ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com
ಪರಿಕಲ್ಪನೆ: ಶ್ರೀದೇವಿ ಕಳಸದ
ಸೆಲ್ಕೋ ಫೌಂಡೇಶನ್ನಿನಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿರುವ ಭಾರತಿ ಹೆಗಡೆ ಅವರ ಅನುಭವಾಧಾರಿತ ಬರಹ ನಿಮ್ಮ ಓದಿಗೆ…
‘ನಾನು ಮುಂದೆ ಮಹಿಳಾ ಪತ್ರಿಕೆಗಳ ಮೇಲೆ ಪಿಎಚ್‍ಡಿ ಮಾಡಬೇಕು’ ಹೀಗೆಂದು ಸಿದ್ದಾಪುರದ ಎಂ.ಜಿ.ಸಿ. ಕಾಲೇಜಿನ ಕಟ್ಟಡದ ಪಕ್ಕದಲ್ಲಿರುವ ಸಣ್ಣ ಗುಡ್ಡದ ಮೇಲಿರುವ ಬೇಲಿಯಾಚೆಗೆ ನಿಂತಿರುವ ಗೆಳತಿಯೊಬ್ಬಳಿಗೆ ಹೇಳುವಾಗ ನಾನು ಬಿ.ಎ.ಎರಡನೇ ವರ್ಷದಲ್ಲಿದ್ದೆ. ಹಾಗೆ ಹೇಳುವಾಗ ನನಗೆ ಆ ವರ್ಷದ ಬಿ.ಎ. ಪರೀಕ್ಷೆಗೆ ಕಟ್ಟಲು ದುಡ್ಡೂ ಇರಲಿಲ್ಲ. ಆದರೆ ಕನಸು ದೊಡ್ಡದಿತ್ತು. ಜೇಬು ಖಾಲಿ ಇತ್ತು.
ಹಾಗೆ ನೋಡಿದರೆ ಇದು ಪ್ರತಿವರ್ಷದ ಗೋಳು ನನ್ನದು. ಪ್ರತಿವರ್ಷವೂ ಈ ಸಲ ಫೀಸು ಕಟ್ಟಲು ದುಡ್ಡಿಲ್ಲ. ನನ್ನ ಶಿಕ್ಷಣ ಇಲ್ಲಿಗೇ ನಿಂತು ಹೋಗಿಬಿಡಬಹುದು ಎಂದುಕೊಂಡಾಗಲೆಲ್ಲ ಅದೆಲ್ಲಿಂದಲೋ ಅಮ್ಮ ಒದಗಿಸುತ್ತಿದ್ದಳು. ಹೀಗೆ ಕುಂಟುತ್ತ ಸಾಗುತ್ತಿತ್ತು ನನ್ನ ಓದು. ಇದರೊಂದಿಗೆ ನನ್ನ ಮದುವೆಯ ಪ್ರಸ್ತಾಪ ಬೇರೆ. ನನ್ನ ನೆಂಟರಿಷ್ಟರಿಗೆ ನನ್ನ ಮದುವೆಯ ಗುರಿ ಬಿಟ್ಟರೆ ಬೇರೇನೂ ಇಲ್ಲವೇ ಇಲ್ಲವೇನೋ ಎಂಬಷ್ಟು ಪ್ರತಿಬಾರಿಯೂ ಮದುವೆಗೆ ಒತ್ತಾಯ ಬರುತ್ತಿತ್ತು. ಈ ಮದುವೆಯ ಪ್ರಸ್ತಾಪವಂತೂ ನಾನು ಎಸ್ಸೆಸ್ಸೆಲ್ಸಿ ಇರುವಾಗಿನಿಂದಲೇ ಇತ್ತು. ಅಪ್ಪನ ಅಕಾಲಿಕ ಮರಣದ ನಂತರ ಅಮ್ಮ, ಅಣ್ಣ ಮತ್ತು ನಾನು ಮೂವರೂ ಅತಂತ್ರ ಸ್ಥಿತಿಯಲ್ಲಿರುವಾಗ, ನೆಂಟರಿಷ್ಟರು, ಬಂಧುಬಳಗದವರೆಲ್ಲರ ಒಕ್ಕೊರಲಿನ ಅಭಿಪ್ರಾಯವೆಂದರೆ ಕೂಸಿನ ಮದುವೆ ಮಾಡುವುದು ಮತ್ತು ಮಾಣಿಯನ್ನು ಓದಿಸುವುದು.
