ಕೊರೋನಾ ಕಾಲಿಟ್ಟ ಸಮಯದಲ್ಲಿ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ನಡೆದ ಪ್ರಸಂಗವನ್ನು ನೀವೆಲ್ಲರೂ ಗಮನಿಸಿರಬಹುದು. ಒಂದಿಬ್ಬರು ರಂಗಭೂಮಿಯ ಕಲಾವಿದರು ಪೌರಾಣಿಕ ನಾಟಕದ ವೇಶ ಧರಿಸಿ ಖಡ್ಗ, ಗಧಾಧಾರಿಗಳಾಗಿ ಕ್ಯಾಮೆರಾಗಳಿಗೆ ಪೋಸು ಕೊಡುತ್ತಿದ್ದರು. ಮಂತ್ರಿವರ್ಯರು ಸಾಲಿನಲ್ಲಿ ನಿಂತ ರಂಗಭೂಮಿಯ ಕಲಾವಿದರಿಗೆ ಹಸನ್ಮುಖರಾಗಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದರು. ಸರ್ಕಾರದ ಈ ನಾಟಕವನ್ನು ಯಾವ ರಸಾನುಭೂತಿಯಿಂದ ಗ್ರಹಿಸಬೇಕು?
ಸ್ವಾಭಿಮಾನವನ್ನೇ ಉಸಿರಾಡುವ ಕಲಾವಿದರು ಹೀಗೆ ಕೈಯೊಡ್ಡಿದಾಗ ಅವರ ಮನಸ್ಸಿನಲ್ಲಿ ಯಾವ್ಯಾವ ಪಾತ್ರಗಳು ಬಂದು ಹೋಗಿರಬಹುದು? ಒಂದೇ ನಾಟಕವನ್ನು ಊರೂರು ಅಲೆದು ಸಾವಿರಾರು ಪ್ರರ್ಶನ ನೀಡಿದ ವೈಭವೋಪೇತ ನಾಟಕ ಕಂಪೆನಿ ಮಾಲೀಕರು, ಕಲಾವಿದರು ಅನ್ನ ನೀರಿಗಾಗಿ ತಂತಮ್ಮ ಊರುಗಳಲ್ಲಿ ಹಪಹಪಿಸುತ್ತಿರುವಾಗ ಅವರ ಮನಸ್ಸಿನಲ್ಲಿ ಯಾವ ಸಂಭಾಷಣೆ, ಸನ್ನಿವೇಶಗಳು ಸುಳಿದು ಹೋಗಿರಬಹುದು?
ಈ ಎಲ್ಲಾ ಸಂಕಷ್ಟಗಳ ಮಧ್ಯೆಯೇ ಕೆಲ ರಂಗಭೂಮಿ ಕಲಾವಿದರು ಆನ್ಲೈನ್ ಎಂಬ ಆಮ್ಲಜನಕದೊಂದಿಗೆ ಬದುಕು ದೂಡಲು ಪ್ರಯತ್ನಿಸಿದರು, ಪ್ರಯತ್ನಿಸುತ್ತಿದ್ದಾರೆ. ಪರಿಸ್ಥಿತಿಯ ವ್ಯಂಗ್ಯವನ್ನೂ ಸವಾಲಾಗಿಯೇ ಸ್ವೀಕರಿಸಿದ ಹಲವರು ಅನ್ಯ/ಪರ್ಯಾಯ ಮಾರ್ಗಗಳನ್ನೂ ಕಂಡುಕೊಳ್ಳುತ್ತಿದ್ದಾರೆ.
ಹೋ! ಕಲೆ ಯಾಕೆ ಸಸ್ತಾ ಗೊತ್ತಾ?
ಹೋಯ್ ಕಲೆ ಸಸ್ತಾ ಸ್ವಾಮೀ!
ಜನ ಮೊದಲಿನಿಂದಲೂ ಅಂದುಕೊಂಡಿರೋದೇನು ಗೊತ್ತಾ?
