ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com
ಪರಿಕಲ್ಪನೆ: ಶ್ರೀದೇವಿ ಕಳಸದ
ಲೇಖಕಿ, ಅನುವಾದಕಿ ಸಂಯುಕ್ತಾ ಪುಲಿಗಲ್ ಅವರ ಆಪ್ತಬರಹ ನಿಮ್ಮ ಓದಿಗೆ
‘ಯಾವಾಗಲೂ ಅಪ್ಪನ ಬಗ್ಗೇನೇ ಬರೀತಾಳೆ… ಅಮ್ಮನ ಬಗ್ಗೆ ಬರೆಯಲ್ವಾ ಅಂತ ಕೇಳಿದ’ ಎಂದರು ಅಪ್ಪ. ಸಣ್ಣ ನಗೆ ನಕ್ಕು ಮೌನವಾಗಿದ್ದೆ. ಅದೆಷ್ಟೋ ಬಾರಿ ಬರೆಯಲು ಪ್ರಯತ್ನಿಸಿ ಕಣ್ಣು ಹನಿಗೂಡಿ ಬರಹ ನಿಲ್ಲಿಸಿದ್ದಿದೆ. ಅಮ್ಮನ ಬಗ್ಗೆ ಬರೆಯಬೇಕೆ? ನನ್ನಲ್ಲೇ ನಾನಾಗಿ ಸದ್ದಿಲ್ಲದಂತೆ ಅಡಗಿರುವ ಅಮ್ಮನ ಬಗ್ಗೆ ಬರೆದರೆ, ನನ್ನ ಬಗ್ಗೆ ನಾನೇ ಬರೆದುಕೊಂಡಂತೆ. ಅಮ್ಮನಿರುವುದೇ ನನಗಾಗಿ ಎಂಬ ಧಾರ್ಷ್ಟ್ಯ ನನಗೆ ಬರುವಂತೆ ಮಾಡಿದ್ದು ಈ ನನ್ನಮ್ಮನೇ. ಅವಳಿಲ್ಲದೆ ಇದ್ದರೆ ನನ್ನ ಜಗತ್ತು ಏನಾಗಿರುತ್ತಿತ್ತು? ಆ ಊಹೆಯೂ ಅನಗತ್ಯ. ಅವಳನ್ನು ‘ಇಷ್ಟೊಂದು ಸೈರಣೆ, ಸಹಿಷ್ಣುತೆ ನಿನಗೆ ಎಲ್ಲಿಂದ ಬಂತಮ್ಮಾ?’ ಎಂದು ಕೇಳುವಾಸೆ. ಆದರೆ ಉತ್ತರಕ್ಕೆ ಹೆದರುತ್ತೇನೆ. ಏಕೆಂದರೆ ಆ ಉತ್ತರ ಸಿಗದು, ಸಿಕ್ಕಿದರೂ ನನಗೆ ದಕ್ಕದು. ಅವಳು ನೀರಿನಂತೆ. ಸಲಿಲವಾಗಿ ಎಲ್ಲದರಲ್ಲೂ ಹರಿದಾಡಬಲ್ಲಳು, ಜೀವತಂತುಗಳಲ್ಲಿ ಹರಿದಾಡುವ ಮುಖ್ಯವಾಹಿನಿಯಾದರೂ ಎಲ್ಲಿಯೂ ಕಾಣಿಸಿಕೊಳ್ಳದಂತೆ ಪಾರದರ್ಶಿಯಾಗಿ ಉಳಿದು ಬಿಡುವವಳು. ನಮ್ಮ ಸಂಭ್ರಮವೇ ಅವಳ ಸಂಭ್ರಮ, ನಮ್ಮ ನೋವೇ ಅವಳ ನೋವು. ಅವಳ ಪುಟ್ಟ ಪ್ರಪಂಚದ ತುಂಬೆಲ್ಲಾ ನಮ್ಮ ಬದುಕುಗಳೇ ಹರಡಿ ರಾಡಿಯಾಗಿದೆ. ಅವಳಿಗಾಗಿ ಒಂದಿನಿತೂ ಅದರಲ್ಲಿ ಸ್ಥಳವಿಲ್ಲ. ನಾವಿಲ್ಲದ ಆ ಸ್ಥಳ ಅವಳಿಗೆ ಬೇಕಾಗೂ ಇಲ್ಲ.
