
ಪತಿ-ಪತ್ನಿಯರ ಸಂಬಂಧವನ್ನು ಅತ್ಯಂತ ಪವಿತ್ರ ಮತ್ತು ಪ್ರಮುಖವಾದುದು ಎಂದು ಪರಿಗಣಿಸಲಾಗುತ್ತದೆ. ಈ ದಾಂಪತ್ಯ ಜೀವನದಲ್ಲಿ ಸದಾ ಪ್ರೀತಿ ಮತ್ತು ಸಾಮರಸ್ಯ ನೆಲೆಸಬೇಕಾದರೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ (Positive energy) ಇರುವುದು ಅತ್ಯಂತ ಅವಶ್ಯಕ. ಆದರೆ, ಹಲವು ಬಾರಿ ಎಷ್ಟೇ ಪ್ರಯತ್ನಿಸಿದರೂ ಯಾವುದೇ ಕಾರಣವಿಲ್ಲದೆ ಪತಿ-ಪತ್ನಿಯರ ನಡುವೆ ಅನಗತ್ಯ ಜಗಳ ಮತ್ತು ಮುನಿಸು ಉಂಟಾಗುತ್ತದೆ. ಇಂತಹ ಸನ್ನಿವೇಶಗಳ ಹಿಂದೆ ಬೆಡ್‌ರೂಮ್‌ನ (ಮಲಗುವ ಕೋಣೆ) ವಾಸ್ತು ದೋಷ ಪ್ರಮುಖ ಕಾರಣವಾಗಿರಬಹುದು.
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ದೋಷಗಳಿದ್ದರೆ ಪತಿ-ಪತ್ನಿಯರ ನಡುವೆ ಅಂತರ ಹೆಚ್ಚಾಗತೊಡಗುತ್ತದೆ. ಒಂದು ವೇಳೆ ನೀವು ಕೂಡ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಿಮ್ಮ ಬೆಡ್‌ರೂಮ್‌ನಲ್ಲಿ ಈ ಕೆಳಗಿನ ವಾಸ್ತು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ದಾಂಪತ್ಯವನ್ನು ಮಧುರವಾಗಿಸಿಕೊಳ್ಳಬಹುದು.
ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಮಲಗುವ ಕೋಣೆಗೆ ದಕ್ಷಿಣ-ಪಶ್ಚಿಮ (ನೈಋತ್ಯ) ದಿಕ್ಕನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಬೆಡ್‌ರೂಮ್ ಇರುವುದರಿಂದ ದಂಪತಿಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಇದರೊಂದಿಗೆ, ಮಲಗುವಾಗ ನಿಮ್ಮ ತಲೆ ಯಾವಾಗಲೂ ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ. ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗಿ ನೆಮ್ಮದಿ ಸಿಗುತ್ತದೆ. ಇನ್ನು ನೀವು ಬಳಸುವ ಮಂಚವು (ಬೆಡ್) ಯಾವಾಗಲೂ ಆಯತಾಕಾರದಲ್ಲಿರಬೇಕೇ ವಿನಃ ಅಡ್ಡಾದಿಡ್ಡಿ ಆಕಾರದಲ್ಲಿರಬಾರದು.
ಬೆಡ್‌ರೂಮ್‌ನ ಗೋಡೆಗಳಿಗೆ ಹಚ್ಚುವ ಬಣ್ಣಗಳು ನಮ್ಮ ಮನಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯ ಗೋಡೆಗಳಿಗೆ ಯಾವಾಗಲೂ ತಿಳಿ ಗುಲಾಬಿ (Light Pink) ಅಥವಾ ಪೀಚ್ (Peach) ಬಣ್ಣಗಳನ್ನು ಬಳಸುವುದು ಉತ್ತಮ. ಇಂತಹ ತಿಳಿ ಬಣ್ಣಗಳು ದಂಪತಿಗಳ ನಡುವೆ ಪ್ರೀತಿ ಮತ್ತು ಮನಸ್ಸಿಗೆ ಶಾಂತಿಯನ್ನು ವೃದ್ಧಿಸಲು ಸಹಾಯ ಮಾಡುತ್ತವೆ. ಗಾಢವಾದ ಅಥವಾ ಕತ್ತಲೆಯ ಅನುಭವ ನೀಡುವ ಬಣ್ಣಗಳನ್ನು ಬೆಡ್‌ರೂಮ್‌ನಲ್ಲಿ ಬಳಸಬೇಡಿ.
