AUS vs BAN: ಬೌಲರ್​ಗಳ ಪರಾಕ್ರಮ: ಮೊದಲ ದಿನವೇ 18 ವಿಕೆಟ್ ಪತನ

Australia vs Bangladesh, 2nd Test: ಆಸ್ಟ್ರೇಲಿಯಾ ವಿರುದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದು ಬೀಗಿದ್ದ ಬಾಂಗ್ಲಾದೇಶ್ ತಂಡಕ್ಕೆ ದ್ವಿತೀಯ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲೇ ಆಸೀಸ್ ವೇಗಿಗಳು ಆಘಾತ ನೀಡಿದ್ದಾರೆ. ಅದು ಸಹ ಬಾಂಗ್ಲಾ ಪಡೆಯನ್ನು ಎರಡಂಕಿ ಮೊತ್ತಕ್ಕೆ ಆಲೌಟ್ ಮಾಡುವ ಮೂಲಕ ಎಂಬುದು ವಿಶೇಷ.

AUS vs BAN: ಬೌಲರ್​ಗಳ ಪರಾಕ್ರಮ: ಮೊದಲ ದಿನವೇ 18 ವಿಕೆಟ್ ಪತನ
AUS vs BAN
Image Credit source: GettyImages

Updated on: Aug 22, 2026 | 1:39 PM

ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ್ ನಡುವಣ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಬೌಲರ್​ಗಳು ಪರಾಕ್ರಮ ಮರೆದಿದ್ದಾರೆ. ಈ ಪರಾಕ್ರಮದಿಂದ ಮೊದಲ ದಿನವೇ 18 ವಿಕೆಟ್​ಗಳು ಉರುಳಿವೆ. ಮಕೈನ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡಕ್ಕೆ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಆರಂಭಿಕ ಆಘಾತ ನೀಡಿದ್ದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಸ್ಟಾರ್ಕ್ 5 ವಿಕೆಟ್ ಉರುಳಿಸಿದ್ದರು. ಅಂದರೆ ಕೇವಲ 22 ಎಸೆತಗಳಲ್ಲೇ ಮಿಚೆಲ್ ಬಾಂಗ್ಲಾದೇಶದ ಐವರು ಬ್ಯಾಟರ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು.

ಅತ್ತ ಸ್ಟಾರ್ಕ್​ಗೆ ಉತ್ತಮ ಸಾಥ್ ನೀಡಿದ ನಾಯಕ ಪ್ಯಾಟ್ ಕಮಿನ್ಸ್ 3 ವಿಕೆಟ್ ಉರುಳಿಸಿದರು. ಪರಿಣಾಮ ಬಾಂಗ್ಲಾದೇಶ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 64 ರನ್​ಗಳಿಗೆ ಆಲೌಟ್ ಆಯಿತು.

  • ಆಸ್ಟ್ರೇಲಿಯಾ ಪರ 10 ಓವರ್​ಗಳನ್ನು ಎಸೆದ ಮಿಚೆಲ್ ಸ್ಟಾರ್ಕ್​ ಕೇವಲ 12 ರನ್ ನೀಡಿ 6 ವಿಕೆಟ್ ಕಬಳಿಸಿದರು.
  • ಮಿಚೆಲ್ ಸ್ಟಾರ್ಕ್​ ಜೊತೆಗೆ ಬಿಗುವಿನ ದಾಳಿ ಸಂಘಟಿಸಿದ ಪ್ಯಾಟ್ ಕಮಿನ್ಸ್ 10 ಓವರ್​ಗಳಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.