ಅವಳಿಗೆ ಅರ್ಥವಾಗದ, ಅಗತ್ಯವಿಲ್ಲದ ಅದೆಷ್ಟೋ ವಿಷಯಗಳನ್ನು ನಾನು ಇನ್ನಿಲ್ಲದಂತೆ ವಿವರಿಸಿ ಹೇಳುವಾಗ, ತಾನೇ ಆ ಪರಿಸ್ಥಿತಿಯ ಪರಿಧಿಯಲ್ಲಿದ್ದಂತೆ ಅದಕ್ಕೆ ಸ್ಪಂದಿಸುತ್ತಾಳೆ. ತೋಚಿದ ಸಲಹೆಗಳನ್ನೀಯುತ್ತಾಳೆ. ಆ ರಗಳೆಗಳ ಒಂದಂಶ ಗ್ರಹಿಕೆಯಾಗದಿದ್ದರೂ, ಎಲ್ಲವನ್ನೂ ಗಹನವಾಗಿ ಕೇಳಿ, ‘ಎಲ್ಲ ಸರಿ ಹೋಗತ್ತೆ ಬಿಡು’ ಎನ್ನುವಾಗ ಅವಳ ದನಿಯ ಸಾಂತ್ವನವೇ ಎಲ್ಲಕ್ಕೂ ಪರಿಹಾರವೆನಿಸುತ್ತದೆ. ಎಷ್ಟುಆಶ್ಚರ್ಯ! ಹೀಗಾಗುವುದು ಸಾಧ್ಯವೇ? ಹೆಣ್ಣೊಬ್ಬಳು ತನ್ನನ್ನು ತಾನು ಮಕ್ಕಳಿಗಾಗಿ ಇಷ್ಟೊಂದು ಸಮರ್ಪಿಸಿಕೊಳ್ಳಬಲ್ಲಳೇ? ಮಕ್ಕಳ ಬದುಕಿನಲ್ಲೇ ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳಬಲ್ಲಳೇ? ಎಂದು ಹಲವಾರು ಬಾರಿ ಅನಿಸಿದ್ದಿದೆ. ಸದಾ ತನ್ನ ಮಕ್ಕಳಿಗಾಗಿ ತುಡಿಯುವ ತಾಯಿ ಹೃದಯ ಆಗಾಗ ಬೀದಿಯಹಸು, ನಾಯಿ, ಗಾರೆಕೆಲಸದ ಹುಡುಗಿ, ಪತ್ರಿಕೆಯಲ್ಲಿ ಕಂಡ ಸಾವು ಎಲ್ಲಕ್ಕೂ ಒಂದೇ ರೀತಿ ಮಿಡಿಯುವಾಗ ಆಕೆಯ ತಾಯ್ತನದ ಭಾವವು ತನ್ನ ಬಾಹುಳ್ಯವನ್ನು ಎತ್ತಿ ತೋರುತ್ತದೆ. ಹೀಗೆ ತನಗಾಗಿ ತಾನು ಏನನ್ನೂಆಶಿಸದೆ, ಆಲೋಚಿಸದೆ, ಸರ್ವಸಮರ್ಪಕ ಭಾವವನ್ನು ಹೊಂದಿರುವ ಅಮ್ಮನ ಶಕ್ತಿಗೆ ಬೆರಗಾಗುತ್ತೇನೆ. ಅವಳಿಗೆ ಒಂದಿನಿತೂ ಒಗ್ಗದ ಅಧ್ಯಾತ್ಮದ ಪಾಠಗಳು ಅರಸದೆಯೇ ಅವಳಲ್ಲಿ ಗಾಢವಾಗಿ ಸೇರಿದೆಯೇ ಎಂಬ ಆಲೋಚನೆ ಸುಳಿಯುತ್ತದೆ. ಇಷ್ಟೆಲ್ಲದರ ನಡುವೆ ಹಿಂದೊಮ್ಮೆ ಕೆಮಿಸ್ಟ್ ಆಗಿ ದುಡಿದ ಅನುಭವಗಳನ್ನು ಹಂಚಿಕೊಳ್ಳುವಾಗ, ತನ್ನ ತಂದೆಯ ಅಕ್ಕರೆಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವಾಗ ಅವಳ ಕಣ್ಣಿನ ಹೊಳಪು ಅವಳ ಸ್ವಂತಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.
ಎಷ್ಟೆಲ್ಲವನ್ನೂ ನಮಗಾಗಿ ಮಾಡುವ ಅಮ್ಮ, ತನ್ನಸಣ್ಣ ತಪ್ಪನ್ನುಎತ್ತಿ ತೋರಿದಾಗ ತಾನೂ ನಮ್ಮೊಡನೆ ನಕ್ಕುಬಿಡುವ ಕಲೆಯನ್ನು ಕಲಿತದ್ದಾದರೂ ಹೇಗೆ?ಅಷ್ಟು ತಾಳ್ಮೆ ಅವಳಿಗೆ ಬಂದಿತಾದರೂ ಎಲ್ಲಿಂದ? ಯಾವ ಸೂಕ್ಷ್ಮ ಘಳಿಗೆಗಳಲ್ಲಿ ನಾವು ಆ ಹೂಹೃದಯಕ್ಕೆ ನೋವುಂಟು ಮಾಡಿದ್ದೆವೋ ತಿಳಿಯುವುದೇ ಇಲ್ಲ. ಅಷ್ಟು ಸಹನೆ ಆ ತುಂಬುನಗೆಯಲ್ಲಿ ಅಡಗಿರುತ್ತದೆ. ಅಮ್ಮನ ಆಳ-ವಿಸ್ತಾರದ ಪ್ರೀತಿಯಲ್ಲಿ ನಾವು ಸಿಲುಕಿದ್ದೇವೋ ಅಥವಾ ಅದರ ಪಾಶದಲ್ಲಿ ಅವಳನ್ನು ನಾವು ಸಿಲುಕಿಸಿದ್ದೇವೋ ತಿಳಿಯೆ. ಈ ನನ್ನಮ್ಮನಂತೆ ಎಂದಾದರೂ ನಾನೂ ಆಗಬಲ್ಲೆನೇ ಅವಳಂತೆ ತನ್ನತನವನ್ನುಳಿಸಿಕೊಂಡೂ ಇತರರಿಗಾಗಿ ಜೀವ ಸವೆಸುವ ಪಾಠಗಳನ್ನು ನಾನು ಕಲಿಯಬಲ್ಲೆನೇ? ಎಂದು ಆಗಾಗ ಯೋಚಿಸಿ ಹೊಳೆಯದೆ ಸೋತಿದ್ದೇನೆ.