ಕಲೆ ಅಂದರೆ ; ಗ್ಯಾಲರಿ, ರಂಗಮಂದಿರ, ಚಿತ್ರಮಂದಿರ, ಮಾಲು.
ಅದು ದುಡ್ಡಿದ್ದವರ ಸೊತ್ತು, ಸೋಗು, ಶೋಕಿ ಹಿಂಗೆ ಅಂತ.
ಅಲ್ಲ ರೀ.. ಅದನ್ನು ತಿನ್ನೋಕಾಗಲ್ಲ. ಆದರೆ ಅದು ಕಷ್ಟದಲ್ಲಿರೋ ಮನುಷ್ಯನನ್ನು ಬದುಕಿಸುತ್ತೆ.
ಅಂದ್ರೆ ಅದು ಕಷ್ಟದಲ್ಲಿ ಬದುಕೋರನ್ನ ಹಸಿವು, ನೋವುಗಳಿಂದ ರಕ್ಷಿಸುತ್ತ
ಕಲೆ ಎಲ್ಲರಿಗೂ ಅಗ್ಗವಾಗಿ ಒದಗಬೇಕು ಮತ್ತು ಎಲ್ಲೆಲ್ಲೂ ಇರಬೇಕು.
ಬೇಕೇಬೇಕು ಅಲ್ವಾ?
ಯಾಕೆಂದರೆ ಕಲೆ ಜಗದಾಂತರ್ಯ,
ಕಲೆ ನೋವು ನಿವಾರಕ,
ಕಲೆ ಮಲಗಿದವರನ್ನು ಎಚ್ಚರಿಸುತ್ತದೆ.
ಕಲೆ ಮೂರ್ಖತನವನ್ನು ಮತ್ತು ಎಲ್ಲಾ ರೀತಿಯ ಯುದ್ಧಗಳನ್ನು ವಿರೋಧಿಸುತ್ತದೆ
ಕಲೆ ಎಲ್ಲರನ್ನೂ ಕಾಪಾಡು ದೇವರೇ ಎಂದು ಹಾಡುತ್ತದೆ
ಕಲೆ ಅಡುಗೆಮನೆಯಲ್ಲಿರುವ ಒಳ್ಳೆಯ ರೊಟ್ಟಿ, ಚಪಾತಿ, ಅನ್ನ ಮುದ್ದೆಯಂತೆ
ಹಸಿರು ಮರಗಳಂತೆ
ಬಿಳಿಮೋಡ ಭರಿತ ನೀಲಾಕಾಶದಂತ
ಯವ್ವಾ! ಕಲೆ ಸಸ್ತಾ ಬೇ ಅಗ್ಗ
ಅಬ್ಬಾ! Art is cheap!
(ಮೂಲ: ಬ್ರೆಡ್ ಅಂಡ್ ಪಪೆಟ್ ಥಿಯೇಟರ್, ಯು ಎಸ್/ ಅನು : ಚನ್ನಕೇಶವ. ಜಿ.)
ಇದು ಕೊರೋನಾ ಮಹಾಮಾರಿಯ ವೇದಿಕೆಯಲ್ಲಿ ನಡೆಯಲು ಸಜ್ಜಾಗಿರುವ ಹೊಸ ‘ರುಚಿನಾಟಕ‘ ದ ಪರಿಕಲ್ಪನೆ. ರಂಗಕಲಾವಿದ, ನಿರ್ದೇಶಕ ಚನ್ನಕೇಶವ. ಜಿ. ಇಷ್ಟು ದಿನ ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ಮೊಬೈಲ್ ಕ್ಯಾಂಟೀನ್ ನಡೆಸಿ ಧೈರ್ಯ ಮತ್ತು ಯಶಸ್ಸನ್ನು ಪಡೆದುಕೊಂಡ ನಂತರ, ಸುಂಕದಕಟ್ಟೆಗೆ ಹೊರಟು ನಿಂತಿದ್ದಾರೆ. ‘ಹೋ!!tell ಆರ್ಟ್taste’ ಇದು ಅವರ ಹೊಸ ಹೋಟೆಲ್ಲಿನ ಹೆಸರು. ಸಾವಯವ ಆಹಾರೋತ್ಪನ್ನಗಳಿಂದ ತಯಾರಿಸಿದ ಶುಚಿ-ರುಚಿ ಖಾದ್ಯಗಳನ್ನು ಕೆಲವೇ ದಿನಗಳಲ್ಲಿ ನೀವೂ ಇವರ ಹೋಟೆಲಿನಲ್ಲಿ ಸವಿಯಬಹುದಾಗಿದೆ.
