ಬಹುನಿರೀಕ್ಷಿತ 2023 ರ ಏಕದಿನ ವಿಶ್ವಕಪ್ಗೆ (ICC World Cup 2023) ಇಂದಿನಿಂದ ಅಂದರೆ ಅಕ್ಟೋಬರ್ 5 ರಿಂದ ಅದ್ಧೂರಿ ಚಾಲನೆ ಸಿಗುತ್ತಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಆವೃತ್ತಿಯ ಅಂದರೆ 2019 ರ ವಿಶ್ವಕಪ್ ಫೈನಲಿಸ್ಟ್ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ (England vs New Zealand) ನಡುವೆ ನಡೆಯಲಿದೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಹಾಗಾಗಿ 1 ಗಂಟೆ 30 ನಿಮಿಷಗಳ ನಂತರ ಟಾಸ್ ನಡೆಯಲಿದೆ. ಈ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಸಜ್ಜಾಗಿವೆ. ಆದರೆ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಇಂಗ್ಲೆಂಡ್ ಪಾಳಯಕ್ಕೆ ಕೊಂಚ ಹಿನ್ನಡೆಯುಂಟಾಗಿದೆ. ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಇಂಜುರಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ವಾಸ್ತವವಾಗಿ ಈ ಬಾರಿಯ ವಿಶ್ವಕಪ್‌ನ ಮುನ್ನಾದಿನದಂದು 10 ತಂಡಗಳ 10 ನಾಯಕರು ಅಹಮದಾಬಾದ್ನಲ್ಲಿ ಐಸಿಸಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅಭಿಮಾನಿಗಳೊಂದಿಗೆ ಕೆಟ್ಟ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಇಂಗ್ಲೆಂಡ್ ಮಾಜಿ ನಾಯಕ ಬೆನ್ ಸ್ಟೋಕ್ಸ್ ಮೊದಲ ಪಂದ್ಯದಲ್ಲಿ ಆಡುವುದಿಲ್ಲ ಎಂದು ನಾಯಕ ಜೋಸ್ ಬಟ್ಲರ್ ಘೋಷಿಸಿದ್ದಾರೆ. ಹೀಗಾಗಿ ಮೊದಲ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ಗೆ ಬಿಗ್ ಶಾಕ್ ಎದುರಾಗಿದೆ. ಕೇಳಿಬಂದಿರುವ ಮಾಹಿತಿ ಪ್ರಕಾರ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮುನ್ನ ಬೆನ್ ಸ್ಟೋಕ್ಸ್ ಗಾಯಗೊಂಡಿದ್ದು, ಅದರಿಂದ ಅವರು ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ ಎಂದು ವರದಿಯಾಗಿದೆ.
2019ರಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಇಂಗ್ಲೆಂಡ್ ವಿಶ್ವಕಪ್ ಗೆದ್ದಿತ್ತು. ಆ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಆ ನಂತರ ಸ್ಟೋಕ್ಸ್ 2022 ರಲ್ಲಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ 2023 ರ ವಿಶ್ವಕಪ್‌ಗಾಗಿ ನಾಯಕನ ವಿನಂತಿಯ ಮೇರೆಗೆ ಬೆನ್ ಸ್ಟೋಕ್ಸ್ ತಮ್ಮ ನಿವೃತ್ತಿಯ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದರು. ಈಗ ವಿಶ್ವಕಪ್‌ನ ಮುನ್ನಾದಿನದಂದು ಸ್ಟೋಕ್ಸ್ ಗಾಯಗೊಂಡಿರುವುದು ತಂಡದಲ್ಲಿ ಆತಂಕ ಮೂಡಿಸಿದೆ. ಅಲ್ಲದೆ, ಈ ಗಾಯದಿಂದ ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಕುರಿತು ಏನನ್ನೂ ಸ್ಪಷ್ಟಪಡಿಸಲಾಗಿಲ್ಲ.
ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ ಮತ್ತು ವಿಲ್ ಯಂಗ್.
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಡೇವಿಡ್ ವಿಲ್ಲಿ, ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:09 am, Thu, 5 October 23