ದಕ್ಷಿಣ ಕನ್ನಡ: ಮನೆಯಲ್ಲಿ ಕಡು ಬಡತನ. ಒಂದು ಹೊತ್ತು ಊಟಕ್ಕೂ ಕಷ್ಟದ ಪರಿಸ್ಥಿತಿ. ಅದೆಷ್ಟೋ ದಿನ ಹಸಿವಿನಿಮದ ಮಲಗಿದ್ದೂ ಉಂಟು. ಇಂತಹ ಕಷ್ಟವನ್ನು ಮೆಟ್ಟಿನಿಮತು ಜೀವನದಲ್ಲಿ ಸಾಧನೆ ಮಾಡಿದ ಓರ್ವ ಸಾಧಕಿಯ ಅಂತರಾಳದ ಮಾತಿದೆ. ಆರಂಭಿಕ ಜೀವನದ ಪರಿಸ್ಥಿತಿಯಿಂದ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದ ಚೇತನಾಳ ಸಾಹಸಗಾಥೆ ಇಲ್ಲಿದೆ.
ಮಹಿಳಾ ದಿನಚಾರಣೆ ಅಂಗವಾಗಿ ಟಿವಿ9 ಕನ್ನಡ ಡಿಜಿಟಲ್ ಓರ್ವ ಸಾಧಕಿಯ ಕಥೆಯನ್ನು ತೆರೆದಿಡುತ್ತಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ 2020ನೇ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈ ವರ್ಷದ 25 ರಂದು ಹೊರಡಿಸಲಾದ ಅಧಿಸೂಚನೆಯಂತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಧರ್ಮಸ್ಥಳ ಗ್ರಾಮದ ನಾರ್ಯದ ಯುವತಿ ಚೇತನಾ ಅವರು ಆಯ್ಕೆಯಾಗಿದ್ದಾರೆ.
ಬಾಲ್ಯದ ಜೀವನ
ಚೇತನಾ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನಾರ್ಯ ಎಂಬ ಪುಟ್ಟ ಹಳ್ಳಿಯಲ್ಲಿ ಬೆಳೆದರು. ಇವರ ಕುಟುಂಬ ಆರ್ಥಿಕವಾಗಿ ಅಷ್ಟೊಂದು ಸಬಲರಲ್ಲ. ಕಡು ಬಡಲತನದ ಜೀವನದಲ್ಲಿ ಬೆಳೆದು ಬಂದಿದ್ದಾರೆ ಚೇತನಾ. ಪ್ರಾಥಮಿಕ ಶಿಕ್ಷಣವನ್ನು ಬೆಳ್ತಂಗಡಿ ತಾಲೂಕಿನ ಪೆರ್ನೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದರು. ಏಳನೇ ತರಗತಿ ವಿದ್ಯಾಭ್ಯಾಸವನ್ನು ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಓದಿದರು. ಪ್ರೌಢ ಶಿಕ್ಷಣವನ್ನು ಧರ್ಮಸ್ಥಳ ಎಸ್‌ಡಿಎಂ ಸೆಕೆಂಡರಿ ಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.
ಕಷ್ಟಪಟ್ಟು ಓದಿ ನ್ಯಾಯಾಧೀಶೆಯಾದ ಚೇತನಾ!
ಮಂಗಳೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಬೆಳ್ತಂಗಡಿಯ ವಕೀಲರಾದ ಕೇಶವ ಪಿ.ಬೆಳಾಲು ಅವರ ಬಳಿ ವಕೀಲ ವೃತ್ತಿ ಅರಂಭಿಸಿದ ಚೇತನಾ, ಬಳಿಕ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ.ಎ.ಪಾಟೀಲ್ ಅವರ ಕ್ಲರ್ಕ್ ರಿಸರ್ಚ್ ಅಸಿಸ್ಟೆಂಟ್ ಆಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಒಂದು ವರ್ಷದಿಂದ ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಹೈಕೋರ್ಟ್ನಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು. ಈ ಮಧ್ಯೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಚೇತಾನ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಸಾಧನೆಗೆ ಅಡ್ಡಿಯಾಗಲಿಲ್ಲ ಬಡತನ
ಧರ್ಮಸ್ಥಳ ಸಮೀಪದ ನಾರ್ಯದ ರಾಮಣ್ಣ ಪೂಜಾರಿ ಮತ್ತು ಸೀತಾ ದಂಪತಿಯ ಪುತ್ರಿ ಚೇತನಾ. ಮಗಳಿಗೆ ಬೆನ್ನೆಲುಬಾಗಿ ನಿಂತವರು ತಾಯಿ ಸೀತಾ. ಮನೆಯಲ್ಲಿ ಆರ್ಥಿಕ ಬಡತನವಿತ್ತು. ಪ್ರತಿನಿತ್ಯ ಒಂದು ಹೊತ್ತು ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ತನ್ನ ಹೊಟ್ಟೆಗೆ ಊಟವಿಲ್ಲದಿದ್ದರೂ, ತನ್ನ ಮಕ್ಕಳು ವಿದ್ಯಾವಂತರಾಗಿ ಸಮಾಜದಲ್ಲಿ ಎಲ್ಲರೂ ತಲೆ ಎತ್ತಿ ನೋಡುವಂತೆ ಆಗಬೇಕು ಎಂಬುದು ಚೇತನಾ ತಾಯಿಯ ಆಸೆ. ತಾಯಿ ಸೀತಾ ತನ್ನ ಜೀವನ ಪಣಕ್ಕಿಟ್ಟು, ಚೇತಾನಳ ವಿದ್ಯೆಯ ಹಸಿವನ್ನು ನೀಗಿಸಿದ್ದಾರೆ. ಸಿವಿಲ್ ನ್ಯಾಯಾಧೀಶೆ ಪರೀಕ್ಷೆ ಬರೆದು ಉತ್ತೀರ್ಣರಾಗಿ, ಮನೆಗೆ ಹಾಗೂ ಗ್ರಾಮಕ್ಕೆ ಹೆಮ್ಮೆಯ ಪುತ್ರಿಯಾಗಿ ಸಾಧನೆ ಗೈದಿದ್ದಾರೆ.
ಕೂಲಿ ಮಾಡಿ ಮಗಳಿಗೆ ವಿದ್ಯಾಭ್ಯಾಸ ಕಲಿಸಿದ ಪೋಷಕರು
ರಾಮಣ್ಣ ಪೂಜಾರಿ ಮತ್ತು ಸೀತಾ ದಂಪತಿಗೆ ನಾಲ್ಕು ಮಕ್ಕಳಲ್ಲಿ ಮೂರು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು. ಚೇತನಾ ಚಿಕ್ಕಂದಿನಿಂದಲೇ ತುಂಬಾ ಬುದ್ಧಿವಂತೆ. 4 ಮಕ್ಕಳಲ್ಲಿ ಹಿರಿಯ ಮಗ ರೂಪೇಶ್. ಈತ ವಿಶೇಷ ಚೇತನನಾಗಿದ್ದು 14 ವರ್ಷ ಬಳಿಕ ನಿಧಾನವಾಗಿ ನಡೆದಾಡಲು ಪ್ರಾರಂಭಿಸಿದ್ದ. ಚೇತನಾ ತಂದೆ ಕೂಲಿ ಕೆಲಸ ಮಾಡುತ್ತಿದ್ದರು. ತಾಯಿ ಬೀಡಿ ಕಟ್ಟಿ ತಮ್ಮ ಜೀವನ ಸಾಗಿಸುತ್ತಿದ್ದರು. ಸ್ವಗ್ರಾಮದಲ್ಲಿ ಸಿಮೇಂಟ್ ಸೀಟಿನ ಚಿಕ್ಕ ಮನೆಯಲ್ಲಿ ವಾಸವಿರುವ ಚೇತನಾ ಕುಟುಂಬ ಎಂದಿಗೂ ಎದೆಗುಂದದೇ ತಮ್ಮ ಮಕ್ಕಳು ನಮ್ಮಂತೆ ಅವಿದ್ಯಾವಂತರಾಗ ಬಾರದು ಎಂಬು ಛಲದಿಂದ ಜೀವನದುದ್ದಕ್ಕೂ ಹೋರಾಡಿದರು. ಮಕ್ಕಳ ವಿದ್ಯಾಭ್ಯಾಸಕ್ಕೆ ರಾತ್ರಿ ಹಗಲು ನಿದ್ದೆಗೆಟ್ಟು, ತನ್ನ ನಾಲ್ಕು ಮಕ್ಕಳಿಗೆ ಶಿಕ್ಷಣವನ್ನು ನೀಡಿದರು.
ಹಣಕಾಸಿನ ದುರ್ಲಬದಿಂದ ಪಿಯುಸಿ ಬಳಿಕ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಚೇತನಾ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿದ್ದರು. ಆದರೆ, ಚೇತನಾಳಿಗೆ ಮತ್ತೆ ಶಿಕ್ಷಣ ಮುಂದುವರಿಸುವಂತೆ ತಾಯಿ ಸೀತಾ ಒತ್ತಾಯಿಸಿದರು. ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಶಿಕ್ಷಣಕ್ಕೆ, ದೊಡ್ಡ ಮಗ ರೂಪೇಶನಿಗೂ ಆತನ ಬಯಕೆಯಂತೆ ಐದು ವರ್ಷದ ಚಿತ್ರಕಲಾ ಪದವಿ ಮಾಡಿಸಿದ್ದಾರೆ. ಮೂರನೇ ಮಗ ಪುರಂದರ ಡಿಷ್ಲೊಮೋ ಮಾಡಿ ಮಂಗಳೂರು-ಕೇರಳ ಗಡಿಭಾಗ ತಲಪಾಡಿಯಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಮತ್ತೊಬ್ಬ ಮಗ ಭಾಗ್ಯೇಶ್ ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ದ್ವಿತೀಯ ಪದವಿ ವಿದ್ಯಭ್ಯಾಸ ಮಾಡುತ್ತಿದ್ದಾನೆ.
ಕಷ್ಟ ನಮ್ಮ ತಲೆಮಾರಿಗೆ ಮುಗಿಯಲಿ ಎಂದ ಚೇತನಾ ತಾಯಿ ಸೀತಾ
ನಾನು ಅನಕ್ಷರಸ್ಥೆ. ನಮ್ಮ ಪತಿ ಕೂಡ ಅನಕ್ಷರಸ್ಥರು. ಆದ್ದರಿಂದ ನಾವು ಕೂಲಿ-ನಾಲಿ ಜೊತೆ ಬೀಡಿ ಕಟ್ಟುವ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆದರೆ, ನಮ್ಮ ಕಷ್ಟ ಇದೇ ತಲೆಮಾರಿಗೆ ಅಂತ್ಯವಾಗಲಿ. ನಮ್ಮ ಎಲ್ಲ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡಬೇಕು ಅನ್ನವ ಹಂಬಲ ಇತ್ತು. ನಮಗೆ ಬುದ್ಧಿ ಇತ್ತು ವಿದ್ಯೆ ಇರಲಿಲ್ಲ. ಬುದ್ಧಿ ಇದ್ದ ಮಕ್ಕಳಿಗೆ ವಿದ್ಯೆ ಕೊಡಿಸುವುದು ನಮ್ಮ ಕರ್ತವ್ಯವಾಗಿತ್ತು. ಚೇತನಾ ನ್ಯಾಯಾಧೀಶೆಯಾಗಿ ನಮ್ಮ ನಿರೀಕ್ಷೆ ಮೀರಿಸಿದ್ದಾಳೆ ಎಂದು ಚೇತನಾ ತಾಯಿ ಸೀತಾ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.
ನನ್ನ ಪೋಷಕರು ಸಾಧಕರು – ಚೇತನಾ
ಇಲ್ಲಿ ನನ್ನನ್ನು ಸಾಧಕಿ ಅನ್ನುವುದಕ್ಕಿಂತ ನನ್ನ ಪೋಷಕರು ಸಾಧಕರು ಎಂದೆನ್ನಬಹುದು. ಏಕೆಂದರೆ, ಕಡುಬಡತನದ ಮಧ್ಯೆ ಶಿಕ್ಷಣವನ್ನು ಸಿಗುವಂತೆ ನೋಡಿಕೊಳ್ಳುವುದು ಸಾಧಾರಣ ಕೆಲಸವಲ್ಲ. ವಿದ್ಯಾಭ್ಯಾಸದಲ್ಲಿ ಆಯ್ಕೆ ನನ್ನದಿತ್ತು. ಆದಕ್ಕೆ ಆಧಾರವಾಗಿದ್ದು ನನ್ನ ಪೋಷಕರು. ಮಗಳಾಗಿ ನನ್ನ ಜವಬ್ದಾರಿ ಇದ್ದುದನ್ನು ಈಡೇರಿಸಲು ಪ್ರಯತ್ನಿಸಿದ್ದೇನೆ. ಈಗ ಇನ್ನು ಹೆಚ್ಚಿನ ಜವಾಬ್ದಾರಿ ಬಂದಿದೆ. ನನ್ನ ಪ್ರಮುಖ ದೃಷ್ಟಿ ಬಡವರಿಗೆ ನ್ಯಾಯ ಲಭ್ಯವಾಗುವ ನಿಟ್ಟಿನಲ್ಲಿದೆ. ಏಕೆಂದರೆ, ನಾನು ಅದೇ ಹಿನ್ನಲೆಯಲ್ಲಿ ಬಂದವಳಾಗಿದ್ದರಿಂದ ಬಡವರಿಗೆ ನ್ಯಾಯ ಕೊಡಿಸುವ ಹಂಬಲವಿದೆ. ಆ ರೀತಿ ಕೆಲಸ ಮಾಡುತ್ತೇನೆ ಎಂದು ಸಾಧಕಿ ಚೇತನಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.