‘ಲಾಕ್ ಡೌನ್ ಶುರುವಾಗುತ್ತಿದ್ದಂತೆ ಮೊದಲು ಆನ್ಲೈನ್ ಮೂಲಕ ಮಕ್ಕಳಿಗೆ ರಂಗತರಬೇತಿ ನೀಡಲಾರಂಭಿಸಿದೆ. ಈಗ ಇಪ್ಪತ್ತುಮೂರು ಕುಟುಂಬಗಳು ಈ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ. ಇದು ನನ್ನ ಅನ್ನಕ್ಕೂ ಆಧಾರವಾಗಿದೆ. ಆದರೆ ನಿಜದಲ್ಲಿ ರಂಗಭೂಮಿ ಸಾಮುದಾಯಿಕ ಪ್ರೋತ್ಸಾಹ ಪೋಷಣೆಯಿಂದ ಬಂದಿರುವಂಥದ್ದು. ಜನರಿಲ್ಲದೆ ಇಲ್ಲಿ ಯಾವ ನಾಟಕವೂ ನಡೆಯದು. ನಾವು ಇಷ್ಟು ದಿನ ಅವರ ಪೋಷಣೆಯಲ್ಲಿ ಭದ್ರವಾಗಿ ಇದ್ದೆವು. ನಾಟಕ, ಶಿಬಿರ, ಥೀಮ್ ವರ್ಕ್ ಹೀಗೆ ಒಂದಿಲ್ಲಾ ಒಂದು ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದೆವು. ಆದರೆ ಈಗೇನಾಯಿತು? ಕಲಾವಿದರು ಸ್ವತಂತ್ರವಾಗಿ ಹಕ್ಕಿಯಂತೆ ಬದುಕುವುದು ಇನ್ನು ಕಷ್ಟವೇ. ಬಹಳಷ್ಟು ರಂಗಕಲಾವಿದರು ವಿವಿಧ ಕಾರ್ಮಿಕ ವಲಯಗಳಲ್ಲಿ ದುಡಿಯಲು ಶುರು ಮಾಡಿದ್ದಾರೆ. ಸರ್ಕಾರ-ಸರ್ಕಾರೇತರ ಸೌಲಭ್ಯಗಳು ಎಷ್ಟು ದಿನ? ಏನಿದ್ದರೂ ಸ್ವಂತ ಶಕ್ತಿಯ ಮೇಲೆ ಬದುಕಲೇಬೇಕು. ದೇಹಕ್ಕೆ ಆಹಾರ ಹೇಗೆ ಬೇಕೋ, ಮನಸ್ಸಿಗೆ ಕಲೆ ಬೇಕು. ಎರಡೂ ಇಲ್ಲದಿದ್ದರೆ ಮನಸ್ಸು ಖಿನ್ನವಾಗಿಬಿಡುತ್ತೆ. ನನಗೆ ಮೊದಲಿನಿಂದಲೂ ಅಡುಗೆಯಲ್ಲಿ ಆಸಕ್ತಿ ಇದ್ದುದರಿಂದ ಈಗ ಈ ಸಾಹಸಕ್ಕೆ ಕೈಹಾಕಿದ್ದೇನೆ.’ ಎನ್ನುತ್ತಾರೆ ಚನ್ನಕೇಶವ.
