
ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಈಗಾಗಲೇ 1-1ರಿಂದ ಸಮಬಲದಲ್ಲಿದೆ. ಹೀಗಾಗಿ ಅಕ್ಟೋಬರ್ 27ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಎರಡೂ ತಂಡಗಳ ಪಾಲಿಗೆ ನಿರ್ಣಾಯಕವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ಹೊಸ ಆರಂಭಿಕ ಜೋಡಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದಿಂದ ನಿಕ್ ಮ್ಯಾಡಿಸನ್ ಮತ್ತು ಮೀಸಲು ವಿಕೆಟ್‌ಕೀಪರ್ ಸ್ಯಾಮ್ ಹಾರ್ಪರ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಈ ಇಬ್ಬರೂ ಆಟಗಾರರು ತವರಿಗೆ ಮರಳಿದ್ದು, ಅಲ್ಲಿನ ದೇಶೀಯ ಕ್ರಿಕೆಟ್ ಟೂರ್ನಿಯಾದ ಶೆಫೀಲ್ಡ್ ಶೀಲ್ಡ್‌ನಲ್ಲಿ ಆಡಲಿದ್ದಾರೆ.
ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿಕ್ ಮ್ಯಾಡಿಸನ್ ಮತ್ತು ಟ್ರಾವಿಸ್ ಹೆಡ್ ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ಇದೀಗ ಮ್ಯಾಡಿಸನ್ ತಂಡದಿಂದ ಹೊರಗುಳಿದಿರುವುದರಿಂದ ಅವರ ಸ್ಥಾನದಲ್ಲಿ ಮ್ಯಾಟ್ ರೆನ್‌ಶಾ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಸರಣಿ ನಿರ್ಣಾಯಕ ಹಂತ ತಲುಪಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಈ ಬದಲಾವಣೆ ಪಂದ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್ ಸ್ಟೀವ್ ಸ್ಮಿತ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಕುತ್ತಿಗೆ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಸ್ಮಿತ್ ಅವರ ಫಿಟ್‌ನೆಸ್ ಪರಿಶೀಲಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಸ್ಮಿತ್ ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟರ್ ಆಗಿರುವುದರಿಂದ, ಅವರು ಪಂದ್ಯಕ್ಕೆ ಅಲಭ್ಯರಾದರೆ ಸರಣಿ ನಿರ್ಣಾಯಕ ಟೆಸ್ಟ್‌ನಲ್ಲಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್
ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಕ್ಯಾಮೆರಾನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಾರ್ನಸ್ ಲಬುಶೇನ್, ನಾಥನ್ ಲಯನ್, ಮೈಕೆಲ್ ನೆಸರ್, ಮ್ಯಾಟ್ ರೆನ್‌ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ ಮತ್ತು ಬ್ಯೂ ವೆಬ್‌ಸ್ಟರ್.