ಸಮಾಜ ಯೋಚಿಸುವುದು ಹಾಗೇ ತಾನೆ? ಬಡವರ ಮನೆಯ ಹೆಣ್ಣುಮಕ್ಕಳನ್ನು ಎಷ್ಟು ಬೇಗ ಸಾಗಿಸಿದರೆ ಒಳ್ಳೆಯದು ಎಂಬುದಾಗಿ. ಆದರೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವ ಮನಸ್ಸು ನನ್ನದಾಗಿರಲಿಲ್ಲ. ಆಗಿನ್ನೂ ಹದಿನಾರು ಹದಿನೇಳರಲ್ಲಿದ್ದೆ. ಅದ್ಹೇಗೆ ಸಾಧ್ಯ? ಆದರೂ ಒಬ್ಬ ದೊಡ್ಡ ಶ್ರೀಮಂತರ ಮನೆಯ ಹುಡುಗನೊಬ್ಬ ಬಂದು ನೋಡಿ ಒಪ್ಪಿಬಿಟ್ಟ. ಹೆಣ್ಣು ನೋಡುವ ದಿನದಂದು ಅವನು ಒಪ್ಪದಿರಲಿ ಎಂದು ಬೇಕೆಂದೇ ತಲೆಗೆ ತುಸು ಹೆಚ್ಚೆನಿಸುವಷ್ಟು ಎಣ್ಣೆ ಸುರಿದು ಜಡೆಯನ್ನು ಪಿಟ್ಟ ಹೆಣೆದು (ಅಂದರೆ ಬಿಗಿಯಾಗಿ) ಮುಖಕ್ಕೆ ಪೌಡರನ್ನೂ ಸೋಕಿಸದೇ ಹೋಗಿ ಅವನ ಮುಂದೆ ನಿಂತೆ. ಯಾವ ಕಾರಣಕ್ಕೂ ಅವನು ಒಪ್ಪಬಾರದೆಂದು. ಅವತ್ತು ನನ್ನ ಮಾವ, ಅಜ್ಜ ಮತ್ತು ಹುಡುಗನ ಅಪ್ಪ ಇದ್ದರು. ನಾನು ಎಲ್ಲರಿಗೂ ಕಾಫಿ ಕೊಟ್ಟು ಒಳ ನಡೆದುಬಿಟ್ಟೆ. ಅಜ್ಜ ಬೇಕೆಂದೇ ‘ತಂಗೀ ಸ್ವಲ್ಪ ನೀರು ತಗಂಡು ಬಾ ಇಲ್ಲಿ’ ಎಂದು ಕರೆದ. ಆಹಾ ಅಜ್ಜನ ಕರಾಮತ್ತೇ ಎಂದುಕೊಂಡೆ. ಬೇಕೆಂದೇ ಹುಡುಗನ ಮುಂದೆ ನಾನು ಸ್ವಲ್ಪ ಹೊತ್ತು ನಿಲ್ಲಲೆಂದು ಅಜ್ಜ ಮಾಡಿದ ಉಪಾಯವದು. ಆದರೂ ನಾನು ಅಜ್ಜನಿಗೆ ನೀರು ಕೊಟ್ಟು ತಕ್ಷಣ ತಿರುಗಿದೆ. ಅದಕ್ಕೆ ಅಜ್ಜ, ‘ಸ್ವಲ್ಪ ನಿಂತ್ಗ ನೋಡನಾ. ಒಳಗೆಂತ ಕೆಲ್ಸ ನಿಂಗೆ’ ಎಂದು ತಡೆದು ನಿಲ್ಲಿಸಿದ. ಬಡೀ ಮುಖ ಮಾಡಿಕೊಂಡು ನಿಂತೆ, ಮೈಯೆಲ್ಲಾ ಮುಳ್ಳಾಗಿಸಿಕೊಂಡು.
