ಮಹಿಳಾ ಟಿ20 ವಿಶ್ವಕಪ್ ಆಯೋಜನೆಗೆ ಪಾಕ್ ಸಿದ್ಧತೆ! ಭಾರತ ಪಂದ್ಯಗಳ ಬಗ್ಗೆ ಮಹತ್ವದ ಮಾಹಿತಿ

2028ರ ಮಹಿಳಾ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ಆತಿಥ್ಯ ವಹಿಸುವ ಸಾಧ್ಯತೆ ಇದೆ. ಭಾರತದ ರಾಜಕೀಯ ಪರಿಸ್ಥಿತಿಗಳಿಂದಾಗಿ, ಐಸಿಸಿ 'ಹೈಬ್ರಿಡ್ ಮಾದರಿ'ಯನ್ನು ಅನುಸರಿಸುವ ಸಾಧ್ಯತೆ ಇದೆ, ಅಂದರೆ ಭಾರತ ತಂಡದ ಪಂದ್ಯಗಳು ಯುಎಇಯಂತಹ ತಟಸ್ಥ ಸ್ಥಳದಲ್ಲಿ ನಡೆಯಲಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಮಾದರಿಯನ್ನು 2025ರ ಚಾಂಪಿಯನ್ಸ್ ಟ್ರೋಫಿಯಂತೆ ಮುಂದುವರಿಸಲು ಆಸಕ್ತಿ ತೋರಿದೆ. ಅಂತಿಮ ತಟಸ್ಥ ಸ್ಥಳವನ್ನು ಐಸಿಸಿ ನಿರ್ಧರಿಸಬೇಕಿದೆ.

ಮಹಿಳಾ ಟಿ20 ವಿಶ್ವಕಪ್ ಆಯೋಜನೆಗೆ ಪಾಕ್ ಸಿದ್ಧತೆ! ಭಾರತ ಪಂದ್ಯಗಳ ಬಗ್ಗೆ ಮಹತ್ವದ ಮಾಹಿತಿ
ಭಾರತ Vs ಪಾಕಿಸ್ತಾನ್
Image Credit source: PTI

Updated on: Oct 24, 2026 | 10:39 PM

2028ರಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ಆತಿಥ್ಯ ವಹಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಟೂರ್ನಿಯ ಎಲ್ಲಾ ಪಂದ್ಯಗಳನ್ನು ತನ್ನ ನೆಲದಲ್ಲೇ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಸಕ್ತಿ ತೋರಿಸಿದೆ. ಆದರೆ, ಭಾರತ ತಂಡದ ಪಂದ್ಯಗಳ ವಿಚಾರದಲ್ಲಿ ಮಾತ್ರ ಹೈಬ್ರಿಡ್ ಮಾದರಿ ಮುಂದುವರಿಯುವ ಸಾಧ್ಯತೆ ಇದೆ. ಹೀಗಾದರೆ, ಭಾರತದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನಡೆಯಬಹುದು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೂಲಗಳ ಪ್ರಕಾರ, 2028ರ ಸೆಪ್ಟೆಂಬರ್ 7ರಿಂದ ಅಕ್ಟೋಬರ್ 1ರವರೆಗೆ ನಡೆಯಲಿರುವ 12 ತಂಡಗಳ ಮಹಿಳಾ ಟಿ20 ವಿಶ್ವಕಪ್‌ಗೆ ಪಾಕಿಸ್ತಾನವನ್ನು ಪ್ರಮುಖ ಆತಿಥೇಯ ರಾಷ್ಟ್ರವನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ, ಭಾರತ ತಂಡದ ಪಂದ್ಯಗಳಿಗೆ ಯಾವ ತಟಸ್ಥ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಇನ್ನೂ ಅಂತಿಮವಾಗಿಲ್ಲ.

