ಸೂರ್ಯಾಭಿಷೇಕ… ಎದುರಾಳಿಗಳಿಗೆ ಎಚ್ಚರಿಕೆಯ ಕರೆಗಂಟೆ!

ಕೇವಲ 5 ಓವರ್​ಗಳಲ್ಲಿ 100 ರನ್​ಗಳು, ಪವರ್​ಪ್ಲೇನಲ್ಲಿ 118 ರನ್​ಗಳು, 7.1 ಓವರ್​ಗಳಲ್ಲಿ 133 ರನ್​ಗಳು... ಇದು ವೆಲ್ಟಿಂಗ್ಟನ್ ಮೈದಾನದಲ್ಲಿ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಎಬ್ಬಿಸಿದ ರನ್ ಅಲೆ. ಕಿವೀಸ್​ನ ಅನುಭವಿ ಬೌಲರ್​ಗಳನ್ನೇ ಚೆಂಡಾಡಿದ ಸೂರ್ಯಾಭಿಷೇಕ ಜೋಡಿ ಓಪನಿಂಗ್ ಸ್ಟೇಟ್‌ಮೆಂಟ್ ಮೂಲಕ ಎದುರಾಳಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸೂರ್ಯಾಭಿಷೇಕ... ಎದುರಾಳಿಗಳಿಗೆ ಎಚ್ಚರಿಕೆಯ ಕರೆಗಂಟೆ!
Abhishek Sharma-Vaibhav Sooryavanshi
Image Credit source: BCCI

Updated on: Oct 28, 2026 | 11:07 AM

ಭಾರತೀಯ ಕ್ರಿಕೆಟ್‌ನ ಟಿ20 ಶೈಲಿ ಈಗ ಸಂಪೂರ್ಣವಾಗಿ ಬದಲಾಗಿದೆ. ಮೊದಲ ಓವರ್‌ನಿಂದಲೇ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡುವ ಹೊಸ ಆಕ್ರಮಣಕಾರಿ ನೀತಿಯನ್ನು ಟೀಮ್ ಇಂಡಿಯಾ ಅಪ್ಪಿಕೊಂಡಿದೆ. ಈ ಹೊಚ್ಚ ಹೊಸ ತಂತ್ರಕ್ಕೆ ಬಲ ತುಂಬುತ್ತಿರುವುದು ಯುವ ಎಡಗೈ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ. ಇತ್ತೀಚೆಗೆ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಧೂಳೆಬ್ಬಿಸಿದ ಈ ಜೋಡಿಯ ಯಶಸ್ಸಿನ ರಹಸ್ಯವನ್ನು ಬಿಸಿಸಿಐ  ವಿಶೇಷ ಸಂದರ್ಶನವೊಂದರಲ್ಲಿ ಅನಾವರಣಗೊಳಿಸಿದೆ. “ದ ಪರ್ಫೆಕ್ಟ್ ಓಪನಿಂಗ್ ಸ್ಟೇಟ್‌ಮೆಂಟ್” ಎಂದು ಹೆಸರಿಡಲಾಗಿರುವ ಈ ಸಂದರ್ಶನದ ಮುಖ್ಯಾಂಶಗಳು ಹೀಗಿದೆ…

ನಿರ್ಭೀತ ಆಟವೇ ನಮ್ಮ ಮಂತ್ರ:

ಸಂದರ್ಶನದಲ್ಲಿ ಇಬ್ಬರೂ ಬ್ಯಾಟರ್‌ಗಳು ಒಪ್ಪಿಕೊಂಡ ಪ್ರಮುಖ ಅಂಶವೆಂದರೆ ಅವರ ‘ಫಿಯರ್‌ಲೆಸ್ ಕ್ರಿಕೆಟ್’ ಶೈಲಿ. ವಿಕೆಟ್ ಕಳೆದುಕೊಳ್ಳುವ ಭಯವಿಲ್ಲದೆ, ಮೊದಲ ಎಸೆತದಿಂದಲೇ ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈಯುವುದು ಇವರ ಮುಖ್ಯ ಉದ್ದೇಶವಾಗಿದೆ. ಪವರ್‌ಪ್ಲೇ ಓವರ್‌ಗಳ ಸಂಪೂರ್ಣ ಲಾಭ ಪಡೆದು ತಂಡಕ್ಕೆ ಸ್ಪೋಟಕ ಆರಂಭ ಒದಗಿಸುವುದೇ ನಮ್ಮ ತಂತ್ರ ಎಂದು ಅಭಿಷೇಕ್ ಶರ್ಮಾ ತಿಳಿಸಿದ್ದಾರೆ.