ಆದರೆ ಅಂತರಂಗದಲ್ಲಿ? ಕಲಾವಿದನ ಮನಸ್ಸು ಕಲೆಯ ಸೂಕ್ಷ್ಮಗಳ ಬಗ್ಗೆ ಅದರ ವಿವಿಧ ಅರ್ಥಗಳ ಬಗ್ಗೆ ಧ್ಯಾನಿಸುತ್ತಿರುತ್ತದೆ. ಮತ್ತದರಿಂದ ಮನಗಾಣಬಹುದಾದ ಸಂಕೀರ್ಣ ಸಂಬಂಧಗಳನ್ನು ಅನುಭವಿಸುತ್ತಿರುತ್ತದೆ. ಇನ್ನೇನು ದಡ ಬಂದಿತು, ಎನ್ನುವಾಗಲೇ ಯಾವುದೋ ಒಂದು ಸೆಳವು ತನ್ನ ತೆಕ್ಕೆಗೆ ಎಳೆದುಕೊಂಡಿರುತ್ತದೆ. ಆಗ ಆವರಿಸುವ ಶೂನ್ಯಗಳನ್ನೇ ಕೈಮರ ಮಾಡಿಕೊಂಡು ಕಲಾ ಸಂಪಾದನೆಯಲ್ಲಿ ಕಲಾವಿದ ತೊಡಗಿಕೊಳ್ಳುತ್ತಾನೆ.
ಕೊರೋನಾ ಪರಿಸ್ಥಿತಿಯಿಂದ ರಂಗಭೂಮಿಯಲ್ಲಿ ಉಂಟಾದ ನಿರ್ವಾತದ ಬಗ್ಗೆ ಕವಿ ನಾಟಕಕಾರ ರಂಗನಿರ್ದೇಶಕ ರಘುನಂದನ, ‘ಜೀವನ ನಿರ್ವಹಣೆಗಾಗಿ ಪರ್ಯಾಯ ಮಾರ್ಗಗಳನ್ನು ಸೃಷ್ಟಿಸಿಕೊಳ್ಳುವುದು ಅನಿವಾರ್ಯವೂ ಹೌದು, ಅದು ಅವರವರ ವೈಯಕ್ತಕ. ನಾಟಕವನ್ನು ಚಿತ್ರೀಕರಿಸಿ, ಪ್ರವೇಶ ದರ ನಿಗದಿಪಡಿಸಿ, ಆನ್ಲೈನ್ ಮೂಲಕ ವೀಕ್ಷಕರನ್ನು ಸೆಳೆಯುತ್ತಿರುವ ಟ್ರೆಂಡ್ ಈಗ ಚಾಲ್ತಿಯಲ್ಲಿದೆ. ಆದರೆ ಇದು ಕೇವಲ ಡಿಜಿಟಲ್ ಡಾಕ್ಯುಮೆಂಟೇಷನ್. ಪ್ರೇಕ್ಷಕರ ನೇರ ಒಳಗೊಳ್ಳುವಿಕೆ ಇಲ್ಲದ್ದು ನಾಟಕವೇ ಅಲ್ಲ. ನಾನಂತೂ ಇದನ್ನು ಒಪ್ಪುವುದಿಲ್ಲ. ಇಂಥ ಆನ್ಲೈನ್ ಚಟುವಟಿಕೆಗಳು ಲೌಕಿಕ ಯಶಸ್ಸನ್ನು ತಂದುಕೊಡಬಲ್ಲವು. ಆದರೆ ಇದು ಮೂಲ ಸತ್ವವೆ? ಅಲ್ಲ. ಮೂಲ ಸತ್ವ ಬಿಟ್ಟು ಬೇರೆ ಏನು ಮಾಡಿದರೆ ಏನು ಪ್ರಯೋಜನ?