ಇವೆಲ್ಲವೂ ಅಮ್ಮನಲ್ಲಿ ಹೇಗೆ ಸಾಧ್ಯ ಎಂದು ಆಶ್ಚರ್ಯವಾದರೂ ಅದಕ್ಕೆ ಉತ್ತರ ಎಂದಿಗೂ ಹೊಳೆದಿರಲಿಲ್ಲ, ಅಥವಾ ಉತ್ತರಕ್ಕೆ ಹುಡುಕಿರಲೂ ಇಲ್ಲ. ಆದರೆ ಒಂದು ಹೊಸ ಅನುಭವದ ಅಲೆ ಇದೀಗಷ್ಟೇ ನನ್ನಲ್ಲಿ ಚಿಗುರೊಡೆದು ಅಮ್ಮ ಹೊಸದಾಗಿ ಅರ್ಥವಾಗುತ್ತಿದ್ದಾಳೆ. ಅದೇನೆಂದರೆ, ಅವಳು ತುಂಬಾ ಧೈರ್ಯವಂತೆ! ಅಮ್ಮನ ‘ರಕ್ಷೆಗೂಡಲ್ಲಿ ಬೆಚ್ಚಗೆ ಅಡಗಿ ಕೂತಿರುವ’ ನನಗೆ ‘ದೂಡಿಸಿಕೊಳ್ಳುವ’ ಧೈರ್ಯವಿನ್ನೂ ಬಹುಶಃ ಬಂದಿರಲಿಲ್ಲವೇನೋ. ಆದರೆ ಹೊರಜಿಗಿದು ಗೂಡೊಂದನ್ನು ಕಟ್ಟುವ ಸಂದರ್ಭ ಎದುರಾಗಿತ್ತು. ಕಚೇರಿ, ಸಾಹಿತ್ಯ ಸಮಾರಂಭಗಳು, ಬರಹ, ಓದು, ಸುತ್ತಾಟ ಹೀಗೆ ನಾನಾಯಿತು, ನನ್ನ ಪಾಡಾಯಿತು ಎಂದಿದ್ದಾಗ ಅಚಾನಕ್ಕಾಗಿ ಮಡಿಲಲ್ಲಿ ಬೆಳಕೊಂದು ಕಾಣಿಸಿಕೊಂಡಿತ್ತು.
ಮಕ್ಕಳೆಂದರೆ ಬಹಳ ಆಸೆಯಿದ್ದ ನಾನೂ ಮಗುವೊಂದಕ್ಕೆ ಅಮ್ಮನಾಗುವ ಸಮಯ ಒದಗಿಬಂದಿತ್ತು. ಮನಸ್ಸು ತಳಮಳ. ಬಿಳಿಹಾಳೆಯಂತಿದ್ದ ಬದುಕಿಗೆ ರಂಗೆರಚುವಂತಹ ಉಲ್ಲಾಸವೊಂದು ಕಡೆಯಾದರೆ, ಮುಂದೊದಗುವ ಜವಾಬ್ದಾರಿಗಳು ಕೈಬೀಸಿ ಕರೆಯುವ ಪ್ರಜ್ಞೆ ಮತ್ತೊಂದು ಕಡೆಯಾಗಿತ್ತು. ಹಲವಾರು ಕಾರಣಗಳಿಗೆ ಸಾಕಷ್ಟು ಅಳುಕಿನಲ್ಲೇ ಕಳೆದ ನನ್ನ ಎಚ್ಚರಿಕೆಯ ಬಸಿರು ಹೊಸ ಉಸಿರೊಂದಕ್ಕೆ ಜನ್ಮವಿತ್ತಿತ್ತು. ಆಸ್ಪತ್ರೆಯಲ್ಲಿ ಅತೀವ ನೋವನ್ನು ಉಂಡು ದಣಿದು ಉಡುಗಿ ಹೋಗಿದ್ದ ದೇಹಕ್ಕೆ ಚೈತನ್ಯ ನೀಡಿದ್ದು ‘ಮಗಳು…’ ಎಂಬ ಉದ್ಗಾರ. ನನ್ನಂತೆಯೇ ರಕ್ತಮಾಂಸವುಳ್ಳ ಅತ್ಯಂತ ಪುಟ್ಟ ಶರೀರವೊಂದು ನನ್ನ ದೇಹದಿಂದ ಧುತ್ ಎಂದು ಹೊರಬಿದ್ದಾಗ ಸೃಷ್ಟಿಯ ಮಾಯೆಗೆ ಮರುಳಾಗಿ ಹೋದೆ. ನೋವಿಗೆ ಮಂಜಾಗಿದ್ದ ಕಣ್ಣಿನ ಪಸೆಯಲ್ಲೇ ಆ ಪುಟ್ಟ ಪಾದಗಳು ಕಂಡಾಗ ದೊರೆತ ಧನ್ಯತೆಯ ಭಾವವನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ.
