Magha Purnima Special: ಮಾಘಮಾಸದ ಶುಕ್ಲಪಕ್ಷದಲ್ಲಿ ಮಾಘ ಪೂರ್ಣಿಮೆಯ ಆಚರಣೆ, ಶುಭದಿನ ಇಲ್ಲಿದೆ

|

Updated on: Feb 02, 2023 | 6:29 PM

ನಮಗೆ ಪುಣ್ಯದ ಫಲಬೇಕು ಆದರೆ ಪುಣ್ಯಪ್ರದವಾದ ಕೆಲಸ ಮಾಡಲು ಕಷ್ಟ. ಹಾಗೆ ಪಾಪದ ಅಶುಭ ಫಲಬೇಡ ಆದರೆ ಪಾಪದ ಕೆಲಸವನ್ನು ಮಾಡಿಬಿಡುತ್ತೇವೆ. ಪ್ರತಿಯೊಂದು ಕಾರ್ಯಮಾಡಲು ಯೋಗ್ಯವಾದ ಕಾಲವನ್ನು ನಮ್ಮ ಹಿರಿಯರು ಕಾರಣ ಸಹಿತವಾಗಿ ಹೇಳಿದ್ದಾರೆ.

Magha Purnima Special: ಮಾಘಮಾಸದ ಶುಕ್ಲಪಕ್ಷದಲ್ಲಿ ಮಾಘ ಪೂರ್ಣಿಮೆಯ ಆಚರಣೆ, ಶುಭದಿನ ಇಲ್ಲಿದೆ
ಸಾಂದರ್ಭಿಕ ಚಿತ್ರ
Image Credit source: google image
Follow us on

ಜಗತ್ತಿನಲ್ಲಿ ಒಳ್ಳೆಯ ಕ್ಷಣ, ಯೋಗ, ಯಶಸ್ಸು , ಗೌರವ, ನೆಮ್ಮದಿ ಈ ರೀತಿಯ ಆಹ್ಲಾದಕರವಾದ ಸನ್ನಿವೇಶಗಳು / ಸಂದರ್ಭಗಳು ಯಾರಿಗೆ ಬೇಡ ಹೇಳಿ. ನಮಗೆ ಪುಣ್ಯದ ಫಲಬೇಕು ಆದರೆ ಪುಣ್ಯಪ್ರದವಾದ ಕೆಲಸ ಮಾಡಲು ಕಷ್ಟ. ಹಾಗೆ ಪಾಪದ ಅಶುಭ ಫಲಬೇಡ ಆದರೆ ಪಾಪದ ಕೆಲಸವನ್ನು ಮಾಡಿಬಿಡುತ್ತೇವೆ. ಪ್ರತಿಯೊಂದು ಕಾರ್ಯಮಾಡಲು ಯೋಗ್ಯವಾದ ಕಾಲವನ್ನು ನಮ್ಮ ಹಿರಿಯರು ಕಾರಣ ಸಹಿತವಾಗಿ ಹೇಳಿದ್ದಾರೆ. ಆಗ ಲೌಕಿಕವಿಜ್ಞಾನ ಅಷ್ಟಾಗಿ ಬೆಳೆದಿರಲಿಲ್ಲ ಆದ್ದರಿಂದ ಇಂದಿಗನುಗುಣವಾದ ವೈಜ್ಞಾನಿಕ ಕಾರಣವನ್ನು ಅವರು ನೀಡಿಲ್ಲ. ಅಂದ ಮಾತ್ರಕ್ಕೆ ಅವರು ನೀಡಿರುವ ಕಾರಣಗಳು ತಪ್ಪೆನ್ನಲು ಸಾಧ್ಯವಿಲ್ಲ. ಹಾಗಂತ ಎಲ್ಲವೂ ಸರಿ ಅನ್ನಲೂ ಸಾಧ್ಯವಿಲ್ಲ. ಕೆಲವೊಂದು ಮೂಢತೆಯ ಕತ್ತಲು ಕವಿದ ಘಟನೆಯೂ ಇದೆ. ಆದರೆ ಎಲ್ಲವೂ ಮೂಢನಂಬಿಕೆಗಳೂ ಅಲ್ಲ.

ಮಾಘಪೂರ್ಣಿಮೆಯೆಂಬುದು (Magha Purnima) ಅತ್ಯಂತ ಪವಿತ್ರವಾದದ್ದು ಮತ್ತು ಗ್ರಾಹ್ಯವೂ ಹೌದು. ವಾಸ್ತವವಾಗಿ ಹುಣ್ಣಿಮೆಯೆಂಬುದೇ ಅತ್ಯಂತ ಶುಭ. ಏಕೆಂದರೆ ಈ ದಿನದಂದು ಸೂರ್ಯನ ಸರಿ ವಿರುದ್ಧ ದಿಕ್ಕಲ್ಲಿ ಸರಿಯಾಗಿ ಸೂರ್ಯಾಸ್ತದ ವೇಳೆಗೆ ಚಂದ್ರೋದಯವಾಗುತ್ತದೆ. ಈ ಕಾರಣದಿಂದ ಚಂದ್ರನು ತನ್ನ ಸಂಪೂರ್ಣ ಕಲಾಶಕ್ತಿಯೊಂದಿಗೆ ಗೋಚರವಾಗುತ್ತಾನೆ. ಆದ ಕಾರಣದಿಂದಲೇ ಅಂದಿನ ದಿನ (ಹುಣ್ಣಿಮೆಯಂದು) ಶುಭ ಕಾರ್ಯಗಳಿಗೆ ತಾರಾನುಕೂಲ ತುಂಬಾ ಕೂಡಿಬರುತ್ತದೆ. ವ್ರತಾದಿಗಳಿಗೂ ಅತ್ಯಂತ ಪ್ರಶಸ್ತ ಕಾಲ ಹುಣ್ಣಿಮೆ.

ಅಂತೆಯೇ ಈ ಹುಣ್ಣಿಮೆಗಳು ತಿಂಗಳಿಗೆ ಒಂದರಂತೆ ವರುಷಕ್ಕೆ ಹನ್ನೆರಡು ಸಲ ಬರುತ್ತದೆ. ಪ್ರತೀ ಹುಣ್ಣಿಮೆಗೂ ಅದರದ್ದೇ ಆದ ವಿಶೇಷ ಫಲವಿದೆ. ಹಾಗೆಯೇ ಮಾಘ ಮಾಸದ ಹುಣ್ಣಿಮೆಗೆ ಅತೀ ಹೆಚ್ಚಿನ ಬಲ ಮತ್ತು ಫಲವಿದೆ. ಅದರಲ್ಲೂ ಮಾಘಮಾಸ ಧರ್ಮಾಚರಣೆಗೆ ಉತ್ತಮವೂ ಹೌದು. ಮಾಘ ಮಾಸವೆಂಬುದು ಸೂರ್ಯಸಂಬಂಧೀ ಮಾಸ. ಈ ಕಾರಣದಿಂದ ಮಾಘಸ್ನಾನ ವ್ರತ ಎಂಬ ಪದ್ಧತಿ ಕೆಲುವು ಕಡೆ ಇದೆ. ಮಾಘಮಾಸದಲ್ಲಿ ಬೆಳಗ್ಗೆ ಸೂರ್ಯೋದಯಕ್ಕೆ ಪೂರ್ವದಲ್ಲಿ ಸ್ನಾನ ಮಾಡಿಕೊಂಡು ಸೂರ್ಯೋಪಾಸನೆ ಮಾಡುವುದಕ್ಕೆ ಮಾಘಸ್ನಾನ ವ್ರತ ಎನ್ನುತ್ತಾರೆ. ಇದರಿಂದ ಆರೋಗ್ಯ ಮತ್ತು ಜ್ಞಾನದ ವೃದ್ಧಿಯನ್ನು ಕಾಣಬಹುದು. ಸೂರ್ಯನ ಹುಟ್ಟು ಮಾಘಮಾಸದ ಸಪ್ತಮಿಗೆ (ರಥಸಪ್ತಮಿಯಂದು). ಈ ಮಾಘಮಾಸದ ವ್ರತ ಉದ್ಯಾಪನೆ ಮಾಘಪೂರ್ಣಿಮೆಯಂದು (ಸಾಧ್ಯವಿದ್ದಲ್ಲಿ) ಸಮುದ್ರ ಸ್ನಾನ ಮಾಡುವ ಮೂಲಕ ಸಮಾಪ್ತಿಗೊಳಿಸಿದರೆ ಉತ್ತಮ.