ಹಾಗೆಂದು ಸುಮ್ಮನೇ ಇರುವುದಾದರೂ ಹೇಗೆ? ಬರೋಬ್ಬರೀ ಒಂಬತ್ತು ತಿಂಗಳುಗಳೇ ಕಳೆದಿವೆ. ಮೊದಲ ಮೂರು ತಿಂಗಳುಗಳ ಕಾಲ ನಾವು ಮನೆಯಿಂದ ಹೊರಗೇ ಬರಲಿಲ್ಲ. ಊರುಬಿಟ್ಟ ಬಂದ ಕಲಾವಿದರು ಕ್ರಮೇಣ ಸಂಕಷ್ಟಕ್ಕೆ ಬಿದ್ದರು. ಆಗ ಇದಕ್ಕೆ ಸಣ್ಣ ಪರ್ಯಾಯ ಮಾರ್ಗದಂತೆ ಕಂಡಿದ್ದೇ ಈ ಡಿಜಿಟಲ್ ಥಿಯೇಟರ್. ಪ್ರಭಾತ ಸಭಾಂಗಣದ ನಿರ್ದೇಶಕಿ ವರ್ಷಿಣಿ ವಿಜಯ್, ‘ನಾವು ಫೇಸ್ಬುಕ್, ಇನ್ಸ್ಟಾಗ್ರಾಂ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಂಡೆವು. ಅವರು ಉತ್ತಮ ತಾಂತ್ರಿಕ ಸಹಾಯವನ್ನೇನೋ ಪೂರೈಸುತ್ತಿದ್ದರು. ಆದರೆ ಒಂದು ಕಂಟೆಂಟ್ ಸೃಷ್ಟಿಗೆ ತಿಂಗಳಾನುಗಟ್ಟಲೆ ಶ್ರಮ, ಹಣ ವ್ಯಯ ಮಾಡಿರುತ್ತೇವೆ. ಅದನ್ನು ಮರಳಿ ಪಡೆದುಕೊಳ್ಳುವುದು ಹೇಗೆ? ಅಲ್ಲದೆ ಬಹಳ ಮುಖ್ಯವಾದದ್ದು ಹಕ್ಕುಸ್ವಾಮ್ಯದ ಪ್ರಶ್ನೆ! ಆಗಲೇ ‘ಸಭಾಂಕೋಶ್’ ಆ್ಯಪ್ ರೂಪುಗೊಂಡಿದ್ದು.’
‘ಇದಕ್ಕಿಂತ ಮೊದಲು ‘ಬುಕ್ ಮೈ ಷೋ’ ಮೂಲಕ ಪ್ರಯತ್ನ ನಡೆಸಿದೆವು. ಅಲ್ಲಿ ಸ್ಲಾಟ್ ಪಡೆಯಲು ರೂ.10,000 ಖರ್ಚು ಮಾಡಬೇಕು. ಉಳಿದಂತೆ ರಂಗಮಂದಿರದ ಬಾಡಿಗೆಯಿಂದ ಹಿಡಿದು ನಾಟಕದ ಸಂಪೂರ್ಣ ಖರ್ಚು ಸುಮಾರು 50-60 ಸಾವಿರ. ಕೊರೋನಾದಲ್ಲಿ ಅಷ್ಟೊಂದು ಹಣ ಎಲ್ಲಿಂದ ತರುವುದು? ಆಗ ನ್ಯೂಯಾರ್ಕ್ನ ಬ್ರಾಡ್ವೇ ಆ್ಯಪ್ ‘ಸಭಾಂಕೋಶ್’ ಗೆ ಪ್ರೇರಣೆಯಾಯಿತು. ಪ್ರಭಾತ ಸಂಸ್ಥೆಯ ಐದು ಸಭಾಂಗಳಿಗೆ ಕಲಾವಿದರನ್ನು ಆಹ್ವಾನಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ನಾಟಕ ಪ್ರದರ್ಶನ ಏರ್ಪಡಿಸಿದೆವು. ಹೊರದೇಶದ ಕನ್ನಡಿಗರೂ ವೀಕ್ಷಿಸಿದರು. ಬಹುಶಃ ಈ ತಂತ್ರಜ್ಞಾನದ ಸಾಧ್ಯತೆ ಇಲ್ಲದಿದ್ದರೆ ಇಷ್ಟು ಜನರನ್ನು ಕನ್ನಡ ನಾಟಕಗಳು ತಲುಪಲು ಸಾಧ್ಯವೇ ಇರುತ್ತಿರಲಿಲ್ಲ. ಈ ತನಕ ಅರವತ್ತು ಕಲಾವಿದರನ್ನು ಒಳಗೊಂಡ ಆರು ನಾಟಕಗಳು ಪ್ರದರ್ಶನಗೊಂಡಿವೆ. ಎರಡು ವಾರಗಳಲ್ಲಿ ಸಾವಿರಾರು ಜನರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಟಿಕೆಟ್ ಮಾಮೂಲಿ ಪ್ರದರ್ಶನದ ದರವೇ ಆಗಿತ್ತು, ರೂ 150. ಡಿಸೆಂಬರ್ 31ರೊಳಗೆ ಸಭಾಂಕೋಶದ ಎರಡನೇ ಆವೃತ್ತಿ ಹೊರಬರಲಿದೆ. ಕಾಯ್ದು ನೋಡಿ’ ಹೀಗೆಂದು ಆಶಾಭಾವನೆ ವ್ಯಕ್ತಪಡಿಸುತ್ತಾರೆ.
ಕಲೆ ಎಂದರೆ ಅದರೊಂದಿಗೆ ಸಖ್ಯ ಸ್ಥಾಪಿಸಿ ಕಲಾತ್ಮಕತೆಯಿಂದ ಸಂಧಿಸುವುದು. ಅದಕ್ಕಾಗಿ ಕಲಾವಿದ ತನ್ನನ್ನು ಕಾಲದೊಂದಿಗೆ ಚೂರುಚೂರಾಗಿಸಿಕೊಳ್ಳುತ್ತ ಸಾಗುತ್ತಿರುತ್ತಾನೆ. ಹೀಗಿರುವಾಗ ಧುತ್ತನೇ ಇಂಥ ಮಹಾಮಾರಿ ಎರಗಿದರೆ? ಸಂಚಯ ತಂಡದ ಸ್ಥಾಪಕ ಸದಸ್ಯ ಗಣೇಶ ಶೆಣೈ, ‘ಸಂಕಷ್ಟದಲ್ಲಿರುವ ರಂಗಭೂಮಿಯ ಹಿರಿಯ ಕಲಾವಿದರಿಗೆ ಆರ್ಥಿಕ ಸಹಾಯ ಮಾಡಲ ಖುದ್ದಾಗಿ ಭೇಟಿ ಮಾಡಲು ಹೋದಾಗ ಅವರುಗಳು ಗಳಗಳನೆ ಅತ್ತುಬಿಟ್ಟಿದ್ದಿದೆ. ಸಹಾಯ ಎನ್ನುವುದು ಗೌಪ್ಯವಾಗಿರಬೇಕು ಅದು ಪ್ರಚಾರದ ತಂತ್ರವಾಗಬಾರದು. ಕೆಲ ತಿಂಗಳುಗಳ ಹಿಂದೆ ವಾಟ್ಸಪ್ ಗ್ರೂಪ್ ಮೂಲಕ ನಮ್ಮ ತಂಡದ ಸದಸ್ಯರೆಲ್ಲ ಸೇರಿ ಆರಂಭಿಸಿದ ಮೊತ್ತ ಒಂದೂವರೆ ಲಕ್ಷಕ್ಕೆ ಏರಿತು. ಅರವತ್ತು ಮೀರಿದ ರಂಗಕಲಾವಿದರಿಗೆ ತಿಂಗಳಿಗೆ ಇಂತಿಷ್ಟು ಹಣ ನಿಗದಿ ಮಾಡಿ ಸಹಾಯ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ವೆಬ್ಸೈಟಿನಲ್ಲಿ ಅದರ ಲೆಕ್ಕವನ್ನೂ ಪ್ರಕಟಿಸಲಿದ್ದೇವೆ.’ ಎನ್ನುತ್ತಾರೆ.
