ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಗಳವಾರ ಆಸ್ಪತೆಯಿಂದ ಡಿಸ್ಚಾರ್ಜ್​ ಸಾಧ್ಯತೆ

|

Updated on: Jan 04, 2021 | 5:02 PM

ಆಸ್ಪತ್ರೆಯಲ್ಲಿ ಹೃದ್ರೋಗ ಸಂಬಂಧಿ ಚಿಕಿತ್ಸೆ ಪಡೆಯುತ್ತಿರುವ ಸೌರವ್ ಗಂಗೂಲಿಯವರ ಲಕ್ಷಾಂತರ ಅಭಿಮಾನಿಗಳಿಗೆ ಸಂತೋಷದ ಸಂಗತಿಯೊಂದು ಹೊರಬಿದ್ದಿದೆ. ಗಂಗೂಲಿ ದಾಖಲಾಗಿರುವ ಆಸ್ಪತ್ರೆಯ ಮೂಲಗಳ ಪ್ರಕಾರ, ಮಂಗಳವಾರದಂದು ‘ದಾದಾ’ ಮನೆಗೆ ತೆರಳುವ ಸಾಧ್ಯತೆಯಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಗಳವಾರ ಆಸ್ಪತೆಯಿಂದ ಡಿಸ್ಚಾರ್ಜ್​ ಸಾಧ್ಯತೆ
ಸೌರವ್ ಗಂಗೂಲಿ
Follow us on

ಕೋಲ್ಕತಾ: ಲಘು ಹೃದಯಾಘಾತದಿಂದ ಕೊಲ್ಕತ್ತಾದ ವುಡ್​ಲ್ಯಾಂಡ್ ಆಸ್ಪತ್ರೆಗೆ ಶನಿವಾರ ಬೆಳಗ್ಗೆ ದಾಖಲಾದ ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಮಂಗಳವಾರವೇ ಡಿಸ್ಚಾರ್ಜ್ ಮಾಡಬಹುದು ಎಂದು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೂಪಾಲಿ ಬಸು ತಿಳಿಸಿದ್ದಾರೆ.

ಗಂಗೂಲಿ ಆರೋಗ್ಯ ಸ್ಥಿತಿಗತಿ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಗಂಗೂಲಿಗೆ ಌಂಜಿಯೊಪ್ಲಾಸ್ಟಿ ಮಾಡುವುದನ್ನು ಮುಂದೂಡುವುದು ಸುರಕ್ಷಿತ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯಕೀಯ ತಂಡ ಭಾವಿಸಿರುವುದರಿಂದ ಅಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆಯೆಂದು ಹೇಳಿದರು.

‘ಖ್ಯಾತ ಹೃದಯ ಸರ್ಜನ್​ಗಳಾಗಿರುವ ಡಾ. ದೇವಿ ಶೆಟ್ಟಿ, ಡಾ. ರಮಾಕಾಂತ್ ಪಂಡಾ, ಹೃದ್ರೋಗ ತಜ್ಞರಾಗಿರುವ ಡಾ. ಸ್ಯಾಮುವೆಲ್ ಮ್ಯಾಥ್ಯೂ, ನ್ಯೂ ಯಾರ್ಕ್​ನ ಮೌಂಟ್ ಸಿನಾಯ್ ಆಸ್ಪತ್ರೆಯ ಡೀನ್ ಮತ್ತು ಔಷಧಿ ಶಾಸ್ತ್ರದ ಪ್ರೊಫೆಸರ್ ಆಗಿರುವ ಸಮೀನ್ ಕೆ.ಶರ್ಮ, ಇಂಟರ್​ವೆನ್ಷನಲ್ ಕಾರ್ಡಿಯಾಲಾಜಿಸ್ಟ್ ಡಾ. ಅಶ್ವಿನ್ ಮೆಹ್ತಾ ಮೊದಲಾದವರನ್ನು ಒಳಗೊಂಡ 9 ಸದಸ್ಯರ ವೈದ್ಯಕೀಯ ತಂಡ ಗಂಗೂಲಿ ಅವರ ದೇಹಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದೆ. ಸೋಮವಾರ ಬೆಳಿಗ್ಗೆ ಜೂಮ್ ಮತ್ತು ಪೋನ್​ಗಳ ಮೂಲಕ ಸಮಾಲೋಚನೆ ನಡೆಸಿದ ತಂಡವು ಬ್ಲಾಕ್ ಆಗಿರುವ ಅವರ ಇನ್ನೆರಡು ರಕ್ತನಾಳಗಳನ್ನು ಕೂಡಲೇ ಌಂಜಿಯೊಪ್ಲಾಸ್ಟಿಗೆ ಒಳಪಡಿಸುವ ಅಗತ್ಯವಿಲ್ಲ, ಅದನ್ನು ಮುಂದೂಡುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂಬ ಅಭಿಪ್ರಾಯ ತಳೆದ ನಂತರ ಗಂಗೂಲಿಯವರನ್ನು ಮಂಗಳವಾರದಂದು ಡಿಸ್ಚಾರ್ಜ್ ಮಾಡುವ ಕುರಿತು ಯೋಚಿಲಾಗುತ್ತಿದೆ’ ಎಂದು ಬಸು ಹೇಳಿದರು.

ಗಂಗೂಲಿ ಚಿಕಿತ್ಸೆ ಪಡಯುತ್ತಿರುವ ಕೋಲ್ಕತ್ತಾದ ವುಡ್​ಲ್ಯಾಂಡ್ ಅಸ್ಪತ್ರೆ

‘ರವಿವಾರದಿಂದ ಗಂಗೂಲಿಯವರ ಆರೋಗ್ಯ ಸ್ಥಿರವಾಗಿದೆ. ಎದೆನೋವಿನ ಬಗ್ಗೆ ದೂರಿಲ್ಲ. ಅಸ್ಪತ್ರೆಯಲ್ಲಿ ಅವರಿಗೆ ಅತ್ಯಂತ ಸೂಕ್ತವಾದ ಚಿಕಿತ್ಸೆ ನೀಡಲಾಗುತ್ತಿದೆ. ಇವತ್ತು ನಡೆದ ಬೋರ್ಡ್ ಮೀಟಿಂಗ್​ನಲ್ಲಿ ಅವರ ಕುಟುಂಬದ ಸದಸ್ಯರು ಸಹ ಭಾಗವಹಿಸಿದ್ದರು. ಅವರಿಗೆ ಗಂಗೂಲಿಯ ಅನಾರೋಗ್ಯ, ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ನೀಡುವ ಚಿಕಿತ್ಸೆ ಕುರಿತು ವಿವರಿಸಲಾಗಿದೆ’ ಎಂದು ಬಸು ಹೇಳಿದರು.

ಡಾ. ದೇವಿ ಶೆಟ್ಟಿ

ಗಂಗೂಲಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ಇದೇ ವ್ಯೆದ್ಯಕೀಯ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟು ಸಲಹೆಗಳನ್ನು ನೀಡಲಿದೆ ಎಂದು ಬಸು ಸುದ್ದಿಗಾರರಿಗೆ ತಿಳಿಸಿದರು.

Published On - 4:19 pm, Mon, 4 January 21