7 ಎಸೆತಗಳಿಂದ​ ಅಭಿಷೇಕ್ ಶರ್ಮಾ ಕೈತಪ್ಪಿದ ವಿಶ್ವ ದಾಖಲೆ!

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆ ಕೇವಲ 7 ಎಸೆತಗಳ ಅಂತರದಲ್ಲಿ ಭಾರತದ ಬ್ಯಾಟರ್ ಅಭಿಷೇಕ್ ಶರ್ಮಾ ಕೈತಪ್ಪಿದೆ! ಹೌದು, ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ಅಭಿಷೇಕ್, ಜಾಗತಿಕ ಕ್ರಿಕೆಟ್‌ನ ಸಾರ್ವಕಾಲಿಕ ದಾಖಲೆಯೊಂದನ್ನು ಧೂಳೀಪಟ ಮಾಡುವ ಸುವರ್ಣ ಅವಕಾಶವನ್ನು ಹೊಂದಿದ್ದರು. ಆದರೆ...

7 ಎಸೆತಗಳಿಂದ​ ಅಭಿಷೇಕ್ ಶರ್ಮಾ ಕೈತಪ್ಪಿದ ವಿಶ್ವ ದಾಖಲೆ!
Abhishek Sharma
Image Credit source: GettyImages

Updated on: Oct 28, 2026 | 12:17 PM

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಸಿಡಿಸಿದ ಬ್ಯಾಟರ್ ಯಾರು? ಈ ಪ್ರಶ್ನೆಗೆ ತಕ್ಷಣಕ್ಕೆ ಭಾರತದ ಅಭಿಷೇಕ್ ಶರ್ಮಾ ಹೆಸರು ನೆನಪಿಗೆ ಬರಬಹುದು. ಆದರೆ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿ ಜಾಗತಿಕ ದಾಖಲೆ ಬರೆದ ಮತ್ತೊಬ್ಬ ಬ್ಯಾಟರ್ ಇದ್ದಾರೆ. ಈ ಬೃಹತ್ ವಿಶ್ವ ದಾಖಲೆಯನ್ನು ಧೂಳೀಪಟ ಮಾಡುವ ಸುವರ್ಣ ಅವಕಾಶ ಇತ್ತೀಚೆಗೆ ಅಭಿಷೇಕ್ ಶರ್ಮಾ ಮುಂದಿತ್ತು. ಆದರೆ, ಇನಿಂಗ್ಸ್ ಮಧ್ಯೆ ಆಡಿದ 7 ಡಾಟ್ ಬಾಲ್‌ಗಳು ಈ ಐತಿಹಾಸಿಕ ಮೈಲಿಗಲ್ಲನ್ನು ಮುರಿಯುವ ಅವಕಾಶವನ್ನು ಅವರಿಂದ ಕಿತ್ತುಕೊಂಡಿವೆ.

ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಎಡಗೈ ಓಪನರ್ ಅಭಿಷೇಕ್ ಶರ್ಮಾ, ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿ ಅಬ್ಬರಿಸಿದರು. ಆದರೆ, ಈ ಬಿರುಗಾಳಿಯ ಇನಿಂಗ್ಸ್ ನಡುವೆ ಅವರು 7 ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಡಾಟ್ ಬಾಲ್ ಆಡಿದ್ದರು.

ಈ ಲೆಕ್ಕಾಚಾರದ ಪ್ರಕಾರ, ಒಂದು ವೇಳೆ ಅಭಿಷೇಕ್ ಈ 7 ಎಸೆತಗಳಲ್ಲೂ ರನ್ ಅಥವಾ ಬೌಂಡರಿ ಗಳಿಸುವಲ್ಲಿ ಯಶಸ್ವಿಯಾಗಿದ್ದರೆ, ಅವರು ಕೇವಲ 26 ಅಥವಾ 27 ಎಸೆತಗಳ ಒಳಗೇ ಶತಕದ ಗಡಿ ದಾಟಬಹುದಿತ್ತು. ಈ ಮೂಲಕ ಜಾಗತಿಕ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಶತಕದ ಒಡೆಯ ಎನಿಸಿಕೊಳ್ಳಬಹುದಿತ್ತು.

ಯಾರ ಹೆಸರಲ್ಲಿದೆ ವಿಶ್ವ ದಾಖಲೆ?

