
ಅಬುಧಾಬಿಯಲ್ಲಿರುವ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ (BAPS) ಹಿಂದೂ ಮಂದಿರವು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಪ್ರತಿಷ್ಠಿತ ‘2026 ಅಂತರರಾಷ್ಟ್ರೀಯ ಸಹಿಷ್ಣುತೆ ಪ್ರಶಸ್ತಿ’ (Tolerance Award)ಗೆ ಭಾಜನವಾಗಿದೆ. ಜಾಗತಿಕ ಮಟ್ಟದಲ್ಲಿ ಶಾಂತಿ, ಸಹಿಷ್ಣುತೆ, ಪರಸ್ಪರ ಗೌರವ ಮತ್ತು ಮಾನವ ಏಕತೆಯನ್ನು ಉತ್ತೇಜಿಸುವಲ್ಲಿ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಗೌರವವನ್ನು ‘ಥರ್ಡ್ ಇಂಟರ್ನ್ಯಾಷನಲ್ ಡೈಲಾಗ್ ಆಫ್ ಸಿಲಿಲೈಸೇಷನ್ ಆ್ಯಂಡ್ ಟಾಲರೆನ್ಸ್ ಕಾನ್ಫರೆನ್ಸ್(IDCT 2026)
ಸಂದರ್ಭದಲ್ಲಿ ಘೋಷಿಸಲಾಯಿತು. ವಿವಿಧ ಧರ್ಮಗಳು, ಸಂಸ್ಕೃತಿಗಳು ಮತ್ತು ಸಮುದಾಯಗಳ ನಡುವೆ ಸಾಮರಸ್ಯದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ BAPS ಮಂದಿರದ ಸೇವಾ ಚಟುವಟಿಕೆಗಳು ವಿಶ್ವದ ಗಮನ ಸೆಳೆದಿವೆ.
ಅಬುಧಾಬಿ ಹಿಂದೂ ದೇವಾಲಯವು ಧಾರ್ಮಿಕ, ಭಾಷಾ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಮೀರಿ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಜಾಗತಿಕ ಸಹಬಾಳ್ವೆಯ ಸಂದೇಶವನ್ನು ಸಾರುತ್ತಿದೆ. ಸಮಾಜದಲ್ಲಿ ಏಕತೆ ಬೆಳೆಸುವ ಕಾರ್ಯಕ್ರಮಗಳು, ಮಾನವೀಯ ಸೇವೆಗಳು ಹಾಗೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕೈಗೊಂಡ ಸೇವಾ ಕಾರ್ಯಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ BAPS ಸಂಸ್ಥೆಯ ಆಧ್ಯಾತ್ಮಿಕ ನಾಯಕರು, ತಂತ್ರಜ್ಞಾನ ಮತ್ತು ಆಧ್ಯಾತ್ಮಿಕತೆಯ ನಡುವಿನ ಸಮತೋಲನದ ಅಗತ್ಯವನ್ನು ವಿವರಿಸಿದ್ದಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮಾನವೀಯ ಮೌಲ್ಯಗಳು, ಕುಟುಂಬ ಬಾಂಧವ್ಯಗಳು ಮತ್ತು ಪರಸ್ಪರ ಸಂಬಂಧಗಳ ಮಹತ್ವ ಕಡಿಮೆಯಾಗಬಾರದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೃಂದಾವನದಲ್ಲಿ ವಿರಾಟ್-ಅನುಷ್ಕಾ; ಪ್ರೇಮಾನಂದ್ ಗುರೂಜಿ ಬಳಿ ಈ ಜೋಡಿ ಪದೇ ಪದೇ ಹೋಗುವುದೇಕೆ ಗೊತ್ತಾ?
ಕುಟುಂಬದ ಸದಸ್ಯರು ಪ್ರತಿದಿನ ಸ್ವಲ್ಪ ಸಮಯವನ್ನು ಪ್ರಾರ್ಥನೆ, ಆತ್ಮಾವಲೋಕನ ಹಾಗೂ ಪರಸ್ಪರ ಸಂಭಾಷಣೆಗೆ ಮೀಸಲಿಡಬೇಕು. ಮೊಬೈಲ್ ಫೋನ್ ಹಾಗೂ ಡಿಜಿಟಲ್ ಸಾಧನಗಳ ಬಳಕೆಯನ್ನು ಮಿತಿಗೊಳಿಸಿ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಸಮಾಜದ ಸೌಹಾರ್ದತೆಗೆ ಅತ್ಯಗತ್ಯ ಎಂದು ಸಲಹೆ ನೀಡಿದ್ದಾರೆ. .
ಶಾಂತಿ, ಕರುಣೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ BAPS ಹಿಂದೂ ಮಂದಿರ ಕೈಗೊಂಡಿರುವ ವಿವಿಧ ಚಟುವಟಿಕೆಗಳಿಗೆ ಈ ಪ್ರಶಸ್ತಿ ಮತ್ತೊಂದು ದೊಡ್ಡ ಮಾನ್ಯತೆಯಾಗಿದೆ. ಇಂದು ಈ ದೇವಾಲಯವು ಕೇವಲ ಪೂಜಾ ಕೇಂದ್ರವಾಗಿಯೇ ಅಲ್ಲದೆ, ವಿಭಿನ್ನ ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಸಂಪರ್ಕಿಸುವ ಸಾಮರಸ್ಯದ ಸಂಕೇತವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 am, Fri, 5 June 26