ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com
ಕೃತಿ :ಅನಾಮಿಕಳ ಅಂತರಂಗ
ಲೇಖಕಿ : ಚಿತ್ರಾ ಸಿ.
ಪುಟ : 140
ಬೆಲೆ: ರೂ. 130
ಪ್ರಕಾಶನ: ಬೆನಕ ಬುಕ್ಸ್ ಬ್ಯಾಂಕ್, ಕೋಡೂರು
ಇಂದಿನ ಯುವಪೀಳಿಗೆ ತಮ್ಮ ಅಭಿವ್ಯಕ್ತಿಗೆ ಕೇವಲ ಕಥೆಕವನಗಳನ್ನಷ್ಟೇ ಅಲ್ಲದೇ ಬೇರೆ ಬೇರೆ ಕ್ಷೇತ್ರಗಳನ್ನೂ ಆರಿಸಿಕೊಳ್ಳುತ್ತಾ ಮೌಲ್ಯಯುತವಾದ ಕೃತಿಗಳನ್ನುರಚಿಸುತ್ತಿದ್ದಾರೆ. ಚಿತ್ರಾರವರೂ ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಎರಡನೆಯ ಬೆರಗೆಂದರೆ ಇವರು ತಮ್ಮ ಮುಂದೆ ಕುಳಿತುಕೌನ್ಸಿಲಿಗಳು ಹೇಳಿದ ವಿಷಯವನ್ನೆಲ್ಲಾ ತಮ್ಮದೇ ಅನುಭವವೆನ್ನುವಂತೆ ಚಿತ್ರವತ್ತಾಗಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇಂತಹಸಾಧ್ಯತೆ ಬಹಳ ಕ್ವಚಿತವಾಗಿ ಕಾಣುತ್ತೇವೆ. ಈ ಕಾರಣಕ್ಕಾಗಿ ನಾನು ಚಿತ್ರಾರವರನ್ನು ಅಭಿನಂದಿಸುತ್ತೇನೆ. ಈ ಚೆಂದದ ಕಥೆಗಳು ಮನುಷ್ಯರಮನೋಲೋಕದಲ್ಲಿ ಸುತ್ತಾಡಿಸುತ್ತವೆ. ಜಗತ್ತಿನಲ್ಲಿ ಎಷ್ಟು ಜನರಿದ್ದಾರೋ ಅಷ್ಟೂ ಕಥೆಗಳೂ ಇವೆ. ಕಾಣುವುದಕ್ಕೆ ಎಲ್ಲರೂ ಕೇವಲಮನುಷ್ಯರೇ ಅನ್ನಿಸಿದರೂ ‘ಪ್ರತಿ ಮನುಷ್ಯನೂ ಭಿನ್ನ’ ಎನ್ನುವ ಸತ್ಯವನ್ನು ಈ ಬರಹ ದಾಖಲು ಮಾಡುತ್ತದೆ.
ಶಾಂತಾ ನಾಗರಾಜ, ಲೇಖಕಿ
‘ಈ ಪರೀಕ್ಷಾ ಭಯ ಮುಂದೆ ಜೀವನದಲ್ಲಿಯೂ ಕಾಡಿದರೆ?’ ಅಷ್ಟೇ ಆ ಕ್ಷಣದಿಂದಲೇ ಚಿಂತೆ, ಆತಂಕ ನನ್ನ ಕಾಡಹತ್ತಿತು, ನನ್ನಲ್ಲಿ ಏನಾಗುತ್ತಿದೆ ಯಾಕಾಗುತ್ತಿದೆ ಏನು ಅರ್ಥವಾಗದ ಪರಿಸ್ಥಿತಿ, ಈ ಆತಂಕ ನನ್ನನ್ನು ಎಲ್ಲಿಯವರೆಗೂ ಕರೆದೊಯ್ಯಿತೆಂದರೆ, ನಾನು ಮೂರು ತಿಂಗಳು ಶಾಲೆಗೆ ರಜಾ ಹಾಕಿದೆ. ಅದೆಷ್ಟೋ ಬಾರಿ ಈ ಆತಂಕದ ನೋವನ್ನು ತಾಳಲಾರದೆ ನನ್ನನ್ನು ನಾನು ಕೊಂದುಕೊಳ್ಳುವ ಆಲೋಚನೆಗಳೂ ಬಂದಿವೆ. ನನ್ನ ಕುಟುಂಬದ ಪ್ರೀತಿ, ಸಮಯಕ್ಕೆ ಸರಿಯಾಗಿ ಸಿಕ್ಕ ಸೈಕ್ರಿಯಾಟಿಸ್ಟ್ ನೆರವು, ನಾನು ಖುಷಿಯಾಗಿ ಬದುಕಬೇಕು ಎಂಬ ನನ್ನ ಅಚಲವಾದ ಪ್ರಯತ್ನ, ಇವತ್ತು ನಾನು ಆತಂಕವನ್ನು ನಿಭಾಯಿಸುವುದರ ಜೊತೆಗೆ ನನ್ನ ಜೀವನಕ್ಕೆ ಒಂದು ಉದ್ದೇಶವನ್ನು ನೀಡಿ, ನನ್ನನ್ನ ಒಬ್ಬ ಸೈಕಾಲಜಿ ಕೌನ್ಸಲರ್ ಹಾಗು ಜೀವನ ಕೌಶಲ್ಯ ತರಬೇತುಗಾರ್ತಿಯನ್ನಾಗಿ ಮಾಡಿದೆ. ಅನಾಮಿಕಳ ಅಂತರಂಗವನ್ನ ನಾನು ಬರೆಯುವುದಕ್ಕೆ ಈ ನನ್ನ ಜೀವನಾನುಭವೇ ಸ್ಪೂರ್ತಿ.
