“ನಾನು ಬದುಕಿರುವಾಗಲೇ ಅಲ್ಲಿ ರಾಮಮಂದಿರ ಆಗುವುದನ್ನು ನೋಡಬೇಕು ಮತ್ತು ಅದೇ ಅಯೋಧ್ಯಾದಲ್ಲೇ ಮತ್ತೆ ನಾನು ಹುಟ್ಟಬೇಕು,” – ಹೀಗಂದಿದ್ದರು ಕಲ್ಯಾಣ್ ಸಿಂಗ್. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದ್ದ ಮಾತಿದು. ಅಂದಹಾಗೆ, 89 ವರ್ಷದ ಕಲ್ಯಾಣ್ ಸಿಂಗ್ ಶನಿವಾರದಂದು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಭಾರತದ ಇತಿಹಾಸದ ಮಹತ್ವವಾದ ಘಟನೆಯಲ್ಲಿ ಒಂದಾದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಒಂದು ಕೊಂಡಿ ಕಳಚಿದಂತಾಗಿದೆ. ಮೇಲೆ ಪ್ರಸ್ತಾಪಿಸಲಾದ ಸಂದರ್ಶನ ಕಳೆದ ವರ್ಷ ನಡೆದಿತ್ತು. ಡಿಸೆಂಬರ್ 6, 1992ರಂದು ಕರಸೇವಕರ ಮೇಲೆ ಪೊಲೀಸರು ಗುಂಡು ಹಾರಿಸುವುದಕ್ಕೆ ಆ ಸಂದರ್ಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದ ತಾವು ಅನುಮತಿ ನೀಡದಿರುವ ತೀರ್ಮಾನವನ್ನು ಕಲ್ಯಾಣ್ ಸಿಂಗ್ ಸಮರ್ಥಿಸಿಕೊಂಡಿದ್ದರು. ಆ ನಿರ್ಧಾರವು ಹೆಮ್ಮೆಯ ಸಂಗತಿ ಎಂದು ಕೂಡ ಹೇಳಿಕೊಂಡಿದ್ಚರು.
“ಬಾಬ್ರಿ ಮಸೀದಿ ಕಟ್ಟಡ ಕೆಡವಿದ್ದಕ್ಕೆ ಕ್ಷಮೆ ಕೇಳಬೇಕು ಅನಿಸುವುದಿಲ್ಲ. ಅಥವಾ ಅದಕ್ಕಾಗಿ ನನಗೆ ಯಾವುದೇ ಅಸಮಾಧಾನ ಕೂಡ ಇಲ್ಲ. ಯಾವುದೇ ವಿಷಾದವಿಲ್ಲ, ಪಶ್ಚಾತ್ತಾಪವಿಲ್ಲ, ದುಃಖವಿಲ್ಲ, ಶೋಕವಿಲ್ಲ. ವಿವಾದಾತ್ಮಕ ಕಟ್ಟಡ ಕೆಡವಿದ ನಂತರ, ಅನೇಕರು ಈ ಘಟನೆಯನ್ನು ರಾಷ್ಟ್ರೀಯ ಅವಮಾನದ ಸಂಗತಿ ಎಂದು ಕರೆದರು. ಆದರೆ ಇದು ರಾಷ್ಟ್ರೀಯ ಹೆಮ್ಮೆಯ ವಿಷಯ ಎಂದು ನಾನು ಹೇಳುತ್ತೇನೆ,” ಎಂದು ಸಿಂಗ್ ತಿಳಿಸಿದ್ದರು. ಕಲ್ಯಾಣ್ ಸಿಂಗ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ವಿವಾದಾತ್ಮಕ ಕಟ್ಟಡವು ಅಯೋಧ್ಯೆಯಲ್ಲಿ ನೆಲಕ್ಕೆ ಉರುಳಿಸಲಾಗಿತ್ತು. ಆ ಧ್ವಂಸ ಪ್ರಕರಣದ ನಂತರದಲ್ಲಿ ಕಲ್ಯಾಣ್ ಸಿಂಗ್ರ ನೇತೃತ್ವದ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿತ್ತು.
ಆ ಘಟನೆ ನಡೆದ ವರ್ಷಗಳ ನಂತರ ಟೀವಿ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ, ದೇಶದ ‘ಜಾತ್ಯತೀತ’ ತತ್ವವನ್ನು ಉಳಿಸಲು ಯಾವ ಕರಸೇವಕರು ಪ್ರಾಣ ಬಿಡಲಿ ಎನ್ನುವುದನ್ನು ಬಯಸುತ್ತಾರೆ, ಆ ದಿನದಂದು ಅಯೋಧ್ಯೆಯಲ್ಲಿ ಏನಾಯಿತು ಎಂಬುದಕ್ಕೆ ನನಗೆ ಯಾವುದೇ ಪಶ್ಚಾತ್ತಾಪ ಅಥವಾ ವಿಷಾದ ಇಲ್ಲ ಎಂದು ಸಿಂಗ್ ಹೇಳಿದ್ದರು. ರಾಮಜನ್ಮಭೂಮಿ ಚಳವಳಿಯಲ್ಲಿ ಕಲ್ಯಾಣ್ ಸಿಂಗ್ ಅವರಿಗೆ ಭಾರೀ ಗೌರವ ಇತ್ತು. ಕರಸೇವಕರ ಮೇಲೆ ಪೊಲೀಸರು ಗುಂಡು ಹಾರಿಸುವುದಕ್ಕೆ ಅನುಮತಿ ನೀಡದ ಸಿಂಗ್, ಮುಖ್ಯಮಂತ್ರಿ ಹುದ್ದೆಯನ್ನು ತೊರೆದಿದ್ದರು. ಆ ಕಾರಣದಿಂದಲೇ ಹಿಂದುತ್ವ ಚಳವಳಿಯಲ್ಲಿ ಕಲ್ಯಾಣ್ ಸಿಂಗ್ ಐಕಾನ್ ಆಗಿದ್ದರು.
ಇದನ್ನೂ ಓದಿ: Kalyan Singh: ಉತ್ತರ ಪ್ರದೇಶದ ಮಾಜಿ ಸಿಎಂ, ಹಿರಿಯ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ನಿಧನ
(Hindutva Icon Kalyan Singh Sacrificed CM Position Instead Of Giving Firing Order On Karsevaks)
Published On - 11:30 pm, Sat, 21 August 21