
ಏಷ್ಯನ್ ಗೇಮ್ಸ್ನ 15ನೇ ದಿನದಂದು ಭಾರತದ ಕ್ರೀಡಾಪಟುಗಳಿಂದ ಚಿನ್ನದ ಭೇಟೆ ಜೋರಾಗಿದೆ. ಇದುವರೆಗೆ ಈ ದಿನದಂದು ಭಾರತ 5 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. 5ನೇ ಚಿನ್ನದ ಪದಕವನ್ನು ಭಾರತದ ಪುರುಷರ ಹಾಕಿ ತಂಡ ಗೆದ್ದುಕೊಂಡಿದೆ. ಈ ಚಿನ್ನದ ಪದಕದ ಪಂದ್ಯದಲ್ಲಿ ಹರ್ಮನ್ಪ್ರೀತ್ ಸಿಂಗ್ ಪಡೆ 5-1 ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಹಾಕಿಯಲ್ಲಿ ಪುರುಷ ಹಾಗೂ ಮಹಿಳಾ ತಂಡಗಳೆರಡು ಚಿನ್ನದ ಪದಕವನ್ನು ಗೆದ್ದುಕೊಳ್ಳುವ ಮೂಲಕ 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೇಸ್ ಒಲಿಂಪಿಕ್ಸ್ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ. ಏಷ್ಯನ್ ಗೇಮ್ಸ್ನಲ್ಲಿ ಇದು ಭಾರತದ 21ನೇ ಚಿನ್ನದ ಪದಕವಾಗಿದ್ದು, ಈ ಪದಕದೊಂದಿಗೆ ಭಾರತ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಒಟ್ಟಿಗೆ ಚಿನ್ನದ ಪದಕವನ್ನು ಗೆದ್ದಿರುವುದು ಇದೇ ಮೊದಲು. ಇದಲ್ಲದೆ, ಏಷ್ಯನ್ ಕ್ರೀಡಾಕೂಟದಲ್ಲಿ ಸತತ ಎರಡನೇ ಬಾರಿಗೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತೀಯ ಪುರುಷರ ಹಾಕಿ ತಂಡವು ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿರುವುದು ಇದೇ ಮೊದಲು. ಇದಕ್ಕೂ ಮೊದಲು, 2023 ರ ಹ್ಯಾಂಗ್ಝೌ ಏಷ್ಯನ್ ಕ್ರೀಡಾಕೂಟದಲ್ಲಿಯೂ ಭಾರತ ಚಿನ್ನದ ಪದಕವನ್ನು ಗೆದ್ದಿತ್ತು.
ಈ ಸ್ವರ್ಣ ಪದಕದ ಪಂದ್ಯದಲ್ಲಿ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇದರ ಫಲವಾಗಿ ಪಂದ್ಯದ 11 ನೇ ನಿಮಿಷದಲ್ಲಿ ನಾಯಕ ಹರ್ಮನ್ಪ್ರೀತ್ ಸಿಂಗ್ ಬುಲೆಟ್ ಡ್ರ್ಯಾಗ್-ಫ್ಲಿಕ್ ಮೂಲಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿದರು. ಆದಾಗ್ಯೂ, ಕೇವಲ ಮೂರು ನಿಮಿಷಗಳ ನಂತರ, ಮಲೇಷ್ಯಾದ ಶೆಲೊ ಸಿಲ್ವೆರಿಯಸ್ ಅದ್ಭುತ ಫೀಲ್ಡ್ ಗೋಲ್ ಗಳಿಸಿ ಸ್ಕೋರ್ ಅನ್ನು 1-1 ರಿಂದ ಸಮಬಲಗೊಳಿಸಿದರು. ಎರಡನೇ ಕ್ವಾರ್ಟರ್ನಲ್ಲಿ ಮಲೇಷ್ಯಾ ಒತ್ತಡ ಹೇರಲು ಪ್ರಯತ್ನಿಸಿತು. ಆದರೆ 23 ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಜುಗ್ರಾಜ್ ಸಿಂಗ್ ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು. ಎರಡನೇ ಕ್ವಾರ್ಟರ್ನಲ್ಲಿ ಉಭಯ ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ.
ದ್ವಿತೀಯಾರ್ಧದ ಆರಂಭದಲ್ಲಿ ಭಾರತದ ಫಾರ್ವರ್ಡ್ ಲೈನ್ ಅದ್ಭುತ ಪ್ರದರ್ಶನ ನೀಡಿತು. ಮೂರನೇ ಕ್ವಾರ್ಟರ್ನ ಆರಂಭದಲ್ಲಿ, ಅಂಪೈರ್ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಸ್ಟ್ರೋಕ್ ನೀಡಿದರು. ಉಪನಾಯಕ ಹಾರ್ದಿಕ್ ಸಿಂಗ್ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರೆ, 54 ನೇ ನಿಮಿಷದಲ್ಲಿ ಶಿಲಾನಂದ್ ಲಾಕ್ರಾ ಗೋಲು ಬಾರಿಸಿ ಮುನ್ನಡೆಯನ್ನು 4-1ಕ್ಕೇರಿಸಿದರು. ಪಂದ್ಯದ 57ನೇ ನಿಮಿಷದಲ್ಲಿ ಸಿಕ್ಕ ಮತ್ತೊಂದು ಪೆನಾಲ್ಟಿ ಕಾರ್ನರ್ ಅನ್ನು ನಾಯಕ ಹರ್ಮನ್ಪ್ರೀತ್ ಗೋಲು ಪೋಸ್ಟ್ಗೆ ಹಾಕಿದರು. ಅಂತಿಮವಾಗಿ ಭಾರತ 5-1 ಅಂತರದ ಅಜೇಯ ಗೆಲುವು ಸಾಧಿಸಿ ಚಿನ್ನಕ್ಕೆ ಕೊರಳೊಡ್ಡಿತು.
Published On - 5:27 pm, Sat, 3 October 26