Shivaratri Special: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ವೈಭವ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 01, 2022 | 12:38 PM

Shivaratri Special: ಖರಾಸುರ ಎಂಬ ದಾನವನು ಎಡಗೈಯಲ್ಲೊಂದು, ಬಲಗೈಲ್ಲೊಂದು, ಬಾಯಿಯಲ್ಲೊಂದು ಹೀಗೆ ಮೂರು ಶಿವಲಿಂಗಗಳನ್ನು ಹಿಡಿದಿರುತ್ತಾನೆ. ಏಕಕಾಲದಲ್ಲಿ ಎಡಗೈಯಲ್ಲಿದ್ದುದನ್ನು ಆಲಂಕೂಡ್ಲು ಎಂಬಲ್ಲಿಯೂ ಬಲಗೈಯಲ್ಲಿದ್ದುದನ್ನು ನೆಟ್ಟಣಿಗೆ ಎಂಬಲ್ಲಿಯೂ ಬಾಯಿಯಲ್ಲಿದ್ದುದನ್ನು ಬಜಕೂಡ್ಲುವಿನಲ್ಲಿಯೂ ಪ್ರತಿಷ್ಠಾಪನೆ ಮಾಡಿ.

Shivaratri Special: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ವೈಭವ
ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯ
Follow us on

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ಪೆರ್ಲ ಸಮೀಪದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯವು ಸುತ್ತಲೂ ಹಸಿರು ವನಸಿರಿಯಿಂದ ಮನಮೋಹಕ ನೋಟವನ್ನು ಹೊಂದಿದೆ. ಭಕ್ತರನ್ನು ನೋಟದಲ್ಲೇ ಸೂರೆಗೊಳಿಸುವ ಈ ದೇವಾಲಯವು ಪ್ರಸಿದ್ಧ ಇತಿಹಾಸವನ್ನು ಹೊಂದಿದೆ. ಖರಾಸುರ ಎಂಬ ದಾನವನು ಎಡಗೈಯಲ್ಲೊಂದು, ಬಲಗೈಲ್ಲೊಂದು, ಬಾಯಿಯಲ್ಲೊಂದು ಹೀಗೆ ಮೂರು ಶಿವಲಿಂಗಗಳನ್ನು ಹಿಡಿದಿರುತ್ತಾನೆ. ಏಕಕಾಲದಲ್ಲಿ ಎಡಗೈಯಲ್ಲಿದ್ದುದನ್ನು ಆಲಂಕೂಡ್ಲು ಎಂಬಲ್ಲಿಯೂ ಬಲಗೈಯಲ್ಲಿದ್ದುದನ್ನು ನೆಟ್ಟಣಿಗೆ ಎಂಬಲ್ಲಿಯೂ ಬಾಯಿಯಲ್ಲಿದ್ದುದನ್ನು ಬಜಕೂಡ್ಲುವಿನಲ್ಲಿಯೂ ಪ್ರತಿಷ್ಠಾಪನೆ ಮಾಡಿದನೆಂದು, ದೇವಾಲಯದ ಹಿನ್ನಲೆಯನ್ನು ಊರ ಹಿರಿಯರು ತಿಳಿಸುತ್ತಾರೆ.

ಈ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಬರುವ ಶುದ್ಧ ದ್ವಾದಶಿಯ ದಿನ ಧ್ವಜಾರೋಹಣದಿಂದ ಆರಂಭಿಸಿ ಬಲಿ, ಬೆಡಿ, ರಥೋತ್ಸವ, ಆಯನ, ಆರಾಟು, ದೈವದ ನೇಮೋತ್ಸವ ಮುಂತಾದ ಸಕಲ ವೈಭವಗಳೊಂದಿಗೆ ಜಾತ್ರೆಯು ನಡೆಯುತ್ತಿದೆ. ಕಾಸರಗೋಡಿನ ಕೆಲವು ದೇವಸ್ಥಾನಗಳಲ್ಲಿ ಮಾತ್ರ ಜಾತ್ರೆಯ ಸಮಯದಲ್ಲಿ ರಥೋತ್ಸವವಿರುತ್ತದೆ. ಅಂತಹ ಕೆಲವೇ ಕೆಲವು ದೇವಾಲಯಗಳಲ್ಲಿ ಬಜಕೂಡ್ಲು ಸಹ ಒಂದು!

