ಕಠ್ಮಂಡು: ವಿಶ್ವದ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್ ಎವೆರೆಸ್ಟ್ನ ಎತ್ತರ 8848.86 ಮೀಟರ್ ಎಂದು ನೇಪಾಳ ವಿದೇಶಾಂಗ ಖಾತೆ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ ಮಂಗಳವಾರ ಘೋಷಿಸಿದರು.
ಈ ಹಿಂದಿನ ಲೆಕ್ಕಾಚಾರಗಳಿಗೆ ಹೋಲಿಸಿದರೆ ಹೊಸದಾಗಿ ಬೆಳಕಿಗೆ ಬಂದ ಮಾಹಿತಿ ಪ್ರಕಾರ ಮೌಂಟ್ ಎವೆರೆಸ್ಟ್ನ ಒಟ್ಟು ಎತ್ತರವು 0.86 ಸೆಂಟಿಮೀಟರ್ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭಾರಿ ಭೂಕಂಪದ ನಂತರ ಪರ್ವತದ ಎತ್ತರ ಮೊದಲಿನಂತೆ ಇರಲು ಸಾಧ್ಯವಿಲ್ಲ ಎಂದು ವಿಶ್ವದ ಹಲವೆಡೆಗಳಿಂದ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಊಹಾಪೋಹಗಳಿಗೆ ಇತಿಶ್ರೀ ಹೇಳಲು ಪರ್ವತವನ್ನು ಹೊಸದಾಗಿ ಅಳೆಯಲು ನೇಪಾಳ ಮುಂದಾಯಿತು.
ನೇಪಾಳಿ ಅಧಿಕಾರಿಗಳು ಮತ್ತು ತಜ್ಞರನ್ನು ಈ ಕಾರ್ಯದಲ್ಲಿ ತೊಡಗಿಸಿದ್ದರೂ ಚೀನಾದ ನೆರವನ್ನೂ ನೇಪಾಳ ಸರ್ಕಾರ ಬಳಸಿಕೊಂಡಿತ್ತು. 2019ರಲ್ಲಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನೇಪಾಳ ಭೇಟಿಯ ವೇಳೆ ಮೌಂಟ್ ಎವರೆಸ್ಟ್ನ ಎತ್ತರವನ್ನು ಜಂಟಿಯಾಗಿ ಘೋಷಿಸುವ ಒಪ್ಪಂದಕ್ಕೆ ಸಹಿಹಾಕಿದ್ದರು.
ಮೌಂಟ್ ಎವೆರೆಸ್ಟ್ನ ಎತ್ತರ 8,848 ಮೀಟರ್ ಎಂದು ಸರ್ವೆ ಆಫ್ ಇಂಡಿಯಾ 1954ರಲ್ಲಿ ಅಳೆದು ಘೋಷಿಸಿತ್ತು. ಈವರೆಗೆ ಮೌಂಟ್ ಎವೆರೆಸ್ಟ್ನ ಅಧಿಕೃತ ಎತ್ತರ ಇದು ಎಂದು ಜಗತ್ತು ನಂಬಿಕೊಂಡಿತ್ತು. ಮೌಂಟ್ ಎವೆರೆಸ್ಟ್ಗೆ ನೇಪಾಳದಲ್ಲಿ ಸಾಗರ್ಮಾತಾ ಎಂದು ಕರೆಯಲಾಗುತ್ತದೆ.