ಪಾಕಿಸ್ತಾನ ಕ್ರಿಕೆಟ್ ಟೀಮಿನ ನಾಯಕ ಮತ್ತು ವಿಶ್ವದ ಅಗ್ರಮಾನ್ಯ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರೆನಿಸಿಕೊಂಡಿರುವ ಬಾಬರ್ ಆಜಂ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಸದ್ದು ಮಾಡುವುದನ್ನು ಮುಂದುವರೆಸಿದ್ದಾರೆ. ಶುಕ್ರವಾರದಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಒಂದು ದಿನದ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಬಾಬರ್ ಅಮೋಘ ಶತಕ ಬಾರಿಸಿ ತನ್ನ ತಂಡಕ್ಕೆ ರೋಚಕ ಜಯ ದೊರಕಿಸಿಕೊಟ್ಟರಲ್ಲದೆ ಈ ಆವೃತ್ತಿಯಲ್ಲಿ ಅತಿ ವೇಗವಾಗಿ 13 ಶತಕಗಳನ್ನು ಬಾರಿಸಿದ ಖ್ಯಾತಿಗೆ ಪಾತ್ರರಾದರು.
ಕ್ರಿಕೆಟ್ ಪರಿಣಿತರೆಲ್ಲ ಬಾಬರ್ ಬ್ಯಾಟಿಂಗ್ ಪ್ರತಿಭೆ ಗುಣಗಾನ ಮಾಡುತ್ತಲೇ ಇದ್ದಾರೆ. ಸಾಂಪ್ರದಾಯಿಕ ಕ್ರಿಕೆಟ್ಗಿಂತ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಅವರ ಪ್ರದರ್ಶನ ಅದ್ಭುತವಾಗಿದೆ. ನಿನ್ನೆ ಅಂದರೆ ಶುಕ್ರವಾರದಂದು ಅವರು ಅತ್ಯಂತ ಕಡಿಮೆ ಇನ್ನಿಂಗ್ಸ್ಗಳಲ್ಲಿ 13 ನೇ ಶತಕ ಬಾರಿಸಿ ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ ಮತ್ತು ಭಾರತದ ವಿರಾಟ್ ಕೊಹ್ಲಿ ಅವರ ದಾಖಲೆಗಳನ್ನು ಉತ್ತಮಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಆಡಿದ ತಮ್ಮ 78 ನೇ ಒಂದು ದಿನದ ಪಂದ್ಯದಲ್ಲಿ 104 ಎಸೆತಗಳಲ್ಲಿ 103 ರನ್ ಬಾರಿಸಿ ಪಾಕಿಸ್ತಾನಕ್ಕೆ ಕೊನೆಯ ಓವರಿನ ಕೊನೆಯ ಎಸೆತದಲ್ಲಿ ಗೆಲುವು ಕೊಡಿಸಿದ ಬಾಬರ್ ಅವರ ಇನ್ನಿಂಗ್ಸ್ ಕುರಿತು ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. 78 ಪಂದ್ಯಗಳನ್ನಾಡಿದ್ದರೂ ಬಾಬರ್ ಕೇವಲ 76 ಇನ್ನಿಂಗ್ಸ್ಗಳಲ್ಲ್ಲಿ 13 ನೇ ಶತಕ ದಾಖಲಿಸಿದ್ದಾರೆ. ಇದುವರೆಗೆ ಈ ದಾಖಲೆ ಹೊಂದಿದ್ದ ಹಶೀಮ್ ಆಮ್ಲಾ 83ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ ತನ್ನ 86ನೇ ಇನ್ನಿಂಗ್ಸ್ನಲ್ಲಿ 13ನೇ ಶತಕ ಬಾರಿಸಿದ್ದರು.
ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬಾಬರ್ ಅವರ ಸರಾಸರಿ 56 ಮತ್ತು ಟಿ20 ಕ್ರಿಕೆಟ್ನಲ್ಲಿ 48 ಇದೆ.
ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ಅವರ ಸರಾಸರಿ 44ರಷ್ಟಿದೆ.
ಒಂದು ದಿನದ ಪಂದ್ಯಗಳಲ್ಲಿ ಕೊಹ್ಲಿಯವರ ಸರಾಸರಿ 59.1 ಇದ್ದರೆ, ಟಿ20 ಕ್ರಿಕೆಟ್ನಲ್ಲಿ 52.4 ಇದೆ, ಟೆಸ್ಟ್ಗಳಲ್ಲೂ ಭಾರತದ ನಾಯಕನ ಸರಾಸರಿ 50ಕ್ಕಿಂತ (52.6) ಹೆಚ್ಚಿದೆ. ಕ್ರಿಕೆಟ್ ಎಲ್ಲ ಆವೃತ್ತಿಗಳಲ್ಲೂ 50 ಕ್ಕಿಂತ ಜಾಸ್ತಿ ಸರಾಸರಿ ಹೊಂದಿರುವ ವಿಶ್ವದ ಏಕೈಕ ಆಟಗಾರ ಕೊಹ್ಲಿ ಆಗಿದ್ದಾರೆ.
ಅಂದಹಾಗೆ, ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಸಹ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ 13ನೇ ಶತಕವನ್ನು 76ನೇ ಇನ್ನಿಂಗ್ಸ್ನಲ್ಲಿ ಬಾರಿಸಿದ್ದರು.
ನಿನ್ನೆಯ ರೋಮಾಂಚಕ ಜಯದ ನಂತರ ಪಾಕಿಸ್ತಾನ 3ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ರವಿವಾರದಂದು ಜೊಹಾನ್ನೆಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಸಿರೀಸ್ ನಂತರ ಎರಡು ರಾಷ್ಟ್ರಗಳು ನಾಲ್ಕು ಟಿ20 ಪಂದ್ಯಗಳನ್ನು ಆಡಲಿವೆ.