ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದೆ? ಇಲ್ಲಿದೆ ವಿದ್ವಾಂಸರ ಅಭಿಪ್ರಾಯ

|

Updated on: Jul 05, 2024 | 11:52 AM

ಆಷಾಢ ಮಾಸದ ಮಧ್ಯದಿಂದಲೇ ದಕ್ಷಿಣಾಯನದ ಆರಂಭವಾಗುತ್ತದೆ. ದಕ್ಷಿಣಾಯನದಲ್ಲಿ ಮದುವೆ ಮೊದಲಾದ ಶುಭ ಕಾರ್ಯಗಳನ್ನು ಮಾಡುವುದು ಗೌಣ. ಉತ್ತರಾಯಣದಲ್ಲಿ ಶುಭ ಕಾರ್ಯಗಳಿಗೆ ಪ್ರಾಶಸ್ತ್ಯ. ಶೇಷಾಚಾರ್ ಅವರು ಹಾಗೇ ಮಾತು ಮುಂದುವರಿಸಿ, ಯಾವುದೇ ಶುಭ ಕಾರ್ಯಗಳಿಗೆ ನಿಷಿದ್ಧ ಹಾಗೂ ಗೌಣ ಹೀಗೆ ಎರಡು ಬಗೆಯಲ್ಲಿ ಹೇಳಬಹುದು. ನಿಷಿದ್ಧ ಅಂದರೆ ಮಾಡಲೇಬಾರದು, ಗೌಣ ಅಂದರೆ ಇರುವುದರಲ್ಲಿಯೇ ಉತ್ತಮವಾದ ದಿನವನ್ನು ಆರಿಸಿಕೊಂಡು, ಕಾರ್ಯಕ್ರಮಗಳನ್ನು ಮಾಡಬಹುದು. ಇನ್ನೇನು ಚಾತುರ್ಮಾಸ್ಯ ಆರಂಭವಾಗುತ್ತದೆ. ಈ ಸಮಯದಲ್ಲಿ ಪರಮಾತ್ಮ ನಿದ್ರೆಯಲ್ಲಿರುತ್ತಾನೆ.

ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದೆ? ಇಲ್ಲಿದೆ ವಿದ್ವಾಂಸರ ಅಭಿಪ್ರಾಯ
ಸಾಂದರ್ಭಿಕ ಚಿತ್ರ
Follow us on

ಇದೇ ಜುಲೈ ಆರನೇ ತಾರೀಕಿನಿಂದ ಆಷಾಢ ಮಾಸದ ಶುರುವಾಗುತ್ತದೆ. ಬಹುತೇಕ ಜನರಲ್ಲಿ ಸಾಮಾನ್ಯ ಅಭಿಪ್ರಾಯ ಏನೆಂದರೆ, ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು ಅಂತಿದೆ. ಆದರೆ ಈ ವಿಚಾರದಲ್ಲಿ ಅಭಿಪ್ರಾಯ ಭೇದವಿದೆ. ಆಷಾಢದಲ್ಲಿ ರವಿ ಮಿಥುನ ಹಾಗೂ ಕರ್ಕಾಟಕ ರಾಶಿಯಲ್ಲಿ ಸಂಚಾರ ಆಗುತ್ತದೆ. ಇದರಲ್ಲಿ ರವಿ ಗ್ರಹವು ಮಿಥುನದಲ್ಲಿ ಸಂಚರಿಸುವಾಗ ಶುಭ ಕಾರ್ಯಗಳನ್ನು ಮಾಡಬಹುದು ಎಂದು ಉತ್ತರಾದಿ ಮಠದ ಶೇಷಾಚಾರ್ ಎಂಬ ಪಂಡಿತರು ಟಿವಿ9 ಕನ್ನಡ ವೆಬ್ ಸೈಟ್ ಜೊತೆಗೆ ಮಾಹಿತಿ ಹಂಚಿಕೊಂಡರು. ಅಂದರೆ ಆಷಾಢ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ದಶಮಿ ತನಕ ಶುಭ ಕಾರ್ಯಗಳನ್ನು ಮಾಡಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಇನ್ನು ಆಷಾಢ ಮಾಸದ ಮಧ್ಯದಿಂದಲೇ ದಕ್ಷಿಣಾಯನದ ಆರಂಭವಾಗುತ್ತದೆ. ದಕ್ಷಿಣಾಯನದಲ್ಲಿ ಮದುವೆ ಮೊದಲಾದ ಶುಭ ಕಾರ್ಯಗಳನ್ನು ಮಾಡುವುದು ಗೌಣ. ಉತ್ತರಾಯಣದಲ್ಲಿ ಶುಭ ಕಾರ್ಯಗಳಿಗೆ ಪ್ರಾಶಸ್ತ್ಯ. ಶೇಷಾಚಾರ್ ಅವರು ಹಾಗೇ ಮಾತು ಮುಂದುವರಿಸಿ, ಯಾವುದೇ ಶುಭ ಕಾರ್ಯಗಳಿಗೆ ನಿಷಿದ್ಧ ಹಾಗೂ ಗೌಣ ಹೀಗೆ ಎರಡು ಬಗೆಯಲ್ಲಿ ಹೇಳಬಹುದು. ನಿಷಿದ್ಧ ಅಂದರೆ ಮಾಡಲೇಬಾರದು, ಗೌಣ ಅಂದರೆ ಇರುವುದರಲ್ಲಿಯೇ ಉತ್ತಮವಾದ ದಿನವನ್ನು ಆರಿಸಿಕೊಂಡು, ಕಾರ್ಯಕ್ರಮಗಳನ್ನು ಮಾಡಬಹುದು. ಇನ್ನೇನು ಚಾತುರ್ಮಾಸ್ಯ ಆರಂಭವಾಗುತ್ತದೆ. ಈ ಸಮಯದಲ್ಲಿ ಪರಮಾತ್ಮ ನಿದ್ರೆಯಲ್ಲಿರುತ್ತಾನೆ. ನಮ್ಮಂಥ ಸಾಮಾನ್ಯರ ತಿಳಿವಳಿಕೆಗೆ ಅರ್ಥವಾಗಲಿ ಎಂಬ ಕಾರಣಕ್ಕೆ ಹೀಗೆ ಹೇಳಲಾಗುತ್ತದೆ. ಪರಮಾತ್ಮನು ನಿದ್ರೆಯಲ್ಲಿ ಇರುವಾಗ- ಚಾತುರ್ಮಾಸ್ಯ ಪರ್ಯಂತ ಕೆಲವರು ಶುಭ ಕಾರ್ಯ ಬೇಡ ಅಂದುಕೊಳ್ಳುವುದುಂಟು.

