ಪರಿಸರಾಸಕ್ತರಿಗೆ ಇಲ್ಲಿದೆ ಸಂತಸದ ಸುದ್ದಿ; ಹೊಸ ಪ್ರಬೇಧದ ಕಪ್ಪೆಗೆ ಬೆಂಗಳೂರಿನ ಹೆಸರು!

|

Updated on: Nov 30, 2020 | 5:55 PM

ಬೆಂಗಳೂರಿನ ಹೊರವಲಯದಲ್ಲಿ ಹೊಸ ಪ್ರಬೇಧದ ಕಪ್ಪೆಯೊಂದು ಪತ್ತೆಯಾಗಿದೆ. ನಗರದ ಗೌರವಾರ್ಥ ಬಿಲಗಪ್ಪೆಗೆ ‘ಸ್ಪೆರೋಥೆಕಾ ಬೆಂಗಳೂರು’ ಎಂದು ನಾಮಕರಣ ಮಾಡಲಾಗಿದೆ.

ಪರಿಸರಾಸಕ್ತರಿಗೆ ಇಲ್ಲಿದೆ ಸಂತಸದ ಸುದ್ದಿ; ಹೊಸ ಪ್ರಬೇಧದ ಕಪ್ಪೆಗೆ ಬೆಂಗಳೂರಿನ ಹೆಸರು!
ಬಿಲಗಪ್ಪೆ ‘ಸ್ಪೆರೊಥೆಕಾ ಬೆಂಗಳೂರು’
Follow us on

ಬೆಂಗಳೂರು: ನಗರದ ಹೊರವಲಯದಲ್ಲಿ ಹೊಸ ಪ್ರಬೇಧದ ಬಿಲಗಪ್ಪೆಯೊಂದು ಪತ್ತೆಯಾಗಿದೆ. ಮೌಂಟ್ ಕಾರ್ಮೆಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ ದೀಪಕ್ ಅವರ ತಂಡ ಉಭಯಚರಿಗಳನ್ನು ಪತ್ತೆಹಚ್ಚುವ ಯೋಜನೆಯಲ್ಲಿ ಈ ಬಿಲಗಪ್ಪೆಯನ್ನು ಪತ್ತೆಹಚ್ಚಿದ್ದಾರೆ.

ಹೊಸ ಕಪ್ಪೆಯ ಹೆಸರೇನು ಗೊತ್ತೇ..?
ಕಪ್ಪೆಯ ಈ ಪ್ರಬೇಧ ಬೆಂಗಳೂರಿನ ಹೊರವಲಯದಲ್ಲಿ ಪತ್ತೆಯಾಗಿರುವುದರಿಂದ ಬೆಂಗಳೂರಿನ ಹೆಸರನ್ನೇ ನಾಮಕರಣ ಮಾಡಿದ್ದೇವೆ ಎಂದು ವಿವರಿಸಿದರು ಮೈಸೂರು ವಿವಿಯ ಸಂಶೋಧನಾ ವಿದ್ಯಾರ್ಥಿಯೂ ಆಗಿರುವ ದೀಪಕ್.

ವಿಜ್ಞಾನಿಗಳಾದ ಡಾ ಕೆ ಪಿ ದಿನೇಶ್, ಡಾ ಅನ್ನೆಮರಿ ಓಹ್ಲರ್, ಡಾ ಕಾರ್ತಿಕ್ ಶಂಕರ್, ಡಾ ಬಿ ಎಚ್ ಕೇಶವಮೂರ್ತಿ, ಪ್ರೊ ಜೆ ಎಸ್ ಆಶಾದೇವಿ ಅವರ ಜೊತೆಗೂಡಿ ಈ ಬಿಲಗಪ್ಪೆಯನ್ನು ಅವರು ಪತ್ತೆಹಚ್ಚಿದ್ದಾರೆ.

ಸ್ಪೆರೊಥಿಕಾ ಬೆಂಗಳೂರಿನ ಇನ್ನೊಂದು ನೋಟ

ಹೊಸ ಬಿಲಕಪ್ಪೆಯನ್ನು ದಕ್ಷಿಣ ಏಷ್ಯಾದ್ಯಂತ ಕಂಡುಬರುವ ಸ್ಪೆರೋಥಿಕಾ ಪ್ರಬೇಧದ ಕಪ್ಪೆಯ ಜೊತೆ ಹೋಲಿಸಿ ವಿವರಿಸಲಾಗಿದೆ. ಅಂತರಾಷ್ಟ್ರೀಯ ಜರ್ನಲ್ ‘ಝೋಟಾಕ್ಸಾ’ದಲ್ಲಿ ‘ಸ್ಪೆರೋಥೆಕಾ ಬೆಂಗಳೂರು’ ಕುರಿತು ಸಂಶೋಧನಾ ಬರಹ ಪ್ರಕಟಿಸಲಾಗಿದೆ. ವಾಸ, ಸಂತಾನೋತ್ಪತ್ತಿಯ ಕುರಿತು ಹೆಚ್ಚಿನ ಅಧ್ಯಯನ ಮಾಡಬೇಕಿದೆ ಎಂದು ಪಿ. ದೀಪಕ್ ತಿಳಿಸಿದರು.

ಪರಿಸರಾಸಕ್ತರಿಗೆ ಖುಷಿ..
ವಿಪರೀತ ನಗರೀಕರಣದಿಂದಾಗಿ ಬೆಂಗಳೂರಿನ ಸುತ್ತಮುತ್ತ ಜಲಮೂಲಗಳು ದಿನೇ ದಿನೇ ಮಲಿನವಾಗುತ್ತಿವೆ. ಪರಿಸರದ ಶುದ್ಧತೆಯ ಸೂಚಕವಾದ ಕಪ್ಪೆಗಳ ಪ್ರಬೇಧವು ಪತ್ತೆಯಾಗುವ ಮುನ್ನವೇ ನಶಿಸಿಹೋಗುತ್ತಿವೆ. ಇಂತಹ ಕಾಲಘಟ್ಟದಲ್ಲಿ ಹೊಸ ಬಿಲಗಪ್ಪೆಯ ಪ್ರಬೇಧ ಪತ್ತೆಯಾಗಿರುವುದು ಪರಿಸರಾಸಕ್ತರ ಕುತೂಹಲಕ್ಕೆ ಕಾರಣವಾಗಿದೆ.

ಹೆಚ್ಚಿನ ಮಾಹಿತಿಗೆ ಸಂಶೋಧಕ ಪಿ ದೀಪಕ್​ರನ್ನು ಸಂಪರ್ಕಿಸಬಹುದಾಗಿದೆ. deepak.sphaeros@gmail.com

ಇನ್ನಷ್ಟು ಓದಿ: ಹರಿದ್ವರ್ಣ ಕಾಡುಗಳಲ್ಲಿ ಅಪರೂಪದ ಮಲಬಾರ್​​ ಕಪ್ಪೆಗಳ ವಟವಟ!

Published On - 5:40 pm, Mon, 30 November 20