ಕೆರಿಬಿಯನ್ ಪ್ರೀಮಿಯರ್ ಲೀಗ್ನ 2ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡದ ಪರ ಎಡಗೈ ದಾಂಡಿಗ ಫಖರ್ ಝಮಾನ್ 40 ರನ್ ಬಾರಿಸಿದರೆ, ಕೋಫಿ ಜೇಮ್ಸ್ 37 ರನ್ಗಳ ಕೊಡುಗೆ ನೀಡಿದರು. ಇನ್ನು ಅಂತಿಮ ಓವರ್ಗಳ ವೇಳೆ ಅಬ್ಬರಿಸಿದ ಇಮಾದ್ ವಾಸಿಂ 21 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 40 ರನ್ ಚಚ್ಚಿದ್ದರು. ಈ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತು.
167 ರನ್ಗಳ ಗುರಿ ಬೆನ್ನತ್ತಿದ ಗಯಾನಾ ಅಮೆಝಾನ್ ವಾರಿಯರ್ಸ್ ಪರ ಶಾಯ್ ಹೋಪ್ 41 ರನ್ ಬಾರಿಸಿದರೆ, ರೊಮಾರಿಯೊ ಶೆಫರ್ಡ್ 32 ರನ್ ಚಚ್ಚಿದರು. ಇದಾಗ್ಯೂ ಅಮೆಝಾನ್ ವಾರಿಯರ್ಸ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 16 ರನ್ಗಳ ಅವಶ್ಯಕತೆಯಿತ್ತು. 20ನೇ ಓವರ್ ಎಸೆದ ಮೊಹಮ್ಮದ್ ಅಮೀರ್ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಿರಲಿಲ್ಲ.
ಪರಿಣಾಮ ಕೊನೆಯ 5 ಎಸೆತಗಳಲ್ಲಿ 16 ರನ್ಗಳ ಅಗತ್ಯತೆ. ಈ ಹಂತದಲ್ಲಿ ಡ್ವೈನ್ ಪ್ರಿಟೋರಿಯಸ್ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದರು. 4ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಕೊನೆಯ 2 ಎಸೆತಗಳಲ್ಲಿ 8 ರನ್ಗಳು ಬೇಕಿತ್ತು. 20ನೇ ಓವರ್ನ 5ನೇ ಎಸೆತದಲ್ಲಿ ಡ್ವೈನ್ ಪ್ರಿಟೋರಿಯಸ್ ಮತ್ತೊಂದು ಫೋರ್ ಬಾರಿಸಿದರು. ಅಂತಿಮ ಎಸೆತದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಕ್ಕೆ ಗೆಲ್ಲಲು 4 ರನ್ಗಳ ಅವಶ್ಯಕತೆಯಿತ್ತು. ಅಮೀರ್ ಎಸೆದ ಕೊನೆಯ ಎಸೆತದಲ್ಲಿ ಲಾಂಗ್ ಆಫ್ನತ್ತ ಆಕರ್ಷಕ ಸಿಕ್ಸ್ ಸಿಡಿಸುವ ಮೂಲಕ ಡ್ವೈನ್ ಪ್ರಿಟೋರಿಯಸ್ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.