ಚಿತ್ರಾ ಸಿ. ಲೇಖಕಿ
“ಸಾವು” ಎರಡಕ್ಷರದ ಪದದಲ್ಲೇ ಹಲವಾರು ಭಾರವಾದ ಭಾವನೆಗಳನ್ನು, ಆಲೋಚನೆಗಳನ್ನು, ಅವುಗಳಿಂದ ಒಂದಷ್ಟು ನಡವಳಿಕೆಗಳನ್ನು , ಕ್ರಿಯೆಗಳನ್ನು ನಮ್ಮಿಂದ ಮಾಡಿಸಬಲ್ಲ ಹೈವೋಲ್ಟೇಜ್ ಪವರ್ ಅಡಗಿರುವ ಪದ ಇದು. ನನ್ನ ತಾಯಿಯ ತರಹದವರು ಈ ಲೇಖನವನ್ನು ಓದುತ್ತಿದ್ದರೇ, “ಲೇಖನವನ್ನು ಯಾವುದಾದರೊಂದು ಶುಭನುಡಿಯಿಂದ ಶುರುಮಾಡಬಾರದೇ” ಎಂದು ಗೊಣಗಿಕೊಳ್ಳುತಿರಬಹುದು. ಸಾವು ಶುಭವೇ, ಅಶುಭವೇ? ಸದ್ಯ ಈ ಲೇಖನದ ಉದ್ದೇಶ ಖಂಡಿತ ಸಾವಿನ ಬಗೆಗಿನ ನಮ್ಮನಮ್ಮ ಅಭಿಪ್ರಾಯಗಳ ಚರ್ಚೆ ಅಲ್ಲ, ಯಾಕೆಂದರೆ ಸಾವು ಬದುಕಿನಷ್ಟೇ ಸತ್ಯ. ಆದರೆ ಸಾವು ಒಂದು ಆರಂಭ, ಎಂಬ ನಂಬಿಕೆ ನನ್ನದು (ನನ್ನ ಸ್ವಂತ ನಂಬಿಕೆ). ಆದರೆ ಸತ್ತಿರುವವರು ಮತ್ತೆ ಮಾತಾಡುತ್ತಾರ? ಏನಾದರು ತಿಳಿಸಲು ಬಯಸುತ್ತಾರಾ? ಸಾವಿನ ಸತ್ಯವನ್ನು ಸತ್ತಮೇಲೆ ನನಗೆ ನನ್ನ ತಂದೆ ತಿಳಿಸಿದರು. ಇದು ಕಲ್ಪನೆ ಅಲ್ಲ ಬದಲಿಗೆ ನನ್ನ ಅನುಭವ, ಮುಂದೆ ಓದಿ.
2500 ವರುಷದ ಹಿಂದೆ, ಬೋಧಿಮರದ ಕೆಳಗೆ ಜ್ಞಾನೋದಯವಾದ ಬುದ್ದನು, ಮನುಷ್ಯನ ನರಳುವಿಕೆಗೆ ಕೊರಗುವಿಕೆಗೆ ಪ್ರಮುಖವಾದ ಕಾರಣಗಳಲೊಂದು ಕಾರಣ “ಅಟಾಚ್ಮೆಂಟ್” ಎಂದು ತಿಳಿಸಿದ್ದ. ಇಲ್ಲಿ ಯಾವುದು ಶಾಶ್ವತವಲ್ಲ, ಲಾ ಆಫ್ ಇಮ್ ಪರ್ಮನೆಂಸ್ ಬಗ್ಗೆಯು ತಿಳಿಸಿದ್ದ. ಇದನ್ನು ಬೌದ್ದಿಕವಾಗಿ ಅರ್ಥಮಾಡಿಕೊಳ್ಳುವುದಕ್ಕಿಂತ ಅನುಭವಿಸಿದರೇನೇ ಅದರ ಸತ್ಯ ಅರಿವಾಗುವುದು. ಪ್ರೀತಿಯನ್ನು ಅಟಾಚ್ಮೆಂಟ್ ಎಂದು ಭಾವಿಸಿದವರಿಗೆ ಸತ್ಯದ ಅರಿವಾಗುವುದೆ ನರಳಿಕೆಯಿಂದ.
