ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲಾಗಿರುವ ಸೋಲಾರ್ ಆ್ಯಂಡ್ ಹೆಲಿಯೊಸ್ಫೆರಿಕ್ ಅಬ್ಸರ್ವಿಟಿ (SOHO) 25ನೇ ವರ್ಷದ ಸಂಭ್ರಮದಲ್ಲಿದೆ. ಈ ಹೊತ್ತಲ್ಲಿ SOHO ನೌಕೆ ಬಗ್ಗೆ ಒಂದಷ್ಟು ಮಾಹಿತಿ…
ಏನಿದು SOHO?
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಮತ್ತು ನಾಸಾ (NASA)ದ ಜಂಟಿ ಯೋಜನೆಯಾಗಿರುವ SOHO ಉಡಾವಣೆಯಾಗಿದ್ದು 1995ರ ಡಿಸೆಂಬರ್ 2ರಂದು. ಸೂರ್ಯನ ಮೇಲಿನ ಅಧ್ಯಯನಕ್ಕಾಗಿ ಇದನ್ನು ಎರಡು ವರ್ಷಗಳ ಕಾಲಾವಧಿಗೆ ಉಡಾವಣೆ ಮಾಡಲಾಗಿತ್ತು. 1996ರಿಂದ ಸಹಜ ಕಾರ್ಯಾರಂಭ ಮಾಡಿದ SOHO ಎರಡು ವರ್ಷದಿಂದ 25ನೇ ವರ್ಷಕ್ಕೆ ಯಶಸ್ವಿಯಾಗಿ ಕಾಲಿಟ್ಟಿದ್ದು ವಿಶೇಷ.
SOHO ಉಡಾವಣೆಗಾಗಿ ಸಿದ್ಧಪಡಿಸಲಾಗಿದ್ದ ಉಪಕರಣಗಳು ಅದೆಷ್ಟೋ ವೈಜ್ಞಾನಿಕ ಸಂಶೋಧನೆಗಳಿಗೆ ಆಕರವಾಗಿವೆ. ಮತ್ತೊಂದಷ್ಟು ಮಿಷನ್ಗಳಿಗೆ ಸ್ಫೂರ್ತಿಯಾಗಿದೆ..ಹಾಗೇ ವಿಜ್ಞಾನಿಗೆಗಳಿಗೆ ಬಾಹ್ಯಾಕಾಶದ ಬಗ್ಗೆ ಸವಿಸ್ತಾರ ಅಧ್ಯಯನ ಮಾಡಲು ಸಹಕಾರಿಯಾಗಿವೆ. ಎರಡೂ ಬಾರಿ ವಿನಾಶದ ಸಮೀಪ ಹೋಗಿದ್ದರೂ ನಂತರ ಉಳಿದುಕೊಂಡಿರುವ SOHO ಸೂರ್ಯನ ಸಮೀಕ್ಷೆ ಮಾಡುತ್ತಿರುವ ದೀರ್ಘಾವಧಿ ಬಾಹ್ಯಾಕಾಶ ನೌಕೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಷ್ಟೇ ಅಲ್ಲ, ಮನುಕುಲ ಸೂರ್ಯನನ್ನು ನೋಡುವ ವಿಧಾನವನ್ನು ಈ ನೌಕೆ ಬದಲಿಸಿದೆ.
ಶುರುವಾಯ್ತು ಕ್ರಾಂತಿ
SOHO ವಿನ್ಯಾಸದೊಂದಿಗೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಹಲವು ಮೈಲಿಗಲ್ಲುಗಳು ದಾಖಲಾದವು. ಸೂರ್ಯನಿಂದ ಭೂಮಿಯೆಡೆಗೆ ಶಕ್ತಿ ಮತ್ತು ಮೂಲದ್ರವ್ಯದ ಹರಿವಿನ ಬಗ್ಗೆ ಒಂದು ಸಮಗ್ರ ಅಧ್ಯಯನಕ್ಕಾಗಿ ಇದನ್ನು ವಿನ್ಯಾಸ ಮಾಡಲಾಗಿತ್ತು. ಸೂರ್ಯನ ಮೇಲೆ ಸದಾ ಕಣ್ಣಿಟ್ಟಿರುವ SOHO ನಿರಂತರ ಗಮನಿಕೆಯಿಂದ ತಾನು ಕಂಡುಕೊಂಡ ವಿಚಾರಗಳನ್ನು ಅಧ್ಯಯನದಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ತಲುಪಿಸಲೆಂದು 12 ಉಪಕರಣಗಳನ್ನು ಅಳವಡಿಸಿಕೊಂಡಿದೆ.
