ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com
ಪರಿಕಲ್ಪನೆ: ಶ್ರೀದೇವಿ ಕಳಸದ
ಮುಂಬೈನಲ್ಲಿರುವ ಲೇಖಕಿ, ಅನುವಾದಕಿ ಅಕ್ಷತಾ ದೇಶಪಾಂಡೆ ಅವರ ಅನುಭವ ಕಥನ ನಿಮ್ಮೆದುರು…
‘ರೀ ಈವತ್ತು ಆಕಾಂಕ್ಷಾನ್ನ ಡ್ಯಾನ್ಸ್ ಕ್ಲಾಸ್ ಗೆ ಕರಕೊಂಡು ಹೋಗಿ ಬರ್ತೀರಾ?’
‘ಯಾಕೆ? ನೀನೇನು ಮಾಡತಾ ಇದಿಯಾ?’
‘ಕರ್ನಾಟಕ ಸಂಘದಲ್ಲಿ ಒಳ್ಳೆ ಸಾಹಿತ್ಯದ ಕಾರ್ಯಕ್ರಮ ಇದೆ, ದೊಡ್ಡ ಸಾಹಿತಿಗಳು ಬರ್ತಾ ಇದಾರೆ, ನಾನು ಬರ್ತಿನಿ ಅಂತ ಒಪ್ಕೊಂಡಿದೀನಿ, ನೀವು ಆಫೀಸಿಂದ ಬಂದ್ಮೇಲೆ ನಾನು ಹೇಳ್ದ ಹಾಗೆ ಆಕಾಂಕ್ಷಾನಾ ಡಾನ್ಸ್ ಕ್ಲಾಸ್ ಗೆ ಬಿಟ್ಟು ಕರ್ಕೊಂಡೂ ಬಂದು ಬಿಡಿ.’
‘ಕರ್ನಾಟಕ ಸಂಘದ ಕಾರ್ಯಕ್ರಮ ಮುಖ್ಯ ಅಲ್ಲ, ನನ್ನ ಆಫೀಸ್ ಕೆಲ್ಸ ಮುಖ್ಯ ನೀನು ಅಲ್ಲಿ ಹೋಗ್ಲಿಲ್ಲ ಅಂದ್ರೆ ಕಾರ್ಯಕ್ರಮ ನಿಲ್ಲಲ್ಲ. ಸೋ ಅವಳನ್ನ ನೀನೇ ಕ್ಲಾಸ್ ಗೆ ಕರಕೊಂಡು ಹೋಗು. ಯಾವ್ದೋ ಒಂದು ಕಾರ್ಯಕ್ರಮ ಮಿಸ್ ಮಾಡ್ಕೊಂಡ್ರೆ ಏನೂ ಗಂಟು ಹೋಗಲ್ಲ.’
‘ರೀ, ಸ್ವಲ್ಪ ಆಕಾಂಕ್ಷಾನ ಓದಿನ ಕಡೆ ಗಮನ ಕೊಡಿ, ಶಾಲೇಲಿ ಅವಳ ಪರೀಕ್ಷೆ ಇದೆಯಂತೆ ನಾಡಿದ್ದು. ನನಗೊಂದು ಅರ್ಜಂಟ್ ಆರ್ಟಿಕಲ್ ಬರೆಯೋದಿದೆ.
‘ಆರ್ಟಿಕಲ್ ಆಮೇಲೆ ಬರೆಯುವಂತೆ. ಮೊದ್ಲು ಅವಳ ಓದಿನ ಕಡೆ ಗಮನ ಕೊಡು, ನಂಗೆ ಬೇರೆ ಕೆಲ್ಸ ಇದೆ ನಾನು ಹೋಗಿ ಬರ್ತಿನಿ.’