ಉತ್ತಾನ ದ್ವಾದಶಿ (ತುಳಸಿ ಹಬ್ಬ) ತನಕ ಚಾತುರ್ಮಾಸ್ಯ ಇರುತ್ತದೆ. ಆ ಕಾರಣಕ್ಕಾಗಿ ಕಾರ್ತೀಕ ಮಾಸದಲ್ಲಿ ಶುಭ ಕಾರ್ಯಗಳು ಹೆಚ್ಚಾಗಿ ಮಾಡುತ್ತಾರೆ. ಅದಾದ ಮೇಲೆ ಮತ್ತೆ ಧನುರ್ಮಾಸದಲ್ಲಿ ಇರುವುದಿಲ್ಲ. ಜನವರಿ ಹದಿನಾಲ್ಕು ಅಥವಾ ಹದಿನೈದರ ನಂತರ (ಉತ್ತರಾಯಣದಲ್ಲಿ) ಮತ್ತೆ ಶುಭ ಕಾರ್ಯಗಳ ಮುಹೂರ್ತ ಶುರುವಾಗುತ್ತದೆ. ಆದರೆ ಪಿತೃ ಪಕ್ಷ ನಡೆಯುವಾಗ ಕಡ್ಡಾಯವಾಗಿ ಯಾವುದೇ ಶುಭ- ವೃದ್ಧಿ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಅವರು ಹೇಳಿದರು.

ಅತ್ತೆ-ಸೊಸೆ ಒಂದು ಮನೆಯಲ್ಲಿ ಇರುವಂತಿಲ್ಲ:

