನ ನೀಡುವ ಬದಲು ಅದನ್ನು ಕೆರಳಿಸುವುದೆಂದೇ ಅವರು ನಂಬಿದ್ದರು. ಕೆ.ಎಸ್. ನರಸಿಂಹಸ್ವಾಮಿಯವರ “ತುಂಬದ ಮೊಲೆಗೆ ತುಟಿಯನಿಡುತಿದೆ ಕಂದ ನೋಡಿ.” ಎಂಬ ಸಾಲು ಅವರಿಗೆ ಬಹಳ ಇಷ್ಟ. ಅವರು ಇದನ್ನು ಒಟ್ಟು ಕನ್ನಡ ಸಾಹಿತ್ಯದ ‘ರಿಕ್ತ’ ಸ್ಥಿತಿಗೆ ರೂಪಕವಾಗಿ ಗ್ರಹಿಸಿದ್ದರು. ಅವರ ‘ಪರಿಘ’ ಕಾದಂಬರಿಯು ಇಂತಹ ಸನ್ನಿವೇಶವನ್ನು ಬಹಳ ಸಮರ್ಥವಾಗಿ ವಿಶ್ಲೇಷಣೆ ಮಾಡುತ್ತಿದೆ. ಅಲ್ಲಿನ ಪಾತ್ರಗಳ ಮೂಲ ಹೆಸರುಗಳನ್ನು ಸುಲಭವಾಗಿ ಊಹಿಸಬಹುದು ಎನ್ನುವಷ್ಟು ಅದು ಸತ್ಯಸಮೀಪವಾಗಿದೆ. ಆದ್ದರಿಂದ ಮನೋವಿಶ್ಲೇಷಣೆಯನ್ನೂ ಅಭ್ಯಾಸ ಮಾಡಿದ್ದ ದಿವಾನಜಿಯವರು ಸಾಹಿತ್ಯದ ಥೆರಪಿಟಿಕ್ (ಚಿಕಿತ್ಸಕ) ಸಾಧ್ಯತೆಗಳಲ್ಲಿ ನಂಬಿಕೆಯಿಟ್ಟದ್ದರೆಂದೂ ತೋರುತ್ತದೆ.

ಕಥಾಸಾಹಿತ್ಯವನ್ನು ಕುರಿತು ಮಾತನಾಡುವಾಗ ದಿವಾಣಜಿಯವರ ಗಮನವು ವಾಕ್ಯೋತ್ತರ ಘಟಕಗಳ ಕಡೆ ಗಮನ ಹರಿಸುತ್ತದೆ. ಆಶಯಗಳ ಕಡೆಗೆ ಹೆಚ್ಚು ಒತ್ತು ಕೊಡುವ ಕನ್ನಡದ ಕಥನವಿಮರ್ಶೆಯು ಇಡೀ ಕಾದಂಬರಿಯ ಸಂವಿಧಾನದ ಬಗ್ಗೆ, ಅದರ ಬೇರೆ ಬೇರೆ ಘಟಕಗಳ ನಡುವಿನ ಸಂಬಂಧಗಳ ಬಗ್ಗೆ ಮಾತಾಡಿರುವುದು ಕಡಿಮೆ. ಇಲ್ಲಿನ ಕೆಲವು ಲೇಖನಗಳು ಅಂತಹ ನಿರೀಕ್ಷೆಯನ್ನು ಹುಟ್ಟಿಸುತ್ತವೆ. ದಿವಾಣಜಿಯವರು ಇನ್ನಷ್ಟು ಬರೆದಿದ್ದರೆ ಚೆನ್ನಾಗಿತ್ತು ಎನ್ನಿಸುತ್ತದೆ. ಅವರು ಭಾವನೆಗಳ ಭಾಷೆಗೆ ಒತ್ತು ಕೊಡುತ್ತಾರೆ. ರೂಪಕಗಳನ್ನು ಕಂಡುಕೊಳ್ಳಬೇಕೇ ಹೊರತು ಅವುಗಳನ್ನು ಸೃಷ್ಟಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ. ‘ಕಥನದ ಭಾಷೆಯು ತನ್ನ ಭಾವಸಾಂದ್ರತೆಯಿಂದಲೇ ‘ಅಲೆಗಾರಿಕಲ್’ ಆಗಿಬಿಡುತ್ತದೆ’ ಎನ್ನುವ ಅವರ ಅನಿಸಿಕೆಯು ಬಹಳ ಮುಖ್ಯವಾದುದು. ಇಂದಿಗೂ ನಮಗೆ ಅಗಮ್ಯವಾಗಿಯೇ ಉಳಿದಿರುವ ‘ಹಳದಿ ಮೀನು’, ‘ಕುದುರೆ ಮೊಟ್ಟೆ’, ‘ತಬ್ಬಲಿಗಳು’ ಮುಂತಾದ ಕೃತಿಗಳನ್ನು ಸರಿಯಾಗಿ ಓದಲು ಅಗತ್ಯವಾದ ವಿಧಾನಗಳ ಕಡೆಗೆ ಈ ಅನಿಸಿಕೆಗಳು ಬೆರಳು ಮಾಡುತ್ತವೆ.

