ಬರೋಬ್ಬರಿ 21 ಸಿಕ್ಸ್​… ಸಿಡಿಲಬ್ಬರದ ಡಬಲ್ ಸೆಂಚುರಿ ಸಿಡಿಸಿದ ಬೆವನ್ ಜೇಕಬ್ಸ್!

ನ್ಯೂಝಿಲೆಂಡ್ ಕ್ರಿಕೆಟ್‌ನಲ್ಲಿ ಯುವ ಬ್ಯಾಟರ್ ಬೆವನ್ ಜೇಕಬ್ಸ್ ಅವರ ಸಿಡಿಲಬ್ಬರ ಮುಂದುವರೆದಿದೆ. ಇತ್ತೀಚೆಗೆ ಭಾರತದ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಜೇಕಬ್ಸ್, ಇದೀಗ ದೇಶೀಯ ಏಕದಿನ ಟೂರ್ನಿಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಅದು ಸಹ ಬರೋಬ್ಬರಿ 21 ಸಿಕ್ಸರ್ ಹಾಗೂ 7 ಫೋರ್​ಗಳೊಂದಿಗೆ ಎಂಬುದು ವಿಶೇಷ.

ಬರೋಬ್ಬರಿ 21 ಸಿಕ್ಸ್​… ಸಿಡಿಲಬ್ಬರದ ಡಬಲ್ ಸೆಂಚುರಿ ಸಿಡಿಸಿದ ಬೆವನ್ ಜೇಕಬ್ಸ್!
Bevon Jacobs
Image Credit source: NZC

Updated on: Nov 14, 2026 | 8:31 AM

ನ್ಯೂಝಿಲೆಂಡ್‌ನ ದೇಶೀಯ ಏಕದಿನ ಟೂರ್ನಿಯಾದ ‘ದಿ ಫೋರ್ಡ್ ಟ್ರೋಫಿ’ ಟೂರ್ನಿಯಲ್ಲಿ ಬೆವನ್ ಜೇಕಬ್ಸ್ ಸಿಡಿಲಬ್ಬರದ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಒಟಾಗೋ ವೋಲ್ಟ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಆಕ್ಲೆಂಡ್ ಏಸಸ್ ಪರ ಕಣಕ್ಕಿಳಿದ ಜೇಕಬ್ಸ್ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಕೇವಲ 137 ಎಸೆತಗಳಲ್ಲಿ ಅಜೇಯ 202 ರನ್ ಸಿಡಿಸಿ ಹೊಸ ದಾಖಲೆ ಬರೆದರು.

ಕೊನೆಯ ಓವರ್‌ನಲ್ಲಿ 5 ಸಿಕ್ಸರ್‌!

ಆಕ್ಲೆಂಡ್‌ನ ಈಡನ್ ಪಾರ್ಕ್ ಔಟರ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಬೆವನ್ ಜೇಕಬ್ಸ್ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಮೊದಲ ಶತಕ ಪೂರೈಸಲು 97 ಎಸೆತಗಳನ್ನು ತೆಗೆದುಕೊಂಡಿದ್ದ ಅವರು, ನಂತರದ 100 ರನ್‌ಗಳನ್ನು ಕೇವಲ 40 ಎಸೆತಗಳಲ್ಲಿ ಚಚ್ಚಿದರು.

Loading...

ಇನ್ನಿಂಗ್ಸ್‌ನ ಅಂತಿಮ (50ನೇ) ಓವರ್ ಆರಂಭವಾದಾಗ ಜೇಕಬ್ಸ್ 172 ರನ್ ಗಳಿಸಿ ಅಜೇಯರಾಗಿದ್ದರು. ದ್ವಿಶತಕಕ್ಕೆ 28 ರನ್‌ಗಳ ಅವಶ್ಯಕತೆಯಿದ್ದಾಗ, ಲೆಗ್‌ಸ್ಪಿನ್ನರ್ ಜಾಕ್ ಕಮ್ಮಿಂಗ್ ಎಸೆದ ಆ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿದರು. ನಾಲ್ಕನೇ ಎಸೆತದಲ್ಲಿ ರನ್ ಗಳಿಸಲು ವಿಫಲರಾದರೂ, ಕೊನೆಯ ಎರಡು ಎಸೆತಗಳಲ್ಲಿ ಮತ್ತೆರಡು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ತಮ್ಮ ಚೊಚ್ಚಲ ದ್ವಿಶತಕವನ್ನು ಪೂರೈಸಿದರು.

