ಪ್ರೇಮಕಥೆಗಳೆಂದರೆ ಹಾಗೇ, ಎಂಥವರ ಮೈಮನವನ್ನೂ ಬೆಚ್ಚನೆಯ ಭಾವದಲ್ಲಿ ಒದ್ದೆಯಾಗಿಸುವ ನವಿರು ಶಕ್ತಿಯುಳ್ಳ ಹೆಣಿಗೆಗಳು. ಪ್ರೇಮವೇ ಪೂಜನೀಯ ಎಂದು ಆರಾಧಿಸುವ ಎಲ್ಲ ಪ್ರೇಮಿಗಳ ಕಥೆಯೂ ರೋಮರೋಮದಲ್ಲಿ ವಿದ್ಯುತ್ ಹರಿಸುತ್ತದೆ. ಪ್ರೇಮಿಗಾಗಿ ಮಾಡಿದ ತ್ಯಾಗ, ಸಾಹಸ, ಯುದ್ಧ, ಒಂದೇ ಎರಡೇ.. ಏಕೆಂದರೆ ಪ್ರೇಮಕ್ಕೆ ಪ್ರೇಮವೊಂದೇ ಸಾಟಿ.
ಪ್ರೇಮಕಥೆಗಳ ಪಟ್ಟಿಯಲ್ಲಿ ಮೊದಲು ರಾಧಾಕೃಷ್ಣರ ಪ್ರೇಮಗಾಥೆಯನ್ನು ಹೇಳಲೇಬೇಕು. ಅಬ್ಬ! ಅವರದೆಂಥ ಅಮೂರ್ತ ಪ್ರೇಮ. ಕೃಷ್ಣನಿಗೆ ಏಳು ಮಹಾರಾಣಿಯರೂ ಸೇರಿ 16,100 ಸಖಿಯರಿದ್ದರೂ ಇಂದಿಗೂ ಕೃಷ್ಣ ಎಂದರೆ ರಾಧೆಯೇ. ಸಂಬಂಧಗಳಾಚೆ..ಇಚ್ಛೆಗಳಾಚೆ.. ಎಲ್ಲವುಗಳನ್ನೂ ಮೀರಿ ಅಲ್ಲಿರುವುದು ಪ್ರೇಮ, ಬರೀ ಪ್ರೇಮವೊಂದೇ. ಅವರಿಂದಲೇ ಮುಂದೆ ಪ್ರೇಮಿಗಳು ಹುಟ್ಟಿದ್ದು. ರಾಧೆಯನ್ನು ಬಿಟ್ಟು ಕೃಷ್ಣ ಇರುವ ಕ್ಷಣವೇ ಇಲ್ಲ. ಕೃಷ್ಣ ಇಲ್ಲದೇ ರಾಧೆ ಇರುವ ಘಳಿಗೆಯೇ ಇಲ್ಲ. ಕಾಲಕಾಲಕ್ಕೂ ರಾಧೆ ಕೃಷ್ಣರೇ ಪ್ರೇಮಕಥೆಗಳ ಅಧಿಕೃತ ವಕ್ತಾರರು. ಕೃಷ್ಣನ ಗೋಪಿಕೆಯರು, ಮೀರಾಳ ಕೃಷ್ಣನ ಪ್ರೇಮವನ್ನೂ ಜಗತ್ತು ಎಂದಿಗೂ ಮರೆಯದು.
ಮಜನೂಗೆ ಕೇಳಿದರು; ‘ಕವಿತೆ ಬರೆದು ಹೇಗೆ ಹೆಂಡತಿಯ ಹೊಟ್ಟೆ ತುಂಬಿಸುತ್ತೀಯಾ?’
ಒಮ್ಮೊಮ್ಮೆ ಪ್ರೇಮ ಪ್ರೇಮಿಗಳನ್ನೂ ಜಗದ ಖ್ಯಾತಿಯ ತುತ್ತತುದಿಗೆ ತಲುಪಿಸುತ್ತದೆ. 7ನೇ ಶತಮಾನದಲ್ಲಿ ಆದ ಲೈಲಾ ಮಜನೂ ಪ್ರೇಮ ನಮಗೆ ಈಗಲೂ ಕಣ್ಮುಂದೆ ಸಚಿತ್ರವಾಗಿ ಕಾಣಿಸುತ್ತದೆ. ಲೈಲಾ ಹೇಗಿದ್ದನೋ, ಮಜನೂ ಹೇಗಿದ್ದಳೋ..ಬಾಯಿಂದ ಬಾಯಿಗೆ ಹರಿದ ಕಥೆಗಳೇ ನಮಗೆ ಲೈಲಾ ಮಜನೂರನ್ನು ನಮ್ಮ ಹೃದಯಗಳಲ್ಲಿ ಈಗಲೂ ಜೀವಂತವಾಗಿಟ್ಟಿದೆ, ಕಾಲಕಾಲಕ್ಕೂ ನಮ್ಮದೇ ಪ್ರೇಮಗಳಲ್ಲಿ ಅವರನ್ನು ಕಾಣುತ್ತೇವೆ. ಕವಿ ಹೃದಯದ ಮಜನೂಗೆ ರಾಜಕುಮಾರಿಯಂತಿದ್ದ ಲೈಲಾಗೂ ಆದ ಪ್ರೇಮಕ್ಕೆ ಒಪ್ಪಿಗೆ ಸಿಗಲಿಲ್ಲ. ಕವಿತೆ ಬರೆದು ಹೇಗೆ ಹೆಂಡತಿಯ ಹೊಟ್ಟೆ ತುಂಬಿಸುತ್ತೀಯಾ ಎಂದು ಮಜನೂಗೆ ಹಂಗಿಸಿದರು. ಕೊನೆಗೂ ಅವರ ಮದುವೆಯಾಗಲಿಲ್ಲ. ಇಬ್ಬರೂ ತಮ್ಮದೇ ಪವಿತ್ರ ಪ್ರೇಮದ ಕೊರಗಲ್ಲಿ ಕೊರಗಿದರು..ಲೈಲಾ ಚುಂಬಿಸಿದ ಗೋಡೆಗಳನ್ನು ನಾನೂ ಚುಂಬಿಸುವೆ ಎಂದು ಬರೆದು ಪ್ರಾಣಬಿಟ್ಟ ಮಜನೂ ಇಂದಿಗೂ ನಮ್ಮೆಲ್ಲರ ಹೃದಯದಲ್ಲಿ ಅಜರಾಮರ.
ಪ್ರೇಮದ ವೈಶಾಲ್ಯತೆಯ ಎದುರು ಅಧಿಕಾರ ಕ್ಷಣಿಕ. ಇದು ಎಂದೆಂದಿಗೂ ಸಾಬೀತಾಗುತ್ತಲೇ ಬರುವ ವಿಷಯ. ಸಲೀಮ ಅನಾರ್ಕಲಿಯ ಕಥೆ ಗೊತ್ತಲ್ಲವೇ ನಮಗೆ, ಓರ್ವ ಸಾಮ್ರಾಟನ ಮಗ ಸಲೀಮ ನೃತ್ಯಪಟು, ವೇಶ್ಯೆ ಅನಾರ್ಕಲಿಯನ್ನು ಜೀವನ್ಮರಣ ಪ್ರೀತಿಸಿದ. ಅನಾರ್ಕಲಿಯ ಸಂಗ ಬಿಡುವಂತೆ ಅಕ್ಬರ್ ಎಷ್ಟು ಗೋಗರೆದ ಎಂದರೆ.. ಕೊನೆಗೂ ಸಲೀಮನ ಕಣ್ಣಿಗೆ ಮಣ್ಣೆರಚಿ ಅನಾರ್ಕಲಿಯನ್ನು ದೂರ ಮಾಡಿಯೇಬಿಟ್ಟ. ಆದರೆ ಮುಂದೆ ತಾನೇ ಸುಲ್ತಾನನಾದಾಗಲೂ ಸಲೀಮನ ತುಟಿ ಅನಾರ್ಕಲಿಯನ್ನೇ ಪಠಿಸುತ್ತಿತ್ತು. ಹೌದು, ಪ್ರೇಮಕ್ಕೆ ಪೂರ್ಣವಿರಾಮ ಹಾಕಲು ಯಾರಿಗೆ ತಾನೇ ಸಾಧ್ಯ? ಅದು ಹರಿವ ನೀರು. ಕುಡಿವ ನೀರು. ಬಾಯಾರಿದಾಗ, ಧಗೆ ಏರಿದಾಗ ಜೀವಕ್ಕೆ ತಂಪೇರಿಸುವ ಅಮೃತಪಾನ.
ಇದೇ ಅಲ್ಲವೇ ಪ್ರೇಮದ ಶಕ್ತಿ?
ಇಷ್ಟೆಲ್ಲ ಬರೆದು ನಮ್ಮ ರೋಮಿಯೋ ಜೂಲಿಯೆಟ್ರನ್ನು ಮರೆತರೆ ಅವರ ಪ್ರೇಮ ನನ್ನನ್ನು ಶಪಿಸದೇ ಬಿಡದು. ಕಣ್ಣುಗಳನ್ನೇ ಹುಟ್ಟುವ ಸಾವಿಲ್ಲದ ಅನುರಾಗದ ಮುಂದೆ ಲೌಕಿಕದ ಎಲ್ಲವು ಕ್ಷುಲ್ಲಕ, ಕ್ಷಣಿಕ. ಬದ್ಧವೈರಿಗಳ ಕುಟುಂಬದ ರೋಮಿಯೋಗೂ ಜೂಲಿಯೆಟ್ಗೂ ಪ್ರೇಮ ಹುಟ್ಟುತ್ತದೆ ಎಂದು ಮೊದಲೆ ಗೊತ್ತಿದ್ದರೆ ಇವರಿಬ್ಬರನ್ನು ಸಂಧಿಸಿದ ನೃತ್ಯಕೂಟವೇ ಏರ್ಪಾಟಾಗುತ್ತಿರಲಿಲ್ಲವೋ ಏನೋ.. ಕುಟುಂಬದ ಇಚ್ಛೆ ಮೀರಿ ಮದುವೆಯಾಗಿ ಸಾವಿನ ನಾಟಕವಾಡಿಯೂ ಒಂದಾಗದ ಈ ಜೋಡಿಯ ದುರಂತ ಅಂತ್ಯದ ಕಥೆ ಎಂತಹ ಗಟ್ಟಿ ಮನಸ್ಸಿನವರನ್ನೂ ಕರಗಿಸುತ್ತದೆ. ಇದೇ ಅಲ್ಲವೇ ಪ್ರೇಮದ ಶಕ್ತಿ?
