ಬಾಂಗ್ಲಾ ವಿರುದ್ಧ ಸರಣಿ ಸೋಲಿನ ಭಯ; ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ಆಸ್ಟ್ರೇಲಿಯಾ

Australia vs Bangladesh 2nd Test: ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ, ಸರಣಿ ಸಮಬಲಗೊಳಿಸಲು ಎರಡನೇ ಟೆಸ್ಟ್‌ಗೆ ಸಜ್ಜಾಗಿದೆ. ನಾಳೆಯಿಂದ ಆರಂಭವಾಗಲಿರುವ ಪಂದ್ಯಕ್ಕೆ ಆಸ್ಟ್ರೇಲಿಯಾ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಜೇಕ್ ವೀದರಾಲ್ಡ್ ಬದಲಿಗೆ ಮ್ಯಾಥ್ಯೂ ರೆನ್‌ಶಾ ತಂಡ ಸೇರಿದ್ದು, ಆಸೀಸ್ ಗೆಲುವಿಗೆ ನಿರ್ಣಾಯಕವಾಗಲಿದೆ. ಸರಣಿ ಸೋಲಿನ ಅವಮಾನ ತಪ್ಪಿಸಲು ಈ ಗೆಲುವು ಆಸ್ಟ್ರೇಲಿಯಾಕ್ಕೆ ಅನಿವಾರ್ಯ.

ಬಾಂಗ್ಲಾ ವಿರುದ್ಧ ಸರಣಿ ಸೋಲಿನ ಭಯ; ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ಆಸ್ಟ್ರೇಲಿಯಾ
Australia

Updated on: Aug 21, 2026 | 5:29 PM

ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿರುವ ಬಾಂಗ್ಲಾದೇಶ (Australia vs Bangladesh) ತಂಡ, ಆಡಿದ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅವರ ನೆಲದಲ್ಲೇ ಹೀನಾಯವಾಗಿ ಸೋಲಿಸಿತ್ತು. ತನ್ನ ನೆಲದಲ್ಲಿ ಬಾಂಗ್ಲಾದೇಶ ಈ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕನಸಲ್ಲೂ ನಿರೀಕ್ಷಿಸದ ಆಸೀಸ್ ಪಡೆಗೆ ಬಾಂಗ್ಲಾ ತಂಡ ನೀಡಿದ ಹೊಡೆತ ಸಾಮಾನ್ಯವಾದುದ್ದಲ್ಲ. ಇದೀಗ ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 22 ರಿಂದ ಅಂದರೆ ನಾಳೆಯಿಂದ ಆರಂಭವಾಗಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ಸೋಲಿನ ಅವಮಾನದಿಂದ ಪಾರಾಗಲು ಆಸ್ಟ್ರೇಲಿಯಾ ಸಜ್ಜಾಗಿದೆ. ಅದರಂತೆ ಎರಡನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಈ ಪ್ಲೇಯಿಂಗ್ 11 ನಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಲಾಗಿದೆ.

ಮ್ಯಾಥ್ಯೂ ರೆನ್‌ಶಾಗೆ ಅವಕಾಶ

ವಾಸ್ತವವಾಗಿ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಸೋಲಿನ ನಂತರ, ಆಸ್ಟ್ರೇಲಿಯಾ ತನ್ನ ಆಡುವ 11 ರಲ್ಲಿ ಕನಿಷ್ಠ ಎರಡು ಬದಲಾವಣೆಗಳನ್ನು ಮಾಡುತ್ತದೆ ಎಂಬ ನಿರೀಕ್ಷೆಯಿತ್ತು. ಮಾರ್ನಸ್ ಲಬುಶೇನ್ ಅವರನ್ನು ಸಹ ತಂಡದಿಂದ ಹೊರಗಿಡಲಾಗಿದೆ ಎಂಬ ವದಂತಿ ಇತ್ತು. ಆದರೆ ಲಬುಶೇನ್​ಗೆ ಎರಡನೇ ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿದೆ. ಉಳಿದಂತೆ ಮೊದಲ ಟೆಸ್ಟ್​ನಲ್ಲಿ ನಿರಸ ಪ್ರದರ್ಶನ ನೀಡಿದ್ದ ಆರಂಭಿಕ ಆಟಗಾರ ಜೇಕ್ ವೀದರಾಲ್ಡ್ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ. ಅವರ ಸ್ಥಾನದಲ್ಲಿ ಮ್ಯಾಥ್ಯೂ ರೆನ್‌ಶಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ರೆನ್‌ಶಾ ಟೆಸ್ಟ್ ಪ್ರದರ್ಶನ

ಮ್ಯಾಥ್ಯೂ ರೆನ್‌ಶಾ ಕೊನೆಯ ಬಾರಿಗೆ ಫೆಬ್ರವರಿ 2023 ರಲ್ಲಿ ದೆಹಲಿಯಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಅದಾದ ಬಳಿಕ ರೆನ್​ಶಾಗೆ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದುವರೆಗೆ 14 ಟೆಸ್ಟ್‌ಗಳನ್ನಾಡಿರುವ ರೆನ್​ಶಾ 24 ಇನ್ನಿಂಗ್ಸ್‌ಗಳಲ್ಲಿ 645 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ.

ಮೊದಲ ಟೆಸ್ಟ್​ನಲ್ಲಿ ಕಳಪೆ ಪ್ರದರ್ಶನ

ಇನ್ನು ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಫಲವಾಯಿತು. ಎರಡೂ ಇನ್ನಿಂಗ್ಸ್‌ಗಳಲ್ಲಿ, ಆಸ್ಟ್ರೇಲಿಯಾ ಪರ ಕೇವಲ ಒಂದು ಶತಕ ಮಾತ್ರ ದಾಖಲಾಗಿತ್ತು. ಆ ಶತಕವನ್ನು ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಬಾರಿಸಿದ್ದರು. ಇವರನ್ನು ಹೊರತುಪಡಿಸಿ ಸ್ಟೀವ್ ಸ್ಮಿತ್ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದನ್ನು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಇದರ ಪರಿಣಾಮವಾಗಿಯೇ ಆಸ್ಟ್ರೇಲಿಯಾ ಹೀನಾಯವಾಗಿ ಸೋತಿತು.

ಆಸ್ಟ್ರೇಲಿಯಾದ ಪ್ಲೇಯಿಂಗ್ XI: ಮ್ಯಾಥ್ಯೂ ರೆನ್‌ಶಾ, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಬ್ಯೂ ವೆಬ್‌ಸ್ಟರ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹೇಜಲ್‌ವುಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us