ಕೆಲವೊಮ್ಮೆ ಕೀಟಗಳು ಕಿವಿಯ ತೂತಿನೊಳಗೆ ತೂರಿಕೊಂಡು ಆಳಕ್ಕೆ ಇಳಿದುಬಿಡುತ್ತವೆ. ಇದು ಒಳಭಾಗದಲ್ಲಿ ನಡೆದಾಡಿದಂತೆಲ್ಲಾ ಕಿವಿಯ ಸೂಕ್ಷ್ಮ ಅಂಗಗಳಿಗೆ ಕಚಗುಳಿಯಾಗುವಂತಾಗುವುದು, ಕೆಲವೊಮ್ಮೆ ಕೀಟಗಳ ಕಾಲಿನ ಮುಳ್ಳುಗಳು ಚುಚ್ಚುವುದು ಅಥವಾ ಕೀಟ ಕಚ್ಚುವ ಮೂಲಕ ಒಳಭಾಗದಲ್ಲಿ ಭಾರೀ ಉರಿಯಾಗುವುದು ಅಥವಾ ನೋವು ಕಾಣಿಸಿಕೊಳ್ಳುವ ಸಂಭವವೂ ಇದೆ. ವಿಶೇಷವಾಗಿ ಮಕ್ಕಳು ಹೊರಗೆ ಆಟವಾಡುವ ಸಮಯದಲ್ಲಿ ಈ ತೊಂದರೆಗೆ ಒಳಗಾಗುತ್ತಾರೆ. ಪ್ರತಿಯೊಬ್ಬರೂ ಜೀವಮಾನದಲ್ಲಿ ಕನಿಷ್ಠ ಒಮ್ಮೆಯಾದರೂ ಈ ಅನುಭವವನ್ನು ಪಡೆದೇ ಇರುತ್ತಾರೆ. ಕಿವಿಯ ಒಳ ಅಂಗಗಳು ಅತಿ ಸೂಕ್ಷ್ಮವಾಗಿದ್ದು ಅತ್ಯಂತ ದುರ್ಬಲವೂ ಆಗಿವೆ. ಆದ್ದರಿಂದ ಕಿವಿಯೊಳಗೆ ಕಡ್ಡಿಹಾಕಿ ಕೀಟವನ್ನು ಹೊರತೆಗೆಯುವ ಪ್ರಯತ್ನದಲ್ಲಿ ಈ ಸೂಕ್ಷ್ಮ ಅಂಗಗಳಿಗೆ ಘಾಸಿಯಾಗಬಹುದು.
ಕಿವಿ ಹೊಕ್ಕ ಕೀಟ ಹೊರಬರುವುದು ಹೇಗೆ?
ಒಂದು ವೇಳೆ ಕಿವಿಯಲ್ಲಿ ಸೋಂಕು, ಸೋರುವುದು, ಕಿವಿನೋವು ಅಥವಾ ಇತರ ಯಾವುದಾದರೂ ತೊಂದರೆ ಇದ್ದರೆ ಕಿವಿಗೆ ಎಣ್ಣೆ ಬಿಡದಿರಿ. ಉಳಿದವರಿಗೆ ಎಣ್ಣೆಯನ್ನು ಕೊಂಚವೇ ಅಂದ್ರೆ ಉಗುರು ಬಿಸಿ ಮಾಡಿ ಬಿಟ್ಟರೆ ಉತ್ತಮ. ಒಂದು ಕಿವಿಸ್ವಚ್ಛಗೊಳಿಸುವ ಹತ್ತಿಸುತ್ತಿದ ಕಡ್ಡಿಯನ್ನು ಅಪ್ಪಟ ಆಲ್ಕೋಹಾಲ್ ದ್ರವದಲ್ಲಿ ಮುಳುಗಿಸಿ ಕಿವಿಯ ತೂತಿನ ಬಳಿ ಇರಿಸಿ. ಇದರ ದ್ರವ ಕಿವಿಯೊಳಗೆ ತೊಟ್ಟಿಕ್ಕುವಂತೆ ಮಾಡಿ. ಆಲ್ಕೋಹಾಲ್ ನ ಹಬೆ ಕಿವಿಯೊಳಗೆ ವ್ಯಾಪಿಸಿದಂತೆಯೇ ಕೀಟ ಅಲ್ಲಿಂದ ಹೊರಬರುತ್ತದೆ. ಅಲ್ಲದೇ ಒಳಭಾಗ ಸ್ವಚ್ಛವೂ ಆಗುತ್ತದೆ.
