
ಕುಮಾರ ಷಷ್ಠಿಯು ಭಗವಾನ್ ಸುಬ್ರಹ್ಮಣ್ಯ ಸ್ವಾಮಿಯ ಜನ್ಮದಿನವಾಗಿದೆ. ಈ ವರ್ಷ ಕುಮಾರ ಷಷ್ಠಿ ಜ. 24ರಂದು ಬಂದಿದೆ. ಸುಬ್ರಹ್ಮಣ್ಯನನ್ನು ಕುಮಾರ, ಕಾರ್ತಿಕೇಯ, ಮುರುಗನ್, ಸ್ಕಂದ, ಷಣ್ಮುಖ ಎಂಬ ವಿವಿಧ ಹೆಸರುಗಳಿಂದ ಸ್ಮರಿಸಲಾಗುತ್ತದೆ. ಈ ನಾಮಾವಳಿಗಳು ಅವನ ದೈವಿಕ ಶಕ್ತಿ ಮತ್ತು ಗುಣಗಳನ್ನು ಪ್ರತಿಬಿಂಬಿಸುತ್ತವೆ. ಪ್ರತಿ ಶುಕ್ಲಪಕ್ಷದ ಆರನೇ ದಿನದಂದು ಬರುವ ಕುಮಾರ ಷಷ್ಠಿಯು ಶಿವ-ಪಾರ್ವತಿಯರ ಪುತ್ರನಾದ ಸುಬ್ರಹ್ಮಣ್ಯ ಸ್ವಾಮಿ ತಾರಕಾಸುರನನ್ನು ಸಂಹಾರ ಮಾಡಲು ಜನ್ಮವೆತ್ತಿದ ದಿನವೆಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.
ಸುಬ್ರಹ್ಮಣ್ಯ ಸ್ವಾಮಿಯ ಪೂಜೆಯು ಭಕ್ತರಿಗೆ ಧೈರ್ಯ, ಶಕ್ತಿ ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ನೀಡುತ್ತದೆ. ಕುಮಾರ ಸ್ವಾಮಿಯು ನಾಗಾಂಶವನ್ನು ಹೊಂದಿರುವ ಕಾರಣ, ವಿವಾಹ, ಸಂತಾನ, ಸರ್ಪದೋಷ ನಿವಾರಣೆ ಮತ್ತು ಆರೋಗ್ಯ ಸುಧಾರಣೆಗಾಗಿ ಈ ದಿನ ವಿಶೇಷವಾಗಿ ಆರಾಧಿಸಲಾಗುತ್ತದೆ. ಭಕ್ತರು ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಮತ್ತು ಸಂಡೂರಿನಂತಹ ಪ್ರಮುಖ ಸುಬ್ರಹ್ಮಣ್ಯ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಈ ಪೂಜೆಯಿಂದ ಚರ್ಮ ರೋಗಗಳು, ಮಾನಸಿಕ ಖಿನ್ನತೆ, ಮಕ್ಕಳಿಲ್ಲದಿರುವಿಕೆ, ಪದೇ ಪದೇ ಕಾಡುವ ಆರೋಗ್ಯ ಸಮಸ್ಯೆಗಳು, ಕಣ್ಣಿನ ದೃಷ್ಟಿದೋಷ, ಮಾಟಮಂತ್ರ ಮತ್ತು ವಾಮಾಚಾರದಂತಹ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ
ಕುಮಾರ ಷಷ್ಠಿ ಆಚರಣೆಯಲ್ಲಿ ಹಲವು ವಿಧಿವಿಧಾನಗಳಿವೆ. ಭಕ್ತರು ಹುತ್ತಗಳಿಗೆ ದರ್ಶನ ನೀಡಿ ಪೂಜಿಸುತ್ತಾರೆ. ನಾಗಬನಗಳಲ್ಲಿ ಹಾಲಿನ ಅಭಿಷೇಕ ಮಾಡುವುದು ಮತ್ತೊಂದು ಪ್ರಮುಖ ಆಚರಣೆ. ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ದೇವರಿಗೆ ಅಭಿಷೇಕ ಮಾಡಿಸಿ ದರ್ಶನ ಪಡೆಯುವುದು ಪುಣ್ಯಪ್ರದ ಎಂದು ಹೇಳಲಾಗುತ್ತದೆ. ದರ್ಶನಂ ಪುಣ್ಯಂ, ಸ್ಪರ್ಶನಂ ಪಾಪನಾಶನಂ ಎಂಬ ನಂಬಿಕೆ ಇದೆ. ತಮಿಳುನಾಡಿನಂತಹ ಕೆಲವು ಪ್ರದೇಶಗಳಲ್ಲಿ ಭಕ್ತರು ಕುಮಾರ ಷಷ್ಠಿಯ ದಿನದಂದು ಕಾವಡಿಗಳನ್ನು ಹೊತ್ತು ನಡೆದು ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತಾರೆ.
ಇದಲ್ಲದೆ, ಜಪ ಮಾಡುವುದು, ದೇವರ ಧ್ಯಾನ ಮಾಡುವುದು ಮತ್ತು ದೇವರ ಹೆಸರಿನಲ್ಲಿ ದಾನ ನೀಡುವುದು ಕೂಡ ಈ ದಿನದ ವಿಶೇಷ. ಬೆಳಗಿನ ಜಾವ ಸ್ನಾನ ಮಾಡುವಾಗ ನೀರಿಗೆ ಸ್ವಲ್ಪ ಅರಿಶಿಣ ಬೆರೆಸಿ ಸ್ನಾನ ಮಾಡುವುದರಿಂದ ಮತ್ತು ಮಕ್ಕಳಿಗೆ ಅರಿಶಿಣ ನೀರಿಗೆ ಹಾಕಿ ಸ್ನಾನ ಮಾಡಿಸುವುದರಿಂದ ಶುಭ ಫಲಗಳು ಸಿಗುತ್ತವೆ. ಸ್ಕಂದ ಕವಚ ಪಠಣ, ಸುಬ್ರಹ್ಮಣ್ಯ ಅಷ್ಟೋತ್ತರಗಳು ಮತ್ತು ಓಂ ಶರವಣಭವಾಯ ನಮಃ ಎಂಬ ಮಂತ್ರವನ್ನು ಜಪಿಸುವುದು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