ನಾನು ನನ್ನ ತಂದೆಯನ್ನು ಬಹಳ ಪ್ರೀತಿಸಿದ್ದೆ. ನನ್ನ ಪ್ರಪಂಚದಲ್ಲಿ ನನಗಿಂತ ಹೆಚ್ಚು ಅವರೇ ಇದ್ದರು. ಅವರ ಆಸೆಯೆ ನನ್ನ ಆಸೆ, ಅವರ ಸಂತೋಷವೇ ನನ್ನ ಸಂತೋಷ, ನನ್ನ ಜೀವನದ ಪರ್ಪಸ್ ಅವರೇ ಆಗಿದ್ದರು. ಇದರಲ್ಲಿ ಒಂದು ಪದವೂ ಕ್ಲೀಷೆ ಇಲ್ಲ. ನನ್ನ ಓದು, ಬರಹ, ಎಲ್ಲವೂ ಅವರನ್ನು ಮೆಚ್ಚಿಸುವುದಕ್ಕೆ. ಅವರು ಮೆಚ್ಚಿ ಹೆಮ್ಮೆ ಪಟ್ಟುಕೊಂಡರೇ ಅದರಲ್ಲೆ ನನ್ನ ಖುಷಿಯನ್ನು ಅನುಭವಿಸುತಿದ್ದೆ. ಅವರಿಗು ನಾನೆಂದರೇ ಅಷ್ಟೇ ಪಂಚ ಪ್ರಾಣ. ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ನನ್ನ ಪ್ರತಿಯೊಂದು ಜವಬ್ದಾರಿಯನ್ನು ಅವರೇ ವಹಿಸಿದ್ದರು, ಜೀವನ ಕೌಶಲ ತರಬೇತಿಯಾದ ನನ್ನ ಜೀವನ ಕೌಶಲಗಳು ಆಗ ಸೊನ್ನೆ. ಈ ದಾರಿಯೇ ನನಗೆ ಜೀವನ ಕೌಶಲಗಳ ಪ್ರಾಮುಖ್ಯತೆ ಬಗ್ಗೆ ತಿಳಿಸೋದಕ್ಕೆ ಪ್ರೇರಣೆಯಾಗಿದ್ದು. ಎಲ್ಲರೂ ಅವರ ಅಣತಿ, ಅವರ ಯೋಚನೆ ಇಂದಲೇ ನಡೆಯುತ್ತಿದ್ದರಿಂದ, ನಾನು ಸ್ವಂತವಾಗಿ ಯೋಚಿಸಲು ಬಹಳ ಹೆದರುತಿದ್ದೆ. ಆದರೆ ಅವರಿದ್ದಾರಲ್ಲಾ ನನ್ನ ಪರವಾಗಿ ಯೋಚಿಸಲು ಭಯವೇಕೆ ಎಂದು ನಿರ್ಲಕ್ಷದಿಂದ ಆರಾಮಾಗಿ ನಿಶ್ಚಿಂತೆಯಿಂದ ಇದ್ದೆ.
ಹೀಗಿರುವಾಗ ಒಮ್ಮೆ ಭರಸಿಡಿಲೆರಗಿದಂತೆ, ನನ್ನ ಚಿನ್ನದ ಜೀವನದಲ್ಲಿ, ಚಿನ್ನವನ್ನೇ ದೋಚಲು ಬಂದಂತೆ, ಬ್ರೈನ್ ಸ್ಟ್ರೋಕ್ ರೂಪದಲ್ಲಿ ನನ್ನ ಅಪ್ಪನನ್ನು ನನ್ನಿಂದ ಕಿತ್ತುಕೊಂಡಿತು ವಿಧಿ. ಅವರನ್ನು ಉಳಿಸಲು ನಮಗೆ ತಿಳಿದಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದೆವು, ದೊಡ್ಡ ಆಸ್ಪತ್ರೆಗೆ ಸೇರಿಸಿ, ಬೆಸ್ಟ್ ಡಾಕ್ಟರ್ ಎನಿಸಿಕೊಂಡವರಿಂದ ಟ್ರೀಟ್ಮೆಂಟ್, ಇತ್ತ ಹರಕೆ, ಪೂಜೆ, ಹೋಮ-ಹವನಗಳೆಲ್ಲವು ನಡೆದಿತ್ತು. ಎಲ್ಲಾ ಪ್ರಯತ್ನಗಳನ್ನು ಮೀರಿದುದುದಿರುತ್ತಲ್ಲವೇ? ಆ ಶಕ್ತಿಯನ್ನು ಯಾರು ತಡೆಯಲು ಸಾಧ್ಯ, ಅಂತೂ ಅಪ್ಪ ಮೂವತ್ತು ದಿವಸಗಳು ಕೋಮಾದಲ್ಲಿ ನರಳಿ ಕಡೆಗೆ ಅಸುನೀಗಿದರು.
ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ರಾಜಲಕ್ಷ್ಮೀ ಕೋಡಿಬೆಟ್ಟು ಅನುವಾದಿಸಿದ ದೇವಕಿ ಜೈನ್ ‘ಹಿತ್ತಾಳೆ ಬಣ್ಣದ ಪುಸ್ತಕ’
ಇದು ನನಗೊಂತು ನುಂಗಲಾರದ ತುತ್ತಾಯಿತು. ಎಲ್ಲವೂ ಪ್ರಶ್ನೆಗಳೇ, ಅವರನ್ನು ಕಳಿಸುವಾಗಲು ಅವರ ಜೊತೆ ನನ್ನ ಪ್ರಾಣವನ್ನು ಬಿಟ್ಟುಬಿಡುವ ಆಲೋಚನೆಗಳು ಬಂದಿದ್ದವು. ಎಲ್ಲಾ ಕಾರ್ಯಗಳೆಲ್ಲಾ ಮುಗಿದ ಮೇಲೆ, ಸ್ವಲ್ಪ ಸುಧಾರಿಸುತ್ತ ಬಂದೆ, ಆದರು ಒಬ್ಬಳೇ ಇದ್ದಾಗಲೆಲ್ಲಾ ನಾನು ಅವರ ಜೊತೆ ಹೋಗಬೇಕಿತ್ತು, ಅವರನ್ನು ಒಬ್ಬರೇ ಬಿಟ್ಟೆನಲ್ಲಾ, ಅಪ್ಪನಿಗೆ ಒಬ್ಬರೇ ಇರಲು ಭಯ, ಅವರನ್ನು ಇಷ್ಟು ಪ್ರೀತಿಸುತಿದ್ದ ನಾನು, ಈಗ ಅವರಿಲ್ಲದೆ ಒಬ್ಬಳೇ ಇದ್ದರೇ ಅದು ಒಂದು ರೀತಿ ಸ್ವಾರ್ಥವಲ್ಲವೇ, ಹೀಗೆ ನಾನಾ ಆಲೋಚನೆಗಳು, ಸತ್ಯವೋ , ಅಸತ್ಯವೋ, ಹುರುಳಿದೆಯೋ, ತಿರುಳಿದೆಯೋ ಅವೆಲ್ಲಾ ಗೊತ್ತಿಲ್ಲ ಎಮೋಷನಲ್ ಅಟಾಚ್ಮೆಂಟ್ ಹೊಂದಿದ್ದ ನನಗೆ ಈ ರೀತಿ ಆಲೋಚನೆಗಳು ಬರುತಿದ್ದವು. ಇವುಗಳ ಭೀಕರತೆ ನನ್ನಲ್ಲಿ ತಡೆಯಲು ಸಾಧ್ಯವಾಗುತ್ತಿರಲಿಲ್ಲ, ಗಿಲ್ಟ್, ಚಿಂತೆ, ಭಯದಲ್ಲಿ ನರಳುತಿದ್ದೆ. ಎಲ್ಲರ ಮುಂದೆ ಚೆನ್ನಾಗಿರುವಂತೆ ನಟಿಸಿದರೂ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಅಪ್ಪನ ಫೋಟೊಗೆ ಹೊಡಿತಿದ್ದೆ, ಗೋಡೆಗೆ ಕೈ ಗುದ್ದುತಿದ್ದೆ, ಹೇಗಾದರೂ ನನ್ನ ಭಾವನೆಗಳನ್ನು ವ್ಯಕ್ತಪಡಿಸಬೇಕಿತ್ತಲ್ಲಾ, ಹೀಗೆ ಮಾಡುತಿದ್ದೆ.
ಒಂದು ದಿನ ಒಂದು ಭಯಾನಕ ಅಷ್ಟೆ ಅದ್ಭುತ ಅನುಭವವನ್ನು ಹೊಂದಿದೆ ನಾನು. ಅಂದು ಬೆಳಿಗ್ಗೆ ಏಳುತ್ತಲೇ ಅಪ್ಪ ನಿಂತಿದ್ದಾರೆ. ನನಗೆ ನಂಬಲಸಾಧ್ಯ, ನಿಜವೋ , ಇಲ್ಲ ಕಲ್ಪನೆಯೋ ಎಂದು, ನಾನು ಸತ್ಯವಾಗಲು ಇದ್ದೇನೆ ಎಂದರು. ಹಾಗಾದರೇ ನೀವು ಸತ್ತಿಲ್ಲವಾ ಎಂದೆ, ಇಲ್ಲೇ ಇದ್ದೀನಲ್ಲ ಎಂದು ನಕ್ಕರು. ನಗು ವಿಚಿತ್ರವಾಗಿತ್ತು ಭಯವಾಯಿತು. ಆದರು ಖುಷಿಯು ಆಯಿತು ಸದ್ಯ ಅವರಿಗೆ ಏನು ಆಗಿಲ್ಲವಲ್ಲ ಎಂದು. ಆಗ ರೂಮಿಗೆ ಅಮ್ಮ ಬಂದರು. ಅಮ್ಮ ಅಪ್ಪನನ್ನು ನೋಡಿಯು, ನೋಡದ ಹಾಗೆ ಹೋಗುತಿದ್ದಾರೆ, ನನ್ನನ್ನು ಪರಿಗಣಿಸುತ್ತಿಲ್ಲ, “ಅಮ್ಮ, ಅಪ್ಪನನ್ನು ನೋಡಿ” ಎಂದೆ. ಅಮ್ಮ ಕಿವಿಗೆ ಬೀಳದ ಹಾಗೆ ಹೋದರು. ನನಗೆ ಗಾಬರಿ, ಅಪ್ಪ ಮಾತ್ರ ವಿಚಿತ್ರವಾಗಿ ನಗುತ್ತಲೇ ಇದ್ದಾರೆ. ಯಾಕ್ಹೀಗೆ ನಗುತಿದ್ದೀರಾ ಎಂದೆ.
“ನೀನು ಏನೆ, ಮಾಡಿದರೂ, ಮಾತಾಡಿದರೂ ಯಾರಿಗೂ ಕೇಳಿಸುವುದಿಲ್ಲ, ಕಾಣಿಸುವುದಿಲ್ಲ, ಅದು ತಿಳಿಯದೆಯೆ, ವ್ಯರ್ಥ ಪ್ರಯತ್ನ ಮಾಡುತಿದ್ದೀಯಲ್ಲಾ ಅದಕ್ಕೆ ಈ ನಗು” ಎಂದರು. ನನಗೋ ಇನ್ನೂ ಗಾಬರಿ, ಏನಾಗುತ್ತಿದೆ, ಇವೆಲ್ಲವೂ ಸತ್ಯವೇ? ಎಂದೆ. ಅವರು ಹೌದು ಎಂದರು. ನನ್ನ ಭಯ ನೋಡಿ, “ಇಷ್ಟು ದಿನ ಆಸೆ ಪಡುತಿದ್ದ ಅಪ್ಪನನ್ನು ಕಂಡು ಇಂದು ಹೆದರುತ್ತಿರುವೆಯಲ್ಲಾ” ಎಂದರು. ನನಗೆ ನನ್ನ ಮೇಲೆ ಬೇಸರವಾಯಿತು, ಒಮ್ಮೆ ಅಪ್ಪ ಆತ್ಮವಾಗಿಯೇ ಇದ್ದರೂ, ನನಗೆ ಅವರು ಅಪ್ಪ, ಯಾಕೆ ಹೆದರಬೇಕು ಎಂದುಕೊಂಡೆ. ನಂತರ ಅಪ್ಪನಿಗೆ ಹೇಗಿದ್ದೀರ ಎಂದೆ. ಅದಕ್ಕೆ ಅಪ್ಪ, ನಾನು ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತಿದ್ದೇನೆ. ನೀನು ನಾನಿಲ್ಲದೆಯೇ ಕೊರಗಿ ಸೊರಗುತ್ತಿರುವೆ ಅಲ್ಲವೇ ಕಂದ, ನೀನು ನಿನ್ನ ಮೇಲೆ ಕೋಪ ಹೊಂದಿದ್ದೀಯ, ಹೇಗಾದರು ಮಾಡಿ ನನ್ನನ್ನು ಬದುಕಿಸಬಹುದಿತ್ತು ಎಂದು ಗಿಲ್ಟ್ ಪಟ್ಟಿಕೊಳ್ಳುತ್ತೀಯ ಅಲ್ಲವೇ?