ಬೆಂಕಿಕಡ್ಡಿ, ಹೇರ್ಪಿನ್ ಬೇಡ!
ಕೆಲವೊಮ್ಮೆ ಕೀಟದ ಮೀಸೆಯ ತುದಿ ಕಿವಿಯ ಹೊರಗೆ ಇಣುಕುತ್ತಿರುವಂತೆ ಕಾಣುತ್ತದೆ. ಇದನ್ನು ತೆಗೆಯಲು ಬೆರಳನ್ನು ತೂರಿಸಲು ಪ್ರಬಲ ಬಯಕೆಯುಂಟಾಗುತ್ತದೆ. ಆದರೆ ಇದನ್ನು ನಿವಾರಿಸಲು ಬೆರಳು ತೂರಿಸಿದರೆ ಕೀಟ ಒಳಗಿನ ಭಾಗಗಳಿಗೆ ಕಚ್ಚಬಹುದು. ಕೆಲವೊಮ್ಮೆ ಬೆಂಕಿಕಡ್ಡಿ ಅಥವಾ ಹೇರ್ ಪಿನ್ನುಗಳನ್ನು ಕಿವಿಯೊಳಗೆ ತೂರಿಸುವಾಗ ಕಿವಿಯೊಳಗಿನ ಮೇಣದ ಪದರ ಎದ್ದು ಬಂದು ಕಿವಿಯ ತೂತಿಗೆ ಅಡ್ಡಲಾಗಿ ಸಿಕ್ಕಿಕೊಳ್ಳಬಹುದು. ಇವು ಕೀಟವನ್ನು ಹೊರತೆಗೆಯಲು ಇನ್ನಷ್ಟು ಕಷ್ಟವಾಗಿಸಬಹುದು. ಅಲ್ಲದೇ ಮೇಣ ಎದ್ದುಬಂದ ಚರ್ಮದ ಭಾಗ ಈಗ ಯಾವುದೇ ರಕ್ಷಣೆಯಿಲ್ಲದೇ ಕೀಟದ ಸೂಕ್ಷ್ಮ ಮುಳ್ಳುಗಳಿಗೆ ಸುಲಭವಾಗಿ ಚುಚ್ಚಿಕೊಳ್ಳಲು ಸಾಧ್ಯವಾಗುವಂತಿದ್ದು ಇದರಿಂದ ಸೋಂಕು ಉಂಟಾಗಬಹುದು. ಇದು ಕೇಳುವ ಸಾಮರ್ಥ್ಯವನ್ನೇ ಉಡುಗಿಸಬಹುದು.
ತಕ್ಷಣ ವೈದ್ಯರನ್ನ ಭೇಟಿಯಾಗಿ:
ಒಂದು ವೇಳೆ ಎಣ್ಣೆ ಬಿಟ್ಟರೂ ಕೀಟ ಹೊರಬರದೇ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಈ ಪ್ರಯತ್ನದಲ್ಲಿ ಯಾವುದೇ ತಪ್ಪಾದರೂ ಇದರ ಪರಿಣಾಮ ಕಿವಿ ಕೇಳುವ ಸಾಮರ್ಥ್ಯಕ್ಕೆ ಅಪಾಯವಾಗುವ ಕಾರಣ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು.
Published On - 5:30 pm, Sun, 29 September 19