ಬೆಕ್ಕಿಗೆ ತನ್ನದೇ ಮರಿ, ದನಕ್ಕೆ ತನ್ನದೇ ಕರು ಪತ್ತೆಯಾದಂತೆ ಪ್ರೇಮಿಗಳಿಗೂ..
ಪೃಥ್ವಿರಾಜ ಸಂಯುಕ್ತೆಯ ಪ್ರೇಮಕಥೆ ಬರೀ ಕಥೆಯಷ್ಟೇ ಅಲ್ಲ, ಇಂದಿಗೂ ಜಾಗೃತ ಪ್ರೇಮಿಗಳ ನಿತ್ಯದ ಕಥೆ. ಪೃಥ್ವಿರಾಜನ ಜತೆ ಮದುವೆ ಮಾಡಲೊಪ್ಪದ ತನ್ನ ಅಪ್ಪನ ತಂತ್ರವನ್ನು ಮೀರಿ ಸಂಯುಕ್ತೆ ತನ್ನ ಪ್ರಿಯಕರನ ಕೊರಳಿಗೇ ಹೂವಿನ ಹಾರ ಹಾಕುತ್ತಾಳೆ. ಅವಳಿಗೆ ಆತನೇ ತನ್ನ ಮನ ಗೆದ್ದವನು ಎಂದು ತಿಳಿದಿದ್ದಾರೂ ಹೇಗೆ? ಬೆಕ್ಕಿಗೆ ತನ್ನದೇ ಮರಿ, ದನಕ್ಕೆ ತನ್ನದೇ ಕರು ಪತ್ತೆಯಾಗುವುದು ಹೇಗೆ? ಎಂದಾದರೂ ಯೋಚಿಸಿದ್ದೀರಾ..?
ಇದನ್ನೂ ಓದಿ: ಯಾರ ಪ್ರೀತಿಯೂ ಹಗುರವಲ್ಲ, ಯಾವ ಪ್ರೀತಿಯೂ ಕಡಿಮೆಯಲ್ಲ.. ಅಷ್ಟಕ್ಕೂ ಪ್ರೀತಿ ಅಂದ್ರೇನು?
ಎಲ್ಲವನ್ನೂ ಹೇಳಿ ನಮ್ಮದೇ ಮೇಘದೂತನ ವಿರಹಿ ಯಕ್ಷ ಪ್ರೇಮಿಗಳ ಕಥೆ ಹೇಳದಿದ್ದರೆ ನೀವೂ ಬೇಸರ ಪಟ್ಟಿಕೊಳ್ಳಬಹುದು. ತನ್ನ ಪತ್ನಿಯಿಂದ ಅಗಲಿ ಒಂದು ವರ್ಷ ಇರಬೇಕಾದ ಅತ್ಯಂತ ವೇದನೆಯ ಕಟು ಘಳಿಗೆಯನ್ನು ಆ ಯಕ್ಷ ಅನುಭವಿಸಿದ ರೀತಿಯೇ ಹೃದಯವನ್ನು ಒದ್ದೆಮಾಡುತ್ತದೆ. 11 ಚರಣಗಳ ಪ್ರೇಮಿಗಳ ಪಾಲಿನ ಪಂಚಾಂಗವನ್ನು ಬರೆದ ಆ ಕವಿಕುಲ ತಿಲಕ ಕಾಳಿದಾಸನ ಹೃದಯ ಎಷ್ಟು ಭಾಷ್ಪಗೊಂಡಿರಬಹುದು.. ತನ್ನ ಸಖಿಯೂ ಮೂಸಿ ನೋಡದ ಅಷ್ಟಾವಕ್ರನನ್ನು ಪ್ರೇಮಿಸಿದ ಅಮೃತಮತಿಯ ಕಥನವಂತೂ ಲೌಕಿಕದ ವ್ಯಾಖ್ಯಾನಕ್ಕೆ ನಿಲುಕದು. ಅಯ್ಯೋ ಪ್ರೇಮವೇ..ಅಯ್ಯೋ ಪ್ರೇಮಿಗಳೇ.. ನಿಮಗೆ ನನ್ನ ನಮನ. ನೀವು ಸವೆಸಿದ ಹಾದಿಯಲ್ಲಿ ಹೆಚ್ಚು ಕಲ್ಲುಮುಳ್ಳುಗಳನ್ನು ಬಿಟ್ಟಿರಲಾರಿರಿ ಎಂದು ನಂಬಿ ನಾನೂ ಪ್ರೇಮಿಸುವೆ..
Published On - 7:49 pm, Sat, 13 February 21