
ಭಾರತ ಕ್ರಿಕೆಟ್ ತಂಡದ ದಂತಕಥೆ, ಸ್ಫೋಟಕ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಬ್ಯಾಟಿಂಗ್ ಶೈಲಿಯನ್ನು ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೀಗ ಅವರ ಪುತ್ರ 18 ವರ್ಷದ ಆರ್ಯವೀರ್ ಸೆಹ್ವಾಗ್ ಮೈದಾನದಲ್ಲಿ ಅಪ್ಪನ ಬ್ಯಾಟಿಂಗ್ ಶೈಲಿಯನ್ನು ಮರುಸೃಷ್ಟಿಸುವ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ.
ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಲಯನ್ಸ್ ಪರ ಕಣಕ್ಕಿಳಿಯುತ್ತಿರುವ ಆರ್ಯವೀರ್ ಸೆಹ್ವಾಗ್, ನ್ಯೂ ಡೆಲ್ಲಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಆಫ್ ಸ್ಟಂಪ್‌ನಿಂದ ಹೊರಗಿದ್ದ ಶಾರ್ಟ್-ಲೆಂತ್ ಎಸೆತವನ್ನು ಬ್ಯಾಕ್-ಫುಟ್‌ನಲ್ಲಿ ನಿಂತು ಕವರ್ಸ್ ದಿಕ್ಕಿನಲ್ಲಿ ಆಕರ್ಷಕ ಬೌಂಡರಿಗಟ್ಟಿದರು. ಶಾಟ್ ಹೊಡೆದ ನಂತರ ಅವರು ಬ್ಯಾಟ್ ಹಿಡಿದು ನಿಂತ ಭಂಗಿ ಅವರ ತಂದೆ ವೀರೇಂದ್ರ ಸೆಹ್ವಾಗ್ ಅವರನ್ನೇ ನೆನಪಿಸುವಂತಿತ್ತು.
ಅಷ್ಟೇ ಅಲ್ಲದೆ, ಆರ್ಯವೀರ್ ಅವರ ಈ ಶಾಟ್ ಅನ್ನು ಈ ಹಿಂದೆ ವೀರೇಂದ್ರ ಸೆಹ್ವಾಗ್ ಬಾರಿಸಿದ್ದ ಐಕಾನಿಕ್ ಬೌಂಡರಿಗೆ ಹೋಲಿಸಿ, ಡಿಪಿಎಲ್ ತನ್ನ ಅಧಿಕೃತ ಖಾತೆಯಲ್ಲಿ ‘ಸೈಡ್-ಬೈ-ಸೈಡ್’ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು “ಸೆಹ್ವಾಗ್ ಈಸ್ ಬ್ಯಾಕ್”, “ತಂದೆಗೆ ತಕ್ಕ ಮಗ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡುತ್ತಿದ್ದಾರೆ.
ತಂದೆಗೆ ತಕ್ಕ ಮಗ!😎😍#VirenderSehwag #AryavirSehwag #StarSportsKannada pic.twitter.com/rN8d8X9Eay
— Star Sports Kannada (@StarSportsKan) August 24, 2026
ಆ ಪಂದ್ಯದಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಆರ್ಯವೀರ್, ಕೇವಲ 14 ಎಸೆತಗಳಲ್ಲಿ 4 ಭರ್ಜರಿ ಬೌಂಡರಿಗಳ ನೆರವಿನಿಂದ 22 ರನ್ ಸಿಡಿಸಿದರು. 157.14 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರ ಈ ಆಕ್ರಮಣಕಾರಿ ಆರಂಭ, ತಂಡವು 6 ವಿಕೆಟ್‌ಗಳ ಸುಲಭ ಜಯ ದಾಖಲಿಸಲು ನೆರವಾಯಿತು.
Virender Sehwag 🤝 Aaryavir Sehwag.
Like Father, Like Son… 🔥 pic.twitter.com/pNDY0db6KB
— CricketGully (@thecricketgully) August 21, 2026
18 ವರ್ಷದ ಆರ್ಯವೀರ್ ಸೆಹ್ವಾಗ್ ಕೇವಲ ಟಿ20 ಮಾತ್ರವಲ್ಲದೆ, ದೀರ್ಘಾವಧಿಯ ಕ್ರಿಕೆಟ್‌ನಲ್ಲೂ ಈಗಾಗಲೇ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ನಡೆದ ಕೂಚ್ ಬೆಹಾರ್ ಟ್ರೋಫಿಯಲ್ಲಿ ದೆಹಲಿ ಪರ ಆಡಿದ್ದ ಅವರು, ಮೇಘಾಲಯ ವಿರುದ್ಧ ಕೇವಲ 309 ಎಸೆತಗಳಲ್ಲಿ 51 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 297 ರನ್ ಚಚ್ಚಿ ಇತಿಹಾಸ ನಿರ್ಮಿಸಿದ್ದರು.
ಇದನ್ನೂ ಓದಿ: ಧ್ರುವ್ ಜುರೆಲ್ ಶತಕಕ್ಕೆ ಧೋನಿ ದಾಖಲೆ ಧೂಳೀಪಟ
ತಂದೆಯಂತೆಯೇ ಯಾವುದೇ ಭಯವಿಲ್ಲದೆ, ಮುನ್ನುಗ್ಗಿ ಹೊಡೆಯುವ ಆಕ್ರಮಣಕಾರಿ ಶೈಲಿಯನ್ನು ಮೈಗೂಡಿಸಿಕೊಂಡಿರುವ ಆರ್ಯವೀರ್ ಸೆಹ್ವಾಗ್, ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟರೂ ಅಚ್ಚರಿಪಡಬೇಕಿಲ್ಲ.