
2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ (2027 ODI World Cup) ಮೂರು ದೇಶಗಳು ಆತಿಥ್ಯವಹಿಸುತ್ತಿವೆ ಎಂಬುದು ಈ ಹಿಂದೆಯೇ ಖಚಿತವಾಗಿತ್ತು. ಇದೀಗ ಈ ಮೂರು ದೇಶಗಳ ಯಾವ್ಯಾವ ನಗರಗಳು ಈ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಆತಿಥ್ಯವಹಿಸುತ್ತಿವೆ ಎಂಬುದನ್ನು ಐಸಿಸಿ ಇಂದು ಬಹಿರಂಗಪಡಿಸಿದೆ. ಮುಂದಿನ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದ ಮೂರು ದೇಶಗಳಾದ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯುತ್ತಿದೆ. ಈ ಮೂರು ದೇಶಗಳ ಒಟ್ಟು 12 ನಗರಗಳಲ್ಲಿ 54 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಅತಿ ಹೆಚ್ಚು ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿವೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿರುವ 12 ಸ್ಥಳಗಳನ್ನು ಬಹಿರಂಗಪಡಿಸಲಾಯಿತು. ಇವುಗಳಲ್ಲಿ, ಜೋಹಾನ್ಸ್‌ಬರ್ಗ್ ಮತ್ತು ಕೇಪ್ ಟೌನ್ ಸೇರಿದಂತೆ ಎಂಟು ಸ್ಥಳಗಳು ದಕ್ಷಿಣ ಆಫ್ರಿಕಾದಲ್ಲಿದ್ದರೆ, ಜಿಂಬಾಬ್ವೆಯ ಮೂರು ನಗರಗಳು ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತವೆ. ನಮೀಬಿಯಾದ ಒಂದು ನಗರದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.
2027 ರ ವಿಶ್ವಕಪ್ ಅಕ್ಟೋಬರ್ 4 ರಿಂದ ನವೆಂಬರ್ 21, 2027 ರವರೆಗೆ ನಡೆಯುವ ನಿರೀಕ್ಷೆಯಿದೆ. ಈ ಬಾರಿಯ ವಿಶ್ವಕಪ್ನ ವಿಶೇಷತೆ ಏನೆಂದರೆ 24 ವರ್ಷಗಳ ನಂತರ ಪುರುಷರ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದಲ್ಲಿ ನಡೆಯುತ್ತಿದೆ. ಇದಕ್ಕೂ ಮೊದಲು ಅಂದರೆ 2003 ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆದಿತ್ತು. ಆದಾಗ್ಯೂ, ಈ ಬಾರಿ ಕೀನ್ಯಾ ಬದಲಿಗೆ ನಮೀಬಿಯಾದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.
ಅದರಂತೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್, ಸೆಂಚುರಿಯನ್, ಡರ್ಬನ್, ಗ್ಕೆಬರ್ಹಾ, ಕುಗೊಂಪೊ ಸಿಟಿ, ಕೇಪ್ ಟೌನ್, ಪಾರ್ಲ್ ಮತ್ತು ಬ್ಲೂಮ್ಫಾಂಟೈನ್ನಲ್ಲಿ 2027 ರ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ವಾಂಡರರ್ಸ್ ಅಥವಾ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿದೆ. ಜಿಂಬಾಬ್ವೆಯ ಹರಾರೆ, ಬುಲವಾಯೊ ಮತ್ತು ವಿಕ್ಟೋರಿಯಾ, 7 ರಿಂದ 10 ಪಂದ್ಯಗಳನ್ನು ಆಯೋಜಿಸುತ್ತವೆ. ಉಳಿದಂತೆ ನಮೀಬಿಯಾದ ವಿಂಡ್‌ಹೋಕ್ ಮೈದಾನದಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಹಾಗೆಯೇ ಬೆನೋನಿ ಮತ್ತು ಪೊಚೆಫ್‌ಸ್ಟ್ರೂಮ್ ಕ್ರೀಡಾಂಗಣಗಳನ್ನು ಅಭ್ಯಾಸಕ್ಕಾಗಿ ಬಳಸುವುದರ ಜೊತೆಗೆ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಸಹ ಇಲ್ಲಿ ಆಯೋಜಿಸುವ ಸಾಧ್ಯತೆಯಿದೆ.
It’s exciting to announce the 12 venues across three nations and a new brand for the ICC Men’s @CricketWorldCup 2027.
The unveiling signals the start of a journey that will unite fans around the world and build anticipation for one of our sport’s biggest global events. #CWC27 pic.twitter.com/wSW4j4sAPP— Jay Shah (@JayShah) July 30, 2026
Published On - 2:37 pm, Fri, 31 July 26