ಉತ್ತಮ ಹೊಂದಾಣಿಕೆ:

ಕ್ರೀಸ್‌ನಲ್ಲಿ ಒಬ್ಬರಿಗೊಬ್ಬರು ನೀಡುವ ಬೆಂಬಲವೇ ಈ ಜೋಡಿಯ ಯಶಸ್ಸಿನ ಹಿಂದಿನ ಶಕ್ತಿ. ವೈಭವ್ ಅವರ ಟೈಮಿಂಗ್ ಮತ್ತು ಬ್ಯಾಟಿಂಗ್ ಶೈಲಿಯನ್ನು ಅಭಿಷೇಕ್ ಶ್ಲಾಘಿಸಿದರೆ, ಅಭಿಷೇಕ್ ಅವರ ಅನುಭವ ಮತ್ತು ಸಿಕ್ಸರ್ ಹೊಡೆಯುವ ಸಾಮರ್ಥ್ಯ ತಮಗೆ ಸ್ಫೂರ್ತಿ ಎಂದು ವೈಭವ್ ಹೇಳಿದ್ದಾರೆ. ಕ್ರೀಸ್‌ನಲ್ಲಿದ್ದಾಗ ರನ್ನಿಂಗ್ ಬಿಟ್ವೀನ್ ದಿ ವಿಕೆಟ್ಸ್ ಮತ್ತು ಸ್ಟ್ರೈಕ್ ರೊಟೇಷನ್ ಮಾಡಲು ಇವರ ನಡುವಿನ ಪರಸ್ಪರ ತಿಳುವಳಿಕೆ ಮತ್ತು ಹೊಂದಾಣಿಕೆ ಪ್ರಮುಖ ಪಾತ್ರ ವಹಿಸಿದೆ.

ಆ ತರಹನೇ ಆಡುತ್ತೇನೆ!

ನೆಟ್ಸ್‌ನಲ್ಲಿ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಜೊತೆ  ಆಡಿದ ಒಂದು ಮಾತು ಇಡೀ ಭಾರತೀಯ ಕ್ರಿಕೆಟ್‌ನ ಪ್ರಸ್ತುತ ಮನಸ್ಥಿತಿಯನ್ನು ಪ್ರತಿಬಿಂಬಿಸುವಂತಿದೆ, “ಭಯ್ಯಾ, ಕೇಳುಂಗಾ ಭಿ ವೈಸೇ ಹೀ” (ಅಣ್ಣ, ನಾನು ಆ ತರಹನೇ ಆಡುತ್ತೇನೆ). ‘ಭಾಗ್ ಮಿಲ್ಖಾ ಭಾಗ್’ ಚಿತ್ರದ ಈ ಪ್ರಸಿದ್ಧ ಸಂಭಾಷಣೆ ಕೇವಲ ಹಠ ಅಥವಾ ಜಿಗುಟುತನದ ಸಂಕೇತವಲ್ಲ. ಇದು ಯಾವುದೇ ಒತ್ತಡಕ್ಕೂ ಮಣಿಯದ, ತನ್ನ ಸಂಪೂರ್ಣ ಶಕ್ತಿಯನ್ನು ತಂಡಕ್ಕಾಗಿ ಧಾರೆ ಎರೆಯುವ ಅದಮ್ಯ ಚೇತನದ ಪ್ರತೀಕ. ಇಂದಿನ ಟೀಮ್ ಇಂಡಿಯಾದ ಯುವ ಆಟಗಾರರ ರಕ್ತದಲ್ಲೂ ಇದೇ ತೀವ್ರತೆ ಹರಿಯುತ್ತಿದೆ.

ಮಿಲ್ಖಾ ಸಿಂಗ್ ಓಡುವಾಗ ಹೇಗೆ ಎದುರಾಳಿ ಯಾರೆಂದು ನೋಡದೆ ಕೇವಲ ತನ್ನ ಗುರಿಯತ್ತ ಮಾತ್ರ ಗಮನ ನೆಟ್ಟಿದ್ದರೋ, ಅದೇ ರೀತಿ ಇಂದಿನ ಬ್ಯಾಟರ್‌ಗಳು ಬೌಲರ್ ಯಾರೆಂದು ನೋಡದೆ ಕೇವಲ ರನ್ ಗಳಿಸುವ ಮತ್ತು ತಂಡವನ್ನು ಗೆಲ್ಲಿಸುವ ಹಸಿವನ್ನು ಹೊಂದಿದ್ದಾರೆ. ಭಯಮುಕ್ತ ಕ್ರಿಕೆಟ್ ಆಡುವ ಈ ವಾತಾವರಣವೇ ತಂಡದ ಬೆನ್ನೆಲುಬಾಗಿದೆ. ಇದೇ ರಣತಂತ್ರದೊಂದಿಗೆ ನಾವು ಸಹ ನಿರ್ಭೀತಿಯಿಂದ ಆಡುತ್ತಿದ್ದೇವೆ ಎಂದು ವೈಭವ್ ಸೂರ್ಯವಂಶಿ-ಅಭಿಷೇಕ್ ಶರ್ಮಾ ತಿಳಿಸಿದ್ದಾರೆ.

ಗೆಲುವಿನ ಹಸಿವು :

ಯುವ ಭಾರತ ತಂಡದ ಹೊಸ ಗುಣಲಕ್ಷಣವನ್ನು ಈ ಜೋಡಿ ಮೈಗೂಡಿಸಿಕೊಂಡಿದೆ. ಎಂತಹದ್ದೇ ಕಠಿಣ ಪರಿಸ್ಥಿತಿ ಎದುರಾದರೂ ಭಯಗೊಳ್ಳದೇ, ಪರಸ್ಪರ ಬೆನ್ನುತಟ್ಟಿ ಪಂದ್ಯವನ್ನು ಗೆಲುವಿನತ್ತ ಮುನ್ನಡೆಸುವ ದೃಢ ವಿಶ್ವಾಸ ಇವರಲ್ಲಿದೆ. ವೈಯಕ್ತಿಕ ದಾಖಲೆಗಳಿಗಿಂತ ತಂಡದ ಗೆಲುವೇ ಮುಖ್ಯ ಎಂಬ ಮನೋಭಾವ ಟೀಮ್ ಇಂಡಿಯಾದಲ್ಲಿ ಎದ್ದು ಕಾಣುತ್ತದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಅಬ್ಬರ, ವಿಂಡೀಸ್ ಪಡೆಗೆ ಸ್ಯಾಮಿ ಬಹುಪರಾಕ್!

ಭಾರತೀಯ ಟಿ20 ಕ್ರಿಕೆಟ್‌ನ ಭವಿಷ್ಯದ ಭರವಸೆಯ ಜೋಡಿಯಾಗಿ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಹೊರಹೊಮ್ಮುತ್ತಿದ್ದಾರೆ. ಎದುರಾಳಿ ತಂಡಗಳಿಗೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ‘ಪರ್ಫೆಕ್ಟ್ ಓಪನಿಂಗ್ ಸ್ಟೇಟ್‌ಮೆಂಟ್’ ನೀಡುತ್ತಿರುವ ಈ ಇಬ್ಬರು ಎಡಗೈ ಬ್ಯಾಟರ್‌ಗಳ ದರ್ಬಾರ್ ಮುಂದಿನ ದಿನಗಳಲ್ಲೂ ಮುಂದುವರಿಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಇದು ಎದುರಾಳಿ ಪಡೆಗಳಿಗೆ ಬಿರುಗಾಳಿಯ ಮುನ್ಸೂಚನೆ ಹಾಗೂ ಸ್ಪಷ್ಟ ಎಚ್ಚರಿಕೆಯ ಕರೆಗಂಟೆ ಎಂಬುದಂತೂ ಸತ್ಯ.

 

Published On - 10:05 am, Wed, 28 October 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us