ಎಲ್ಲಿದೀಯಾ ಮಗುವೆ ನೀನು? ಯಾಕೆ ಕಣ್ಣಾಮುಚ್ಚಾಲೆ ಆಡ್ತಾ ಇದಿಯಾ? ಅಂದು ಕಣ್ಣಲ್ಲಿ ನೀರು ತುಂಬಿಕೊಂಡು ನನ್ನ ಒಡಲಲ್ಲೂ ಕುಡಿಯೊಡಲಿ ಎಂದು ಕಾದ ವರ್ಷಗಳೆಷ್ಟೊ? ತಾಯಾಗುವ ಬಯಕೆ ಈಡೇರಲು ದೇವರ ಕಾಲು ಹಿಡಿದು ಗೋಗರೆದು ಬೇಡಿಕೊಂಡ ವರ್ಷಗಳೆಷ್ಟೊ. ತಾಯಿಯಾಗುವ ಕ್ಷಮತೆಯಿದ್ದರೂ ನೀವು ತಾಯಾಗಬಾರದು ಎಂದು ಡಾಕ್ಟರ್ ಹೇಳಿದಾಗ ಅದನ್ನು ಅರಗಿಸಿಕೊಳ್ಳಲು ಹೆಣಗಿದ ರಾತ್ರಿಗಳೆಷ್ಟೊ. ಇದೆಲ್ಲವನ್ನೂ ಬದಿಗಿಟ್ಟು ಒಂದಲ್ಲ ಒಂದು ದಿನ ತಾಯಿ ಆಗಿಯೇ ಆಗುತ್ತೇನೆ, ಆ ದಿನಗಳು ದೂರವಿಲ್ಲ ಅನ್ನುವ ಆಸೆಯೊಂದನ್ನು ಬಿಗಿಯಾಗಿ ಹಿಡಿದಿಟ್ಟು ಕನಸು ಕಂಡ ಘಳಿಗೆಗಳೆಷ್ಟೊ. ಅವು ನಿರಾಸೆಯ ದಿನಗಳೇ ಆಗಿದ್ದರೂ ನಿರಾಸೆ ಬೆಳೆಸಿಕೊಳ್ಳಬಾರದು, ಆಸೆ ಬಿಟ್ಟುಕೊಡಬಾರದು ಅನ್ನುವುದನ್ನು ನಿರ್ಧರಿಸಿದ್ದೆ. ಅದೇ ಫಲ ಕೊಟ್ಟಿರಬೇಕು. ದೇವಕಿಯಾಗಿ ಅಲ್ಲದಿದ್ದರೇನಂತೆ ಯಶೋದೆಯಾಗಿ ನನ್ನ ಮಾತೃತ್ವವನ್ನು ಧಾರೆಯೆರೆಯುವ ಭಾಗ್ಯ ದೇವರು ನನಗೆ ಕರುಣಿಸಿದ. ಎಂಟು ತಿಂಗಳ ಆಕಾಂಕ್ಷಾ ಮನೆ ಮನ ತುಂಬಿದ್ದಳು.
1992 ರಲ್ಲಿ ಮದುವೆಯಾಗಿ ಹುಬ್ಬಳ್ಳಿಯಿಂದ ಮುಂಬಯಿಗೆ ಹೊರಟು ಬಂದಾಗ ಮನೆಯಲ್ಲಿ ನಾವು ಮೂವರೇ. ಮಾವ, ಗಂಡ ಮತ್ತು ನಾನು. ಮಾವ ಮತ್ತು ಗಂಡ ಕೆಲಸಕ್ಕೆ ಹೊರಟು ಹೋದರೆ ಮನೆಯಲ್ಲಿ ನಾನೇ. ನನ್ನದೇ ರಾಜ್ಯ. ಅತ್ತೆ ಮದುವೆಯ ಮೊದಲೇ ತೀರಿಕೊಂಡಿದ್ದರು. ನಾದಿನಿ, ಮೈದುನ ಯಾರೂ ಇಲ್ಲ, ನನ್ನ ಗಂಡ ಒಬ್ಬನೇ ಮಗ. ನಿನಗೆ ಅತ್ತೆ, ನಾದಿನಿ, ಓರಗಿತ್ತಿಯರ ಟೆನ್ಶನ್ ಇಲ್ಲ ಬಿಡು, ಮನಸ್ಸಿಗೆ ಬಂದದ್ದು ನೀನು ಮಾಡಬಹುದು ಎಂದು ಎಷ್ಟೋ ಜನ ನನಗೆ ಹೇಳಿದ್ದರು. ಮಾವ ಕಿಡ್ನಿ ಟ್ರಾನ್ಸಪ್ಲಾಂಟ್ ಪೇಶಂಟ್, ಅವರಿಗೆ ಹೊತ್ತುಹೊತ್ತಿಗೆ ಪಥ್ಯದ ಊಟ ಮಾಡಿಕೊಡಬೇಕಿತ್ತು. ಮುಂಬಯಿಯಂತಹ ಮಹಾನಗರ ನನಗೆ ಹೊಸತಾಗಿದ್ದರಿಂದ ಮನೆಯ ಒಳಗಿನ, ಹೊರಗಿನ ಎಲ್ಲ ಕೆಲಸಗಳ ಜವಾಬ್ದಾರಿ ನನಗೆ ಹೊರೆ ಅನಿಸುತ್ತಿತ್ತು. ನಮ್ಮ ಮದುವೆಯಾದ ಏಳು ವರ್ಷಗಳ ನಂತರ ನನ್ನ ಮಾವನವರು ತೀರಿಹೋದರು. ಅಷ್ಟರಲ್ಲಿ ನನ್ನ ಗಂಡನಿಗೂ ಕಿಡ್ನಿ ಸಮಸ್ಯೆಯಿದೆ ಅನ್ನುವುದು ಗೊತ್ತಾಗಿದ್ದರಿಂದ ಅವರ ಆರೋಗ್ಯದ ಜವಾಬ್ದಾರಿಯೂ ಹೆಗಲ ಮೇಲಿತ್ತು. ಅಲ್ಲಿಯ ತನಕ ಎಲ್ಲ ಜವಾಬ್ದಾರಿಗಳನ್ನು ಒಬ್ಬಳೇ ಹೊತ್ತುಮಾಡುವ ಕಸುಬು ಕರಗತವಾಗಿತ್ತು. ನನಗೀಗ ಸ್ವಲ್ಪ ಸಮಯ ಸಿಕ್ಕಂತಾಗಿತ್ತು ಹಾಗಾಗಿ ನಾನು ಮುಂಬಯಿಯ ಕರ್ನಾಟಕ ಸಂಘ ಸೇರಿದ್ದೆ. ಅಲ್ಲಿ ಬರೆಯುವ ನನ್ನ ಆಸೆ ಮತ್ತೆ ಗರಿಗೆದರಿತ್ತು. ಜಮಖಂಡಿಯ ಕಾಲೇಜಿನಲ್ಲಿ ಬಿಎಸ್ಸಿ ಕಲಿಯುತ್ತಿದ್ದಾಗ ನನ್ನ ಗೆಳತಿಯೊಬ್ಬಳು ಕತೆ ಬರೆಯುತ್ತಿದ್ದಳು. ಅದನ್ನು ಓದಿ ನಾನೂ ಹೀಗೇ ಬರೆಯಬೇಕು ಅನಿಸುತ್ತಿತ್ತು. ಹಾಗೆ ಬರೆಯಲು ಪ್ರಯತ್ನಿಸಿದ್ದೆ ಸಹ ಆದರೆ ಅದನ್ನು ಯಾರಿಗೂ ತೋರಿಸದೆ ಹಾಗೇ ಇಟ್ಟು ಮದುವೆಯಾಗಿ ಈಕಡೆ ಬರುವಾಗ ಬರೆದ ಕಾಗದಗಳನ್ನೂ ಜೊತೆಗೆ ತೆಗೆದುಕೊಂಡು ಬಂದಿದ್ದೆ. ನನ್ನ ಬರವಣಿಗೆ ಈಗ ಮತ್ತೆ ಶುರುವಾಗಿತ್ತು.
