Asia Cup 2025: ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಆಝಂ ಮಾನ ಕಳೆದ ತಂಡದ ಹೆಡ್ ಕೋಚ್

Asia Cup 2025: ಪಾಕಿಸ್ತಾನ ತನ್ನ 2025ರ ಏಷ್ಯಾಕಪ್ ತಂಡವನ್ನು ಪ್ರಕಟಿಸಿದ್ದು, ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಆಯ್ಕೆ ಮಾಡದಿರುವುದು ಆಶ್ಚರ್ಯ ಉಂಟುಮಾಡಿದೆ. ತರಬೇತುದಾರ ಮೈಕ್ ಹೆಸ್ಸನ್ ಅವರು ಬಾಬರ್ ಅವರ ಸ್ಪಿನ್ ವಿರುದ್ಧದ ಬ್ಯಾಟಿಂಗ್ ಮತ್ತು ಸ್ಟ್ರೈಕ್ ರೇಟ್ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಬಾಬರ್ ಅವರ ಇತ್ತೀಚಿನ ಕಳಪೆ ಪ್ರದರ್ಶನವೂ ಆಯ್ಕೆಯಲ್ಲಿ ಪ್ರಭಾವ ಬೀರಿದೆ ಎಂದು ಹೇಳಲಾಗಿದೆ.

Asia Cup 2025: ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಆಝಂ ಮಾನ ಕಳೆದ ತಂಡದ ಹೆಡ್ ಕೋಚ್
Babar Azam

Updated on: Aug 17, 2025 | 8:52 PM

ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುವ ಏಷ್ಯಾಕಪ್​ಗಾಗಿ (Asia Cup 2025) ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಅನೇಕ ಆಟಗಾರರಿಗೆ ಅವಕಾಶ ನೀಡಲಾಗಿದೆಯಾದರೂ ಅನುಭವಿ ಬ್ಯಾಟ್ಸ್‌ಮನ್ ಬಾಬರ್ ಆಝಂ (Babar Azam) ಹಾಗೂ ಮೊಹಮ್ಮದ್ ರಿಜ್ವಾನ್​ಗೆ ಸ್ಥಾನ ಸಿಕ್ಕಿಲ್ಲ. ಇವರಿಬ್ಬರು ಆಯ್ಕೆಯಾಗದಿರುವುದು ಪಾಕಿಸ್ತಾನಿ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಅದರಲ್ಲೂ ಮಾಜಿ ನಾಯಕ ಬಾಬರ್ ಆಝಂ ಆಯ್ಕೆಯಾಗದಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದೀಗ ಆ ಎಲ್ಲಾ ಪ್ರಶ್ನೆಗಳಿಗೆ ಪಾಕಿಸ್ತಾನದ ವೈಟ್ ಬಾಲ್ ಮುಖ್ಯ ತರಬೇತುದಾರ ಮೈಕ್ ಹೆಸ್ಸನ್ ಸ್ಪಷ್ಟ ಉತ್ತರ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಅವರನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂಬುದಕ್ಕೆ ಉತ್ತರಿಸಿರುವ ಹೆಸ್ಸನ್, ಬಾಬರ್​ಗಿರುವ ಕೆಲವು ನ್ಯೂನತೆಗಳನ್ನು ಜಗಜ್ಜಾಹೀರು ಮಾಡಿದ್ದಾರೆ.

ಬಾಬರ್‌ ನ್ಯೂನತೆ ಏನು?

2025 ರ ಏಷ್ಯಾಕಪ್‌ಗಾಗಿ ಪಾಕಿಸ್ತಾನ ತಂಡವನ್ನು ಘೋಷಿಸುವ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೈಕ್ ಹೆಸ್ಸನ್, ‘ಬಾಬರ್ ಕೆಲವು ವಿಭಾಗಗಳಲ್ಲಿ ತನ್ನನ್ನು ತಾನು ಸುಧಾರಿಸಿಕೊಳ್ಳಬೇಕಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ವಿಶೇಷವಾಗಿ ಅವರು ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕು ಮತ್ತು ಅವರ ಸ್ಟ್ರೈಕ್ ರೇಟ್ ಅನ್ನು ಸಹ ಸುಧಾರಿಸಿಕೊಳ್ಳಬೇಕು. ಇದರ ಮೇಲೆ ಬಾಬರ್ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಮತ್ತು ತಮ್ಮನ್ನು ತಾವು ಮತ್ತಷ್ಟು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ ಎಂದಿದ್ದಾರೆ.