ಖುಷಿಯ, ಸಾರ್ಥಕ ಭಾವದ ನಡುವೆಯೇ ಒಂದು ಸಣ್ಣ ಕರಿಮೋಡದ ಛಾಯೆ ಮುಸುಕಿತ್ತು. ಸಣ್ಣ ಸಮಸ್ಯೆ ಎದುರಾಗಿ ಆ ಪುಟ್ಟಜೀವವು ತುರ್ತು ಚಿಕಿತ್ಸಾ ಘಟಕದಲ್ಲಿ ಮೂರು-ನಾಲ್ಕು ದಿನಗಳನ್ನು ಕಳೆಯಬೇಕಾಗಿದೆ ಎಂದು ಡಾಕ್ಟರು ತಿಳಿಸಿದ ಆ ಕ್ಷಣ ನಾನು ಅಮ್ಮನಾದೆ. ಹುಟ್ಟಿದ ಮಗು ಕೈಗೆ ಸಿಗದೆ ನೇರ ಆಸ್ಪತ್ರೆಯ ಕೊಠಡಿಯಲ್ಲಿ ಯಂತ್ರಗಳ ಸದ್ದುಗಳ ನಡುವೆ ಒಂಟಿಯಾಗಿ ಮಲಗಿದ್ದನ್ನು ನೋಡಿದಾಗ ದೇಹ ಮರಗಟ್ಟಿ ಹೋಗಿತ್ತು. ಸಿರಂಜು, ನಾಳಗಳನ್ನು ಸಿಕ್ಕಿಸಿಕೊಂಡಿದ್ದ ಆ ಎಳೆಯ ಕೈಗಳನ್ನು ನವುರಾಗಿ ಮುಟ್ಟುವಾಗ ನನ್ನ ಕೈಬೆರಳುಗಳು ನಡುಗಿದ್ದವು. ಆ ಕ್ಷಣದಿಂದ ನಾನು ಒಬ್ಬ ಹೊಸ ವ್ಯಕ್ತಿಯಾಗಿದ್ದೆ. ಅಲ್ಲಿನವರೆಗೂ ಪರಿಚಯವಿದ್ದ ನಾನು ನನಗೆ ಹೊಸದಾಗಿ ಕಂಡಿದ್ದೆ. ಆ ಕ್ಷಣದಿಂದ ನನ್ನಮ್ಮನೂ ನನಗೆ ಹೊಸದಾಗಿ ಕಂಡಳು.