ಈ ಸಂದರ್ಭಕ್ಕೆ ಅನ್ವಯ ಆಗುವಂಥ ಮತ್ತೂ ಒಂದು ವಿಚಾರವನ್ನು ಅವರು ಹೇಳಿದರು: ಆಷಾಢ ಮಾಸದಲ್ಲಿ ಅತ್ತೆ ಹಾಗೂ ಸೊಸೆ ಒಂದು ಮನೆಯಲ್ಲಿ ಇರುವಂತಿಲ್ಲ ಎಂಬ ಉಲ್ಲೇಖವಿದೆ. ಇದರಿಂದ ಅತ್ತೆಗೆ ಕೆಡುಕಾಗುತ್ತದೆ ಎಂಬ ನಂಬಿಕೆ. ಅದನ್ನು ಕೆಲವು ಕಡೆ ಗಂಡ- ಹೆಂಡತಿ ಒಟ್ಟಿಗಿರುವಂತಿಲ್ಲ ಅಂತಲೂ ಹೇಳಿಕೊಂಡು ಬಂದಿದ್ದಾರೆ. ಆದರೆ ನಿಜವಾಗಿಯೂ ಇರುವುದು ಏನೆಂದರೆ, ಅತ್ತೆ- ಸೊಸೆ ಒಂದೇ ಮನೆಯಲ್ಲಿ ಇರುವಂತಿಲ್ಲ. ಇದಕ್ಕೆ ಕೂಡ ಆಯಾ ಕಾಲಮಾನಕ್ಕೆ ತಕ್ಕಂತೆ ಬದಲಾವಣೆಗಳನ್ನು ಅನುಸರಿಸುವ ಜನರು ಮಾಡಿಕೊಂಡಿದ್ದಾರೆ. ಶಾಸ್ತ್ರಗಳು ಅಸುಸರಿಸುವುದು ಉತ್ತಮ. ಯಥಾಶಕ್ತಿಯಾದರೂ ಪಾಲನೆ ಮಾಡಬೇಕು ಎಂಬುದು ಶ್ರದ್ಧೆ- ನಂಬಿಕೆ. ಆದ್ದರಿಂದ ನಾವು ಶಾಸ್ತ್ರದಲ್ಲಿ ಉಲ್ಲೇಖವಾಗಿರುವುದು ಹೇಳುತ್ತೇವಷ್ಟೇ ಎಂದರು.

ಆದರೆ, ಇದು ಬಹಳ ಸ್ಥೂಲವಾದ ವಿವರಣೆ ಆಗುತ್ತದೆ. ಚಾಂದ್ರಮಾನ ಹಾಗೂ ಸೌರಮಾನ ಹೀಗೆ ಎರಡು ಪದ್ಧತಿಗಳಿವೆ. ಇವೆರಡರ ಯುಗಾದಿ ದಿನಗಳು ಪ್ರತ್ಯೇಕವಾಗಿಯೇ ಬರುತ್ತದೆ. ಚಾಂದ್ರಮಾನ ರೀತಿಯಾಗಿ ಆಷಾಢ ಶುರುವಾದಾಗ ಸೌರಮಾನದ ಪ್ರಕಾರ ಇನ್ನೂ ಆರಂಭ ಆಗಿರುವುದಿಲ್ಲ. ಚಾಂದ್ರಮಾನ ರೀತಿಯಾಗಿ ಆಷಾಢ ಮುಗಿದ ಮೇಲೂ ಕೆಲ ದಿನ ಸೌರಮಾನದಲ್ಲಿ ಆಷಾಢ ಇರುತ್ತದೆ. ಆದ್ದರಿಂದ ಈ ಬಗ್ಗೆ ಚಿಂತನೆ ಮಾಡುವಾಗ ಯಾವ ಕ್ರಮವನ್ನು ಅನುಸರಿಸುತ್ತಾರೆ, ಅಂದರೆ ಮನೆಯಲ್ಲಿ ನಡೆದುಬಂದಂಥ ಪದ್ಧತಿ ಯಾವುದು ಎಂಬುದು ತಿಳಿದಿರಬೇಕು.

ಗ್ರಹಗಳು ಅಸ್ತವಾಗಿದ್ದಾಗ ಶುಭ ಕಾರ್ಯಗಳು ನಿಷಿದ್ಧ:

ಇನ್ನು ಗ್ರಹ ಅಸ್ತವಾಗಿದ್ದಾಗ ಸಹ ಶುಭ ಕಾರ್ಯಗಳನ್ನು ಮಾಡುವುದಕ್ಕೆ ನಿಷಿದ್ಧವಿದೆ. ಗುರು ಹಾಗೂ ಶುಕ್ರ ಈ ಎರಡು ಗ್ರಹಗಳು ಅಸ್ತವಾಗಿದ್ದಾಗ ಯಾವುದೇ ಶುಭ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಕಳೆದ ಮೇ ತಿಂಗಳ ಎಂಟನೇ ತಾರೀಕಿನಿಂದ ಮೂವತ್ತನೇ ತಾರೀಕು ಗುರು ಗ್ರಹ ಅಸ್ತವಾಗಿತ್ತು. ಹಾಗೂ ಮೇ ತಿಂಗಳ ಹದಿನೈದನೇ ತಾರೀಕಿನಿಂದ ಜೂನ್ ಇಪ್ಪತ್ಮೂರನೇ ತಾರೀಕಿನ ತನಕ ಶುಕ್ರ ಗ್ರಹ ಅಸ್ತವಾಗಿತ್ತು. ಈ ಅವಧಿಯಲ್ಲಿ ಮದುವೆ, ಉಪನಯನ ಮೊದಲಾದ ಶುಭ ಕಾರ್ಯಗಳನ್ನು ಮಾಡುವಂತಿರಲಿಲ್ಲ. ಆದರೆ ಬದಲಾದ ಕಾಲದಲ್ಲಿ ಕೆಲವರು, ಅಸ್ತವಾದಂಥ ಆಯಾ ಗ್ರಹದ ಶಾಂತಿಯನ್ನು ಮಾಡಿ, ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಮುಂದಿನ ವರ್ಷ ಮಾರ್ಚ್ ಹದಿನೆಂಟರಂದು ಶುಕ್ರ ಅಸ್ತನಾದರೆ ಮತ್ತೆ ಉದಯವಾಗುವುದು ಮಾರ್ಚ್ ಇಪ್ಪತ್ತೇಳನೇ ತಾರೀಕು. ಈ ಅವಧಿಯಲ್ಲಿ ಶಾಸ್ತ್ರ ರೀತಿಯಾಗಿ ಮುಹೂರ್ತ ಇಡುವಂತಿಲ್ಲ.

ಈ ಅಭಿಪ್ರಾಯಕ್ಕೆ ಉಡುಪಿಯ ಕಾಪು ಮೂಲದ ಅಧ್ಯಾತ್ಮ ಚಿಂತಕರು ಹಾಗೂ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಹೇಳುವುದು ಹೀಗೆ: ಈಗಿನ ಕಾಲಮಾನಕ್ಕೆ ತಕ್ಕಂತೆ ಧರ್ಮಶಾಸ್ತ್ರದಲ್ಲಿಯೇ ಕೆಲವು ಪರಿಹಾರಗಳನ್ನು ಹೇಳಲಾಗಿದೆ. ಏನೆಂದರೆ, ಅನಿವಾರ್ಯವಾದ ಪಕ್ಷದಲ್ಲಿ ಪೂಜೆ- ಹೋಮ ಮೊದಲಾದವುಗಳನ್ನು ಮಾಡುವುದರ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು. ಗೃಹಪ್ರವೇಶ, ಭೂಮಿ ಪೂಜೆ ಮೊದಲಾದವುಗಳು ಭೂ- ವರಾಹ ಹೋಮವನ್ನು, ಮದುವೆ ಮೊದಲಾದವುಗಳಿಗೆ ಆಯಾ ಉಲ್ಲೇಖಿತ ಪೂಜೆ- ಪುರಸ್ಸರಾದಿಗಳನ್ನು ಮಾಡಿಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು. ಇಲ್ಲಿ ಉಲ್ಲೇಖಿತ ಪೂಜೆ ಅಂದರೆ ಏನು ಅಂದಾಗ, ಇದಕ್ಕೆ ಆಯಾ ಕಾರ್ಯಕ್ರಮಗಳನ್ನು ನಡೆಸುವ ಕರ್ತೃ, ಅಂದರೆ ಯಜಮಾನರು ಕೇಳಿದರೆ ಹೇಳುವುದಕ್ಕೆ ಸರಿಹೋಗುತ್ತದೆ. ಯಾಕೆಂದರೆ ಇದು ಸಾಮಾನ್ಯವಾಗಿ ಎಲ್ಲರಿಗೂ ಅನ್ವಯಿಸುವಂತೆ ಹೇಳುವುದಲ್ಲ. ಕೆಲವು ವಿಚಾರಗಳ ವಿಮರ್ಶೆ ಮಾಡಬೇಕಾಗುತ್ತದೆ ಎಂದರು.

ಸಂಧಿ ಕಾಲಗಳು ಉತ್ತಮವಲ್ಲ:

