ಸೈಬರ್ ಕ್ರೈಂ ತಡೆಗೆ ಕರ್ನಾಟಕದ ದಿಟ್ಟ ಹೆಜ್ಜೆ: 2025ರಲ್ಲಿ ಕೇಸ್ಗಳ ಸಂಖ್ಯೆ 13,000ಕ್ಕೆ ಇಳಿಕೆ
ರಾಜ್ಯ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳಿಂದಾಗಿ ಕಳೆದ ವರ್ಷಗಳಿಗೆ ಹೋಲಿಸಿದರೆ 2025ರಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಕರ್ನಾಟಕದಲ್ಲಿ ಗಣನೀಯವಾಗಿ ಇಳಿಕೆ ಕಂಡಿವೆ. ಡಿಜಿಪಿ ನೇಮಕ, ಹೆಚ್ಚಿನ ಸೆನ್ ಠಾಣೆಗಳು, ಮತ್ತು ಸಹಾಯವಾಣಿ ಸೇವೆ ಆರಂಭದಿಂದಾಗಿ ಈ ಸಾಧನೆ ಸಾಧ್ಯವಾಗಿದ್ದು, ಡಿಜಿಟಲ್ ವಂಚಕರಿಗೆ ಕರ್ನಾಟಕ ಪೊಲೀಸರು ಸಿಂಹಸ್ವಪ್ನವಾಗಿ ಮಾರ್ಪಟ್ಟಿದ್ದಾರೆ.

ಬೆಂಗಳೂರು, ಡಿಸೆಂಬರ್ 05: ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಬಹುತೇಕ ವಿದ್ಯಾವಂತರೇ ಇಂತಹ ಕೇಸ್ಗಳಲ್ಲಿ ಸಂತ್ರಸ್ತರಾಗುತ್ತಿದ್ದು, ಡಿಜಿಟಲ್ ಅರೆಸ್ಟ್ ಮತ್ತು ಟ್ರೇಡಿಂಗ್ ಹೆಸರಿನಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ. ಈ ನಡುವೆ ಕರ್ನಾಟಕದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಬಗ್ಗೆ ಸ್ವತಃ ಗೃಹ ಸಚಿವ ಪರಮೇಶ್ವರ್ ಅವರೇ ಅಂಕಿ-ಅಂಶ ಬಿಚ್ಚಿಟ್ಟಿದ್ದು, 2025ರಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಹೆಚ್ಚುತ್ತಿರುವ ಸೈಬರ್ ಅಪರಾಧಗಳ ತಡೆಗೆ ದೇಶದಲ್ಲಿಯೇ ಮೊಟ್ಟ ಮೊದಲಬಾರಿಗೆ ಸೈಬರ್ ಕ್ರೈಮ್ ವಿಭಾಗಕ್ಕೆ ಕರ್ನಾಟಕದಲ್ಲಿ ಡಿಜಿಪಿ ನೇಮಕ ಮಾಡಲಾಗಿದೆ. ಸೆನ್ ಠಾಣೆಗಳನ್ನು ಮಾಡಿದ ಬಳಿಕ ಆನ್ಲೈನ್ ವಂಚನೆಗಳ ಬಗ್ಗೆ ದಾಖಲಾಗುತ್ತಿರುವ ಕೇಸ್ಗಳೂ ಹೆಚ್ಚಾಗಿವೆ. ಅಮೆರಿಕದಲ್ಲಿ ಇದ್ದವರನ್ನು ಡಿಜಿಟಲ್ ಅರೆಸ್ಟ್ ಮಾಡಿ ಅವರ ಅಕೌಂಟ್ನಿಂದ ಹಣ ತೆಗೆಯುತ್ತಿದ್ದಂಹ ಡಿಜಿಟಲ್ ವಂಚಕರನ್ನೂ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಪ್ರಸ್ತುತ ವರ್ಷ ರಾಜ್ಯದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು 13,000ಕ್ಕೆ ಇಳಿದಿವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಫೋನ್‌ನಲ್ಲಿ 1930 ಸಂಖ್ಯೆಯನ್ನು ಸೇವ್ ಮಾಡಿದ್ದೀರ? ಇದರಿಂದ ಏನು ಪ್ರಯೋಜನ?
ಯಾವ್ಯಾವ ವರ್ಷ ಎಷ್ಟು ಪ್ರಕರಣ?
| ವರ್ಷ | ಪ್ರಕರಣ |
| 2022 | 12,550 |
| 2023 | 21,903 |
| 2024 | 21,995 |
| 2025 | 13,000 |
ಕಳೆದ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ ಸುಮಾರು 9 ಸಾವಿರದಷ್ಟು ಸೈಬರ್ ಅಪರಾಧ ಪ್ರಕರಣಗಳು ಇಳಿಕೆಯಾಗಿವೆ. ಆನ್ಲೈನ್ ವಂಚನೆಗೆ ಒಳಗಾದ ಸಂತ್ರಸ್ತರು 1930 ಸಂಖ್ಯೆಗೆ ಸೈಬರ್ ಕ್ರೈಮ್ ದೂರುಗಳನ್ನು ನೀಡಬಹುದು. 66 ಸಿಬ್ಬಂದಿ ಈ ಕರೆಗಳನ್ನು ಸ್ವೀಕರಿಸುವ ಕೆಲಸ ಮಾಡುತ್ತಿದ್ದು,ಸೈಬರ್ ಕ್ರೈಮ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:17 pm, Fri, 5 December 25