ಎಲ್ಲ ಹಳ್ಳ-ದಿಣ್ಣೆಗಳನ್ನು ದಾಟಿಯಾಗಿತ್ತು, ಮಗು ಮನೆ ಸೇರಿತ್ತು. ಸುಮಾರು ಒಂಭತ್ತೂವರೆ ತಿಂಗಳ ಕಾಳಜಿಯ ಫಲ ನನ್ನ ಮಡಿಲ ಸೇರಿತ್ತು. ಅಲ್ಲಿಯವರೆಗೂ ಇದ್ದಎಲ್ಲದಿಗಿಲು-ಭಯಗಳು ನಿಧಾನವಾಗಿ ಮಗುವಿನ ಪುಟ್ಟ ಕೈಕಾಲು ಬಡಿತಗಳಲ್ಲಿ ಕಳೆದುಹೋಯಿತು. ದಿನದಿಂದ ದಿನಕ್ಕೆ, ಕ್ಷಣದಿಂದ ಕ್ಷಣಕ್ಕೆ ನೋವು-ನಲಿವಿನ ನಡುವೆಯೇ ದಿನಗಳು, ವಾರಗಳು, ತಿಂಗಳುಗಳು ಕಳೆದದ್ದು ತಿಳಿಯಲೇ ಇಲ್ಲ. ಇನ್ನೇನು ನನ್ನ ಮಗಳಿಗೆ ಆರು ತಿಂಗಳು ತುಂಬುತ್ತಿದೆ. ನಾನು ಪಟ್ಟ ದೈಹಿಕ, ಮಾನಸಿಕ ಹಿಂಸೆಗಳೆಲ್ಲವೂ ಆ ಮಗುವಿನ ಒಂದು ನಗುವಿನಲೆಯಲ್ಲಿ ತೇಲಿ ಕಳೆದುಹೋಗಿದೆ. ಇದೀಗ ಹೊಸ ಅಧ್ಯಾಯ. ಆ ಮುಗ್ಧಕೂಸು ತನ್ನ ದುಂಡನೆಯ ಕಣ್ಣುಗಳಲ್ಲಿ ನನ್ನನ್ನು ದಿಟ್ಟಿಸಿದಾಗ, ಜೀವ ಹೆದರುತ್ತದೆ. ನನ್ನನ್ನು ಅಥವಾ ನನ್ನ ಕುಟುಂಬವನ್ನು ನಂಬಿರುವ ಆ ಮಗುವನ್ನು ಸರಿಯಾಗಿ ಬೆಳೆಸುವ ಸಾಮರ್ಥ್ಯ ನನ್ನಲ್ಲಿದೆಯೇ ಎಂದು ಆತಂಕವಾಗುತ್ತದೆ. ನನ್ನ ತೋಳ ತೆಕ್ಕೆಯಲ್ಲಿ ನಿರ್ಭಯವಾಗಿ ತಲೆಯಡಗಿಸಿ ಮಲಗುವಾಗ ಆ ಸೃಷ್ಟಿಯನ್ನುಸಾರ್ಥಕತೆಗೆ ತಲುಪಿಸುವ ಧೈರ್ಯ ನನ್ನಲ್ಲಿದೆಯೇ ಎಂದು ಯೋಚನೆಯಾಗುತ್ತದೆ. ಸುತ್ತಲಿನ ಪರಿವೆಯೇ ಇಲ್ಲದೆ ಅಮ್ಮನ ಮಡಿಲಲ್ಲಿ ಕೂತು ಜೀಕುವ ಆ ಮಗುವಿನ ಮುಗ್ಧತೆಯನ್ನುಅಂತೆಯೇ ಉಳಿಸಿಕೊಂಡು ಒಬ್ಬ ವಿಶ್ವಮಾನವಿಯನ್ನಾಗಿ ಮಾಡಲು ಈ ಸಮಾಜವು ಜೊತೆಯಾಗದು ಎಂಬ ನೋವುಕಾಡುತ್ತದೆ. ಜೊತೆಜೊತೆಗೇ ಖಲೀಲ್ ಗಿಬ್ರಾನರ ‘ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ’ ಎಂಬ ಸಾಲುಗಳು ನೆನಪಾಗಿ ಅಸಹಾಯಕತೆ ಕಾಡುತ್ತದೆ.