ನನ್ನ ಗ್ರಹಚಾರಕ್ಕೆ ಹುಡುಗ ಒಪ್ಪಿಬಿಟ್ಟ. ಅಷ್ಟೇ ಅಲ್ಲ, ಮದುವೆಯ ಖರ್ಚನ್ನೂ ನಾವೇ ಹಾಕಿಕೊಂಡು ಮಾಡಿಕೊಳ್ಳುತ್ತೇವೆಂದುಬಿಟ್ಟ. ಬಡವರ ಮನೆಯ ಹೆಣ್ಣೊಬ್ಬಳಿಗೆ ಇದಕ್ಕಿಂತ ಇನ್ನೇನು ಬೇಕು? ಶ್ರೀಮಂತ, ದೊಡ್ಡ ಜಮೀನ್ದಾರನ ಮಗ. ನೋಡಲು ಚೆಂದವೇ ಇದ್ದ. ಎರಡೂ ಕಡೆಯ ಖರ್ಚನ್ನೂ ತಾವೇ ಹಾಕಿಕೊಂಡು ಮದುವೆ ಮಾಡಿಕೊಳ್ಳಲೂ ಸಿದ್ಧವಿದ್ದ ಹುಡುಗನೊಬ್ಬನನ್ನು ರಿಜೆಕ್ಟ್ ಮಾಡುವುದೆಂದರೆ ಆ ಕಾಲಕ್ಕೆ ಅದರಂಥ ದೊಡ್ಡ ಅಪರಾಧ ಬೇರೆ ಇರಲಿಲ್ಲ. ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುವ ಸಂಬಂಧ. ಆದರೆ ನನ್ನ ಮನಸ್ಸು ಒಪ್ಪದು, ಅಷ್ಟೊತ್ತಿಗೆ ನನ್ನ ನೆಂಟರಿಷ್ಟರು, ನನ್ನ ಅಜ್ಜನಂತೂ ತುದಿಗಾಲಲ್ಲಿ ನಿಂತು ಬಿಟ್ಟಿದ್ದ ನನ್ನ ಮದುವೆ ಮಾಡಲು. ಹಾಗಾಗಿ ಅವನಿಗೆ ಖುಷಿ. ನನಗಿಲ್ಲಿ ಸಂಕಟ. ನನಗೆ ಮದುವೆ ಬೇಡವೆಂದು ರಾತ್ರಿ ಹಗಲುಗಳ ವ್ಯತ್ಯಾಸವೆನ್ನದೆ ಅಳತೊಡಗಿದೆ. ಹೆಬ್ಬಾಗಿಲ ಕಟ್ಟೆಯ ಮೇಲೆ ಕುಳಿತು ನಾನು ಜೋರಾಗಿ ಅಳುವುದನ್ನು ನೋಡಿದ ಅಂಗಳದಲ್ಲಿ ಕಟ್ಟಿ ಹಾಕಿದ ರಾಜು ಎಂಬ ನಾಯಿಯೂ ನನ್ನೊಂದಿಗೆ ಹೋ ಎಂದು ಕೂಗಿ ವಿಚಾರಿಸಿಕೊಂಡಿತು.
ಎಲ್ಲರೂ ಒಪ್ಪಿಬಿಟ್ಟರು. ನನ್ನ ಮದುವೆ ನಡೆದೇ ಹೋಗಿಬಿಡುತ್ತದೆ ಆ ಹದಿನೇಳರ ಹರೆಯದಲ್ಲೇ… ಕಲ್ಪಿಸಿಕೊಂಡು ನಡುಗಿದೆ. ರಾತ್ರಿಯಿಡೀ ನಿದ್ದೆ ಮಾಡಲಿಲ್ಲ. ನನ್ನ ಅಳುವನ್ನು ನೋಡಲಾರದ ಅಮ್ಮ ಮೆಲ್ಲಗೆ ನನ್ನ ಬಳಿ ಬಂದು ‘ಎಂತಕ್ಕೆ ಇಷ್ಟೆಲ್ಲ ಅಳ್ತೆ ನೀನು. ನಿಂಗಿಷ್ಟ ಇಲ್ಲೆ ಅಂದರೆ ಮದುವೆ ಮಾಡತ್ವಿಲ್ಲೆ ಬಿಡು’ ಎಂದಳು. ನಿನ್ನ ಮಾತು ಯಾರು ಕೇಳ್ತ ಅಮ್ಮಾ ಎಂದೆ. ನೋಡು ನನಗಂತೂ ವಿದ್ಯೆ ಇಲ್ಲೆ. ನನ್ನ ಜೀವನದಲ್ಲಿ ಹೀಗೆಲ್ಲ ಅವಘಡಗಳು ನಡೆದುಹೊದವು. ನನಗೆ ವಿದ್ಯೆ ಇದ್ದಿದ್ದರೆ ಇಂದು ನಾನೂ ನೌಕರಿ ಮಾಡಿ ನಿಮ್ಮನ್ನೆಲ್ಲ ಸಾಕುತ್ತಿದ್ದೆ. ನನ್ನ ಥರ ನೀನಾಗಬಾರದು. ನಿನಗೆ ಕಡೇಪಕ್ಷ ಡಿಗ್ರಿಯವರೆಗಾದರೂ ನಾನು ಓದಿಸುತ್ತೇನೆ’ ಹೀಗೆಂದು ಅಮ್ಮ ಮಾತುಕೊಟ್ಟಳು ನನಗೆ. ಅದರಂತೆಯೇ ನಡೆದುಕೊಂಡಳು ಕೂಡ.
ಆದರೆ ಆ ಹುಡುಗನನ್ನು ಬೇಡ ಎಂದಿದ್ದಕ್ಕೆ ನನ್ನನ್ನು ಬಹುದೊಡ್ಡ ಅಪರಾಧಿಯೆಂಬಂತೆ ನೋಡತೊಡಗಿತು ನನ್ನ ನೆಂಟರಿಷ್ಟರ ವರ್ಗ. ಆದರೂ ಮನಸ್ಸು ಗಟ್ಟಿ ಮಾಡಿಕೊಂಡಿದ್ದೆ. ಮುಂದಿನ ಹಾದಿ ನಿಚ್ಚಳವಿರಲಿಲ್ಲ. ಆದರೆ ಕನಸು ಮಾತ್ರವಿತ್ತು. ಅಲ್ಲಿಂದ ಕಷ್ಟದ ಹಾದಿಯಲ್ಲೇ ತಡೆತಡೆದು ಅಂತೂ ಡಿಗ್ರಿಯನ್ನು ಹೇಗೋ ಮುಗಿಸಿಕೊಂಡೆ. ವಿದ್ಯುತ್ತೇ ಇಲ್ಲದ ಮನೆಯಲ್ಲಿ ಚುಮಣಿ ದೀಪದಲ್ಲೇ ಓದಿದೆ. ಅಂತೂ ಏನಾದರೂ ಮಾಡಬೇಕೆಂಬ ಛಲವಷ್ಟೇ ಇದ್ದಿತ್ತು. ಡಿಗ್ರಿಯ ನಂತರ ಎಲ್ಲರೂ ಬೆಂಗಳೂರಿಗೆ ಬಂದೆವು. ಮತ್ತೆ ನನ್ನ ಮುಂದೆ ಮದುವೆಯೆಂಬ ಕತ್ತಿ ತೂಗಾಡತೊಡಗಿತು. ಮಹಿಳಾ ಪತ್ರಿಕೆಗಳ ಮೇಲಿನ ಪಿಎಚ್.