ಹೊಸ ವರ್ಷದ ಹೊಸ್ತಿಲಲ್ಲಿ ನಾವೆಲ್ಲರೂ ನಿಂತಿದ್ದೇವೆ. ರಂಗಮಂದಿರಗಳ ಬಾಗಿಲುಗಳು ತೆರೆಯುವ ಮುನ್ಸೂಚನೆಗಳೂ ಕಾಣುತ್ತಿವೆ. ಈ ಎಲ್ಲ ಏರಿಳಿವಿನ ಮಧ್ಯೆ ಇದೆಲ್ಲಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನ ಶಂಕರ ಫೌಂಡೇಶನ್ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ, ‘ತಮಾಷಾ ರಂಗಸಮ್ಮಿಲನ’ದಲ್ಲಿ, ರಂಗಭೂಮಿ ಮತ್ತು ಕಿರುತೆರೆ ನಿರ್ದೇಶಕ ಎಸ್. ಎನ್. ಸೇತುರಾಮ್, ‘ರಂಗಮಂದಿರಗಳು ಸ್ಥಗಿತಗೊಂಡಿದ್ದಕ್ಕೂ ಕೊರೋನಾಗೂ ಸಂಬಂಧವೇ ಇಲ್ಲ, ನಾಟಕದ ಕಥಾವಸ್ತುವಿನಲ್ಲಿ ಪರಿಷ್ಕರಣೆಯಾಗಬೇಕು. ಕ್ರಾಂತಿಕೇಂದ್ರಿತ ಕಥಾವಸ್ತುಗಳಿಂದ ರಂಗಭೂಮಿಗೆ ಏಳಿಗೆಯಿಲ್ಲ.’ ಎಂದಿದ್ದು ಇನ್ನೂ ಹಸಿಯಾಗಿಯೇ ಇದೆ.
ಧಾರವಾಡದ ರಂಗ ನಿರ್ದೇಶಕ ಪ್ರಕಾಶ ಗರುಡ, ‘ಬರುಬರುತ್ತ ನಾವಿನ್ನು ಸಾಮಾನ್ಯಜನರ ಅಭಿರುಚಿಗೆ ತಕ್ಕಂತೆ ಕಥಾವಸ್ತುವನ್ನು ರೂಪಿಸಬೇಕಾಗುತ್ತದೆ. ಬಹುಶಃ ಹಾಸ್ಯ ನಾಟಕಗಳಿಗೆ ಹೆಚ್ಚು ಮೊರೆ ಹೋಗಬೇಕಾದ ಕಾಲ ಬಂದರೂ ಬರಬಹುದು. ಆದರೆ ಎಲ್ಲಕ್ಕಿಂತ ಮೊದಲು ರಂಗಮಂದಿರಗಳು ಪುನಾರಂಭಗೊಳ್ಳಬೇಕು. ಸರ್ಕಾರ ರಂಗತಂಡಗಳಿಗಾಗಿ ಸಬ್ಸಿಡಿ ಕೊಡಬೇಕು ಇನ್ನಿತರ ಸವಲತ್ತು ಪೂರೈಸುವಲ್ಲಿ ತಿದ್ದುಪಡಿಗಳಾಗಬೇಕು’ ಎನ್ನುತ್ತಾರೆ.
ರಂಗಮಂಗಲ: ಜಗದೀಶ್ವರನ ಈ ಮಹಾರಂಗಶಾಲೆಯಲ್ಲಿ, ಕೊರೋನಾದ ಎರಡನೇ ಅಲೆ ಅಪ್ಪಳಿಸುತ್ತಿರುವ ಆತಂಕದ ಸನ್ನಿವೇಶದಲ್ಲಿ ಏನುಳಿದು, ಏನಳಿದು, ಇನ್ನೇನು ಮೊಳೆಯುವುದೋ?
Published On - 6:54 pm, Tue, 22 December 20