
ಕೇರಳ: ಶಬರಿಮಲೆ ಬೆಟ್ಟಗಳಲ್ಲಿ ಈಗ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಮಂತ್ರಘೋಷ ಪ್ರತಿಧ್ವನಿಸುತ್ತಿದೆ. ವಾರ್ಷಿಕ ಅಯ್ಯಪ್ಪ ಮಂಡಲ ಯಾತ್ರೆಯ ಋತುವು ಇಂದು ಬೆಳಗಿನ ಜಾವ 3 ಗಂಟೆಗೆ ಗರ್ಭಗುಡಿ ತೆರೆಯುವುದರೊಂದಿಗೆ ಔಪಚಾರಿಕವಾಗಿ ಪ್ರಾರಂಭವಾಗಿದೆ. ಯಾತ್ರೆಯ ಮೊದಲ ದಿನವೇ ಸನ್ನಿಧಾನಕ್ಕೆ ಲಕ್ಷಾಂತರ ಭಕ್ತರು ಹರಿದುಬಂದಿದ್ದು, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಬರೋಬ್ಬರಿ 8 ರಿಂದ 10 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ದೇವಾಲಯದ ಆಡಳಿತ ಮಂಡಳಿಯು ದರ್ಶನಕ್ಕಾಗಿ ಕಟ್ಟುನಿಟ್ಟಿನ ಮಿತಿಗಳನ್ನು ನಿಗದಿಪಡಿಸಿದ್ದರೂ ಸಹ ಜನಸಂದಣಿಯನ್ನು ನಿಯಂತ್ರಿಸುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಪ್ರತಿದಿನ 70 ಸಾವಿರ ಭಕ್ತರಿಗೆ ಆನ್‌ಲೈನ್ ವರ್ಚುವಲ್ ಕ್ಯೂ ಮೂಲಕ ಹಾಗೂ 20 ಸಾವಿರ ಭಕ್ತರಿಗೆ ಸ್ಥಳದಲ್ಲೇ ಸ್ಪಾಟ್ ಬುಕಿಂಗ್ ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮುಂಗಡ ಟಿಕೆಟ್ ಬುಕ್ ಮಾಡಿದ ಭಕ್ತರೊಂದಿಗೆ, ಯಾವುದೇ ಬುಕಿಂಗ್ ಇಲ್ಲದೆಯೂ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಏಕಾಏಕಿ ಆಗಮಿಸಿರುವುದರಿಂದ ಸರತಿ ಸಾಲು ಕಿಲೋಮೀಟರ್‌ಗಟ್ಟಲೆ ವಿಸ್ತರಿಸಿದೆ.
ಭಾರಿ ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ನೀಲಕ್ಕಲ್ ಬಳಿ ಖಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಯಾತ್ರಾರ್ಥಿಗಳ ಸುಗಮ ಸಂಚಾರಕ್ಕಾಗಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪಂಬಾ ಮತ್ತು ನೀಲಕ್ಕಲ್ ನಡುವೆ ನಿರಂತರವಾಗಿ ವಿಶೇಷ ಬಸ್‌ಗಳನ್ನು ಓಡಿಸುತ್ತಿದೆ.
ಇದನ್ನೂ ಓದಿ: ಬ್ರಿಟಿಷ್ ಸಂಸತ್ತಿನಲ್ಲಿ ಮೊದಲ ಬಾರಿ ಹನುಮಾನ್ ಚಾಲೀಸಾ ಪಠಣ; ವಿಡಿಯೋ ವೈರಲ್!
ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಕೇರಳ ಪೊಲೀಸ್ ಇಲಾಖೆ ಜಂಟಿಯಾಗಿ ಕಟ್ಟುನಿಟ್ಟಿನ ವ್ಯವಸ್ಥೆಗಳನ್ನು ಮಾಡಿವೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರ ದಣಿವಾರಿಸಲು ಸರತಿ ಸಾಲು ಸಂಕೀರ್ಣಗಳಲ್ಲಿ (Queue Complexes) ಶುದ್ಧ ಕುಡಿಯುವ ನೀರು ಮತ್ತು ಲಘು ಆಹಾರದ ಸೌಲಭ್ಯಗಳನ್ನು ಒದಗಿಸಲಾಗಿದೆ.
ಯಾತ್ರಾ ಋತುವಿನ ಪ್ರಮುಖ ಘಟ್ಟವಾದ ಮಂಡಲ ಪೂಜೆಯು ಡಿಸೆಂಬರ್ 27 ರಂದು ನಡೆಯಲಿದ್ದು, ಅಂದು ರಾತ್ರಿ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಬಳಿಕ ಮಕರ ವಿಲಕ್ಕು ಯಾತ್ರೆಗಾಗಿ ಡಿಸೆಂಬರ್ 30 ರಂದು ಮತ್ತೆ ದೇಗುಲವನ್ನು ತೆರೆಯಲಾಗುವುದು. ಜನವರಿ 14 ರಂದು ಮಕರ ವಿಲಕ್ಕು ಉತ್ಸವ ನಡೆಯಲಿದ್ದು, ಜನವರಿ 30 ರಂದು ಪ್ರಸಕ್ತ ಸಾಲಿನ ಯಾತ್ರಾ ಋತು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ದೇವಾಲಯವನ್ನು ಮತ್ತೆ ಮುಚ್ಚಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