ಡಿ ಯ ಕನಸು ಹಾಗೆಯೇ ಉಳಿಯಿತು. ಅಂತೂ ಮದುವೆಯಾಯಿತು. ಮದುವೆಯಾಗಿ ಒಂದು ವರ್ಷದೊಳಗಡೆ ಮಗ ಹುಟ್ಟಿದ. ಅವನ ಲಾಲನೆ ಪಾಲನೆ. ತಾಯ್ತನವನ್ನು ತುಂಬ ಸಂಭ್ರಮಿಸಿದೆ. ಆದರೂ ಅವನು ಸ್ವಲ್ಪ ದೊಡ್ಡವನಾಗಿ ಎಲ್‍ಕೆಜಿಗೆ ಹೋಗುವಷ್ಟೊತ್ತಿಗೆ ಏನೋ ಖಾಲಿ ಎನಿಸತೊಡಗಿತು. ಅವನನ್ನು ಕರೆದುಕೊಂಡು ಹೋಗುವುದು, ಬರುವುದು, ಮನೆಗೆಲಸ ಇಷ್ಟರಲ್ಲೇ ಮುಗಿದು ಹೋಗುತ್ತಿತ್ತು ಜೀವನ. ಇಷ್ಟೇ ಅಲ್ಲ ಈ ಬದುಕು, ಇನ್ನೇನೋ ನಾನು ಮಾಡಬೇಕಿದೆ ಅನಿಸುತ್ತಿತ್ತು. ನನ್ನ ಹೈಸ್ಕೂಲು – ಕಾಲೇಜಿನ ದಿನಗಳಲ್ಲಿ ನಾನೊಬ್ಬ ಚರ್ಚಾಪಟುವಾಗಿದ್ದೆ, ರಾಜ್ಯಮಟ್ಟದಲ್ಲೆಲ್ಲ ಬಹುಮಾನಗಳನ್ನು ಪಡೆದಿದ್ದೆ, ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ, ಕವನ ಬರೆಯುತ್ತಿದ್ದೆ, ಸಾಹಿತ್ಯ, ಯಕ್ಷಗಾನ, ನಾಟಕ ಎಲ್ಲವೂ ನನ್ನಿಷ್ಟದ ವಿಷಯಗಳು.
ಈ ಬೆಂಗಳೂರಿನ ಪುಟ್ಟ ಮನೆಯೊಂದರಲ್ಲಿ ಮನೆಗೆಲಸ ಮಾಡುತ್ತ, ಅಪ್ಪೆ ಹುಳಿ, ತಂಬುಳಿ ಗೊಜ್ಜು ಎಂದು ರುಚಿಕಟ್ಟಾದ ಅಡುಗೆ ಮಾಡಿಕೊಂಡು ಮಗನನ್ನು ಬೆಳೆಸುತ್ತಿರುವಾಗ ಇವೆಲ್ಲವೂ ಕಣ್ಣಮುಂದೆ ಹಾದವು. ಛೇ..ಇಷ್ಟರಲ್ಲೇ ನಾನಿರಬೇಕೇ? ಏನಾದರೂ ಮಾಡಬೇಕು, ಏನಾದರೂ ಬ್ಯುಸಿನೆಸ್ ಪ್ರಾರಂಭಿಸಬೇಕು ಎಂದುಕೊಂಡಾಗಲೆಲ್ಲ ಕೆಲವರು ನನ್ನ ಹಳಿದರು. ಅದೇನು ಹೇಳಿದಷ್ಟು ಸುಲಭವಲ್ಲ ಎಂದರು. ಯಾರೊಬ್ಬರೂ ನನಗೆ ಪ್ರೋತ್ಸಾಹಿಸುವ ಮಾತೇ ಆಡುತ್ತಿಲ್ಲ. ಏನಾದರಾಗಲಿ ಎಂದು ಪೇಂಟಿಂಗ್ ಕ್ಲಾಸ್‍ಗೆ ಹೋಗಿ ಪೇಂಟಿಂಗ್ ಕಲಿತೆ, ಒಂದಷ್ಟು ಗೊಂಬೆಗಳನ್ನು ಮಾಡುವುದನ್ನು ಕಲಿತೆ. ಯಾವುದೂ ಖುಷಿಕೊಡುತ್ತಿಲ್ಲ. ಹೀಗಿರುವಾಗಲೇ ನನಗಾಗಿಯೇ ಎಂಬಂತೆ ಭಾರತೀಯ ವಿದ್ಯಾ ಭವನದಲ್ಲಿ ಕನ್ನಡ ಪತ್ರಿಕೋದ್ಯಮ ಕೋರ್ಸ್ ಪ್ರಾರಂಭಿಸಿದ್ದರು. ಅದೂ 6 ತಿಂಗಳ ಕೋರ್ಸ್, ಹೋಗಲಾ… ಬೇಡವಾ? ಹೋದರೆ ನನ್ನ ಮಗನನ್ನು ನೋಡಿಕೊಳ್ಳುವವರಾರು, ಮನೆಯ ಗೆಲಸ ಹೇಗೆ ನಿಭಾಯಿಸಲಿ, ಇಂಥ ಗೊಂದಲದಲ್ಲೇ ಒಂದಷ್ಟು ದಿನ ಕಳೆದುಹೋಯಿತು. ನಂತರ ನನ್ನ ಹಸಿವನ್ನು ನೋಡಿದ ನನ್ನ ಗಂಡ ನಾನು ಮಗನನ್ನು ನೋಡಿಕೊಳ್ಳುತ್ತೇನೆ, ನೀನು ಕೋರ್ಸ್‍ಗೆ ಸೇರಿಕೋ ಎಂದರು. ಆಹಾ ಮುಗಿಲೆತ್ತರದ ಖುಷಿಯದು. ಬೆಳಿಗ್ಗೆ 7.30- 9.30ರ ವರೆಗೆ ತರಗತಿ ಇರುತ್ತಿತ್ತು. ಬೆಳಿಗ್ಗೆ ಆರೂವರೆಗಾದರೂ ಮನೆ ಬಿಡಬೇಕಾಗಿತ್ತು. ಹೀಗೆ ಆರು ತಿಂಗಳು ಕಳೆಯುವಷ್ಟರಲ್ಲಿ ಅಲ್ಲಿ ಇಲ್ಲಿ ಸ್ವಲ್ಪ ಬರೆಯತೊಡಗಿದೆ. ಕೋರ್ಸ್ ಮುಗಿದ ಸ್ವಲ್ಪ ದಿವಸಕ್ಕೇ ಕನ್ನಡ ಪ್ರಭಕ್ಕೆ ಸೇರಿಕೊಂಡೆ.
ಭಯದಿಂದಲೇ ಸಂದರ್ಶನಕ್ಕೆ ಹೋದೆ. ಅದೆಷ್ಟು ಭಯವೆಂದರೆ ಅದ್ಹೇಗೆ ಹೋಗಿ ಆ ಸಂದರ್ಶಕರ ಮುಂದೆ ಕುಳಿತೆನೋ, ಅದೇನು ಹೇಳಿದೆನೋ ಗೊತ್ತಿಲ್ಲ. ಅಂತೂ ಆಯ್ಕೆಯಾಗಿಬಿಟ್ಟೆ. ಡೆಸ್ಕ್ನಲ್ಲಿ ಕೆಲಸ. ಮಧ್ಯಾಹ್ನ 3.30 ಯಿಂದ ರಾತ್ರಿ 9.30ರ ವರೆಗೆ. ಆದರೆ ಹೋಗುವಾಗ ಮಾತ್ರ ಸರಿಯಾದ ಸಮಯ. ಕೆಲಸ ಮುಗಿಯುವುದು ಹತ್ತಾದರೂ ಆದೀತು, ಹನ್ನೊಂದಾದರೂ ಆದೀತು. ಅಂತೂ ರಾತ್ರಿ ಮನೆಗೆ ಬರುವುದೆಂದರೆ 12 ಗಂಟೆ ಸಮೀಪಿಸುತ್ತಿತ್ತು. ಇದೆಂಥ ಕೆಲಸ. ರಾತ್ರಿಹೊತ್ತು ಮನೆಗೆ ಬರುವುದು, ಮಗನನ್ನು ಯಾರು ನೋಡಿಕೊಳ್ಳುತ್ತಾರೆ. ಪಾಪ ಅವನಿಗೆ ತಿಂಡಿ ಕೊಡುವುದ್ಯಾರು. ಮನೆಗೆಲಸ ಯಾರು ಮಾಡಿಕೊಳ್ಳುತ್ತಾರೆ. ಹೀಗೆ ಹತ್ತೆಂಟು ಪ್ರಶ್ನೆಗಳು ಮತ್ತದೇ ನೆಂಟರಿಷ್ಟರಿಂದ. ನನಗೂ ಯಾಕೋ ಗಿಲ್ಟ್ ಕಾಡತೊಡಗಿತು. ಸಂಜೆ 5 ಗಂಟೆ ಆಗುತ್ತಿದ್ದಂತೆ ಏನೋ ತಳಮಳ. ಈಗ ನನ್ನ ಮಗ ಶಾಲೆಯಿಂದ ಬರುತ್ತಾನೆ ಒಬ್ಬನೇ. ಅವನಿಗೆ ತಿಂಡಿ ಕೊಡಲು, ಅವನ ಡ್ರೆಸ್ ಅನ್ನು ಬದಲಾಯಿಸಲು ಅಮ್ಮ ಇರುವುದಿಲ್ಲ. ಅವನಿಗೆ ಹೋಂ ವರ್ಕ್ ಮಾಡಿಸಬೇಕು, ಓದಿಸಬೇಕು. ಆದರೆ ಯಾರೂ ಇಲ್ಲ ಮಾಡಿಸಲು. ಎಲ್ಲಕ್ಕಿಂತ ಮುಖ್ಯವಾಗಿ ಅತೀ ತುಂಟ ಹುಡುಗನವನು, ಬಿಟ್ಟರೆ ರಸ್ತೆಗೇ ಓಡಿಹೋಗುತ್ತಿದ್ದ. ಹೊಡಕಲು ಮಾಣಿ ಬೇರೆ. ಸದಾಕಾಲ ಇನ್ನೊಬ್ಬರೊಡನೆ ಕುಸ್ತಿ ಆಡುವವ. ರಸ್ತೆಗೆ ಹೋಗಿ ನಾಲ್ಕಾರು ಹುಡುಗರೊಂದಿಗೆ ಇವನು ಜಗಳವಾಡುವಾಗಲೆಲ್ಲ ಜಗಳವನ್ನು ಬಿಡಿಸಲು ನಾನಿರುತ್ತಿದ್ದೆ. ಆದರೀಗ ಯಾರೂ ಇರುವುದಿಲ್ಲ, ಯಾರೊಡನೆ ಎಷ್ಟು ಹೊಡೆತ ತಿನ್ನುತ್ತಾನೋ ಎಂಬ ಭಯ.
ನಿಜಕ್ಕೂ ನಾನು ನೌಕರಿಗೆ ಹೋಗುವ ಅಗತ್ಯವಿತ್ತಾ? ನಾನೇನಾದರೂ ನನ್ನ ಮನೆಯನ್ನು, ನನ್ನ ಮಗನನ್ನು ನಿರ್ಲಕ್ಷಿಸಿಸಿ ಉದ್ಯೋಗಕ್ಕೆ ಹೋಗುತ್ತಿದ್ದೀನಾ? ಸಾವಿರ ಸಲ ಕೇಳಿಕೊಂಡಿದ್ದೇನೆ ಇದನ್ನು. ಆದರೆ ಒಮ್ಮೆ ಪತ್ರಿಕೋದ್ಯಮಕ್ಕೆ ಸೇರಿಕೊಂಡ ಮೇಲೆ ಅದರ ಆಕರ್ಷಣೆಯೇ ಬೇರೆ. ಬಿಡಲು ಮನಸ್ಸೇ ಆಗುವುದಿಲ್ಲ. ಅಷ್ಟೊತ್ತಿಗೆ ಬದುಕಿನಲ್ಲಿ ಏನೇನೋ ಏರಿಳಿತಗಳು. ಉದ್ಯೋಗ ನನಗೆ ಅನಿವಾರ್ಯವಾಗತೊಡಗಿತು. ಹಾಗಾಗಿ ಗಟ್ಟಿ ಮನಸ್ಸು ಮಾಡಿ ಹೊರಟುಬಿಟ್ಟೆ. ನನ್ನವರು ಮಗನನ್ನು ನೋಡಿಕೊಂಡರು. ಉಳಿದಂತೆ ಅಮ್ಮ ನೋಡಿಕೊಳ್ಳುತ್ತಿದ್ದಳು. ಹೇಗೋ ಹೇಗೋ ಅಂತೂ ದಾಟಿಬಿಟ್ಟೆ. ಮಗ ದೊಡ್ಡವನಾದ. ಸ್ವತಂತ್ರವಾಗಿ ಬೆಳೆದ ಎಂಬುದು ಬೇರೆ ವಿಷಯ. ಆದರೂ ಆ ಹೊತ್ತಿಗೆ ನಾನಿರಬೇಕಿತ್ತು, ಅವನನ್ನು ನೋಡಿಕೊಳ್ಳಲು ಎಂಬ ಸಣ್ಣ ಕೊರಗು ಈಗಲೂ ನನ್ನಲ್ಲಿ ಉಳಿದುಬಿಟ್ಟಿದೆ. ಕನ್ನಡಪ್ರಭ, ಉದಯವಾಣಿ, ಹೊಸದಿಗಂತ ಇಲ್ಲೆಲ್ಲ ಕೆಲಸ ಮಾಡಿದೆ. ವಿಜಯವಾಣಿಯ ನ್ಯೂಸ್ ಎಡಿಟರೂ ಆದೆ. ಎಲ್ಲಕ್ಕಿಂತ ನನಗೆ ವಿಶೇಷ ಅನಿಸಿದ್ದು, ಕಳೆದ ಹದಿನೈದು ವರ್ಷಗಳಿಂದ ಬೇರೆಬೇರೆ ಪತ್ರಿಕೆಗಳಲ್ಲಿ ಮಹಿಳಾ ಪುರವಣಿಗಳ ಉಸ್ತುವಾರಿಯನ್ನು ಹೊತ್ತಿದ್ದೇನೆ. ಆಗ ಅಂದುಕೊಂಡೆ, ಅವತ್ತು ಸಿದ್ದಾಪುರದ ಕಾಲೇಜಿನ ಗುಡ್ಡದ ಮೇಲೆ ಮಹಿಳಾ ಪತ್ರಿಕೆಗಳ ಮೇಲಿನ ಪಿಎಚ್.ಡಿಯ ಕನಸು ಹೀಗೆ ನನಸಾಯಿತೇ ಎಂದು. ಅಂದರೆ ನಮ್ಮ ಮನಸ್ಸಿಗೆ ಬಲವಾಗಿ ಅಂದುಕೊಂಡರೆ ಅದು ನೆರವೇರುತ್ತದೆಯಾ ಹಾಗಿದ್ದರೆ…
ಆದರೆ ಈಗ ಮಾಧ್ಯಮ ಬಿಟ್ಟು ಎನ್‍ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಬರೆಯುತ್ತಲೇ ಇದ್ದೇನೆ. ಹಿಂತಿರುಗಿ ನೋಡಿದಾಗ ಸವೆಸಿದ ಹಾದಿ ಹೂವಿನ ಹಾಸಿಗೆಯೇನಾಗಿರಲಿಲ್ಲ.
***
ಪರಿಚಯ: ಭಾರತಿ ಹೆಗಡೆ ಅವರ ‘ಮೊದಲ ಪತ್ನಿಯ ದುಗುಡ’, ‘ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು’ ಮತ್ತು ‘ಮಣ್ಣಿನ ಗೆಳತಿ’ ಪುಸ್ತಕಗಳು ಪ್ರಕಟವಾಗಿವೆ. ಕೃಷಿ ವಿಶ್ವವಿದ್ಯಾನಿಯಲದ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ ಇದಕ್ಕೆ ಲಭಿಸಿದೆ. ಇದಲ್ಲದೆ ಉತ್ಥಾನ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ದೊರೆತಿದೆ. ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕೆಯುಡಬ್ಲುಜೆ ಕೃಷಿ ಪ್ರಶಸ್ತಿ ಮತ್ತು ಸಿಡಿಎಲ್ ಸಂಸ್ಥೆಯ ಚರಕ ಪ್ರಶಸ್ತಿಗೂ ಇವರು ಭಾಜನರು.
Published On - 3:49 pm, Fri, 22 January 21