ಜೀವವೊಂದನ್ನು ಸೃಷ್ಟಿಸಲು ನೆಪ ಮಾತ್ರಳಾ(ರಾ)ದ ನಾನು(ವು) ನಮ್ಮಆಸೆ-ಕನಸು ಅಥವಾ ಆತಂಕಗಳನ್ನು ಆಜೀವದ ಮೇಲೆ ಹೇರಿ ಎಲ್ಲಿ ಅರಳುವ ಹೂವು ಕಮರುತ್ತದೋ ಎಂಬ ಆತಂಕ. ನಮ್ಮ ಕಾಳಜಿಯ ಕೈಮೀರಿದ ಸಮಾಜದ ನಡತೆಗೆ ಹೂವಿನ ಘಮಲು ಕುಗ್ಗಿ ಹೋಗಬಹುದು ಎಂಬ ಭಯ. ಇವು ಯಾವುದನ್ನೂ ಆಲೋಚಿಸಲು ಸಹ ಹಕ್ಕಿಲ್ಲದ ನಾನು ಸುಮ್ಮನೆ ಗಾಳಿಗೋಪುರಕ್ಕೆ ಪ್ರಯತ್ನಿಸುತ್ತಿದ್ದೇನೆ ಎಂಬ ನಿರ್ವಿಣ್ಣತೆ. ಹೀಗೆ ಮಗುವಿನ ಎದುರು ಕೂತು ಅದರ ನಗೆಯ ಸವಿಯಮಲಿನಲ್ಲಿರುವಾಗಲೇ ಮನಸ್ಸು ಡೋಲಾಯಮಾನ. ಇಷ್ಟೆಲ್ಲಾ ಆಲೋಚನೆಗಳ ನಡುವೆ ಕೆಲವೊಮ್ಮೆ ನಾನೆಲ್ಲಿ ಕಳೆದು ಹೋಗುತ್ತಿದ್ದೇನೋ, ನಾನೇನು ಮಾಡಬೇಕು, ಆಗಬೇಕು ಎಂದು ತಬ್ಬಿಬ್ಬಾಗುತ್ತೇನೆ.
‘ಅಚಿಚಿ…’ ಎಂದರೆ ನಗುವ ಆ ಬೊಚ್ಚುಬಾಯ ಸುಖವನ್ನೊಂದೇ ಇಷ್ಟು ದಿನಗಳ ಕಾಲ ಅರಿತಿದ್ದ ನನಗೆ ಆ ನಗುವನ್ನು ಆದಷ್ಟೂ ಕಾಲ ಉಳಿಸಿಕೊಳ್ಳಲೇಬೇಕು ಎಂಬ ಹಠವನ್ನು ಕಲಿಸುತ್ತಿರುವುದು ಇದೇ ತಾಯ್ತನ. ಒಂದು ಮಗುವನ್ನು ವಿಶ್ವಮಾನವಿಯನ್ನಾಗಿ ಬೆಳೆಸಲು ಸಮಾಜದ ಮಿತಿಗಳನ್ನೂ ಮೀರಿ ಹೆಜ್ಜೆ ಹಾಕಬಹುದೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿರುವುದು ಇದೇ ತಾಯ್ತನ. ನನ್ನತಾಯಿ, ಮತ್ತು ಎಲ್ಲ ತಾಯಂದಿರೂ ಈ ಎಲ್ಲಮನಸ್ಸಿನ ಭಾರವನ್ನು ನಿಭಾಯಿಸಿಕೊಂಡು, ಏನೂ ಇಲ್ಲದಂತೆ ತಮ್ಮ ಮಕ್ಕಳನ್ನು ಕಂಡು ನಗೆಯನ್ನು ಬೀರುತ್ತಾರಲ್ಲಾ, ಆ ವಿಶೇಷ ನಗುವನ್ನು ಗುರ್ತಿಸುವುದನ್ನು ಕಲಿಸಿಕೊಡುತ್ತಿರುವುದು, ಮಕ್ಕಳಲ್ಲಿ ಮಗುವಾಗಿ ಹೋದರೂ ತಮ್ಮ ಸ್ವಂತಿಕೆಯನ್ನುಉಳಿಸಿ-ಬೆಳೆಸಿಕೊಂಡು ಹೋಗುವುದನ್ನು