
ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸ ನಿರ್ಮಿಸಿದ್ದು ವೆಸ್ಟ್ ಇಂಡೀಸ್ ತಂಡದ ದಾಂಡಿಗ ಅಮೀರ್ ಜಾಂಗೂ ಮತ್ತು ನಾಯಕ ರೋಸ್ಟನ್ ಚೇಸ್. ಅದು ಕೂಡ 6ನೇ ವಿಕೆಟ್ಗೆ ಅತ್ಯದ್ಭುತ ಜೊತೆಯಾಟವಾಡುವ ಮೂಲಕ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಪ್ರಥಮ ಇನಿಂಗ್ಸ್ನಲ್ಲಿ 308 ರನ್ ಕಲೆಹಾಕಿದ್ದರು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಅಮೀರ್ ಜಾಂಗೂ ಹಾಗೂ ರೋಸ್ಟನ್ ಚೇಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಬ್ಯಾಟಿಂಗ್ನೊಂದಿಗೆ ಈ ಜೋಡಿಯು 6ನೇ ವಿಕೆಟ್ಗೆ ಬರೋಬ್ಬರಿ 401 ರನ್ ಪೇರಿಸಿದರು. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ 6ನೇ ವಿಕೆಟ್ಗೆ ಅತ್ಯಧಿಕ ರನ್ಗಳ ಜೊತೆಯಾಟವಾಡಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ಬೆನ್ ಸ್ಟೋಕ್ಸ್ ಮತ್ತು ಜಾನಿ ಬೈರ್‌ಸ್ಟೋವ್ ಜೋಡಿ ಹೆಸರಿನಲ್ಲಿತ್ತು. 2016 ರಲ್ಲಿ ಸ್ಟೋಕ್ಸ್ ಹಾಗೂ ಬೈರ್‌ಸ್ಟೋವ್ 6ನೇ ವಿಕೆಟ್ಗೆ 399 ರನ್ ಸೇರಿಸಿದ್ದು ಇದುವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು.
ಇದೀಗ ಆರನೇ ವಿಕೆಟ್ಗೆ 401 ರನ್ಗಳ ಜೊತೆಯಾಟವಾಡುವ ಮೂಲಕ ಅಮೀರ್ ಜಾಂಗೂ ಹಾಗೂ ರೋಸ್ಟನ್ ಚೇಸ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಆರನೇ ವಿಕೆಟ್ಗೆ 400+ ರನ್ಗಳ ಜೊತೆಯಾಟವಾಡಿದ ಮೊದಲ ಜೋಡಿ ಎನಿಸಿಕೊಂಡಿದ್ದಾರೆ. ಈ ಮೂಲಕ 149 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
ಶ್ರೀಲಂಕಾ ತಂಡ 308 ರನ್ಗಳ ಪ್ರಥಮ ಇನಿಂಗ್ಸ್ಗೆ ಉತ್ತರವಾಗಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ವೆಸ್ಟ್ ಇಂಡೀಸ್ ಬರೋಬ್ಬರಿ 626 ರನ್ ಕಲೆಹಾಕಿದೆ.
ಇದನ್ನೂ ಓದಿ: ಹೀಗಾದ್ರೆ ಮಾತ್ರ ಟೀಮ್ ಇಂಡಿಯಾ ಸೆಮಿಫೈನಲ್ಗೇರಲಿದೆ..!
ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 318 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡವು 3ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 15 ರನ್ ಕಲೆಹಾಕಿದೆ. ಅಲ್ಲದೆ 303 ರನ್ಗಳ ಹಿನ್ನಡೆಯೊಂದಿಗೆ ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.