ACT 2024: ಕೊರಿಯಾ ಮಣಿಸಿ ದಾಖಲೆಯ 5ನೇ ಬಾರಿಗೆ ಫೈನಲ್​ಗೇರಿದ ಹಾಲಿ ಚಾಂಪಿಯನ್ ಭಾರತ

|

Updated on: Sep 17, 2024 | 2:43 PM

Asian Champions Trophy 2024: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿರುವ ಹರ್ಮನ್​ಪ್ರೀತ್ ನಾಯಕತ್ವದ ಭಾರತ ಹಾಕಿ ತಂಡ ಇಂದು ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿ ದಾಖಲೆಯ 5ನೇ ಬಾರಿಗೆ ಫೈನಲ್​ಗೇರಿದೆ.

ACT 2024: ಕೊರಿಯಾ ಮಣಿಸಿ ದಾಖಲೆಯ 5ನೇ ಬಾರಿಗೆ ಫೈನಲ್​ಗೇರಿದ ಹಾಲಿ ಚಾಂಪಿಯನ್ ಭಾರತ
ಭಾರತ ಹಾಕಿ ತಂಡ
Follow us on

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿರುವ ಹರ್ಮನ್​ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ ಇಂದು ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿ ದಾಖಲೆಯ 5ನೇ ಬಾರಿಗೆ ಫೈನಲ್​ಗೇರಿದೆ. ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ಪ್ರಶಸ್ತಿ ಪಂದ್ಯದಲ್ಲಿ ಆತಿಥೇಯ ಚೀನಾ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಚೀನಾ ತಂಡ, ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 2-0 ಅಂತರದಲ್ಲಿ ಮಣಿಸಿ ಇದೇ ಮೊದಲ ಬಾರಿಗೆ ಫೈನಲ್​ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.

ಚೀನಾದ ಹುಲುನ್‌ಬೀರ್‌ನಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಮೊದಲ ದಿನದಿಂದ ಸೆಮಿಫೈನಲ್‌ವರೆಗೂ ಅಮೋಘ ಪ್ರದರ್ಶನ ನೀಡಿತು. ಲೀಗ್ ಹಂತದ ಎಲ್ಲಾ 5 ಪಂದ್ಯಗಳನ್ನು ಗೆದ್ದು, ಸೆಮಿಫೈನಲ್​ಗೇರಿದ್ದ ಟೀಂ ಇಂಡಿಯಾ ಆರನೇ ಪಂದ್ಯವನ್ನೂ ಸುಲಭವಾಗಿ ಗೆದ್ದುಕೊಂಡಿತು. ದಕ್ಷಿಣ ಕೊರಿಯಾ ವಿರುದ್ಧದ ಈ ಪಂದ್ಯದಲ್ಲಿ ಮೊದಲ ಕ್ವಾರ್ಟರ್‌ನಿಂದಲೇ ಗೋಲು ಗಳಿಸಲು ಆರಂಭಿಸಿದ ಭಾರತ ತಂಡ ಮೂರನೇ ಕ್ವಾರ್ಟರ್‌ನ ಅಂತ್ಯಕ್ಕೆ 4-1 ಅಂತರದ ಮುನ್ನಡೆ ಸಾಧಿಸಿತ್ತು.

ಭಾರತ ತಂಡದ ಆಕ್ರಮಣಕಾರಿ ಆಟ

ಮೊದಲ ಕ್ವಾರ್ಟರ್ ಮುಗಿಯುವ ಮುನ್ನವೇ ಉತ್ತಮ್ ಸಿಂಗ್ 13ನೇ ನಿಮಿಷದಲ್ಲಿ ಟೀಂ ಇಂಡಿಯಾ ಪರ ಮೊದಲ ಗೋಲು ಗಳಿಸಿ 1-0 ಮುನ್ನಡೆ ತಂದುಕೊಟ್ಟರು. ಎರಡನೇ ಕ್ವಾರ್ಟರ್‌ನಲ್ಲಿಯೂ ಪಂದ್ಯದ 19ನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್‌ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಮೂರನೇ ಕ್ವಾರ್ಟರ್‌ನಲ್ಲಿ ಪಂದ್ಯದ 32ನೇ ನಿಮಿಷದಲ್ಲಿ ಜರ್ಮನ್‌ಪ್ರೀತ್ ಸಿಂಗ್ ಗೋಲು ದಾಖಲಿಸಿದರು. ಇತ್ತ ಮೂರನೇ ಕ್ವಾರ್ಟರ್‌ನಲ್ಲಿ ಗೋಲುಗಳ ಖಾತೆ ತೆರೆದ ಕೊರಿಯಾ ಪರ ಯಾಂಗ್ ಜಿಹುನ್ 33ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ದಾಖಲಿಸಿದರು. ಈ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಹರ್ಮನ್‌ಪ್ರೀತ್ ಮತ್ತೊಮ್ಮೆ ಗೋಲು ಬಾರಿಸುವ ಮೂಲಕ ಗೆಲುವಿನ ರೂವಾರಿಯಾದರು. ಕೊನೆಯ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ ಭಾರತ ತಂಡ 4-1 ಗೆಲುವಿನೊಂದಿಗೆ ಕೊರಿಯಾವನ್ನು ಮಣಿಸಿ ಫೈನಲ್ ತಲುಪಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Mon, 16 September 24