ಪ್ರಸ್ತುತ ಈ ಜಾಗತಿಕ ದಾಖಲೆ ಎಸ್ಟೋನಿಯಾ ದೇಶದ ಸಾಹಿಲ್ ಚೌಹಾಣ್ ಹೆಸರಿನಲ್ಲಿದೆ. 2024ರಲ್ಲಿ ಸೈಪ್ರಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಾಹಿಲ್ ಕೇವಲ 27 ಎಸೆತಗಳಲ್ಲಿ ಶತಕ ಚಚ್ಚಿ ಈ ಅಸಾಧ್ಯ ದಾಖಲೆಯನ್ನು ಬರೆದಿದ್ದರು. ಎರಡು ವರ್ಷಗಳ ಹಳೆಯದಾದ ಈ ದಾಖಲೆಯನ್ನು ಮುರಿಯಲು ಅಭಿಷೇಕ್ ಶರ್ಮಾಗೆ ಸಾಧ್ಯವಾಗದಿದ್ದರೂ, ಮತ್ತೊಂದು ಅಪರೂಪದ ಕೀರ್ತಿ ಇವರ ಪಾಲಾಗಿದೆ.

ಅಂದರೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪೂರ್ಣ ಸದಸ್ಯತ್ವ ಹೊಂದಿರುವ ಬಲಿಷ್ಠ ರಾಷ್ಟ್ರಗಳ ಪೈಕಿ, ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆ ಈಗಲೂ ಅಭಿಷೇಕ್ ಶರ್ಮಾ ಹೆಸರಿನಲ್ಲೇ ಭದ್ರವಾಗಿದೆ. ಅವರು 2026ರಲ್ಲೇ ಅಫ್ಘಾನಿಸ್ತಾನ್ ವಿರುದ್ಧ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿ ಈ ಐತಿಹಾಸಿಕ ಸಾಧನೆ ಮಾಡಿದ್ದರು.

ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆಯುವ ಅವಕಾಶ ಅಭಿಷೇಕ್ ಮುಂದಿತ್ತು. ಆದರೆ ಶತಕದ ಹತ್ತಿರ ಬಂದಾಗ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದರಿಂದ ಸಾರ್ವಕಾಲಿಕ ದಾಖಲೆ ಕೈ ತಪ್ಪಿದೆ. ಈ ವಿಶ್ವ ದಾಖಲೆ ಕೈ ತಪ್ಪಿದರೂ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೂರು ಬಾರಿ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂದರೆ ಅಭಿಷೇಕ್ ಶರ್ಮಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ 3 ಬಾರಿ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್. ಫೆಬ್ರವರಿ 2025 ರಲ್ಲಿ ಇಂಗ್ಲೆಂಡ್ ವಿರುದ್ಧ 37 ಎಸೆತ, ಸೆಪ್ಟೆಂಬರ್ 2026 ರಲ್ಲಿ ಅಫ್ಘಾನಿಸ್ತಾನ್ ವಿರುದ್ಧ 30 ಎಸೆತ ಹಾಗೂ ಈಗ ನ್ಯೂಝಿಲೆಂಡ್ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: 464,626… RCBಯನ್ನು ಟ್ರೋಲ್ ಮಾಡಿದ CSK

ಒಟ್ಟಾರೆಯಾಗಿ ಹೇಳುವುದಾದರೆ, ಕೇವಲ 7 ಡಾಟ್ ಬಾಲ್‌ಗಳಿಂದ ಅಭಿಷೇಕ್ ಶರ್ಮಾ ಅವರ ಸಾರ್ವಕಾಲಿಕ ವಿಶ್ವ ದಾಖಲೆ ಕೈತಪ್ಪಿರಬಹುದು. ಆದರೆ, ಅವರು ಮೈದಾನದಲ್ಲಿ ಸೃಷ್ಟಿಸಿದ ರನ್ ಬಿರುಗಾಳಿ ಮಾತ್ರ ಜಾಗತಿಕ ಕ್ರಿಕೆಟ್‌ನಲ್ಲಿ ಅವರ ದೀರ್ಘಕಾಲದ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಮುಂಬರುವ ದಿನಗಳಲ್ಲಿ ಈ ಯುವ ಆಟಗಾರ ಇಂತಹದ್ದೇ ಹಲವು ದಾಖಲೆಗಳನ್ನು ಧೂಳೀಪಟ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us