ಅನೇಕರು ತಮಗರಿವಿಲ್ಲದೇ ಮಾಡುವ ದೊಡ್ಡ ವಾಸ್ತು ತಪ್ಪು ಎಂದರೆ ಬೆಡ್‌ರೂಮ್‌ನಲ್ಲಿ ಕನ್ನಡಿ (Glass) ಇಡುವ ಜಾಗ. ಮಲಗುವ ಕೋಣೆಯಲ್ಲಿ ಮಂಚದ ನೇರ ಎದುರುಗಡೆ ಅಂದರೆ ನೀವು ಮಲಗಿದ್ದಾಗ ನಿಮ್ಮ ಪ್ರತಿಬಿಂಬ ಕಾಣಿಸುವಂತೆ ಎಂದಿಗೂ ಕನ್ನಡಿಯನ್ನು ಅಳವಡಿಸಬಾರದು. ಈ ರೀತಿಯ ತಪ್ಪು ವಾಸ್ತು ಸ್ಥಿತಿಯಿಂದಾಗಿ ದಂಪತಿಗಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಮತ್ತು ಪರಸ್ಪರ ಅಪನಂಬಿಕೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ
ದಾಂಪತ್ಯ ಜೀವನದಲ್ಲಿ ಸಂತೋಷ ಮೂಡಲು ಬೆಡ್‌ರೂಮ್‌ನಲ್ಲಿ ಲವ್‌ಬರ್ಡ್ಸ್ (Lovebirds) ಅಥವಾ ಹಂಸಗಳ ಜೋಡಿಯ ಸುಂದರವಾದ ಚಿತ್ರಗಳನ್ನು ಹಾಕಬೇಕು. ಇದು ವೈವಾಹಿಕ ಜೀವನದಲ್ಲಿ ಸಂತಸವನ್ನು ತರುತ್ತದೆ. ಇದರೊಂದಿಗೆ, ದಂಪತಿಗಳು ತಮ್ಮದೇ ಆದ ನಗುತ್ತಿರುವ ಸುಂದರ ಭಾವಚಿತ್ರವನ್ನು (Couple photo) ಕೋಣೆಯ ದಕ್ಷಿಣ-ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ ಹಾಕಬಹುದು. ಆದರೆ ನೆನಪಿರಲಿ, ಬೆಡ್‌ರೂಮ್‌ನಲ್ಲಿ ಯುದ್ಧದ ದೃಶ್ಯಗಳು, ಉಗ್ರ ಪ್ರಾಣಿಗಳು ಅಥವಾ ಒಂಟಿತನ ಹಾಗೂ ಉದಾಸೀನತೆ ಬಿಂಬಿಸುವ ಚಿತ್ರಗಳನ್ನು ಯಾವುದೇ ಕಾರಣಕ್ಕೂ ಹಾಕಬಾರದು.
ನಿಮ್ಮ ಮಲಗುವ ಕೋಣೆಯಲ್ಲಿ ಕಸ-ಕಡ್ಡಿ, ಅನಗತ್ಯ ವಸ್ತುಗಳು ಅಥವಾ ಕೆಟ್ಟುಹೋದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಎಂದಿಗೂ ಇಡಬೇಡಿ. ಬೆಡ್‌ರೂಮ್‌ನಲ್ಲಿ ಇಂತಹ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿಡುವುದರಿಂದ ಅಲ್ಲಿ ನಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಇದು ಪತಿ-ಪತ್ನಿಯರ ನಡುವೆ ಸಣ್ಣ ವಿಷಯಗಳಿಗೂ ದೊಡ್ಡ ಮಟ್ಟದ ಜಗಳಗಳು ಮತ್ತು ಅಸಮಾಧಾನಗಳು ಸೃಷ್ಟಿಯಾಗಲು ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ಕೋಣೆಯನ್ನು ಸದಾ ಸ್ವಚ್ಛವಾಗಿಡಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