  • ಬೆವನ್ ಜೇಕಬ್ಸ್ ಇನಿಂಗ್ಸ್: 137 ಎಸೆತಗಳಲ್ಲಿ ಅಜೇಯ 202 ರನ್, 21 ಸಿಕ್ಸರ್, 7 ಫೋರ್.

ಭರ್ಜರಿ ದಾಖಲೆ ಬರೆದ ಜೇಕಬ್ಸ್​:

  • ಹೊಸ ಸಿಕ್ಸರ್ ದಾಖಲೆ: ತಮ್ಮ ಈ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 21 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಬಾರಿಸಿದ ಬೆವನ್ ಜೇಕಬ್ಸ್, ಲಿಸ್ಟ್ ‘ಎ’ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ನ್ಯೂಝಿಲೆಂಡ್ ಆಟಗಾರ ಎಂಬ ದಾಖಲೆ ಬರೆದರು. ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಡಿ’ಆರ್ಸಿ ಶಾರ್ಟ್ (23 ಸಿಕ್ಸರ್) ನಂತರದ ಎರಡನೇ ಸ್ಥಾನವನ್ನು ಇವರು ಪಡೆದುಕೊಂಡಿದ್ದಾರೆ.
  •  ಚೊಚ್ಚಲ ಶತಕವೇ ದ್ವಿಶತಕ: ಜೇಕಬ್ಸ್ ತಮ್ಮ 33 ಪಂದ್ಯಗಳ ಲಿಸ್ಟ್ ‘ಎ’ ವೃತ್ತಿಜೀವನದಲ್ಲಿ ಇದುವರೆಗೆ ಒಂದೇ ಒಂದು ಶತಕವನ್ನೂ ಗಳಿಸಿರಲಿಲ್ಲ. ಆದರೆ, ತಮ್ಮ ಮೊದಲ ಶತಕವನ್ನೇ ನೇರವಾಗಿ ದ್ವಿಶತಕವನ್ನಾಗಿ ಪರಿವರ್ತಿಸಿ ಅಪರೂಪದ ಸಾಧನೆ ಮಾಡಿದರು.
  • ದಿಗ್ಗಜರ ಸಾಲಿಗೆ ಸೇರ್ಪಡೆ: ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ನ್ಯೂಝಿಲೆಂಡ್‌ನ ನಾಲ್ಕನೇ ಬ್ಯಾಟರ್ (ಜೇಮೀ ಹೌ, ಮಾರ್ಟಿನ್ ಗಪ್ಟಿಲ್ ಮತ್ತು ಚಾಡ್ ಬೋವ್ಸ್ ನಂತರ) ಹಾಗೂ ಆಕ್ಲೆಂಡ್ ಏಸಸ್ ಪರ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.

ಇದನ್ನೂ ಓದಿ: ಟೀಮ್ ಇಂಡಿಯಾವನ್ನು ಬೆಚ್ಚಿಬೀಳಿಸಿದ ವೇಗಿ ಔಟ್!

ವ್ಯರ್ಥವಾದ ಏಕಾಂಗಿ ಹೋರಾಟ:

ಬೆವನ್ ಜೇಕಬ್ಸ್​ ಅವರ ಈ ವೀರೋಚಿತ ಬ್ಯಾಟಿಂಗ್ ನೆರವಿನಿಂದ ಆಕ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 334 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ, 335 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಒಟಾಗೋ ವೋಲ್ಟ್ಸ್ ತಂಡ, ಮ್ಯಾಕ್ಸ್ ಚು (75*) ಮತ್ತು ಜ್ಯಾಕ್ ಬಾಯ್ಲ್ (62) ಅವರ ಅರ್ಧಶತಕಗಳ ನೆರವಿನಿಂದ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಇದರೊಂದಿಗೆ, ಲಿಸ್ಟ್ ‘ಎ’ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಸಿಡಿಸಿಯೂ ತಂಡ ಸೋಲುಂಡ ನಾಲ್ಕನೇ ದುರದೃಷ್ಟವಂತ ಆಟಗಾರ ಎಂಬ ಪಟ್ಟಿಗೆ ಬೆವನ್ ಜೇಕಬ್ಸ್ ಸೇರ್ಪಡೆಯಾದರು.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us