ಕಲಿಸುವುದು ಸಹ ಇದೇ ತಾಯ್ತನದ ಭಾವ. ಅಂತಹ ತಾಯ್ತನದ ಹೊಸ್ತಿಲಲ್ಲಿ ಕಾಲಿಟ್ಟ ಕೂಸಾದ ನನಗೆ, ಈಗ ನನ್ನಮ್ಮ ಅದೆಷ್ಟು ದಿಟ್ಟೆ ಎಂಬುದನ್ನು ಅರಿಯಲು ಸಾಧ್ಯವಾಗುತ್ತಿದೆ. ಎಲ್ಲ ರೀತಿಯ ಮಿತಿಗಳನ್ನು ದಾಟಿ ಮಗುವನ್ನು ಬೆಳೆಸುವ, ಎಷ್ಟೇ ಪ್ರಯತ್ನಗಳ ನಂತರವೂ ಸಹಜವಾಗಿ ತನ್ನಂತೆ ತಾನಾಗುವ ಮಗುವಿನ ಬೆಳವಣಿಗೆಯನ್ನು ಸೈರಿಸಿ ಮುದ್ದಿಸುವ, ಬೆಳೆದ ನಂತರ ಆ ಮಗು ಒಬ್ಬ ಹೊಸ ವ್ಯಕ್ತಿಯಾಗಿ ಅಪರಿಚಿತವಾದರೂ ಅದನ್ನು ಒಪ್ಪಿ ಮನ್ನಿಸುವ ಎಲ್ಲ ರೀತಿಯ ಧೈರ್ಯಗಳೂ ಒಬ್ಬ ತಾಯಿಗಿರಬೇಕು, ಅಥವಾ ತಾಯ್ತನಕ್ಕಿರಬೇಕು (ತಾಯ್ತನವು ಒಂದು ಭಾವ. ಮನಸ್ಸಿದ್ದಲ್ಲಿ ಯಾರೂ ಅದರ ಧನ್ಯತೆಯನ್ನು ಪಡೆಯಬಲ್ಲರು ಎನಿಸುತ್ತದೆ) ಎಂಬುದು ಕೊನೆಗೂ ನನ್ನಲ್ಲಿ ಮನೆ ಮಾಡುತ್ತಿರುವ ಆಲೋಚನೆಗಳು.
ಎಷ್ಟರ ಮಟ್ಟಿಗೆ ಎಲ್ಲವನ್ನು ಕಲಿಯಬಲ್ಲೆ, ಹೊರಬಲ್ಲೆ ಎಂಬುದು ಕಾಲವು ನಿರ್ಧರಿಸುತ್ತದೆಯೇ ಅಥವಾ, ‘ಇವೆಲ್ಲವನ್ನೂ ನೀನು ಹೇಗೆ ನಿಭಾಯಿಸಿಬಿಟ್ಟೆಯಮ್ಮಾ?’ ಎಂದು ಅಮ್ಮನನ್ನು ಒಮ್ಮೆ ಕೇಳಲೇ!
***
ಪರಿಚಯ: ಸಂಯುಕ್ತಾ ಪುಲಿಗಲ್ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವೀಧರರಾಗಿದ್ದು, ‘ಪರ್ವತದಲ್ಲಿ ಪವಾಡ’ ಮತ್ತು ‘ರೆಬೆಲ್ ಸುಲ್ತಾನರು’ ಇವು ಅವರ ಅನುವಾದಿತ ಕೃತಿಗಳು. ‘ಲ್ಯಾಪ್ಟಾಪ್ ಪರದೆಯಾಚೆಗೆ’ ಅಂಕಣ ಬರಹ ಕೂಡ ಪುಸ್ತಕವಾಗಿ ಪ್ರಕಟಗೊಂಡಿದೆ.
ನಾನೆಂಬ ಪರಿಮಳದ ಹಾದಿಯಲಿ: ಹಿರಿಯರು ಹಾಕಿದ ಗೆರೆ ದಾಟಬಾರದು ಅಂತ ಮನಸ್ಸು ಟ್ಯೂನ್ ಆಗಿಬಿಟ್ಟಿರುತ್ತಲ್ಲ…
Published On - 3:08 pm, Sun, 24 January 21