ಇದನ್ನೂ ಓದಿ: Spiritual: ಸಫಲತೆ ಎನ್ನುವುದು ಸಮಯಪ್ರಜ್ಞೆ ಮತ್ತು ಭಗವತ್ಸಂಕಲ್ಪ ಆಧಾರದ ಮೇಲೆ ಇರುತ್ತದೆ

ಹುಣ್ಣಿಮೆಯ ಮುಂಚಿನ ದಿನ ಉಪವಾಸ ಅಥವಾ ಫಲಾಹಾರವನ್ನು ಸೇವಿಸಿ ವ್ರತನಿಷ್ಠನಾಗಿ ಹುಣ್ಣಿಮೆಯ ದಿನ ಬೇಗನೆ ಎದ್ದು ಸ್ನಾನಾದಿಗಳನ್ನು ಪೂರೈಸಿ .

ಸವಿತಃ ಪ್ರಸವಃ ತ್ವಂ ಹಿ ಪರಂಧಾಮ ಜಲೇ ಮಮ |

ತ್ವತ್ತೇಜಸಾ ಪರಿಭ್ರಷ್ಟಂ ಪಾಪಂ ಯಾಂತು ಸಹಸ್ರಧಾ ||

ಈ ಮಂತ್ರವನ್ನು ಹೇಳುತ್ತಾ ಸೂರ್ಯೋದಯವಾಗುತ್ತಿರುವಾಗ ಅವನಿಗೆ ಅಭಿಮುಖವಾಗಿ ಅರ್ಘ್ಯೆಯನ್ನು ಕೊಡಬೇಕು. ಹಾಗೆಯೇ ಉತ್ತಮ ಕುಲದ ದಂಪತಿಗಳನ್ನು ಆಹ್ವಾನಿಸಿ ಅವರಿಗೆ ವಾಯನದಾನ ಮಾಡಿದರೆ ಪುತ್ರಸಂತಾನದ ಯೋಗ ಪ್ರಾಪ್ತವಾಗುವುದು. ಈ ದಿನದಂದು 108 ಸೂರ್ಯನಮಸ್ಕಾರ ಮಾಡಿದರೆ ಅತ್ಯುತ್ತಮ. ಎಳ್ಳು ಬೆಲ್ಲಗಳಿಂದ ಮೂವತ್ತು ಮೋದಕಗಳನ್ನು ಮಾಡಿ ಅದನ್ನು ಶ್ರದ್ಧೆಯಿಂದ ಹಂಚಿದರೆ ಕಂಕಣ ಬಲ ಕೂಡಿಬರುತ್ತದೆ.

ಈ ಮಾಘಪೂರ್ಣಿಮೆಯಂದಿನ ದೇವತಾರಾಧನೆ ಅತ್ಯಂತ ಶೀಘ್ರಫಲದಾಯಕ. ಅದರಲ್ಲೂ ಈ ದಿನ ವಿಶೇಷವಾಗಿ ಸೂರ್ಯಾರಾಧನೆಗೆ ಮಹತ್ವ ನೀಡಿದ್ದಾರೆ ಶಾಸ್ತ್ರಜ್ಞರು. ಆರೋಗ್ಯ, ಪುಂ ಸತಾನ ಇತ್ಯಾದಿ ಅಪೇಕ್ಷಿತರು ಈ ವ್ರತವನ್ನು ಮಾಡಬಹುದು. ಈ ದಿನದಂದು ನೀಡುವ ಅತೀ ಸಣ್ಣ ದಾನಕ್ಕೂ ಮಹತ್ತರ ಫಲವಿದೆ. ಈ ಸಲದ ಮಾಘಪೂರ್ಣಿಮೆ 5/02/2023ರ ರಂದು. ಯಾವುದೇ ಕಾರ್ಯವಾದರೂ ಶ್ರದ್ಧೆಯಿಂದ ಭಗವತ್ಪ್ರೇಮವುಳ್ಳರಾಗಿ ಮಾಡಿ ಫಲವೆಂಬುದು ನಿಶ್ಚಿತ.

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು