
ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಅನೇಕ ಆಚರಣೆಗಳು ತಲೆಮಾರುಗಳಿಂದ ನಡೆದುಕೊಂಡು ಬಂದಿವೆ. ಅವುಗಳಲ್ಲಿ ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದು ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಯುವಜನತೆ ಇದನ್ನು ಫ್ಯಾಷನ್ ಆಗಿಯೂ ಧರಿಸುತ್ತಾರೆ. ಆದರೆ, ಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರ ಹಿಂದೆ ಬಲವಾದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ದೃಷ್ಟಿ ದೋಷದಿಂದ ಹಿಡಿದು ಗ್ರಹ ದೋಷಗಳ ನಿವಾರಣೆಯವರೆಗೆ ಈ ಕಪ್ಪು ದಾರ ಹೇಗೆ ಕೆಲಸ ಮಾಡುತ್ತದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ನಮ್ಮ ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಗಳು ಹಾಗೂ ಕೆಟ್ಟ ದೃಷ್ಟಿಯಿಂದ (ದೃಷ್ಟಿ ದೋಷ) ರಕ್ಷಣೆ ಪಡೆಯಲು ಕಪ್ಪು ದಾರವನ್ನು ಕಟ್ಟಲಾಗುತ್ತದೆ. ಕೆಲವರಿಗೆ ಯಾವುದೇ ಕಾರಣವಿಲ್ಲದೆ ಸಂಜೆಯಾಗುತ್ತಿದ್ದಂತೆ ವಿಪರೀತ ಆಯಾಸವಾಗುವುದು, ಪದೇ ಪದೇ ಅನಾರೋಗ್ಯ ಕಾಡುವುದು ಅಥವಾ ಮಾಡುವ ಕೆಲಸಗಳಲ್ಲಿ ಪ್ರಗತಿ ಕುಂಠಿತವಾಗುವಂತಹ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಂದರ್ಭಗಳಲ್ಲಿ ದೇಹದಲ್ಲಿನ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಕೆಟ್ಟ ದೃಷ್ಟಿಯ ಪ್ರಭಾವವನ್ನು ತಡೆಯಲು ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳಲು ಸಲಹೆ ನೀಡಲಾಗುತ್ತದೆ.
ಕಾಶಿ ಸಂಪ್ರದಾಯದಂತೆ ಈ ಕಪ್ಪು ದಾರವನ್ನು ‘ಕಾಶಿ ದಾರ’ ಎಂದೂ ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕಪ್ಪು ದಾರವು ರಕ್ಷಕ ದೇವರಾದ ಕಾಲಭೈರವನ ಸಂಕೇತವಾಗಿದೆ. ಅಲ್ಲದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಗ್ರಹವು ವ್ಯಕ್ತಿಯ ಜೀವನಕ್ಕೆ ಕಾಲಿನ ಮೂಲಕ ಪ್ರವೇಶಿಸುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ಜಾತಕದಲ್ಲಿನ ಶನಿ, ರಾಹು ಮತ್ತು ಕೇತು ಗ್ರಹಗಳ ದೋಷಗಳು ಶಮನಗೊಂಡು, ಅವುಗಳ ಅಶುಭ ಪ್ರಭಾವದಿಂದ ಮುಕ್ತಿ ಪಡೆಯಬಹುದು.
ಕಪ್ಪು ದಾರದಿಂದ ಪೂರ್ಣ ಫಲ ಪಡೆಯಲು ಅದನ್ನು ಕಟ್ಟಿಕೊಳ್ಳುವಾಗ ಕೆಲವು ಪ್ರಮುಖ ನಿಯಮಗಳನ್ನು ಪಾಲಿಸುವುದು ಅಗತ್ಯ. ಕಪ್ಪು ದಾರಕ್ಕೆ ನಮ್ಮ ಶರೀರದ ಒಂಬತ್ತು ದ್ವಾರಗಳ (ನವದ್ವಾರ) ಸಂಕೇತವಾಗಿ ಒಂಬತ್ತು ಗಂಟುಗಳನ್ನು ಹಾಕಿರಬೇಕು.. ಪುರುಷರು ಮತ್ತು ಗಂಡುಮಕ್ಕಳು ಬಲಗಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕು. ಮಹಿಳೆಯರು ಮತ್ತು ಹೆಣ್ಣುಮಕ್ಕಳು ಎಡಗಾಲಿಗೆ ಕಟ್ಟಿಕೊಳ್ಳುವುದು ಶುಭ. (ಚಿಕ್ಕ ಮಕ್ಕಳಿಗೂ ಇದೇ ನಿಯಮದಂತೆ ಕಟ್ಟಬಹುದು). ಕಪ್ಪು ದಾರವನ್ನು ಶನಿವಾರದ ದಿನ ಮುಸ್ಸಂಜೆ ವೇಳೆಯಲ್ಲಿ ಕಟ್ಟಿಕೊಳ್ಳುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದಾರವನ್ನು ಕಟ್ಟಿಕೊಳ್ಳುವಾಗ ಮನಸ್ಸಿನಲ್ಲಿ ಒಳ್ಳೆಯ ಉದ್ದೇಶ ಹಾಗೂ ಸಕಾರಾತ್ಮಕ ಸಂಕಲ್ಪವನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ.
ಅನೇಕ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಕಾಲಿಗೆ ಕಪ್ಪು ದಾರದ ಜೊತೆಗೆ ಬೆಳ್ಳಿಯ ಗೆಜ್ಜೆ ಅಥವಾ ಪೈರೇಟ್ (Pyrite) ಗೆಜ್ಜೆಯನ್ನು ಧರಿಸುತ್ತಾರೆ. ಶಾಸ್ತ್ರ ಮತ್ತು ನಂಬಿಕೆಗಳ ಪ್ರಕಾರ, ಕಪ್ಪು ದಾರದೊಂದಿಗೆ ಇಂತಹ ಗೆಜ್ಜೆಗಳನ್ನು ಧರಿಸುವುದರಿಂದ ನಕಾರಾತ್ಮಕ ಶಕ್ತಿ ಹಾಗೂ ದೃಷ್ಟಿ ದೋಷ ದೂರವಾಗುವುದರ ಜೊತೆಗೆ ಮನೆಯಲ್ಲಿ ಮತ್ತು ಜೀವನದಲ್ಲಿ ಸಂಪತ್ತು (Wealth) ಆಕರ್ಷಣೆಯಾಗುತ್ತದೆ ಎಂಬ ಬಲವಾದ ನಂಬಿಕೆಯಿದೆ.