ಪ್ರತಿ ಸೋಮವಾರವೂ ದೇವರಿಗೆ ಸೋಮವಾರ ವಿಶೇಷ ಪೂಜೆ, ಹಾಗೆಯೇ ಪ್ರದೋಷ ಪೂಜೆ, ಧನುಪೂಜೆ, ಕಾರ್ತಿಕ ಮಾಸದಲ್ಲಿ ಪ್ರತಿದಿನವೂ ವೈಭವದ ಪೂಜೆ, ಆಶ್ವೀಜ ಬಹುಳ ಅಮಾವಾಸ್ಯೆಯಂದು ಬಲೀಂದ್ರಪೂಜೆ ಹಾಗೂ ಮಹಾಶಿವರಾತ್ರಿ ದಿನದಂದು ದೇವರಿಗೆ ವಿಶೇಷ ಪೂಜೆ ಮತ್ತು ಅಖಂಡ ಭಜನೆಯು ನಡೆಯುತ್ತದೆ. ಎರಡು ಶನಿವಾರಕ್ಕೊಮ್ಮೆ ಹರಕೆಯ ರೂಪದಲ್ಲಿ ಶನಿಪೂಜೆಯು ನಡೆಯುತ್ತದೆ. ದಿನಂಪ್ರತಿ ಮೂರು ಹೊತ್ತು ಪೂಜೆ ಹಾಗೂ ಮಧ್ಯಾಹ್ನ ಬಲಿವಾಡು ಸೇವೆಯು ನಿರಂತರವಾಗಿ ನಡೆಯುತ್ತಿದೆ.

ದೇವಾಲಯದ ಈಶಾನ್ಯ ಭಾಗದಲ್ಲಿ ವನದ ಅಧಿದೇವತೆಯಾದ ವನಶಾಸ್ತಾರನು ಪ್ರತಿಷ್ಠಾಪಿತನಾಗಿದ್ದಾನೆ. ಆತನಿಗೆ ಪೂಜೆಯು ಸಲ್ಲುತ್ತಿದೆ. ಶಿವನ ಸಾನಿಧ್ಯವೆಂಬ ಕಾರಣಕ್ಕೆ ಇಲ್ಲಿ ಹಲವಾರು ಮದುವೆಗಳು ನಡೆದಿದೆ ಹಾಗೂ ನಡೆಯುತ್ತಲಿದೆ. ಅಯ್ಯಪ್ಪಭಕ್ತರು ದೇವಾಲಯದಲ್ಲಿ ಮಾಲಾಧಾರಿಗಳಾಗಿ ವತ್ರಗೈದು, ಇಲ್ಲಿಂದ ಶಬರಿಮಲೆಗೆ ತೆರಳುತ್ತಾರೆ. ಇದು ಸುಮಾರು ನಲವತ್ತು ವರ್ಷಗಳಿಂದ ನಡೆಯುತ್ತಾ ಬಂದಿದೆ ಎಂದು ದೇವಾಲಯದ ಅರ್ಚಕ ವಿಷ್ಣು ನಾವಡ ಹೇಳುತ್ತಾರೆ.

ಸುತ್ತಲೂ ದಟ್ಟವಾದ ವಿಶಾಲ ವೃಕ್ಷಗಳಿಂದ ಆವೃತವಾದ ಕಾಡಿನಂತಿರುವ ಈ ಕಾನನದಲ್ಲಿ ತಂಪಾದ ತಿಳಿನೀರು ಸರ್ವಋತುಗಳಲ್ಲಿಯೂ ಹರಿಯುತ್ತಲೇ ಇರುತ್ತದೆ. ದೇವಾಲಯದಲ್ಲಿರುವ ಮಹಾಲಿಂಗೇಶ್ವರನಿಗೆ ಇಲ್ಲಿಂದಲೇ ಅಭಿಷೇಕಕ್ಕೆ ಹಾಗೂ ನೈವೇದ್ಯಕ್ಕೆ ನೀರು ತೆಗೆದುಕೊಂಡು ಹೋಗಬೇಕೆಂಬ ಪ್ರತೀತಿ ಇದೆ. ಬೇರಾವ ನದಿ, ಕೆರೆ, ಬಾವಿ ಮೂಲದಿಂದ ಕೊಂಡೊಯ್ದ ನೀರನ್ನು ದೇವರ ಕಾರ್ಯಕ್ಕೆ ಬಳಸಿದರೆ ಆ ನೀರಿನ ಮೂಲವು ಕೊಳೆತು, ಕ್ರಿಮಿಕೀಟಗಳು ತುಂಬಿ ಕಲ್ಮಷವಾಗುತ್ತದೆ ಎಂದು ಪ್ರತ್ಯಕ್ಷ ಅನುಭವಿಗಳು ಹೇಳುತ್ತಾರೆ.