ಮತ್ತೆ ವಿಷಯ ಆಷಾಢ ಮಾಸದ ಕಡೆಗೆ ಬಂತು. ಆಗ ಪ್ರಕಾಶ್ ಅಮ್ಮಣ್ಣಾಯ ಅವರು ಹೇಳಿದಂತೆ, ಆಷಾಢ ಮಾಸ ಅಂದರೆ ಉತ್ತರಾಯಣ ಕಳೆದು, ದಕ್ಷಿಣಾಯನದ ಆರಂಭ ಕಾಲ. ಉತ್ತರಾಯಣ ಹಾಗೂ ದಕ್ಷಿಣಾಯನ ಸಂಧಿಸುವ ಕಾಲ. ಶಾಸ್ತ್ರ ಸಮ್ಮತವಾಗಿರುವಂತೆಯೇ ವಾರ ಸಂಧಿ, ರಾಶಿ ಸಂಧಿ, ತಿಥಿ ಸಂಧಿ, ನಕ್ಷತ್ರ ಸಂಧಿ, ಹೀಗೆ ಯಾವುದು ಸಂಧಿಸುವ ಕಾಲ ಇದೆಯೋ ಅದು ಶುಭ ಕಾರ್ಯಗಳಿಗೆ ವರ್ಜ್ಯ (ಮಾಡುವಂತಿಲ್ಲ). ದಕ್ಷಿಣಾಯನ ಆರಂಭದ ಹಿಂದಿನ ಹದಿನೈದು ದಿನ ಹಾಗೂ ಆರಂಭದ ನಂತರದ ಹದಿನೈದು ದಿನ ಶುಭ ಕಾರ್ಯಗಳು ಮಾಡದಿರುವುದು ಉತ್ತಮ. ಆ ಕಾರಣಕ್ಕಾಗಿಯೇ ಆಷಾಢದಲ್ಲಿ ಶುಭ ಕಾರ್ಯ ಮಾಡುವುದು ಬೇಡ ಎಂದು ಹೇಳಲಾಗುತ್ತದೆ. ಇನ್ನು ನಮ್ಮ ಧರ್ಮವು ಅನಿವಾರ್ಯಗಳು ಹಾಗೂ ಆಯಾ ಕಾಲ ಧರ್ಮಕ್ಕೆ ಕೆಲವು ವಿನಾಯಿತಿಗಳನ್ನು ನೀಡಿದೆ. ಅದನ್ನು ಪಂಡಿತರು- ವಿದ್ವಾಂಸರು ಇಂಥವರ ಮೂಲಕ ಕೇಳಿ, ತಿಳಿದುಕೊಂಡು ಮುಂದುವರಿಯುವುದು ಉತ್ತಮ ಎಂದು ಹೇಳಿದರು.

ಇದನ್ನೂ ಓದಿ: ಅಮವಾಸ್ಯೆಯ ಸಂಜೆ ಹೀಗೆ ಪೂಜೆ ಮಾಡಿ, ನಿಮ್ಮ ಜೀವನದಲ್ಲಿ ಯಾವುದೇ ಬಿಕ್ಕಟ್ಟು ಬರುವುದಿಲ್ಲ!

ಇನ್ನೂ ಮುಂದುವರಿದು, ನಮ್ಮ ಹಿರಿಯರು ಋತುಮಾನದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಮತ್ತು ಆಯಾ ಕಾಲದ ನೈಸರ್ಗಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿಯಮ, ಆಹಾರ ಪದ್ಧತಿಗಳು ಇತ್ಯಾದಿಗಳನ್ನು ರೂಪಿಸಿದ್ದಾರೆ. ಅದು ಆ ಕಾಲದ ಅಗತ್ಯ ಎಂಬುದನ್ನು ಪ್ರಾಂಜಲವಾದ ಮನಸ್ಸಿನಿಂದ ನೋಡಿದರೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಇನ್ನು ಮುಹೂರ್ತಗಳ ವಿಶ್ಲೇಷಣೆ ಅನ್ನುವುದು ಬಹಳ ದೊಡ್ಡದಾದ ಸಬ್ಜೆಕ್ಟ್. ಅದನ್ನು ಎಷ್ಟು ಮಥಿಸಿದರೂ- ಅಭ್ಯಸಿಸಿದರೂ ಹೊಸ ಸಂದೇಹ ಅಥವಾ ಪರಿಹಾರ ಬರುತ್ತಲೇ ಇರುತ್ತದೆ. ಆದ್ದರಿಂದ ಜ್ಞಾನಿಗಳು, ತಿಳಿವಳಿಕಸ್ಥರೂ ಆದ ಜ್ಯೋತಿಷಿಗಳ ಬಳಿ ಮುಹೂರ್ತ ನಿಶ್ಚಯ ಮಾಡಿಸುವುದು ಈಗಿನ ಕಾಲಕ್ಕೆ ನೀಡಬಹುದಾದ ಸಲಹೆ ಎಂದು ಮಾತನ್ನು ಮುಗಿಸಿದರು ಪ್ರಕಾಶ್ ಅಮ್ಮಣ್ಣಾಯ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