Women’s Day Special: ಕೊರೊನಾ ಸೋಂಕಿತ ಗರ್ಭಿಣಿಯರ ಪಾಲಿಗೆ ಆಪದ್ಬಾಂಧವರಾಗಿದ್ದರು ವೈದ್ಯೆ ಶಾರದಾ; 220ಕ್ಕೂ ಹೆಚ್ಚು ಸುಸೂತ್ರ ಹೆರಿಗೆ
ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲವು ಮಹಿಳಾ ವೈದ್ಯರು, ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಮಹಿಳಾ ಅಧಿಕಾರಿಗಳು ಕೊರೊನಾ ವಾರಿಯರ್ಸ್ ಆಗಿ ಜನಮನ ಗೆದ್ದಿದ್ದಾರೆ. ಅಂಥ ಕೊರೊನಾ ವಾರಿಯರ್ಸ್ಗಳನ್ನು ಈ ಮಹಿಳಾ ದಿನಾಚರಣೆಯಂದು ಟಿವಿ9 ಕನ್ನಡ ಡಿಜಿಟಲ್ ನಿಮಗೆ ಪರಿಚಯಿಸುತ್ತಿದೆ.

‘ಸ್ತ್ರೀ’ ಇದು ಬರೀ ಪದವಲ್ಲ. ಶಕ್ತಿ, ಮನಸ್ಥಿತಿ, ಸಾಧ್ಯತೆ, ಮಮತೆ, ಸ್ಫೂರ್ತಿ, ಸಂಭ್ರಮ. ಸಮತೆಯೂ. ಪೂಜ್ಯನೀಯ ಪಟ್ಟದಿಂದಾಚೆಯೂ ಆಕೆ ತನ್ನನ್ನು ತಾನೀವತ್ತೂ ನಿಭಾಯಿಸಿಕೊಳ್ಳುವಷ್ಟು ಸ್ವತಂತ್ರ ಮನೋಭಾವವನ್ನು ಹೊಂದಿದ್ದಾಳೆ. ಹಾಗಂತ ಪೂರ್ತಿಯಾಗಿ ಶೋಷಣೆಯಿಂದ ಹೊರಗಾಗಿದ್ದಾಳೆ ಎನ್ನುವುದನ್ನೂ ಒಪ್ಪಲಾಗದು. ಕೂಲಿಯಿಂದ ಸೇನೆಯವರೆಗೂ ಆಕೆ ಶಕ್ತಿಯಾಗಿ ಚಿಮ್ಮಿದ್ದಾಳೆಂದರೆ ಆಕೆಯ ದಿಟ್ಟತೆಗೆ ದೊಡ್ಡ ಇತಿಹಾಸವೇ ಇದೆ. ಅವಳು ಕಾಲಿಟ್ಟಲ್ಲೆಲ್ಲ ಹೊಳಹಿನ ಛಾಯೆ ಆವರಿಸುತ್ತದೆಯೆಂದರೆ ಒಡಲೊಳಗೆ ಕಟ್ಟಿಟ್ಟುಕೊಂಡ ತಾಳ್ಮೆ ಇದೆ, ವಿವೇಚನೆ ಇದೆ, ಸ್ವಾವಲಂಬೀ ಮನೋಭಾವವಿದೆ. ಹೀಗೆ ಅವಳ ಆತ್ಮಗೌರವವನ್ನು ದ್ವಿಗುಣಗೊಳಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅವಳನ್ನಪ್ಪಿದೆ (International Women’s Day 2021). ನಮ್ಮನಿಮ್ಮ ನಡುವೆಯೇ ಇರುವ ಸಾಧಕ ಮನಸ್ಥಿತಿಗಳನ್ನು ಈ ಸಂದರ್ಭದಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ.