ನಿನ್ನ ನೋವನ್ನು ನೋಡಲಾರದೆ ಬಂದೆ ಎಂದರು. ಇದನ್ನು ಕೇಳುತ್ತ ನನಗೆ ಅಪ್ಪ ಸತ್ತಿರುವುದು ಖಚಿತ, ಇದು ಅವರ ಸತ್ತನಂತರ ಕಾಣಿಸುತ್ತಿರುವುದು, ಇಲ್ಲಿಯವರೆಗೂ ಯಾವುದೋ ಮೂಲೆಯಲ್ಲಿ ಅವರು ಇನ್ನು ಬದುಕಿರುವುದಾಗಿ ಹಾಗೆ, ಇವೆಲ್ಲ ಸುಮ್ಮನೆ ನನ್ನನ್ನು ಹೆದರಿಸುವುದಕ್ಕೆ ಅಪ್ಪ, ಅಮ್ಮ ಸೇರಿ ಆಡುತ್ತಿರುವ ನಾಟಕವೆಂದೆ ಭಾವಿಸಿದ್ದೆ. ಅದು ಸುಳ್ಳು ಎಂದಾದಾಗ ವಿಪರೀತ ಅಳು ಬಂತು. “ಅಪ್ಪ ಇನ್ನು ನೀವು ಬರುವುದಿಲ್ಲವೇ, ನಿಮ್ಮನ್ನು ಬಿಟ್ಟು ಹೇಗೆ ಇರಲಿ” ಎಂದೆ.
ಅದಕ್ಕೆ ಅವರು “ಹೌದು ಪುಟ್ಟ, ನಿನ್ನ ನೋವನ್ನು ನೋಡಿ, ನಿನ್ನನ್ನು ಕರೆದುಕೊಂಡೆ ಹೋಗಲು ನಾನು ಬಂದಿದ್ದು, ನಿನಗೆ ನನ್ನ ಬಿಟ್ಟು ಇರಲು ಕಷ್ಟ ಅಲ್ಲವೇ?, ನೀನು ಯಾಕೆ ನನ್ನ ಜೊತೆ ಬರಬಾರದು ಎಂದರು”. ನಾನು ಒಳಗೊಳಗೆ ಭಯ, ಆದರು ಅಪ್ಪನ ಜೊತೆ ಹೋಗುವ ಖುಷಿಯು ಸೇರಿ ‘ಹೂ ಅಪ್ಪ, ನನ್ನನ್ನು ಕರೆದುಕೊಂಡು ಹೋಗಿ, ಆದರೆ ಹೇಗೆ ಕರೆದುಕೊಂಡು ಹೋಗುತ್ತೀರಾ’ ಎಂದು ಕುತೂಹಲದಿಂದ ಕೇಳಿದೆ. ಅದಕ್ಕೆ ಅಪ್ಪ, “ನೀನು ಯಾಕೆ ಮಹಡಿ ಮೇಲಿಂದ ಬೀಳಬಾರದು, ಆಗ ನೀನು ಸಾಯುವೆ, ಆಗ ನನ್ನ ಜೊತೆ ನಿನ್ನನ್ನು ಕರೆದುಕೊಂಡು ಹೋಗಬಹುದು” ಎಂದರು. ನನಗೆ ಈಗಂತೂ ವಿಪರೀತ ಗಾಬರಿ, ಸತ್ಯವಾಗಲೂ ಇವರು ನನ್ನ ತಂದೆಯೋ ಅಥವಾ ಯಾವುದಾದರೂ ದೆವ್ವವೋ ಎಂದು, ನನ್ನ ಅಪ್ಪ ನನ್ನ ಸಾವನ್ನು ಹೇಗೆ ಬಯಸುತ್ತಾರೆ, ಆದರೆ ನನಗೆ ಏನು ಮಾಡಬೇಕೆಂದು ತೋಚದಾಯಿತು, ಜೊತೆಗೆ ಇನ್ನೊಂದು ಮನಸು ಸಾಯದೆ, ಸತ್ತಿರುವ ಅಪ್ಪನ ಬಳಿ ಹೋಗುವುದಾದರು ಹೇಗೆ? ಎಂದು ಮರು ಪ್ರಶ್ನೆ ಹಾಕುತಿತ್ತು. ಸತ್ತು ಹೋಗಬೇಕೆ ಎಂದು ಮತ್ತೊಂದು ಮನಸು, ಈಗ ಸಾಯಲಿಲ್ಲವೆಂದರೇ ಇಷ್ಟೆನಾ ಅಪ್ಪನ ಮೇಲಿನ ಪ್ರೀತಿ ಎಂದು ಅಪ್ಪ ಕೇಳಿ ಬಿಟ್ಟರೇ ಎಂಬ ಅಳುಕು ಬೇರೆ, ಹೋಗಲಿ ಸಾಯುವ ಎಂದುಕೊಂಡು, ನಮ್ಮದು ಡ್ಯೂಪ್ಲೆಕ್ಸ್ ಮನೆ, ನಮ್ಮ ಮನೆ ಕೆಳಗೆ ಎರಡು ಫ್ಲೋರ್ ಬಾಡಿಗೆ ಕೊಟ್ಟಿದ್ದೇವೆ. ಒಟ್ಟಿಗೆ ನಾಲ್ಕು ಫ್ಲೋರ್ ಬಿಲ್ಡಿಂಗ್, ಟಾಪ್ ಫ್ಲೋರ್ಗೆ ಹೋಗಿ, ಅಲ್ಲಿ ಬಾಲ್ಕನಿ ಇದೆ, ಅಲ್ಲಿಂದ ಬೀಳು ಎಂದರು.
ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ಸುಧಾ ಶರ್ಮಾ ಪುಸ್ತಕ ‘ನಮ್ಮೊಳಗೆ ನಾವು’ ನಾಳೆಯಿಂದ ನಿಮ್ಮ ಓದಿಗೆ
ಸರಿ ಎಂದು ರೂಮಿಂದ ಬಾಲ್ಕನಿ ಹತ್ತಿರ ಹೋಗುತ್ತಿರುವಾಗ ಅಮ್ಮನನ್ನು ನೋಡಿದೆ, ಅಮ್ಮನಿಗೆ ಏನೂ ತಿಳಿಯುತಿಲ್ಲ, ಕಾಣಿಸುತಿಲ್ಲ, ಅವರ ಸಹಾಯ ಕೇಳಲು ಸಾಧ್ಯವಿಲ್ಲ, ಅಮ್ಮನನ್ನು ನೋಡಿ ಅಳು ಉಮ್ಮಳಿಸಿತು. ಇನ್ನು ನನ್ನ ಈ ಪರಿಸ್ಥಿತಿಯನ್ನು ನೋಡಿ ಅಪ್ಪ ಗಹಗಹಿಸಿ ನಗುತ್ತಿದ್ದರು, ನನಗಂತೂ ಗಾಬರಿ ಜೊತೆ ಸಿಟ್ಟು ಕೂಡ. ಸರಿ ಬಾಲ್ಕನಿವರೆಗೂ ಬಂದೆ, ಇನ್ನು ಒಂದು ಮೂಲೆಯಲ್ಲಿ, ಎಂದು ನನ್ನ ನೋವನ್ನು ಬಯಸದ ಅಪ್ಪ, ನನ್ನನ್ನು ಸಾಯಲು ಬಿಡದೆ ಕಾಪಾಡುವರು, ನನ್ನನ್ನು ಪರೀಕ್ಷಿಸುತ್ತಿರುವವರು ಅಷ್ಟೆ ಎಂದು ನಂಬಿತ್ತು. ಆಗ ಯಾವುದೋ ತರಕಾರಿಯವಳು ಬಂದಳೆಂದು ಅಮ್ಮನು ಬಾಲ್ಕನಿಗೆ ಬಂದು ತರಕಾರಿ ತೆಗೆದುಕೊಳ್ಳಲು, ಹಗ್ಗಕ್ಕೆ ಕಟ್ಟಿರುವ ಬಾಸ್ಕೆಟ್ಟನ್ನು ಕೆಳಗ್ಗೆ ಬಿಡುತಿದ್ದರು, ನಾನು ಅಲ್ಲೆ ಪಕ್ಕದಲ್ಲಿದ್ದರು, ಅವರಿಗೇನೂ ಕಾಣಿಸುತ್ತಿಲ್ಲ. ನನಗೆ ವಿಪರೀತ ದುಃಖ ಉಂಟಾಯಿತು. ಅಳಲು ಶುರುಮಾಡಿದೆ, ನಮ್ಮ ಬಾಲ್ಕನಿಯಲ್ಲಿ ಒಂದು ಮೆಟ್ಟಿಲುಗಳ ಹಾಗೆ ಡಿಸೈನ್ ಇದೆ, ಅದರ ಮೇಲೆ ಹತ್ತಿ ತುದಿ ಇಂದ ಬೀಳಲು ಅಪ್ಪ ಸೂಚಿಸಿದರು, ಮೊದಲ ಮೆಟ್ಟಿಲು ಹತ್ತಿದೆ, ಅಪ್ಪ ಸುಮ್ಮನೆ ಇದ್ದಾರೆ, ಸಾಯಬೇಡ ಎಂದು ತಡೆಯುತ್ತಿಲ್ಲ, ಎರಡು ಮೆಟ್ಟಿಲು ಹತ್ತಿದೆ ಆಗಲು ಸುಮ್ನಿದ್ದಾರೆ, ಇನ್ನು ಒಂದೇ ಹೆಜ್ಜೆ ತುದಿ ತಲುಪಲು, ಕಾಲುಗಳು ನಡುಗ ಹತ್ತಿದ್ದವು, ಮುಖ ಬೆವರತೊಡಗಿತು, ಎದೆ ಹೊಡೆದುಕೊಳ್ಳುತ್ತಿತ್ತು, ಕಡೆ ಮೆಟ್ಟಿಲು ಹತ್ತಲು ಹೋದವಳು ಇಳಿದು ಬಿಟ್ಟು “ಜೋರಾಗಿ ನಾನು ಸಾಯಲಾರೆ, ನನಗೆ ಸಾಯಲು ಇಷ್ಟವಿಲ್ಲ, ಸಾಯಲು ಆಗುತ್ತಿಲ್ಲ, ಭಯವಾಗುತ್ತಿದೆ, ಅಪ್ಪ ನನ್ನನ್ನು ಸಾಯಲು ಬಯಸುವಿರೇ ನೀವು? ನಿಜವಾಗಲು ನೀವು ನನ್ನ ಅಪ್ಪ ಹೌದೆ” ಎಂದು ಬಣಬಣ ಮಾತಾಡಿಬಿಟ್ಟೆ.