achchigoo modhalu

ಕುಸುಮಾಕರ ಅವರ ಹಸ್ತಾಕ್ಷರ

-3-

ಈ ಪುಸ್ತಕದಲ್ಲಿ ಮೂರು ಬಗೆಯ ಲೇಖನಗಳಿವೆ. ಮೊದಲನೆಯದು ಜೀವನ, ಸಮಾಜ ಮತ್ತು ಕಲೆಗಳನ್ನು ಕುರಿತ ತಾತ್ವಿಕ ಚಿಂತನೆ. ಇದು ಮೂರು ಸಂದರ್ಶನಗಳಲ್ಲಿ ಬೇರೆ ಕೆಲವು ಲೇಖನಗಳಲ್ಲಿ ಮೂಡಿಬಂದಿದೆ. ಈ ಭಾಗವು ಪುಸ್ತಕದ ಮುಖ್ಯವಾದ ಭಾಗ. ಅವರ ಪಿಎಚ್.ಡಿ. ಪ್ರಬಂಧಕ್ಕೆ ಮಾರ್ಗದರ್ಶಕರಾದ ಪ್ರೊ. ರಂ.ಶ್ರೀ. ಮುಗಳಿಯವರ ಸಂಪಾದಕತ್ವದಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಿಸಿದ ‘ಸಮಗ್ರ ಸಾಹಿತ್ಯಚರಿತ್ರೆ’ಯ ಸಂಪುಟಗಳಿಗಾಗಿ ಕೆಲವು ಪರಿಚಯಾತ್ಮಕವಾದ/ವಿಮರ್ಶಾತ್ಮಕವಾದ ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಸಿದ್ಧರಾಮನನ್ನು ಕುರಿತ ಬರವಣಿಗೆಯು ಇವರು ಸೊಲ್ಲಾಪುರದಲ್ಲಿ ಕೆಲಸ ಮಾಡುತ್ತಿದ್ದರೆಂಬ ಕಾರಣಕ್ಕಾಗಿ ಬಂದುದಾದರೆ, ಹರಿದಾಸ ಸಾಹಿತ್ಯವನ್ನು ಕುರಿತ ಲೇಖನಗಳು ಇವರ ಪಿಎಚ್.ಡಿ. ಪ್ರಬಂಧದ ವಸ್ತುವಿಗೆ ನಿಕಟವಾದವು. ಇವುಗಳು ಸಾಂದರ್ಭಿಕವಾದ ಎಡಗೈ ಬರೆಹಗಳಂತೆ ತೋರುತ್ತವೆ. ಕಮೂ, ಧರ್ಮಶ್ರೀ ಮುಂತಾದವು ಅವರಿಗೆ ಇಷ್ಟವಾದ ಕಾದಂಬರಿ ಪ್ರಕಾರದ ಬಗ್ಗೆ ಮಹತ್ವದ ಮಾತುಗಳನ್ನು ಹೇಳುತ್ತವೆ. ಕೆ.ವಿ. ನಾರಾಯಣ ಮತ್ತು ರಹಮತ್ ತರೀಕೆರೆಯವರಿಗೆ ಬರೆದಿರುವ ಪತ್ರಗಳಲ್ಲಿ ಕೂಡ ಗಂಭೀರವಾದ ಒಳನೋಟಗಳಿವೆ. ಹಳಗನ್ನಡ ಸಾಹಿತ್ಯದ ಓದಿನ ಅಗತ್ಯವನ್ನು ಕುರಿತು ಪೂರ್ಣಚಂದ್ರ ತೇಜಸ್ವಿಯವರು ಟಿ.ವಿ. ವೆಂಕಟಾಚಲಶಾಸ್ತ್ರಿಗಳನ್ನು ಕೇಳಿದ ಪ್ರಶ್ನೆಗೆ ಉತ್ತರವನ್ನು ಕೆ.ವಿ.ಎನ್. ಅವರು ‘ಅಭಿಜ್ಞಾನ ಶಾಕುಂತಲ’ವನ್ನು ಕುರಿತ ಲೇಖನದಲ್ಲಿ ಹುಡುಕುವುದು ಮೌಲಿಕವಾಗಿದೆ.

ಇಲ್ಲಿನ ಲೇಖನಗಳನ್ನು ಸಂಗ್ರಹಿಸುವುದಾಗಲೀ ಅಥವಾ ದಿವಾನಜಿಯವರ ವಿಚಾರಗಳ ಪರವಾದ ವಾದಮಂಡನೆಯಾಗಲೀ ನನ್ನ ಉದ್ದೇಶವಲ್ಲ. ಅವರಿಗೆ ಅದರ ಅಗತ್ಯವಿಲ್ಲ. ಈ ಬರೆಹಗಳನ್ನು ನಿಧಾನವಾಗಿ, ನಿಂತು ನಿಂತು ಓದುವುದರಿಂದ ನಮಗೆ ಬಹಳ ಪ್ರಯೋಜನವಿದೆ. ಇವು ಒಳ್ಳೆಯ ಮನುಷ್ಯ, ಬಹುಶ್ರುತನಾದ ಮನುಷ್ಯ ಮತ್ತು ಜೀವನವನ್ನು ಪ್ರೀತಿಯಿಂದ ಗ್ರಹಿಸಿದ ಮೇಧಾವಿಯೊಬ್ಬನು ಒಂದುಗೂಡಿ ಬರೆದ ಬರಹಗಳು. ನಮಗೆ ಇನ್ನೇನು ಬೇಕು. ವಸಂತ ದಿವಾನಜಿಯವರಿಗಾಗಿಯೇ ತಮ್ಮ ಜೀವನವನ್ನು ಮೀಸಲಿಟ್ಟಿರುವ ಅವರ ತಮ್ಮ ಪ್ರಹ್ಲಾದ ದಿವಾನಜಿಯವರು ನನ್ನ ಅಕ್ಷಮ್ಯ ವಿಳಂಬವನ್ನು ಪ್ರೀತಿ ಮತ್ತು ಸೌಜನ್ಯಗಳಿಂದ ಸಹಿಸಿಕೊಂಡಿದ್ದಾರೆ. ವರ್ಷಗಟ್ಟಲೆ ಕಾದಿದ್ದಾರೆ. ನನ್ನ ವಿಳಂಬಕ್ಕೆ ಸೋಮಾರಿತನದಷ್ಟೇ ಹಿಂಜರಿಕೆಯೂ ಕಾರಣ. ಪ್ರೀತಿಯ ಪ್ರಹ್ಲಾದ ದಿವಾನಜಿ ಮತ್ತು ವಿದ್ಯಾ ದಿವಾನಜಿಯವರಿಗೆ ನನ್ನ ಪ್ರೀತಿ ಮತ್ತು ಪ್ರಣಾಮಗಳು.

*

ಪರಿಚಯ: ಕನ್ನಡದ ಹಿರಿಯ ವಿಮರ್ಶಕರಾದ ಎಚ್​. ಎಸ್​ ರಾಘವೇಂದ್ರ ರಾವ್ ಅವರು ಚಿತ್ರದುರ್ಗದ ಮೂಲದವರು. ಸದ್ಯ ನೆಲೆಸಿರುವುದು ಬೆಂಗಳೂರಿನಲ್ಲಿ.  ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನಿವೃತ್ತಿಗೊಂಡಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿಯೂ ಕೆಲ ವರ್ಷ ಪ್ರಾಧ್ಯಾಪಕರಾಗಿದ್ದರು. ಕರ್ನಾಟಕ ವಿಶ್ವಕೋಶದ ಸಂಪಾದಕರೂ ಆಗಿದ್ದ ಇವರು, ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಪ್ರವಾಸ ಕಥನ ಪ್ರಕಟಿಸಿದ್ದಾರೆ. ತರುತಳೆದ ಪುಷ್ಪ, ಸಂಗಡ, ನಮಸ್ಕಾರ, ಅವಘ, ಇಂದಿನ ಕವಿತೆ, ಸಾಹಿತ್ಯ ಸಂವಾದ, ಭೃಂಗಮಾರ್ಗ, ವಿಶ್ಲೇಷಣೆ, ಮಂಜು ಮಣ್ಣು ಮೌನ, ಕಪ್ಪು ಕವಿತೆ, ಹತ್ತು ದಿಕ್ಕಿನ ಬೆಳಕು, ಕಣ್ಣ ಹನಿಗಳೆ ಕಾಣಿಕೆ, ಚಕ್ರವರ್ತಿಯ ಬಟ್ಟೆಗಳು ಇವು ಅವರ ಪ್ರಕಟಿತ ಕೃತಿಗಳು.

(‘ನಕ್ಷೆಗೆ ಎಟುಕದ ಕಡಲು’ ಕಾಯ್ದಿರಿಸಲು ಸಂಪರ್ಕಿಸಿ, ಪುಸ್ತಕ ಭಂಡಾರ, ಬೆಂಗಳೂರು – 9481604435)

ಫೋಟೋ ಮತ್ತು ಮಾಹಿತಿ ಸೌಜನ್ಯ : ಪ್ರಹ್ಲಾದ ದಿವಾಣಜಿ, ಮುಂಬೈ

achchigoo modhalu

ವಿಮರ್ಶಕ ಡಾ. ಎಚ್​. ಎಸ್​. ರಾಘವೇಂದ್ರ ರಾವ್

ಇದನ್ನೂ ಓದಿ : ಅಚ್ಚಿಗೂ ಮೊದಲು : ‘ಅನಾರ್ಕಲಿಯ ಸೇಫ್ಟಿ ಪಿನ್​‘ ಬಿಡಿಸಿಕೊಂಡು ಬಂದ ‘ಎವರ್​ಗ್ರೀನ್​‘ನ ಒಂದು ಎಸಳು

Published On - 5:50 pm, Sun, 18 April 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