ಇಂತಹ ಪ್ರಾಚೀನ ದೇವಾಲಯವು ಬಹುದೂರದವರೆಗೂ ಕಾರಣೀಕತೆಯನ್ನು ಹೊಂದಿದೆ. ಪುತ್ರಸಂತಾನ ಹಾಗೂ ಇನ್ನಿತರ ಸಮಸ್ಯೆಗಳಿಗೆ ಹರಕೆಯನ್ನು ಹೇಳಿ ಫಲವನ್ನು ಪಡೆದವರು ಅನೇಕ ಮಂದಿ‌. ಅವರು ನೀಡಿದ ಕಾಣಿಕೆಯಾದ ಬೇರೆ ಬೇರೆ ಪ್ರಾಣಿಗಳ ಮತ್ತು ಮನುಷ್ಯರ ಅಂಗಾಂಗಗಳ ಬೆಳ್ಳಿಯ ಹಾಗೂ ಮಣ್ಣಿನ ಪ್ರತಿಮೆಗಳನ್ನು ಕಾಣಬಹುದು. ದೇವಾಲಯದ ಭಜನಾ ತಂಡವಾದ “ಮಹಾಲಿಂಗೇಶ್ವರ ಭಜನಾ ತಂಡ”ವು ಸುತ್ತಮುತ್ತಲಿನಲ್ಲಿ ಭಜನೆಗೆ ಪ್ರಸಿದ್ಧಿಯನ್ನು ಹೊಂದಿದೆ. ” ಮಹಾಲಿಂಗೇಶ್ವರ ಕ್ರೀಡಾ ಮತ್ತು ಸಾಂಸ್ಕೃತಿಕ ತಂಡ” ಎಂಬ ಸಂಘ ರೂಪಿತವಾಗಿ, ಸಕ್ರಿಯವಾಗಿದೆ.

ಈ ದೇವಾಲಯ ರಚನೆಗೊಂಡ ಕಾಲ, ವ್ಯಕ್ತಿ ಇವು ಯಾವುದರ ಕುರಿತೂ ನಿಖರವಾದ ಮಾಹಿತಿಗಳು ದೊರೆತಿಲ್ಲ. ಪ್ರಸ್ತುತ ಈ ದೇವಸ್ಥಾನದ ಆಡಳಿತ ಕಾಸರಗೋಡು ತಾಲೂಕಿನ ಕೂಡ್ಲು ಮನೆತನಕ್ಕೆ ಸೇರಿದ್ದಾಗಿದೆ. ನೀವು ದೇವಾಲಯಕ್ಕೆ ಮಂಗಳೂರಿನಿಂದ ಬರುವವರಾಗಿದ್ದರೆ ಕಲ್ಲಡ್ಕವನ್ನು ದಾಟಿ,ವಿಟ್ಲದ ಮೂಲಕ ಪೆರ್ಲವನ್ನು ತಲುಪಬೇಕು. ಪೆರ್ಲದಿಂದ ಸುಮಾರು ಒಂದೂವರೆ ಕಿಲೊಮೀಟರ್ ದೂರದಲ್ಲಿ ಬಜಕೂಡ್ಲು ದೇವಾಲಯವಿದೆ.ಕಾಸರಗೋಡಿನಿಂದ ಬರುವವರಾಗಿದ್ದರೆ ಚೆರ್ಕಳವನ್ನು ದಾಟಿ ಬದಿಯಡ್ಕದ ಮೂಲಕ ಪೆರ್ಲಕ್ಕೆ ಬಂದು ಬಜಕೂಡ್ಲು ದೇವರ ಸನ್ನಿಧಿಗೆ ತೆರಳಬಹುದು.

ಪಂಚಮಿ ಬಾಕಿಲಪದವು

ಅಂಬಿಕಾ ಮಹಾವಿದ್ಯಾಲಯ

Published On - 12:37 pm, Tue, 1 March 22