ಆಗ ಅಪ್ಪ ನಗುತ್ತಲೇ, ಇದೇ ಸತ್ಯ ಮಗಳೇ, ಇದೇ ಜೀವನದ ಸತ್ಯ. ನೀನು ನನ್ನಿಂದ ಬಂದಿರುವೆ, ಆದರೆ ಸದಾ ನನ್ನ ಜೊತೆ ಇರುವ ಅವಶ್ಯಕತೆ ಇಲ್ಲ, ಇಲ್ಲಿ ನೀನು ಮಾಡಬೇಕಾದದ್ದು ಇನ್ನು ಸಾಕಷ್ಟು ಇದೆ, ಅದಕ್ಕೆ ನಿನಗೆ ಸಾಯಲು ಸಾಧ್ಯವಾಗುತ್ತಿಲ್ಲ, ನನ್ನ ಕೆಲಸ ಮುಗಿದಿದೆ, ನಾನು ಹೋದೆ, ನಿನ್ನಲ್ಲಿ ನಾನಿದ್ದೇನೆ, ಚಿಂತೆ, ಕೊರಗೋದು ಬೇಡ, ಪ್ರೀತಿ ಎಂದರೇ ಅಂಟಿಕೊಂಡೇ ಇರುವುದಲ್ಲ, ಇರುವುದನ್ನ ಇದ್ದ ಹಾಗೆ ಒಪ್ಪಿಕೊಂಡು ಜೀವನ ಸಾಗಿಸೋದು, ಜೀವನ ವ್ಯರ್ಥಮಾಡಿಕೊಳ್ಳಬೇಡ ಎಂದು ಹೇಳಿದರು.
ತಕ್ಷಣ ಗಾಬರಿಗೊಂಡು ಎದ್ದೆ, ಹೌದು ಈ ಅದ್ಭುತ ನಡೆದದ್ದು ನನ್ನ ಕನಸಲ್ಲಿ, ಆದರೆ ಇವೆಲ್ಲವು ಸತ್ಯವಾಗೆ ನಡೆದಷ್ಟು ನನ್ನ ಕಣ್ಣಿಗೆ ಕಟ್ಟಿದ ಹಾಗೆ ಅಚ್ಚಳಿಯದಂತೆ ಹಾಗೆ ಉಳಿದಿದೆ. ಆಗಲೆ ಅಮ್ಮನಿಗೆ, ಅಕ್ಕನಿಗೆ ಎಲ್ಲರಿಗೂ ಇದನ್ನು ತಿಳಿಸಿದೆ. ಅಲ್ಲಿಂದ ನಾನು ಅಟಾಚ್ಮೆಂಟ್ ಇಲ್ಲದೆ ಎಲ್ಲರನ್ನು ಪ್ರೀತಿಸುವುದರ ಬಗ್ಗೆ, ಎಲ್ಲದಕಿಂತ ಈ ಅನಾವಶ್ಯಕ ಗಿಲ್ಟ್, ಕೊರಗುವುದನ್ನು ನಿಲ್ಲಿಸಿದೆ, ನನ್ನ ಜೀವನವನ್ನು ಪ್ರೀತಿಸೋದಕ್ಕೆ ಕಲೆತೆ. ಯಾರು ಏನಂದರೂ, ನನ್ನ ಪ್ರಕಾರ ಅಪ್ಪನೆ ನನ್ನ ಕನಸಲ್ಲಿ ಬಂದು ಜೀವನದ ಸತ್ಯವನ್ನು ಅರಿವಿಗೆ ತರಿಸಿ ಹೋದರು.
ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : ಬೆನಕ್ ಬುಕ್ಸ್ ಬ್ಯಾಂಕ್
ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ಮಾಲತಿ ಭಟ್ ಪುಸ್ತಕ ‘ದೀಪದ ಮಲ್ಲಿಯರು’ ನಾಳೆ ಬಿಡುಗಡೆ