ಮಾತೃಭಾಷೆ ಮರಾಠಿ, ಶಾಲೆಯಲ್ಲಿ ಕಲಿತದದ್ದು ಕನ್ನಡ ಹಾಗಾಗಿ ಎರಡೂ ಭಾಷೆಗಳನ್ನು ಉಪಯೋಗಿಸಿಕೊಂಡು ಅನುವಾದ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಅಂದುಕೊಂಡಿದ್ದೆ. ಆಗಷ್ಟೇ ಮುಂಬಯಿಯ ಕನ್ನಡ ಮಾಸಿಕ ‘ಗುರುತು’ ಪತ್ರಿಕೆ ಒಂದರಲ್ಲಿ ಸಣ್ಣದೊಂದು ಲೇಖನ ಬರೆದಿದ್ದೆ. ಅದು ಅಚ್ಚಾಗಿ ಬಂದಾಗ ಸಂತೋಷಕ್ಕೆ ಎಣೆಯೇ ಇರಲಿಲ್ಲ. ಹೊರಗೆ ಹೋಗಿ ದುಡಿಯುವುದು ಸಾಧ್ಯವಿಲ್ಲ. ಹಾಗಾಗಿ ಮನೆಯಲ್ಲೇ ಕೂತಿದ್ದು ಏನನ್ನಾದರೂ ಸಾಧಿಸಬೇಕು, ನಾನೂ ಹೆಸರು ಮಾಡಬೇಕು ಅನ್ನುವ ತುಡಿತವಿತ್ತು. ನಾನು ಹಾಗೆ ಬಯಸಿದ್ದೇ ನನ್ನಲ್ಲಿ ಧೈರ್ಯ ತುಂಬಲು, ನನಗೆ ಆಸರೆಯಾಗಿ ನಿಂತಿದ್ದು ಆಗಷ್ಟೇ ಪರಿಚಯವಾಗಿದ್ದ ಹಾಗೂ ಈಗ ನನ್ನ ಹೃದಯಕ್ಕೆ ಅತ್ಯಂತ ಸನಿಹವಾಗಿರುವ ಗೆಳತಿ ಜಯಲಕ್ಷ್ಮಿ ಪಾಟೀಲ್. ಸಮಸ್ಯೆಗಳ ಬೆನ್ನೇರಿ ನನ್ನ ಅಸ್ತಿತ್ವವನ್ನು ಹುಡುಕಲು ಹೆಣಗಾಡುತ್ತಿದ್ದ ನಾನು ಕೆಲವೊಮ್ಮೆ ರೋಸಿಹೋಗಿ ‘ಇಲ್ರಿ ಜಯಾ, ನಾನಿದನ್ನೆಲ್ಲ ಮಾಡಲಾರೆ, ನನಗೆ ನನ್ನದೇ ಆದ ಸಮಸ್ಯೆಗಳು ಮತ್ತ ಲಿಮಿಟೇಶನ್ಸ್ ಅದಾವು’ ಅನ್ನುತ್ತಿದಾಗ,
‘ರೀ, ಅಕ್ಷತಾ ಸಮಸ್ಯೆ ಎಲ್ರಿಗೂ ಇರತಾವ ಆದ್ರ ನಾವು ಅವುಗಳತ್ತ ನೋಡೋ ದೃಷ್ಟಿಕೋನ ಬದಲಾಯಿಸಿಕೊಂಡ್ವಿ ಅಂದ್ರ ಆ ಲಿಮಿಟೇಶನ್ಸಗಳನ್ನೇ ಅಪಾರ್ಚುನಿಟಿಯಲ್ಲಿ ಪರಿವರ್ತಿಸಿಕೋಬಹುದು. ಇರೋದೇ ಒಂದು ಬದುಕು, ನೀವು ಸುಮ್ನೆ ಕೈಚೆಲ್ಲಿ ಕೂತ್ರ ಏನ್ ಬಂತು? ಸಾಧಿಸಿ ತೋರಿಸಬೇಕವಾ’ ಅನ್ನುತ್ತಿದ್ದರು. ಸಮಸ್ಯೆಗಳಿದ್ದರೆ ಅದರಿಂದ ಹೊರಬರುವ ದಾರಿಗಳೂ ಇರುತ್ತವೆ ಅಲ್ಲವೆ? ಜಯಲಕ್ಷ್ಮಿ ನನಗೆ ಯಾವತ್ತೂ ಸ್ಫೂರ್ತಿಯ ಸೆಲೆ.
ಇದೇ ಕಾಲಕ್ಕೆ ವಿಠ್ಠಲ್ ಕಾಮತರ ‘ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ’ ಅನುವಾದಿಸಲು ಅವಕಾಶ ಸಿಕ್ಕಿತ್ತು. ಅದರ ಅನುವಾದ ಮಾಡಿ ಮುಗಿಸಿದ ಒಂದು ವರ್ಷದಲ್ಲೇ ಆಕಾಂಕ್ಷಾಳ ತಾಯಿ ಅಗಿದ್ದೆ. ನನ್ನ ಗಂಡ ಈಗಲೂ ಮತ್ತು ಆಗಲೂ ಬೆಳಿಗ್ಗೆ ಐದಕ್ಕೆ ಮನೆ ಬಿಟ್ಟರೆ ಮತ್ತೆ ಮನೆ ಸೇರುವುದು ಸಾಯಂಕಾಲ ಐದಕ್ಕೇ. ಅವರಿಗೆ ಬರವಣಿಗೆ, ಸಾಹಿತ್ಯದ ಬಗ್ಗೆ ಅಷ್ಟು ಒಲವಿಲ್ಲ. ನಾನು ಅನುವಾದಿಸುತ್ತಿದ್ದದ್ದು ಕನ್ನಡದಲ್ಲಿ ಆದ್ದರಿಂದ ಅವರಿಗೆ ಅದು ಓದಲೂಬಾರದು. ಯಾರಿಗೇ ಆಗಲಿ ಇಷ್ಟವಿಲ್ಲದ ವಿಷಯವನ್ನು ಎಷ್ಟೇ ರಸವತ್ತಾಗಿ ವರ್ಣಿಸಿದರೂ ಅರ್ಥವಾಗುವುದಿಲ್ಲ. ನನ್ನ ಗಂಡನೂ ಇದಕ್ಕೆ ಹೊರತಲ್ಲ. ಅವರು ಯಾವತ್ತೂ ನನ್ನನ್ನು ಯಾವುದೇ ವಿಷಯಕ್ಕೆ ತಡೆಯಲಿಲ್ಲ ಆದರೆ ಆಫೀಸಿಂದ ಬಂದ ಮೇಲೆ ಮನೆಯ, ಮಗುವಿನ ಜವಾಬ್ದಾರಿ ವಹಿಸಿಕೊಳ್ಳಲು ಅವರಲ್ಲಿ ತಾಕತ್ತಿರುತ್ತಿರಲಿಲ್ಲ. ಅಲ್ಲದೆ ಯಾವಾಗಲೂ ಅವರ ತಲೆಯಲ್ಲಿ ತನ್ನ ಸಾವು ಬದುಕಿನ ಪ್ರಶ್ನೆ ತಾಂಡವವಾಡುತ್ತಿರುತ್ತಿತ್ತು. ಹಾಗಾಗಿ ನನಗಿವತ್ತು ಬರೆಯಲೇಬೇಕು, ಕಾರ್ಯಕ್ರಮಕ್ಕೆ ಹೋಗಲೇಬೇಕು ಅಂತಾದಾಗ ಮಗುವನ್ನು ಹೊತ್ತುಕೊಂಡು ಹೋಗುತ್ತಿದ್ದೆ. ಅವಳು ದೊಡ್ಡವಳಾಗುತ್ತಿದ್ದಂತೆ ಅವಳ ಊಟ ತಿಂಡಿ, ಓದು ಇವೆಲ್ಲವನ್ನೂ ನಿಭಾಯಿಸಿ ಮಾಡುತ್ತಿದ್ದೆ. ಎಷ್ಟೇ ಕಷ್ಟಗಳು ಬಂದರೂ ನನಗೆ ಸಮಾಧಾನ, ಖುಷಿ ಕೊಡುತ್ತಿದ್ದ ಬರವಣಿಗೆ ಬಿಡಲು ಮಾತ್ರ ನಾನು ಸಿದ್ಧಳಿರಲಿಲ್ಲ. ನಾನು ಪಡುತ್ತಿದ್ದ ಪಾಡು ನೋಡಿ ನನ್ನ ತಾಯಿ, ‘ಯಾಕೆ ಬೇಕು ಇದೆಲ್ಲ? ಸುಮ್ಮನೆ ಮನೆ ನೋಡಿಕೊಂಡು ಇರಬಾರದೆ?’ ಅಂದಿದ್ದರು. ‘ಆ ಕಾರ್ಯಕ್ರಮ, ಈ ಕಾರ್ಯಕ್ರಮ, ಅನುವಾದ, ಯಾಕೆ ಬೇಕು ನಿನಗೆ? ಕಷ್ಟ ಆಗ್ತಾ ಇದ್ರೆ ಬಿಟ್ಟು ಬಿಡು. ಅದರಿಂದ ನೀನು ಹಣ ಗಳಿಸುವುದು ಅಷ್ಟರಲ್ಲೇ ಇದೆ’ ಎಂದು ನನ್ನ ಗಂಡನೂ ಅಂದಿದ್ದರು ಒಮ್ಮೆ.
ನಮ್ಮ ಮನಸ್ಸು ಸ್ಪ್ರಿಂಗ್ ಇದ್ದಂತೆ ಅಂತ ಅನಗೆ ಬಹಳ ಸಲ ಅನಿಸಿದೆ. ಯಾರಾದರೂ ಬಂದು ಇವೆಲ್ಲ ನಿನ್ನಿಂದ ಸಾಧ್ಯವಾಗದ ಕೆಲಸಗಳು, ಬಿಟ್ಟುಬಿಡು ಅಂತ ಹೇಳಿದರೆ ಮನಸ್ಸು ಅಷ್ಟೇ ತಾಕತ್ತಿನಿಂದ ಆ ಕೆಲಸ ಮಾಡಲು ಹಾತೊರೆಯುತ್ತದೆ. ಅದನ್ನು ಮಾಡಿಯೂ ತೋರಿಸುತ್ತದೆ. ಇಡೀ ಜಗತ್ತಿನಲ್ಲಿ ನನಗೊಬ್ಬಳಿಗೇನಾ ಮಗು ಇರೋದು? ಎಲ್ಲರೂ ಮನೆ, ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸಿಕೊಂಡೇ ಅಲ್ಲವೆ ತಮಗಿಷ್ಟ ಇರುವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು? ಅನ್ನುವ ಯೋಚನೆ ಬರುತ್ತಿದ್ದಾಗ ನಾನು ಮತ್ತಷ್ಟು ಉತ್ಸಾಹದಿಂದ ಬರವಣಿಗೆ ಮುಂದುವರೆಸುತ್ತಿದ್ದೆ. ನನ್ನ ಗಂಡನ ಆರೋಗ್ಯ ಕೆಡುತ್ತಿದ್ದ ಕಾಲದಲ್ಲೂ ಅವರ ಜೊತೆ ಆಸ್ಪತ್ರೆಗೆ ಓಡಾಡಿ, ಮಗುವಿನ ಜವಾಬ್ದಾರಿಯನ್ನು ಹೊತ್ತುಕೊಂಡೇ ದೊಡ್ಡ ದೊಡ್ಡ ಪುಸ್ತಕಗಳ ಅನುವಾದದ ಕೆಲಸ ಮುಂದುವರಿಸಿಕೊಂಡು ಬಂದಿದ್ದೇನೆ. ಈಗ ನೆನೆಸಿಕೊಂಡರೆ ಮೈ ಝುಂ ಅನ್ನುತ್ತದೆ.
ಅನುವಾದ ಮಾಡಿರುವ ನಾಲ್ಕು ಪುಸ್ತಕಗಳು, ಕೆಲವು ಸಣ್ಣ ಕತೆಗಳ ಅನುವಾದ, ಮಯೂರದಲ್ಲಿ ಪ್ರಕಟವಾದ ಅನುವಾದಿತ ಕಥೆ, ಅನುವಾದ ಮಾಡಿದ ಪುಸ್ತಕಗಳನ್ನು ಓದಿ ಕರ್ನಾಟಕದ ಸಾಕಷ್ಟು ಕಡೆಗಳಿಂದ ನನಗೆ ಮೆಚ್ಚುಗೆಯ ಫೋನ್ಗಳು ಬಂದಾಗ ಮನೆಯವರಿಂದ ಹಿಡಿದು ಎಲ್ಲರೂ ಬೆನ್ನು ತಟ್ಟಿದ ಆ ಸ್ಪರ್ಷವನ್ನು ಈಗಲೂ ಅನುಭವಿಸುತ್ತೇನೆ.
‘ರೀ, ನಾನು ಈ ಭಾನುವಾರ ಒಂದು ಕಾರ್ಯಕ್ರಮಕ್ಕೆ ಹೋಗ್ಬೇಕು. ನಿಮ್ಮಿಬ್ಬರ ಅಡುಗೆ ಮಾಡಿಟ್ಟು ಹೋಗ್ತಿನಿ, ಸಾಯಂಕಾಲ ಬರಕ್ಕೆ ಸ್ವಲ್ಪ ತಡ ಆಗುತ್ತೆ.’