ಬಾಬರ್‌ಗೆ ಸ್ಟ್ರೈಕ್ ರೇಟ್ ಸಮಸ್ಯೆ

ಜನವರಿ 2022 ರಿಂದ ಸ್ಪಿನ್ನರ್‌ಗಳ ವಿರುದ್ಧ ಟಿ20 ಸ್ವರೂಪದಲ್ಲಿ ಬಾಬರ್ ಆಝಂ ಅವರ ಸ್ಟ್ರೈಕ್ ರೇಟ್ 122.91 ಆಗಿದೆ. ಸ್ಪಿನ್ನರ್‌ಗಳ ವಿರುದ್ಧ ಕನಿಷ್ಠ 1000 ಎಸೆತಗಳನ್ನು ಎದುರಿಸಿದ 20 ಬ್ಯಾಟ್ಸ್‌ಮನ್‌ಗಳಲ್ಲಿ ಬಾಬರ್ ಅವರ ಸ್ಟ್ರೈಕ್ ರೇಟ್ ಅತ್ಯಂತ ಕೆಟ್ಟದಾಗಿದೆ. ಇತ್ತೀಚೆಗೆ, ಬಾಬರ್ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿದರು, ಇದರಲ್ಲಿ ಅವರು ಒಟ್ಟು 56 ರನ್‌ ಮಾತ್ರ ಕಲೆಹಾಕಿದ್ದರು. ವಿಶ್ವ ಕ್ರಿಕೆಟ್​ನ ಅತ್ಯುತ್ತಮ ಬ್ಯಾಟ್ಸ್‌ಮನ್​ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಬಾಬರ್ ಕೆಲವು ಸಮಯದಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಅವರು ಪಾಕ್ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಬಾಬರ್ ಅವರ ಅಂಕಿಅಂಶಗಳ ಬಗ್ಗೆ ಮಾತನಾಡಿದರೆ, ಅವರು ಪಾಕಿಸ್ತಾನ ಪರ 128 ಪಂದ್ಯಗಳಲ್ಲಿ 39.83 ಸರಾಸರಿ ಮತ್ತು 129.22 ಸ್ಟ್ರೈಕ್ ರೇಟ್‌ನಲ್ಲಿ 4223 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 36 ಅರ್ಧಶತಕಗಳು ಮತ್ತು 3 ಶತಕಗಳಿವೆ. ಹಾಗೆಯೇ ಬಾಬರ್ ಅವರ ಒಟ್ಟಾರೆ ಟಿ20 ಅಂಕಿಅಂಶಗಳ ಬಗ್ಗೆ ಮಾತನಾಡಿದರೆ, ಅವರು 320 ಪಂದ್ಯಗಳಲ್ಲಿ 43.07 ಸರಾಸರಿ ಮತ್ತು 129.33 ಸ್ಟ್ರೈಕ್ ರೇಟ್‌ನಲ್ಲಿ 11330 ರನ್‌ಗಳನ್ನು ಗಳಿಸಿದ್ದಾರೆ. ಅವರ ಹೆಸರಿನಲ್ಲಿ 11 ಶತಕಗಳು ಮತ್ತು 93 ಅರ್ಧಶತಕಗಳು ದಾಖಲಾಗಿವೆ.

Asia Cup 2025: ಬಾಬರ್- ರಿಜ್ವಾನ್ ಇಲ್ಲದ ಪಾಕಿಸ್ತಾನ ಪ್ಲೇಯಿಂಗ್ 11 ಹೇಗಿರಲಿದೆ?

ಏಷ್ಯಾಕಪ್​ಗೂ ಮುನ್ನ ತ್ರಿಕೋನ ಸರಣಿ

2025 ರ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುತ್ತಿದ್ದು, ಅದರ ಅಂತಿಮ ಪಂದ್ಯ ಸೆಪ್ಟೆಂಬರ್ 28 ರಂದು ನಡೆಯಲಿದೆ. ಇದಕ್ಕೂ ಮೊದಲು, ಸಲ್ಮಾನ್ ಅಲಿ ಆಘಾ ನಾಯಕತ್ವದ ತಂಡವು ಯುಎಇಯ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಮತ್ತು ಯುಎಇ ವಿರುದ್ಧ ತ್ರಿಕೋನ ಸರಣಿಯನ್ನು ಆಡಲಿದೆ. ಈ ತ್ರಿಕೋನ ಸರಣಿ ಆಗಸ್ಟ್ 29 ರಿಂದ ಪ್ರಾರಂಭವಾಗುತ್ತಿದ್ದು, ಅದರ ಅಂತಿಮ ಪಂದ್ಯ ಸೆಪ್ಟೆಂಬರ್ 7 ರಂದು ನಡೆಯಲಿದೆ.

ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಆಫ್ರಿದಿ ಮತ್ತು ಸುಫ್ಯಾನ್ ಮೊಕಿಮ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