ನವೆಂಬರ್ 22 ರಿಂದ ಶುರುವಾಗಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಭರ್ಜರಿ ಸಿದ್ಧತೆಯಲ್ಲಿದೆ. ಈ ಸರಣಿ ಗೆಲ್ಲಲು ಆಸ್ಟ್ರೇಲಿಯಾ ತಂಡವು ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಅವರನ್ನು ಟಾರ್ಗೆಟ್ ಮಾಡುವುದರಲ್ಲಿ ಅನುಮಾನವೇ ಇಲ್ಲ. ಇತ್ತ ಟೀಮ್ ಇಂಡಿಯಾ ಪಾಲಿಗೆ ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ ಹಾಗೂ ಮಾರ್ನಸ್ ಲಾಬುಶೇನ್ ವಿಕೆಟ್ಗಳು ನಿರ್ಣಾಯಕ.
ಈ ಮೂರು ವಿಕೆಟ್ಗಳನ್ನು ಕಬಳಿಸಲು ಭರ್ಜರಿ ಪ್ಲ್ಯಾನ್ ರೂಪಿಸಿರುವ ಟೀಮ್ ಇಂಡಿಯಾಗೆ ಇದೀಗ ಅಲೆಕ್ಸ್ ಕ್ಯಾರಿಯ ಫಾರ್ಮ್ ಹೊಸ ಚಿಂತೆಯನ್ನು ಉಂಟು ಮಾಡಿದೆ. ಏಕೆಂದರೆ ಕ್ಯಾರಿ ಅದ್ಭುತ ಫಾರ್ಮ್ನಲ್ಲಿದ್ದು, ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಆಸ್ಟ್ರೇಲಿಯಾಗೆ ಆಧಾರಸ್ತಂಭವಾಗುವ ಸಾಧ್ಯತೆಯಿದೆ.
ಎರಡು ತಿಂಗಳ ಹಿಂದೆಯಷ್ಟೇ ಇಂಗ್ಲೆಂಡ್ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕ್ಯಾರಿ ಇದೀಗ ಆಸ್ಟ್ರೇಲಿಯಾದ ದೇಶೀಯ ಪ್ರಥಮ ದರ್ಜೆ ಟೂರ್ನಿ ಶೆಫೀಲ್ಡ್ ಶೀಲ್ಡ್ನಲ್ಲೂ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಸಿದ್ಧತೆಗಾಗಿ ಸೌತ್ ಆಸ್ಟ್ರೇಲಿಯಾ ಪರ ಕಣಕ್ಕಿಳಿದಿರುವ ಕ್ಯಾರಿ ಕೇವಲ 3 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 90 ರ ಸರಾಸರಿಯಲ್ಲಿ 452 ರನ್ ಕಲೆಹಾಕಿದ್ದಾರೆ.
ಈ ವೇಳೆ ಅಲೆಕ್ಸ್ ಕ್ಯಾರಿ ಬ್ಯಾಟ್ನಿಂದ 2 ಭರ್ಜರಿ ಶತಕಗಳು ಸಹ ಮೂಡಿಬಂದಿದೆ. ಅಲ್ಲದೆ 6 ಇನಿಂಗ್ಸ್ಗಳಲ್ಲಿ ಕ್ರಮವಾಗಿ 90, 111, 42, 123*, 44, 42 ರನ್ ಕಲೆಹಾಕಿದ್ದಾರೆ. ಅಂದರೆ ಕಳೆದ ಆರು ಇನಿಂಗ್ಸ್ಗಳಲ್ಲಿ ಅಲೆಕ್ಸ್ ಕ್ಯಾರಿ 40 ಕ್ಕಿಂತ ಕಡಿಮೆ ಸ್ಕೋರ್ಗಳಿಸಿಲ್ಲ ಎಂಬುದು ವಿಶೇಷ.
ಈ ಪ್ರಚಂಡ ಫಾರ್ಮ್ ಟೀಮ್ ಇಂಡಿಯಾ ಪಾಲಿಗೆ ಮುಳುವಾಗುವ ಸಾಧ್ಯತೆಯಿದೆ. ಏಕೆಂದರೆ ಭಾರತದ ವಿರುದ್ಧದ ಪಂದ್ಯದಲ್ಲಿ ಅಲೆಕ್ಸ್ ಕ್ಯಾರಿ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯುವುದು ಖಚಿತ. ಅತ್ತ ಟಾಪ್ ಆರ್ಡರ್ನಲ್ಲಿ ಉಸ್ಮಾನ್ ಖ್ವಾಜಾ, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್ ಮತ್ತು ಟ್ರಾವಿಸ್ ಹೆಡ್ ಇದ್ದರೆ, ಇದೀಗ ಮಧ್ಯಮ ಕ್ರಮಾಂಕದಲ್ಲಿ ಇನ್ ಫಾರ್ಮ್ನಲ್ಲಿರುವ ಕ್ಯಾರಿ ಬ್ಯಾಟ್ ಬೀಸಲಿದ್ದಾರೆ.
ಅಲೆಕ್ಸ್ ಕ್ಯಾರಿಯ ಈ ಭರ್ಜರಿ ಫಾರ್ಮ್ ಇದೀಗ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಚಿಂತೆಯನ್ನು ದೂರ ಮಾಡಿದೆ. ಏಕೆಂದರೆ ಒಂದೆಡೆ ಕ್ಯಾರಿ ಕ್ರೀಸ್ ಕಚ್ಚಿ ನಿಂತರೆ, ಪ್ಯಾಟ್ ಕಮಿನ್ಸ್ ಸೇರಿದಂತೆ ಬೌಲರ್ಗಳು ಕೂಡ ಕೆಳ ಕ್ರಮಾಂಕದಲ್ಲಿ ಸಾಥ್ ನೀಡಲಿದ್ದಾರೆ. ಅದರಲ್ಲೂ ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿರುವ ಕ್ಯಾರಿ ಬಿರುಸಿನ ಬ್ಯಾಟಿಂಗ್ಗೂ ಹೆಸರುವಾಸಿ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಪಂದ್ಯದ ಗತಿ ಬದಲಿಸಬಲ್ಲ ಆಟಗಾರ.
ಇದನ್ನೂ ಓದಿ: ಪಾಕಿಸ್ತಾನ್ ವಿರುದ್ಧ ಆಸ್ಟ್ರೇಲಿಯಾಗೆ ದಾಖಲೆ ವಿಜಯ
ಹೀಗಾಗಿಯೇ ಇದೀಗ ಅಲೆಕ್ಸ್ ಕ್ಯಾರಿಯ ಭರ್ಜರಿ ಫಾರ್ಮ್ನಿಂದ ಆಸ್ಟ್ರೇಲಿಯಾ ತಂಡವು ಫುಲ್ ಖುಷಿಯಲ್ಲಿದೆ. ಆದರೆ ಮತ್ತೊಂದೆಡೆ ಸ್ಟಾರ್ ಆಟಗಾರರಿಗೆ ಪ್ಲ್ಯಾನ್ ರೂಪಿಸಿದ್ದ ಟೀಮ್ ಇಂಡಿಯಾ ಇದೀಗ ಅಲೆಕ್ಸ್ ಕ್ಯಾರಿಯನ್ನು ಕಟ್ಟಿ ಹಾಕಲು ವಿಶೇಷ ಯೋಜನೆ ರೂಪಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ.