44 ವರ್ಷಗಳ ಕಾಯುವಿಕೆ ಅಂತ್ಯ: ಹೊಸ ಬರೆದ ಸಾವನ್ ಬರ್ವಾಲ್

ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಐತಿಹಾಸಿಕ ಕ್ಷಣವೊಂದು ಜಪಾನ್ ನೆಲದಲ್ಲಿ ದಾಖಲಾಗಿದೆ. 2026ರ ಏಷ್ಯನ್ ಕ್ರೀಡಾಕೂಟದ ಪುರುಷರ ಮ್ಯಾರಥಾನ್‌ನಲ್ಲಿ ದೇಶದ ಹೆಮ್ಮೆಯ ಲಾಂಗ್ ಡಿಸ್ಟೆನ್ಸ್ ರನ್ನರ್ ಸಾವನ್ ಬರ್ವಾಲ್ ಅವರು ಬೆಳ್ಳಿ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ 44 ವರ್ಷಗಳ ಕಾಯುವಿಕೆ ಅಂತ್ಯಗೊಳಿಸಿದ್ದಾರೆ.

44 ವರ್ಷಗಳ ಕಾಯುವಿಕೆ ಅಂತ್ಯ: ಹೊಸ ಬರೆದ ಸಾವನ್ ಬರ್ವಾಲ್
Sawan Barwal
Image Credit source: Asian Games

Updated on: Sep 26, 2026 | 7:41 AM

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೆಟಿಕ್ಸ್ ತಂಡದ ಪದಕದ ಬೇಟೆ ಮುಂದುವರಿದಿದೆ. ಶನಿವಾರ ಮುಂಜಾನೆ ನಡೆದ ಪುರುಷರ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾರತದ ಹೆಮ್ಮೆಯ ಅಥ್ಲಿಟ್ ಸಾವನ್ ಬರ್ವಾಲ್ ಅವರು ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ಮ್ಯಾರಥಾನ್ ಇತಿಹಾಸದಲ್ಲಿ ಭಾರತದ 44 ವರ್ಷಗಳ ಸುದೀರ್ಘ ಪದಕದ ಕಾಯುವಿಕೆಗೆ ಅವರು ಅಂತ್ಯ ಹಾಡಿದ್ದಾರೆ.

ರಾಷ್ಟ್ರೀಯ ದಾಖಲೆಯೊಂದಿಗೆ ಬೆಳ್ಳಿಯ ಓಟ:

ಹಿಮಾಚಲ ಪ್ರದೇಶ ಮೂಲದ ಹಾಗೂ ಭಾರತೀಯ ಸೇನೆಯ ಹವಿಲ್ದಾರ್ ಆಗಿರುವ ಸಾವನ್ ಬರ್ವಾಲ್, ನಿಗದಿತ 42.195 ಕಿಲೋಮೀಟರ್ ದೂರವನ್ನು ಕೇವಲ 2 ಗಂಟೆ 11 ನಿಮಿಷ 37 ಸೆಕೆಂಡುಗಳಲ್ಲಿ ತಲುಪಿ ಎರಡನೇ ಸ್ಥಾನ ಪಡೆದರು. ಈ ಓಟದ ಮೂಲಕ ಅವರು ತಮ್ಮದೇ ಹೆಸರಿನಲ್ಲಿದ್ದ ವೈಯಕ್ತಿಕ ಅತ್ಯುತ್ತಮ ಸಮಯವನ್ನು ಉತ್ತಮಪಡಿಸಿಕೊಂಡಿದ್ದಲ್ಲದೆ, ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದರು.

ರೇಸ್‌ನ ಆರಂಭದಿಂದಲೂ ಮುಂಚೂಣಿಯಲ್ಲಿದ್ದ ಸಾವನ್, ಅರ್ಧ ಹಾದಿ ಮುಗಿಯುವ ಹೊತ್ತಿಗೆ (1:05:54 ಸಮಯದೊಂದಿಗೆ) ಎರಡನೇ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರು. ಕೊನೆಯ 7 ಕಿಲೋಮೀಟರ್‌ಗಳಿರುವಾಗ ಚಿನ್ನದ ಪದಕಕ್ಕಾಗಿ ಜಪಾನ್ ಓಟಗಾರನಿಗೆ ತೀವ್ರ ಪೈಪೋಟಿ ನೀಡಿದ ಅವರು, ಅಂತಿಮವಾಗಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟರು. ಜಪಾನ್‌ನ ಇಚಿಟಾಕಾ ಯಮಶಿತಾ (2:10:49) ಚಿನ್ನ ಗೆದ್ದರೆ, ಚೀನಾದ ಪೈಯೌ ಫೆಂಗ್ (2:12:13) ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

44 ವರ್ಷಗಳ ಕಾಯುವಿಕೆ ಅಂತ್ಯ:

ಏಷ್ಯನ್ ಗೇಮ್ಸ್‌ನ ಮ್ಯಾರಥಾನ್ ವಿಭಾಗದಲ್ಲಿ ಭಾರತಕ್ಕೆ ಸುದೀರ್ಘ ಇತಿಹಾಸವಿದ್ದರೂ, ಪದಕ ಗೆದ್ದು ದಶಕಗಳೇ ಕಳೆದಿದ್ದವು. ಕೊನೆಯ ಬಾರಿಗೆ 1982ರ ದೆಹಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಎಚ್. ಕೆ. ಸೀತಾರಾಮ್ ಅವರು ಕಂಚಿನ ಪದಕ ಗೆದ್ದಿದ್ದರು. ಅದಾದ ಬಳಿಕ ಯಾವುದೇ ಭಾರತೀಯ ಅಥ್ಲಿಟ್‌ಗೆ ಈ ವಿಭಾಗದಲ್ಲಿ ವೇದಿಕೆ ಏರಲು ಸಾಧ್ಯವಾಗಿರಲಿಲ್ಲ. ಇದೀಗ ಸಾವನ್ ಬರ್ವಾಲ್ ಗೆದ್ದಿರುವ ಈ ಬೆಳ್ಳಿಯು, ವಿದೇಶಿ ನೆಲದಲ್ಲಿ ನಡೆದ ಏಷ್ಯನ್ ಗೇಮ್ಸ್ ಮ್ಯಾರಥಾನ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಎಂಬ ಐತಿಹಾಸಿಕ ಹಿರಿಮೆಗೂ ಪಾತ್ರವಾಗಿದೆ.

ಏಷ್ಯನ್ ಗೇಮ್ಸ್ ಮ್ಯಾರಥಾನ್‌ನಲ್ಲಿ ಭಾರತದ ಪದಕದ ಇತಿಹಾಸ:

  • 1951 (ದೆಹಲಿ): ಚೋಟಾ ಸಿಂಗ್ — ಚಿನ್ನದ ಪದಕ
  • 1951 (ದೆಹಲಿ): ಸೂರತ್ ಸಿಂಗ್ ಮಾಥುರ್ — ಕಂಚಿನ ಪದಕ
  • 1982 (ದೆಹಲಿ): ಹೊಸೂರು ಕುಕ್ಕಪ್ಪ ಸೀತಾರಾಮ್ — ಕಂಚಿನ ಪದಕ
  • 2026 (ನಗೋಯಾ): ಸಾವನ್ ಬರ್ವಾಲ್ — ಬೆಳ್ಳಿ ಪದಕ

ಇದನ್ನೂ ಓದಿ: ಏಷ್ಯನ್ ಗೇಮ್ಸ್​: ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ

ಭಾರತದ ಪದಕಗಳ ಸಂಖ್ಯೆ 24 ಕ್ಕೆ ಏರಿಕೆ:

ಸಾವನ್ ಬರ್ವಾಲ್ ಅವರ ಈ ಬೆಳ್ಳಿ ಪದಕದ ನೆರವಿನಿಂದ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಈಗಾಗಲೇ ಭಾರತದ ಮಿಕ್ಸ್ಡ್ 4×400 ಮೀಟರ್ ರಿಲೇ ತಂಡ ಬೆಳ್ಳಿ ಗೆದ್ದು ಬೀಗಿದ್ದರೆ, ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಹಾಗೂ ಶೂಟಿಂಗ್‌ನಲ್ಲಿ ಭಾರತದ ಶೂಟರ್‌ಗಳು ಬೆಳ್ಳಿಯ ಸಾಧನೆ ಮಾಡಿದ್ದಾರೆ. ಸಾವನ್ ಅವರ ಈ ಐತಿಹಾಸಿಕ ಓಟವು ಮುಂಬರುವ ದಿನಗಳಲ್ಲಿ ಕಣಕ್ಕಿಳಿಯಲಿರುವ ಇತರ ಭಾರತೀಯ ಅಥ್ಲಿಟ್‌ಗಳಿಗೆ ಮತ್ತಷ್ಟು ಸ್ಫೂರ್ತಿ ತುಂಬಲಿದೆ.

 

Published On - 7:40 am, Sat, 26 September 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us