ಟೂರ್ನಿ ಆಯೋಜಿಸಲು ಪಾಕಿಸ್ತಾನ ಸಿದ್ಧ

2028ರ ಮಹಿಳಾ ಟಿ20 ವಿಶ್ವಕಪ್ ಆಯೋಜಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ವೇಳೆ, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅನುಸರಿಸಿದ ಹೈಬ್ರಿಡ್ ಮಾದರಿಯನ್ನೇ ಮುಂದುವರಿಸುವಂತೆ ಐಸಿಸಿಗೆ ಮನವಿ ಮಾಡಿದೆ ಎನ್ನಲಾಗಿದೆ. ಈ ವ್ಯವಸ್ಥೆಯಡಿ ಭಾರತ ತಂಡವನ್ನು ಹೊರತುಪಡಿಸಿ ಉಳಿದ ತಂಡಗಳ ಗುಂಪು ಹಂತದ ಪಂದ್ಯಗಳು ಹಾಗೂ ನಾಕೌಟ್ ಪಂದ್ಯಗಳನ್ನು ಪಾಕಿಸ್ತಾನದಲ್ಲೇ ನಡೆಸಲು ಪಿಸಿಬಿ ಸಿದ್ಧವಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಭಾರತ ತಂಡದ ಪಂದ್ಯಗಳಿಗೆ ದುಬೈ ಸೂಕ್ತ ತಟಸ್ಥ ತಾಣವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಪಾಕಿಸ್ತಾನ ಮತ್ತು ದುಬೈ ನಡುವಿನ ಪ್ರಯಾಣದ ಅಂತರ ಕಡಿಮೆ ಇರುವುದರಿಂದ ಆಟಗಾರ್ತಿಯರು ಹಾಗೂ ಇತರರ ಪ್ರಯಾಣದ ವ್ಯವಸ್ಥೆ ಮಾಡುವುದು ಸುಲಭವಾಗಲಿದೆ ಎಂಬ ಲೆಕ್ಕಾಚಾರವೂ ಇದೆ.

ಮುಂದುವರೆದ ಹೈಬ್ರಿಡ್ ಮಾದರಿ

ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಐಸಿಸಿ ಟೂರ್ನಿಗಳಲ್ಲಿ ಎರಡೂ ದೇಶಗಳು ಪರಸ್ಪರ ಆತಿಥ್ಯ ವಹಿಸುವ ಪಂದ್ಯಾವಳಿಗಳಿಗೆ ಹೈಬ್ರಿಡ್ ಮಾದರಿಯನ್ನು ಅನುಸರಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ವ್ಯವಸ್ಥೆಯನ್ನು ಐಸಿಸಿ 2024ರ ಡಿಸೆಂಬರ್‌ನಲ್ಲಿ ಖಚಿತಪಡಿಸಿತ್ತು. ಇದರ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಆತಿಥ್ಯ ವಹಿಸುವ ಐಸಿಸಿ ಟೂರ್ನಿಗಳಲ್ಲಿ ಈ ಎರಡೂ ದೇಶಗಳ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸಲಾಗುತ್ತದೆ. ಈ ವ್ಯವಸ್ಥೆಯನ್ನು 2028ರ ಮಹಿಳಾ ಟಿ20 ವಿಶ್ವಕಪ್‌ವರೆಗೂ ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ.

2027ರ ಏಕದಿನ ವಿಶ್ವಕಪ್‌ ಆಡುವ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ

2025ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಇದೇ ವ್ಯವಸ್ಥೆ

2025ರಲ್ಲಿ ಪಾಕಿಸ್ತಾನ ಆತಿಥ್ಯ ವಹಿಸಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲೂ ಹೈಬ್ರಿಡ್ ಮಾದರಿಯನ್ನು ಅನುಸರಿಸಲಾಗಿತ್ತು. ಭಾರತ ತಂಡದ ಪಂದ್ಯಗಳಿಗೆ ದುಬೈ ಅನ್ನು ತಟಸ್ಥ ತಾಣವಾಗಿ ಆಯ್ಕೆ ಮಾಡಲಾಗಿತ್ತು. ಭಾರತ ತಂಡ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲೇ ಆಡಿತ್ತು. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲೂ ಗೆಲುವು ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಒಟ್ಟು 15 ಪಂದ್ಯಗಳ ಪೈಕಿ 10 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದಿದ್ದವು.

ಒಟ್ಟಿನಲ್ಲಿ, 2028ರ ಮಹಿಳಾ ಟಿ20 ವಿಶ್ವಕಪ್ ಆಯೋಜನೆಯ ಜವಾಬ್ದಾರಿ ಪಾಕಿಸ್ತಾನಕ್ಕೆ ಸಿಗುವ ಸಾಧ್ಯತೆ ಇದ್ದರೂ, ಭಾರತ ತಂಡದ ಪಂದ್ಯಗಳು ಎಲ್ಲಿ ನಡೆಯಲಿವೆ ಎಂಬ ಕುತೂಹಲ ಮುಂದುವರಿದಿದೆ. ಯುಎಇಯನ್ನು ತಟಸ್ಥ ತಾಣವಾಗಿ ಆಯ್ಕೆ ಮಾಡಲಾಗುತ್ತದೆಯೇ ಎಂಬುದರ ಬಗ್ಗೆ ಐಸಿಸಿಯ ಅಂತಿಮ ನಿರ್ಧಾರಕ್ಕಾಗಿ ಕಾಯಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us