ಬಾಂಗ್ಲಾ ಕರಾರುವಾಕ್ ದಾಳಿ:

ಕೇವಲ 64 ರನ್​ಗಳಿಗೆ ಆಲೌಟ್ ಆಗಿದ್ದ ಬಾಂಗ್ಲಾದೇಶ್ ತಂಡವು ಬೌಲಿಂಗ್ ಮೂಲಕ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದ್ದರು. ಆರಂಭದಲ್ಲೇ ಬಿಗು ದಾಳಿ ಸಂಘಟಿಸಿದ ಶೊರಿಫುಲ್ ಇಸ್ಲಾಂ ಹಾಗೂ ತಸ್ಕಿನ್ ಅಹ್ಮದ್ ಆಸ್ಟ್ರೇಲಿಯಾ ತಂಡ 41 ರನ್​ಗಳಿಸುವಲ್ಲಿ 3 ವಿಕೆಟ್ ಉರುಳಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ಸ್ಟೀವ್ ಸ್ಮಿತ್ 41 ರನ್​ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಮತ್ತೊಂದೆಡೆ ಕ್ಯಾಮರೋನ್ ಗ್ರೀನ್ 51 ರನ್​ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಆದರೆ ಇನ್ನೊಂದೆಡೆ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದ ಬಾಂಗ್ಲಾದೇಶ್ ಬೌಲರ್​ಗಳು ಮೊದಲ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಬಳಿಸಿದ್ದಾರೆ.

ಅದರಂತೆ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡವು 8 ವಿಕೆಟ್ ಕಳೆದುಕೊಂಡು 165 ರನ್​ಗಳಿಸಿದೆ. ಇತ್ತ ಕ್ಯಾಮರೋನ್ ಗ್ರೀನ್ (51) ಹಾಗೂ ನಾಥನ್ ಲಿಯಾನ್ (10) ಕ್ರೀಸ್​ನಲ್ಲಿದ್ದು, ದ್ವಿತೀಯ ದಿನಾಟದಲ್ಲಿ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.

  • ಬಾಂಗ್ಲಾದೇಶ್ ಪರ ಕರಾರುವಾಕ್ ದಾಳಿ ಸಂಘಟಿಸಿದ ಶೊರಿಫುಲ್ ಇಸ್ಲಾಂ 35 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು.
  • ಇನ್ನು ತಸ್ಕಿನ್ ಅಹ್ಮದ್ ಹಾಗೂ ಮೆಹಿದಿ ಹಸನ್ ಮಿರಾಝ್ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ.

ಬಾಂಗ್ಲಾದೇಶ್ ಪ್ಲೇಯಿಂಗ್ 11:  ಶಾದ್ಮನ್ ಇಸ್ಲಾಂ , ತಂಝಿದ್ ಹಸನ್ ತಮೀಮ್ , ಮೋಮಿನುಲ್ ಹಕ್ , ನಜ್ಮುಲ್ ಹೊಸೇನ್ ಶಾಂತೊ (ನಾಯಕ) , ಮುಷ್ಫಿಕರ್ ರಹೀಮ್ , ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಝ್ , ಹಸನ್ ಮಹಮ್ಮದ್ , ತೈಜುಲ್ ಇಸ್ಲಾಂ , ತಸ್ಕಿನ್ ಅಹ್ಮದ್ , ಶೊರಿಫುಲ್ ಇಸ್ಲಾಂ.

ಇದನ್ನೂ ಓದಿ: WTC ಫೈನಲ್​ಗೇರಲು ಪಾಕಿಸ್ತಾನ್ ತಂಡಕ್ಕೆ ಇದೆಯೇ ಅವಕಾಶ? ಇಲ್ಲಿದೆ ಲೆಕ್ಕಾಚಾರ!

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಮ್ಯಾಟ್ ರೆನ್ಶಾ , ಮಾರ್ನಸ್ ಲಾಬುಶೇನ್ , ಸ್ಟೀವ್ ಸ್ಮಿತ್ ,
ಕ್ಯಾಮರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಬ್ಯೂ ವೆಬ್‌ಸ್ಟರ್ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ ,
ನಾಥನ್ ಲಿಯಾನ್ , ಜೋಶ್ ಹೇಝಲ್‌ವುಡ್.

 

Loading...
Unable to load recommendations.
Follow Us