
2026ರ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಭಾರತ ಕಿರಿಯರ ತಂಡ, 1 ವಿಕೆಟ್‌ನ ರೋಚಕ ಜಯ ಸಾಧಿಸಿದೆ. ಆದರೆ, ಪಂದ್ಯ ಮುಗಿದ ಬೆನ್ನಲ್ಲೇ ಭಾರತೀಯ ಆಟಗಾರರು ನಡೆಸಿದ ಆಕ್ರಮಣಕಾರಿ ಸಂಭ್ರಮಾಚರಣೆ ಇದೀಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಯುವ ಆಟಗಾರರ ಈ ವರ್ತನೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಹ್ಮದ್ ಶೆಹಝಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವೆಂಬರ್ 14ರಂದು ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, ಕೊನೆಯ ಎಸೆತದಲ್ಲಿ ಮೋಹಿತ್ ಉಲ್ವಾ ಬಾರಿಸಿದ ಬೌಂಡರಿಯ ನೆರವಿನಿಂದ ಐತಿಹಾಸಿಕ ಗೆಲುವು ದಾಖಲಿಸಿತು. ಗೆಲುವಿನ ರನ್ ದಾಖಲಾಗುತ್ತಿದ್ದಂತೆಯೇ ಮೈದಾನಕ್ಕೆ ನುಗ್ಗಿದ ಕೆಲ ಭಾರತೀಯ ಆಟಗಾರರು, ಪಾಕಿಸ್ತಾನ್ ಆಟಗಾರರ ಮುಂದೆ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು.
ಈ ವೇಳೆ ಕೆಲ ಆಟಗಾರರು ಕೈ ಸನ್ನೆಗಳನ್ನು ಮಾಡುತ್ತಾ ಅತಿರೇಕದಿಂದ ವರ್ತಿಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಭಾರತೀಯ ತಂಡದ ಸಹಾಯಕ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಆಟಗಾರರನ್ನು ಹಿಂದಕ್ಕೆ ಕರೆತಂದರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಅಹ್ಮದ್ ಶೆಹಝಾದ್, ಯುವ ಆಟಗಾರರ ವರ್ತನೆಯನ್ನು ಟೀಕಿಸಿದ್ದಾರೆ.
“ಯುವ ಆಟಗಾರರು ಉತ್ಸಾಹದಿಂದ ಗೆಲುವನ್ನು ಸಂಭ್ರಮಿಸಬೇಕು ನಿಜ. ಆದರೆ, ಸಂಭ್ರಮಾಚರಣೆಯಲ್ಲಿ ಸಂತೋಷವಿರಬೇಕೇ ಹೊರತು ದ್ವೇಷ ಅಥವಾ ಹಗೆತನ ಇರಬಾರದು,” ಎಂದು ಶೆಹಝಾದ್ ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು ಮಾತನಾಡಿದ ಅಹ್ಮದ್ ಶೆಹಝಾದ್, “ದುರದೃಷ್ಟವಶಾತ್, ಹಿರಿಯ ಆಟಗಾರರು ಕೆಲವು ಕೆಟ್ಟ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅವು ಈಗ ಬದಲಾಗಬೇಕಿದೆ. ನಾವು ಬದಲಾಗುವ ಸಮಯ ಬಂದಿದೆ. ಎದುರಾಳಿ ತಂಡಕ್ಕೆ ಗೌರವ ನೀಡುವ ಮೂಲಕ ನಿಜವಾದ ಕ್ರೀಡಾಸ್ಫೂರ್ತಿಯನ್ನು ಮೈಗೂಡಿಸಿಕೊಳ್ಳಬೇಕು,” ಎಂದು ಕಿವಿಮಾತು ಹೇಳಿದ್ದಾರೆ.
ಅಹ್ಮದ್ ಶೆಹಝಾದ್ ಅವರ ಈ ಹೇಳಿಕೆಗೆ ಕ್ರಿಕೆಟ್ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಿರಿಯರ ಮಟ್ಟದಲ್ಲೇ ಆಟಗಾರರಿಗೆ ಶಿಸ್ತು ಮತ್ತು ಕ್ರೀಡಾಸ್ಫೂರ್ತಿಯ ಪಾಠ ಕಲಿಸಬೇಕು ಎಂದು ಹಲವರು ಶೆಹಝಾದ್ ಮಾತನ್ನು ಬೆಂಬಲಿಸಿದ್ದಾರೆ. ಮತ್ತೊಂದೆಡೆ, ಗುಂಪು ಹಂತದಲ್ಲಿ ಪಾಕಿಸ್ತಾನ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡ ಖುಷಿ ಮತ್ತು ಕೊನೆಯ ಎಸೆತದವರೆಗೂ ಇದ್ದ ತೀವ್ರ ಒತ್ತಡದಿಂದಾಗಿ ಆಟಗಾರರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ ಎಂದು ಭಾರತೀಯ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಿವೀಸ್ ನಾಡಿನಲ್ಲಿ ರೋಹಿತ್-ಕೊಹ್ಲಿಯ ಕನಸು ನುಚ್ಚುನೂರು!
ಒಟ್ಟಾರೆಯಾಗಿ, ಮೈದಾನದಲ್ಲಿ ಗೆಲುವಿನ ಸಂಭ್ರಮ ಇರಲಿ, ಆದರೆ ಅದು ಎಲ್ಲೆ ಮೀರದಿರಲಿ ಎಂಬುದೇ ಅಹ್ಮದ್ ಶೆಹಝಾದ್ ಅವರ ಮಾತಿನ ಸಾರಾಂಶ. ಮುಂದಿನ ದಿನಗಳಲ್ಲಾದರೂ ಯುವ ಆಟಗಾರರು ಈ ಕಿವಿಮಾತನ್ನು ಪಾಲಿಸಿ, ಕ್ರೀಡಾಸ್ಫೂರ್ತಿಯನ್ನು ಎತ್ತಿಹಿಡಿಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
Published On - 1:40 pm, Mon, 16 November 26