ಗೊತ್ತೇ ಇದೆ ಕಳೆದೊಂದು ವರ್ಷದಿಂದ ಕೊವಿಡ್-19 ಮಹಾಮಾರಿ ಇಡೀ ಜಗತ್ತನ್ನು ಅದೆಷ್ಟು ಹೈರಾಣಾಗಿಸಿತು ಎಂದು.. ಈ ಹೊತ್ತಲ್ಲಿ ಕೊವಿಡ್ ವಿರುದ್ಧ ಹೋರಾಟಕ್ಕೆ ನಿಂತವರು ಬರೀ ಪುರುಷರಷ್ಟೇ ಅಲ್ಲ.. ಅದೆಷ್ಟೋ ಕೋಟ್ಯಂತರ ಮಹಿಳೆಯರೂ ಟೊಂಕಕಟ್ಟಿ ನಿಂತು-ಮನೆ, ಪತಿ, ಮಕ್ಕಳನ್ನೆಲ್ಲ, ನೋವಾದರೂ ಸಹಿಸಿಕೊಂಡು ದೂರವೇ ಇಟ್ಟು ಹೋರಾಡಿದ್ದಾರೆ. ಹಾಗೇ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸಹ ಕೆಲವು ಮಹಿಳಾ ವೈದ್ಯರು, ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಮಹಿಳಾ ಅಧಿಕಾರಿಗಳು ಕೊರೊನಾ ವಾರಿಯರ್ಸ್ ಆಗಿ ಜನಮನ ಗೆದ್ದಿದ್ದಾರೆ. ಅಂಥ ಕೊರೊನಾ ವಾರಿಯರ್ಸ್ಗಳನ್ನು ಈ ಮಹಿಳಾ ದಿನಾಚರಣೆಯಂದು ಟಿವಿ9 ಕನ್ನಡ ಡಿಜಿಟಲ್ ನಿಮಗೆ ಪರಿಚಯಿಸುತ್ತಿದೆ. ಈ ಲೇಖನ ಗಣಿನಾಡು ಬಳ್ಳಾರಿ ಜಿಲ್ಲೆಯ ಡಾ. ಶಾರದಾ ಬಗ್ಗೆ..
ಅದು ಕೊರೊನಾದಿಂದ ಗಣಿನಾಡು ಬಳ್ಳಾರಿ ಜಿಲ್ಲೆ ತತ್ತರಿಸುತ್ತಿದ್ದ ಸಮಯ. ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗಿಂತ ಬಳ್ಳಾರಿಯಲ್ಲೇ ಅತ್ಯಂತ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಜನರಲ್ಲೂ ದಿನೇದಿನೆ ಭಯ ಹೆಚ್ಚುತ್ತಿತ್ತು. ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರು ತುಂಬಿ ಹೋಗಿದ್ದರು. ಅವರಿಗೆ ಚಿಕಿತ್ಸೆ ನೀಡುವುದು, ಅವರಲ್ಲಿನ ಭಯ ಹೋಗಲಾಡಿಸಿ, ಆತ್ಮವಿಶ್ವಾಸ ಹುಟ್ಟಿಸುವುದೇ ವೈದ್ಯರು, ದಾದಿಯರಿಗೆ ತುಂಬ ದೊಡ್ಡ ಸವಾಲಾಗಿತ್ತು. ಈ ಮಧ್ಯೆ ಎದುರಾದ ಇನ್ನೊಂದು ಆತಂಕವೆಂದರೆ ಗರ್ಭಿಣಿಯರು ಸೋಂಕಿಗೆ ಒಳಗಾಗುತ್ತಿದ್ದುದು. ತಾಯಿ ಮತ್ತು ಹೊಟ್ಟೆಯಲ್ಲಿರುವ ಮಗುವನ್ನು ಜೋಪಾನ ಮಾಡಲು, ಅವರಿಗೆ ಚಿಕಿತ್ಸೆ ಮಾಡಿ ಹೆರಿಗೆ ಮಾಡಿಸುವುದು ವೈದ್ಯರ ಪಾಲಿಗೆ ಕಷ್ಟದ ಕೆಲಸವಾಗಿತ್ತು. ಆದರೆ ಅದನ್ನು ಬಿಡುವಂತೆ ಇರಲಿಲ್ಲ.. ಹೀಗೆ ಕೊರೊನಾ ಸೋಂಕಿತ ಗರ್ಭಿಣಿಯರ ಆರೋಗ್ಯ, ಚಿಕಿತ್ಸೆ ಹಾಗೂ ಸುಸೂತ್ರ ಹೆರಿಗಾಗಿ ವಿಶೇಷವಾಗಿ ಶ್ರಮಿಸಿದವರು ಡಾ. ಶಾರದಾ.
ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದು ಸುಲಭವಲ್ಲ ಬಳ್ಳಾರಿ ಜಿಲ್ಲೆಯಲ್ಲಿ ಆರಂಭದಲ್ಲಿ ಅಷ್ಟೊಂದು ಕೊರೊನಾ ಸೋಂಕಿತರು ಇರಲಿಲ್ಲ. ಆದರೆ ಯಾವಾಗ ಜಿಂದಾಲ್ ಕಂಪನಿಯಲ್ಲಿ ಕೊರೊನಾ ಸ್ಫೋಟವಾಯ್ತೋ ಅಲ್ಲಿಂದ ಕೇಸ್ಗಳು ಹೆಚ್ಚಾದವು. ಪ್ರತಿದಿನ ಪತ್ತೆಯಾಗುವ ಸೋಂಕಿತರ ಸಂಖ್ಯೆಯೂ ಏರತೊಡಗಿತು. ಪ್ರತಿನಿತ್ಯ 700-800 ರವರೆಗೆ ಕೊರೊನಾ ಪ್ರಕರಣಗಳ ಬೆಳಕಿಗೆ ಬರತೊಡಗಿದವು. ಜಿಲ್ಲಾಡಳಿತ ಎಷ್ಟೇ ಪ್ರಯತ್ನ ಪಟ್ಟರೂ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿರಲಿಲ್ಲ. ಹಲವು ವೈದ್ಯರೂ ಕೊರೊನಾ ಸೋಂಕಿಗೆ ಒಳಗಾಗತೊಡಗಿದರು. ಅದರಲ್ಲೂ ಎಷ್ಟೇ ಮುಂಜಾಗ್ರತೆ ವಹಿಸಿದರೂ ಗರ್ಭಿಣಿಯರೂ ಸೋಂಕಿಗೆ ತುತ್ತಾಗತೊಡಗಿದರು. ಈ ಹೊತ್ತಲ್ಲಿ ಗರ್ಭಿಣಿಯರ ಪಾಲಿಗೆ ಆಪದ್ಬಾಂಧವರಾಗಿದ್ದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಒಬಿಜಿ ವಿಭಾಗದ ಹಿರಿಯ ಸ್ತ್ರೀರೋಗ ತಜ್ಞರಾದ ಡಾ. ಶಾರದಾ. ಇವರು ತಮ್ಮ ಜೀವವನ್ನೂ ಪಣಕ್ಕಿಟ್ಟು ಗರ್ಭಿಣಿಯರ ಚಿಕಿತ್ಸೆಗೆ ನಿಂತರು. ಅವರಿಗೆ ಹೆರಿಗೆ ಮಾಡಿಸತೊಡಗಿದರು. ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವಾಗ ವೈದ್ಯರಿಗೆ ಸೋಂಕು ತಗುಲುವ ಅಪಾಯ ಹೆಚ್ಚಿರುತ್ತದೆ. ಅದೆಷ್ಟೋ ತಾಸುಗಳ ಕಾಲ ಪಿಪಿಇ ಕಿಟ್ ಧರಿಸಿ ಅವರೊಂದಿಗೆ ಇರಬೇಕಾಗುತ್ತದೆ. ಇನ್ನು ಸೋಂಕಿತ ಗರ್ಭಿಣಿಯರೊಂದಿಗೆ ಕುಟುಂಬದವರೂ ಯಾರೂ ಇರಲು ಅವಕಾಶ ಇಲ್ಲದ ಕಾರಣ ಹೆರಿಗೆ ನಂತರ ಬಾಣಂತಿ, ನವಜಾತ ಶಿಶುವಿನ ಆರೈಕೆಯೂ ವೈದ್ಯರು, ನರ್ಸ್ಗಳ ಮೇಲೆಯೇ ಬೀಳುತ್ತದೆ. ಇದೆಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಲ್ಲದೆ, ಗರ್ಭಿಣಿಯರಲ್ಲಿ ಆತ್ಮವಿಶ್ವಾಸ ತುಂಬಿದ್ದು ಇದೇ ಡಾ. ಶಾರದಾ.

ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿದ ವೈದ್ಯರ ತಂಡ
ನಾಲ್ಕು ತಿಂಗಳು ಕುಟುಂಬದಿಂದ ದೂರ ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದ ಡಾ. ಶಾರದಾ ಸುಮಾರು ನಾಲ್ಕು ತಿಂಗಳು ಕುಟುಂಬದಿಂದ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು. ತಮ್ಮಿಂದ ಕುಟುಂಬದ ಇತರ ಸದಸ್ಯರಿಗೆ ಅಪಾಯ ಆಗಬಾರದು ಎಂಬ ಕಾರಣಕ್ಕೆ ತಮ್ಮ ಮನೆಯ ಮೇಲ್ಭಾಗದಲ್ಲಿದ್ದ ಪ್ರತ್ಯೇಕ ಕೋಣೆಯಲ್ಲಿ ವಾಸವಾಗಿದ್ದರು. ಪತಿ, ಮಕ್ಕಳು, ತಂದೆ-ತಾಯಿಯೊಟ್ಟಿಗೆ ದೂರವಾಣಿಯಲ್ಲೇ ಮಾತನಾಡುತ್ತಿದ್ದರು. ಕೊವಿಡ್ ವಾರ್ಡ್ಗಳಿಗೆ ಬರುತ್ತಿದ್ದ ಊಟವನ್ನೇ ಮಾಡುತ್ತಿದ್ದರು. ಹೀಗೆ ಸತತವಾಗಿ ಕೊರೊನಾ ರೋಗಿಗಳೊಂದಿಗೆ ಇದ್ದರೆ ನನಗೂ ಕೊರೊನಾ ಬರುವ ಸಾಧ್ಯತೆ ಇರುತ್ತದೆ ಎಂದು ಗೊತ್ತಿದ್ದರೂ ಅದನ್ನೆಲ್ಲ ಲೆಕ್ಕಿಸದೆ ಚಿಕಿತ್ಸೆಯಲ್ಲಿ ತೊಡಗಿದ್ದರು. ಹಾಗೇ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಸದಾ ಧೈರ್ಯ ತುಂಬುತ್ತಿದ್ದರು. ಡಾ. ಶಾರದಾ ಅವರ ಪತಿ ಕೂಡ ವಿಮ್ಸ್ನಲ್ಲಿ ವೈದ್ಯರಾಗಿದ್ದು, ಪತ್ನಿಯ ಕೆಲಸಕ್ಕೆ ಬೆಂಬಲವಾಗಿ ನಿಂತರು.
220ಕ್ಕೂ ಹೆಚ್ಚು ಹೆರಿಗೆ ಬಳ್ಳಾರಿಯ ವಿವಿಧ ತಾಲೂಕುಗಳ ಆಸ್ಪತ್ರೆಗಳಲ್ಲಿ ಸೋಂಕಿತ ಗರ್ಭಿಣಿಯರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಹೆರಿಗೆ ನೋವು ಕಾಣಿಸಿಕೊಂಡ ಸೋಂಕಿತ ಗರ್ಭಿಣಿಯರನ್ನು ತಕ್ಷಣವೇ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗುತ್ತಿತ್ತು. ಇಲ್ಲಿನ ಡಾ. ಶಾರದಾ ಮತ್ತು ಇತರ ವೈದ್ಯರ ತಂಡ ಅವರ ಕಾಳಜಿ ವಹಿಸುತ್ತಿತ್ತು. ಹೀಗೆ ವಿವಿಧ ತಾಲೂಕುಗಳಿಂದ ಬಂದ ಸುಮಾರು 220ಕ್ಕೂ ಅಧಿಕ ಗರ್ಭಿಣಿಯರ ಹೆರಿಗೆಯಲ್ಲಿ ಡಾ. ಶಾರದಾ ಪ್ರಮುಖ ಪಾತ್ರ ವಹಿಸಿದ್ದಾರೆ. ತಾಯಿ ಹಾಗೂ ಹುಟ್ಟಿದ ಮಗುವಿನ ಆರೋಗ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ್ದಾರೆ.
ಆತಂಕ ನನಗೂ ಇತ್ತು.. ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಲು ಆರಂಭವಾದ ದಿನಗಳಲ್ಲಿ ನನಗೂ ಆತಂಕವಿತ್ತು. ಸೋಂಕಿತರ ವಾರ್ಡ್ಗಳಿಗೆ ಹೋಗಿ ಚಿಕಿತ್ಸೆ ನೀಡಲು ಸಹಜವಾಗಿಯೇ ಭಯವಾಗುತ್ತಿತ್ತು. ಆದರೆ ಬರುಬರುತ್ತ ಆತಂಕವನ್ನು ದೂರ ಮಾಡಿಕೊಂಡು ಸೋಂಕಿತರ ಚಿಕಿತ್ಸೆ, ಆರೈಕೆಯ ಕಡೆಗೆ ಗಮನಹರಿಸಿದೆವು ಎನ್ನುತ್ತಾರೆ ಡಾ. ಶಾರದಾ. ಆಸ್ಪತ್ರೆಯ ಮೇಲಧಿಕಾರಿಗಳು, ಜಿಲ್ಲಾಡಳಿತ, ಕುಟುಂಬ ಸದಸ್ಯರ ಸಹಕಾರ, ಪ್ರೋತ್ಸಾಹದಿಂದ ನಮ್ಮ ಕೆಲಸ ಸುಲಭವಾಯಿತು. ಕೊರೊನಾ ಸೋಂಕಿಗೆ ಒಳಗಾಗಿದ್ದ ಯಾವ ಗರ್ಭಿಣಿಗೂ ಏನೂ ತೊಂದರೆಯಾಗದಂತೆ ಚಿಕಿತ್ಸೆ ನೀಡಿದ್ದೇವೆ. ಸಾರ್ಥಕತೆ ಇದೆ ಎಂದು ತಮ್ಮ ಆ ದಿನಗಳ ಅನುಭವವನ್ನು ನಮ್ಮ ಟಿವಿ 9 ಕನ್ನಡ ಡಿಜಿಟಲ್ ಜತೆ ಡಾ. ಶಾರದಾ ಹಂಚಿಕೊಂಡಿದ್ದಾರೆ.
ಇನ್ನು ಡಾ. ಶಾರದಾ ಬಗ್ಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ. ಬಸಾರೆಡ್ಡಿಯವರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದು ತೀರ ಕಷ್ಟ. ಅಂಥದ್ದರಲ್ಲಿ ಸುಮಾರು 220 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ, ತಾಯಿ-ಮಗುವಿನ ಆರೋಗ್ಯವನ್ನೂ ಕಾಳಜಿ ಮಾಡಿದ್ದಾರೆ ಡಾ. ಶಾರದಾ ಎಂದು ಹೊಗಳಿದ್ದಾರೆ.

ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಒಬಿಜಿ ಡಿಪಾರ್ಟ್ಮೆಂಟ್ ವೈದ್ಯರ ತಂಡ
ನಿರೂಪಣೆ: ಬಸವರಾಜ ಹರನಹಳ್ಳಿ, ಬಳ್ಳಾರಿ
Published On - 5:29 pm, Sat, 6 March 21