‘ಪರವಾಗಿಲ್ಲ, ನೀನು ಹೋಗಿ ಬಾ, ನಾನು ಮನೆ ನೋಡ್ಕೋತಿನಿ, ಅಡುಗೆ ಟೆನ್ಶನ್ ಮಾಡ್ಕೋಬೇಡಾ ಅದನ್ನೂ ನಾನು ನೋಡ್ಕೋತಿನಿ, ನೀನು ಎಂಜಾಯ್ ಮಾಡು.’
‘ರೀ ನಾನು ಪೂನಾಕ್ಕೆ ಹೊರಡೋ ದಿನಾನೇ ಆಕಾಂಕ್ಷಾದ್ದು ಓಪನ್ ಹೌಸ್ ಅಂತೆ, ಹೇಗ್ಮಾಡೋದು?’
‘ನೀನು ನಿನ್ನ ಕಾರ್ಯಕ್ರಮ ಕ್ಯಾನ್ಸಲ್ ಮಾಡ್ಬೇಡ ನಾನು ರಜೆ ತಗೊಂಡು ಅವಳ ಸ್ಕೂಲಿಗೆ ಹೋಗ್ತಿನಿ.’
ಈ ಎರಡು ಭಿನ್ನ ಪರಿಸ್ಥಿತಿಗಳ ನಡುವೆ ನನ್ನ ಬೆಳವಣಿಗೆಯನ್ನು ನಾನು ನಿಲ್ಲಗೊಡಲಿಲ್ಲ, ಅದರ ಪರಿಣಾಮ ಮಾತ್ರ ತುಂಬ ಸಕಾರಾತ್ಮಕವಾಗಿ ಆಗಿ ಇವತ್ತು ನನ್ನೆದುರಿಗೆ ಇದೆ. ಇವತ್ತು ನನ್ನ ತಾಯಿಗೂ ನನ್ನ ಗಂಡನಿಗೂ ನನ್ನ ಮಗಳಿಗೂ ನನ್ನ ಬಗ್ಗೆ ಅಭಿಮಾನವಿದೆ. ಪರಿಸ್ಥಿತಿಗಳನ್ನು ಬದಲಾಯಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಅನ್ನುವುದು ಸತ್ಯ.
***
ಪರಿಚಯ : ಅಕ್ಷತಾ ದೇಶಪಾಂಡೆ ಮೂಲತಃ ಬೆಳಗಾವಿಯವರು, ವಾಸಿಸುತ್ತಿರುವುದು ಮುಂಬೈನಲ್ಲಿ. ಮಾತೃಭಾಷೆ ಮರಾಠಿ. ಬಿ.ಎಸ್ಸಿ ಪದವೀಧರೆ. ‘ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ’- ಮೂಲ: ಡಾ.ವಿಠಲ್ ಕಾಮತ್, ‘ನಾನೂ ಸಾಹಸಿ ಉದ್ಯಮಿ ಆಗಲೇಬೇಕು’- ಮೂಲ: ಡಾ.ವಿಠಲ್ ಕಾಮತ್, ‘ಹೀಗೊಬ್ಬ ಬಿಲ್ಡರ್’ ಮೂಲ-ಸುಧೀರ್ ನಿರಗುಡಕರ್, ‘ಡಾ. ಬಾಬಾಸಾಹೇಬ್ ಅಂಬೇಡಕರ್ ಅವರ ಬಹಿಷ್ಕೃತ ಭಾರತ ಎರಡು ಖಂಡಗಳ ಕೆಲವು ಭಾಗದ ಅನುವಾದ. ತರುಣ್ ಭಾರತ ಮರಾಠಿ ವಾರಪತ್ರಿಕೆಯಲ್ಲಿ ಅಂಕಣ ಬರಹ.
ನಾನೆಂಬ ಪರಿಮಳದ ಹಾದಿಯಲಿ: ಸಾಕಷ್ಟು ಹೂವುಗಳು ಸಿಕ್ಕವು ಮುಳ್ಳು ಸರಿಸಿ ಎತ್ತಿಕೊಂಡೆ…
Published On - 6:37 pm, Fri, 22 January 21