SOHO ವಿನ್ಯಾಸ ಮಾಡುತ್ತಿದ್ದ ದಿನಗಳಲ್ಲಿ ಮೂಲ ಭೌತಿಕ ಸಂಶೋಧನೆಯನ್ನಷ್ಟೇ ಮುಖ್ಯ ಗುರಿಯಾಗಿ ಇರಿಸಿಕೊಳ್ಳಲಾಗಿತ್ತು. ಆದರೆ ನಂತರದ ದಿನಗಳಲ್ಲಿ ವಿಜ್ಞಾನಿಗಳು ಸೂರ್ಯನನ್ನು ಸದಾ ಕಾಲ ಕಣ್ಗಾವಲಿನಲ್ಲಿಟ್ಟು ಅವಲೋಕಿಸಲು ಪ್ರಾರಂಭ ಮಾಡಿದರು. SOHO ಕಳಿಸಿದ ಡೇಟಾ ಅನ್ವಯ ಬಾಹ್ಯಾಕಾಶ ವಾತಾವರಣವನ್ನು ಊಹಿಸಲು ಹಾಗೂ ಅಧ್ಯಯನ ಮಾಡಲು ಪ್ರಾರಂಭ ಮಾಡಿದರು. SOHO ಉಡಾವಣೆ ಹಂತದಲ್ಲಿ ತುಂಬ ಕಡಿಮೆ ಜನರು ಬಾಹ್ಯಾಕಾಶ ಹವಾಮಾನದ ಬಗ್ಗೆ ಯೋಚಿಸುತ್ತಿದ್ದರು..ಮಾತನಾಡುತ್ತಿದ್ದರು. ಆದರೆ ಈಗಂತೂ ಈ ಬಾಹ್ಯಾಕಾಶ ನೌಕೆಯ ಅವಲೋಕನವನ್ನು ಹೋಲುವ ಹಲವು ಹವಾಮಾನ ರಾಡಾರ್ಗಳು ಕಾಣಸಿಗುತ್ತವೆ. ಯಾರು ಬೇಕಾದರೂ ವೆದರ್ ಆ್ಯಪ್ ಓಪನ್ ಮಾಡಿ, ಇವತ್ತು ಮಳೆ ಬರುತ್ತದೆಯಾ? ಚಳಿ ಎಷ್ಟಿದೆ? ಶಾಖ ಎಷ್ಟು ಎಂಬುದನ್ನು ಚೆಕ್ ಮಾಡುತ್ತಾರೆ ಎನ್ನುತ್ತಾರೆ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ವಿಜ್ಞಾನಿ ಬರ್ನ್ಹಾರ್ಡ್ ಫ್ಲೆಕ್.
360 ಡಿಗ್ರಿ ನೋಟ ತೋರಿಸುವ LASCO
SOHOದಲ್ಲಿರುವ ಲಾರ್ಜ್ ಆ್ಯಂಗಲ್ ಮತ್ತು ಸ್ಪೆಕ್ಟೋಮೆಟ್ರಿಕ್ ಕೊರೊನಾಗ್ರಾಫ್(LASCO) ಸೂರ್ಯನ ಸುತ್ತಲಿನ ವಾತಾವರಣದ 360 ಡಿಗ್ರಿ ನೋಟವನ್ನು ಒದಗಿಸುತ್ತದೆ. ಸೌರ ವಸ್ತುಗಳ ದೈತ್ಯ ಸ್ಫೋಟಗಳು ಮತ್ತು ಕಾಂತೀಯ ಕ್ಷೇತ್ರವನ್ನು (ಅದನ್ನು ಕೊರೊನಲ್ ಮಾಸ್ ಎಜೆಕ್ಷನ್ಸ್ – CME ಎಂದು ಕರೆಯಲಾಗುತ್ತದೆ ) ಚಿತ್ರಿಸುವ ಸಾಮರ್ಥ್ಯವುಳ್ಳ LASCOದಿಂದ ಒಂದು ಹೊಸ ವಿಜ್ಞಾನವೇ ಹೊರಹೊಮ್ಮಿದೆ.
SOHOಕ್ಕೂ ಮೊದಲು ಕೊರೊನಲ್ ಮಾಸ್ ಎಜೆಕ್ಷನ್ಸ್ ನಮ್ಮ ಕಡೆ ನೇರವಾಗಿ ನುಗ್ಗುತ್ತಿವೆಯಾ ಎಂಬುದನ್ನು ವೀಕ್ಷಿಸಲು ಸಾಧ್ಯ ಇದೆಯಾ, ಇಲ್ಲವಾ ಎಂಬ ಬಗ್ಗೆ ವೈಜ್ಞಾನಿಕ ಲೋಕ ಚರ್ಚಿಸಿತ್ತು. ಆದರೆ LASCO ಚಿತ್ರಗಳು ಈಗ ಬಾಹ್ಯಾಕಾಶ ಹವಾಮಾನದ ಮುನ್ಸೂಚನೆಯ ಮಾದರಿಗಳ ಬೆನ್ನೆಲುಬಾಗಿ ನಿಂತಿವೆ. ಹಾಗಾಗಿಯೇ ಇಂದು ಯಾರು ಬೇಕಾದರೂ ಆ್ಯಪ್ಗಳ ಮೂಲಕ ಸುಲಭವಾಗಿ ಹವಾಮಾನ ಚೆಕ್ ಮಾಡಬಹುದು ಎನ್ನುತ್ತಾರೆ ಫ್ಲೆಕ್.
SOHO ಬಗ್ಗೆ ಇನ್ನಷ್ಟು ಮಾಹಿತಿಗೆ ನಾಸಾದ ವೆಬ್ಸೈಟ್ https://sohowww.nascom.nasa.gov/ ನೋಡಿ.
Published On - 6:33 am, Wed, 9 December 20