ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ (Champions Trophy 2025) ಟೂರ್ನಿಗಾಗಿ ತಾತ್ಕಾಲಿಕ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) ಆಯೋಜಿಸಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ.
ಈ ಎಂಟು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಅದರಂತೆ ಎರಡು ಗ್ರೂಪ್ಗಳಲ್ಲಿ ತಲಾ 4 ಟೀಮ್ಗಳು ಕಾಣಿಸಿಕೊಳ್ಳಲಿದೆ. ಅಲ್ಲದೆ ಮೊದಲ ಸುತ್ತಿನಲ್ಲಿ ಗ್ರೂಪ್ ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ. ಅಂದರೆ ಗ್ರೂಪ್-ಎ ನಲ್ಲಿರುವ ಭಾರತ ತಂಡವು, ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ತಂಡಗಳನ್ನು ಎದುರಿಸಲಿದೆ.
ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಚಾಂಪಿಯನ್ಸ್ ಟ್ರೋಫಿಗಾಗಿ ಮೂರು ಸ್ಟೇಡಿಯಂಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳು ನಡೆಯಲಿದೆ. ವಿಶೇಷ ಎಂದರೆ ಭಾರತ ತಂಡದ ಎಲ್ಲಾ ಪಂದ್ಯಗಳು ಲಾಹೋರ್ನ ಗಡ್ಡಾಫಿ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತದೆ ಎಂದು ವರದಿಯಾಗಿದೆ.
ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಸಲ್ಲಿಸಿರುವ ಕರುಡು ವೇಳಾಪಟ್ಟಿ ಪ್ರಕಾರ, ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮಾರ್ಚ್ 1 ರಂದು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಲಾಹೋರ್ನ ಗಡ್ಡಾಫಿ ಸ್ಟೇಡಿಯಂ ಆತಿಥ್ಯವಹಿಸಲಿದೆ.
2006 ರ ಬಳಿಕ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿಲ್ಲ. ಆದರೆ ಈ ಬಾರಿ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿ ನಡೆಯುತ್ತಿದೆ. ಹೀಗಾಗಿ ಈ ಟೂರ್ನಿಯಲ್ಲಿ ಭಾರತ ಭಾಗವಹಿಸಲಿದೆಯಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಐಸಿಸಿ ಟೂರ್ನಿಗಳನ್ನು ಸ್ಥಳಾಂತರಿಸಬೇಕಿದ್ದರೆ ನಿರ್ದಿಷ್ಠ ಕಾರಣಗಳಿರಬೇಕಾಗುತ್ತದೆ. ಇಲ್ಲಿ ಬಿಸಿಸಿಐ ಟೂರ್ನಿಯನ್ನು ಸ್ಥಳಾಂತರಿಸಲು ಸುರಕ್ಷತೆಯ ಕಾರಣಗಳನ್ನು ನೀಡಿದರೂ, ಅದಕ್ಕೆ ಇತರೆ ಕ್ರಿಕೆಟ್ ಮಂಡಳಿಗಳೂ ಕೂಡ ಕೈ ಜೋಡಿಸಬೇಕಾಗುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ್, ಇಂಗ್ಲೆಂಡ್, ನ್ಯೂಝಿಲೆಂಡ್ ತಂಡಗಳು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿದೆ. ಇದೇ ವಾದವನ್ನು ಮುಂದಿಟ್ಟು ಟೂರ್ನಿಯನ್ನು ಸ್ಥಳಾಂತರಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಿಂದೇಟು ಹಾಕಬಹುದು.
ಇದನ್ನೂ ಓದಿ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಐವರು ಆಟಗಾರರು..!
ಪಿಸಿಬಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯ ಕರಡು ಪ್ರತಿಯನ್ನು ಐಸಿಸಿಗೆ ಸಲ್ಲಿಸಿದೆ. ಇದನ್ನು ಪರಿಶೀಲಿಸಿದ ಬಳಿಕ ಐಸಿಸಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಅಧಿಕೃತ ವೇಳಾಪಟ್ಟಿ ಹೊರಬೀಳಲಿದೆ. ಆದರೆ ಇತ್ತ ಪಾಕಿಸ್ತಾನದಲ್ಲಿ ಟೂರ್ನಿ ಆಡಲು ಟೀಮ್ ಇಂಡಿಯಾ ಹಿಂದೇಟು ಹಾಕುವ ಸಾಧ್ಯತೆಯಿದೆ. ಹೀಗಾಗಿ ಪ್ರಸ್ತುತ ವೇಳಾಪಟ್ಟಿಯಲ್ಲಿ ಬದಲಾವಣೆ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.
Published On - 10:38 am, Thu, 4 July 24