ಮಂಗಳೂರು: ಹಳ್ಳಿಯಿಂದ ನಗರಕ್ಕೆ ಉದ್ಯೋಗ ಅರಸಿಕೊಂಡು ಬಂದು ಬದುಕು ಕಟ್ಟಿಕೊಂಡಿದ್ದವರಿಗೆ ಮಹಾಮಾರಿ ಕೊರೋನಾ ಮತ್ತೇ ಹಳ್ಳಿಯ ಹಾದಿ ಹಿಡಿಸಿದೆ. ಕೆಲಸ ಮತ್ತು ಸ್ವಉದ್ಯೋಗ ಅಂತಾ ನಗರ ಜೀವನಕ್ಕೆ ಮನಸೋತವರೆಲ್ಲಾ ಕೊರೋನಾ ಅಪ್ಪಳಿಸುತ್ತಿದ್ದಂತೆ ತಮ್ಮೂರಿಗೆ ಹಿಂದಿರುಗಿ ಮೂಲ ಕಸಬು ಕೃಷಿಯಲ್ಲಿ ತೊಡಗಿದ್ದಾರೆ. ಹೀಗೆ ಮತ್ತೆ ಕೃಷಿಯಲ್ಲಿ ತೊಡಗಿರುವ ಯುವಕರ ದಂಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ.
ನಗರದಿಂದ ಮತ್ತೆ ಗ್ರಾಮದತ್ತ ಯುವಕರ ಪಡೆ
ಹೌದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ದೇವಸ್ಯ ಪಡೂರು ಗ್ರಾಮದ ನೂರ್ತಾಡಿ ಗುತ್ತಿನ ಮನೆಯಲ್ಲಿ ಹಲವಾರು ವರ್ಷಗಳಿಂದ ಕೃಷಿಯೇ ಜೀವನದ ಆಧಾರ. ಆದ್ರೆ ಮನೆಯ ಮಕ್ಕಳು ಮಾತ್ರ ಆಧುನಿಕತೆಗೆ ಮನ ಸೋತು ಕೃಷಿಯತ್ತ ಮನಸ್ಸು ಮಾಡದೇ ನಗರದಲ್ಲಿ ಜೀವನ ಅರಸಿ ಹೋಗಿದ್ದರು. ರೈತರ ಮನೆಯಲ್ಲೇ ಹುಟ್ಟಿದರೂ ಉದ್ಯೋಗ, ಉದ್ಯಮ ಅಂತ ಸಿಟಿಗೆ ಹೋಗಿದ್ದರು. ಹೀಗಾಗಿ ಎಕರೆಗಟ್ಟಲೇ ಕೃಷಿ ಭೂಮಿಯಲ್ಲಿ ಆ ಊರಿನ ಹಿರಿಯರೇ ಇಂದಿಗೂ ಕೃಷಿ ಮಾಡಿಕೊಂಡು ಬರ್ತಿದ್ದಾರೆ.
ಮತ್ತೆ ಕೃಷಿಯಲ್ಲಿ ತೊಡಗಿದ ಯುವಕರು
ಆದ್ರೆ ಈ ಬಾರಿ ಮಾತ್ರ ಕೃಷಿ ಗದ್ದೆಗಳಲ್ಲಿ ಮನೆಯ ಹಿರಿಯರ ಜೊತೆ ಯುವಕರ ದಂಡು ಕೂಡ ಇದೆ. ಗದ್ದೆಯನ್ನ ಹೂಳೂತ್ತಾ, ಕೆಸರಿನಲ್ಲಿ ಕೃಷಿ ಕಾರ್ಯ ಮಾಡ್ತಾ ಹತ್ತಾರು ಯುವಕರ ತಂಡ ಅಕ್ಷರಶಃ ರೈತರಾಗಿ ಬದಲಾಗಿದ್ದಾರೆ. ಮನೆಯ ಹಿರಿಯರ ಜೊತೆ ಕೃಷಿಯಲ್ಲಿ ತೊಡಗಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಜಗತ್ತನ್ನೇ ಕಾಡ್ತಿರೋ ಮಾರಕ ರೋಗ ಕೊರೋನಾ.
ಕೊರೊನಾ ಕಾಲದಲ್ಲಿ ಕೈ ಕೊಟ್ಟ ನಗರ
ಇಷ್ಟು ದಿನಗಳ ಕಾಲ ಬೇರೆ ಉದ್ಯೋಗ, ಸ್ವಂತ ಉದ್ಯಮ ಅಂತ ಹೋಗ್ತಿದ್ದ ಯುವಕರಲ್ಲಿ ಕೃಷಿಯತ್ತ ಮತ್ತೆ ಒಲವು ಮೂಡಿದೆ. ಕೃಷಿ ಭೂಮಿಯಿದ್ದರೂ ಅದರತ್ತ ಒಲವು ತೋರದೆ ಬದುಕು ಸಾಗಿಸೋಕೆ ಉದ್ಯೋಗ, ಸ್ವಉದ್ಯೋಗ, ಕೂಲಿ ಕೆಲಸ, ಕಟ್ಟಡ ಕಾಂಟ್ರಾಕ್ಟ್ ಸೇರಿದಂತೆ ಬೇರೆ ಬೇರೆ ಉದ್ಯೋಗಗಳನ್ನ ಮಾಡಿಕೊಂಡು ನಗರದಲ್ಲಿ ಇದ್ದರು. ಪರಿಣಾಮ ಕೃಷಿ ಭೂಮಿಗಳಲ್ಲಿ ಸಂಪ್ರದಾಯದಂತೆ ಮನೆಯ ಹಿರಿಯರೇ ಕೆಲಸ ಮಾಡ್ತಿದ್ರು.
ಮತ್ತೆ ಮಣ್ಣಿನ ಮಕ್ಕಳಾದ ತುಳುನಾಡ ಯುವಕರು
ಆದ್ರೆ ಸದ್ಯ ನಗರದಲ್ಲಿ ಕೆಲಸವಿಲ್ಲ. ಈ ಮಧ್ಯೆ ಕೊರೋನಾ ಭೀತಿಯ ಕಾರಣಕ್ಕೆ ನಗರಗಳಿಗೆ ಬಂದು ಕೆಲಸ ಮಾಡೋದು ಕೂಡಾ ಆತಂಕ. ಹೀಗಾಗಿ ಹಲವಾರು ದಿನಗಳಿಂದ ಮನೆಯಲ್ಲೇ ಇದ್ದ ಯುವಕರ ತಂಡ ಈಗ ಗದ್ದೆಗಿಳಿದು ಕೃಷಿ ಮಾಡುತ್ತಿದೆ. ಮನೆಯ ಹಿರಿಯರ ಮಾರ್ಗದರ್ಶನದಂತೆ ಕೋಣಗಳನ್ನು ಹಿಡಿದು ಎಕರೆಗಟ್ಟಲೇ ಗದ್ದೆಯನ್ನು ಹೂಳುವ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಪೈರು ನೆಟ್ಟು ಸಮೃದ್ದ ಕೃಷಿಗೆ ಮುನ್ನುಡಿ ಬರೆದಿದ್ದಾರೆ. ಈ ಮೂಲಕ ಅಪ್ಪಟ ರೈತನಿಗೆ ಕೃಷಿಯೇ ಜೀವನಕ್ಕೆ ಆಧಾರ ಅನ್ನುವುದನ್ನ ಅರಿತುಕೊಂಡಿದ್ದಾರೆ.
-ಪೃಥ್ವಿರಾಜ್ ಬೊಮ್ಮನಕೆರೆ
Published On - 6:28 pm, Tue, 7 July 20